অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕರ್ನಾಟಕದ ಒಣಪ್ರದೇಶ

ಕರ್ನಾಟಕದ ಒಣಪ್ರದೇಶ, ಚಿತ್ರದುರ್ಗ ಹಾಗು ಬಳ್ಳಾರಿ ಜಿಲ್ಲೆಯ ಚಿನ್ನಹಗರಿ ಹಾಗೂ ಉಪ್ಪಾರಹಳ್ಳಿ ಜಲಾನಯನ ಪ್ರದೇಶಗಳನ್ನೊಳಗೊಂಡಿದೆ. ಈ ಪ್ರದೇಶಗಳು ಹೆಚ್ಚಾಗಿ ಬರಕ್ಕೆ ಸಿಲುಕುತ್ತವೆ. ಆಳವಿಲ್ಲದ ಮಣ್ಣು, ಮಣ್ಣಿನ ಕಡಿಮೆ ಸಾವಯವ ಪದಾರ್ಥಗಳು ಮತ್ತು ಪ್ರಬಲವಾಗಿರದ ತೇವಾಂಶ ಸಂರಕ್ಷಣಾ ಪದ್ಧತಿಗಳಿಂದಾಗಿ ಈ ಭಾಗದಲ್ಲಿ ಕೇವಲ ನೆಲಗಡಲೆ ಬೆಳೆ ಬೆಳೆಯಲು ಸಾಧ್ಯ. ಸುಮಾರು ಶೇಕಡ 80ರಷ್ಟು ರೈತರು ತಮ್ಮ ಜೀವನೋಪಾಯಕ್ಕೆ ಕಳೆದ 30ವರ್ಷಗಳಿಂದ ನೆಲಗಡಲೆ ಬೆಳೆಯನ್ನು ಅವಲಂಬಿಸಿದ್ದಾರೆ. ಜೀವನಕ್ಕಾಗಿ ಕೂಲಿಕೆಲಸ ಮತ್ತು ವಲಸೆ ಬಿಟ್ಟರೆ ಬೇರೆ ದಾರಿಗಳಿಲ್ಲ. ಸಕಾಲದಲ್ಲಿ ಸುಮಾರು 300ಮೀಟರ್‍ನಷ್ಟು ಮಳೆ ಬಂದರೆ ಉತ್ತಮ ನೆಲಗಡಲೆ ಬೆಳೆಯನ್ನು ನಿರೀಕ್ಷಿಸಬಹುದು. ಸಾಧಾರಣ ಮಳೆ ಬಿದ್ದ ವರ್ಷದಲ್ಲಿ ನೆಲಗಡಲೆ ಬೇಸಾಯದಿಂದ ಸಿಗುವ ಆದಾಯ ಎಕರೆಗೆ 2000ದಿಂದ 3000ರೂಪಾಯಿಗಳು ಮಾತ್ರ. ಆದರೂ ಸಹ ಈ

ಬೆಳೆಯನ್ನು ಬದಲಾಯಿಸಲು ರೈತರು ಒಪ್ಪುವುದಿಲ್ಲ. ಕಾರಣ, ನೆಲಗಡಲೆ ಬೆಳೆಯನ್ನು ಹಲವು ವರ್ಷಗಳಿಂದ ಬೆಳೆಯುತ್ತಿರುವುದು ಅಥವಾ ನೆಲಗಡಲೆ ವರ್ತಕರು (ರೈತರಿಗೆ ಸಾಲ ನೀಡುವ ಲೇವಾದೇವಿಗಾರರು) ಅವರನ್ನು ಬೇರೆ ಬೆಳೆ ಬೆಳೆಯಲು ಬಿಡದಿರುವುದು.

ಸಣ್ಣ ಮತ್ತು ಅತಿಸಣ್ಣ ರೈತರ ಜೀವನೋಪಾಯದ ಅಭಿವೃದ್ಧಿ ಕೇವಲ ಇಳುವರಿ ಹೆಚ್ಚಿಸುವುದರಿಂದ ಸಾಧ್ಯವಿಲ್ಲ. ನೆಲಗಡಲೆ ಬೆಳೆಯಲ್ಲಿ ಇಳುವರಿ ಮತ್ತು ಬೆಲೆಯ ಏರಿಳಿತಗಳು ಹೆಚ್ಚು. ಇದಕ್ಕಾಗಿ ಬೇರೆಯೇ ಮಾರ್ಗೋಪಾಯಗಳನ್ನು ಹುಡುಕಬೇಕಿದೆ.

ಆ ಪ್ರದೇಶದ ರೈತರ ಆಹಾರ ಮತ್ತು ಆದಾಯದ ಭದ್ರತೆಯನ್ನು ಹೆಚ್ಚಿಸಲು 2002ನೇ ಇಸವಿಯಿಂದ 2005ನೇ ಇಸವಿಯವರೆಗೆ ಕರ್ನಾಟಕ ಜಲಾನಯನ ಅಭಿವೃದ್ಧಿ (KAWAD) ಯೋಜನೆಯನ್ನು ಹಮ್ಮಿ ಕೊಳ್ಳಲಾಗಿತ್ತು. ಯೋಜನೆಯ ಮುಂದುವರೆದ ಕೆಲಸವಾಗಿ ಬದುಗಳ ನಿರ್ಮಾಣ, ಕಾಲುವೆಗಳಿಗೆ ಕಟ್ಟೆ ಕಟ್ಟುವಿಕೆ, ನೀರಿನ ನಾಲೆಗಳ ಸರಿಪಡಿಸುವಿಕೆ ಇತ್ಯಾದಿ ಕೆಲಸಗಳನ್ನು ತೆಗೆದುಕೊಳ್ಳಲಾಗಿತ್ತು. ಹಿಂದೆಂದೂ ಆಗದಷ್ಟು ದೊಡ್ಡಮಟ್ಟದ ನೀರು ಮತ್ತು ಮಣ್ಣಿನ ಸಂರಕ್ಷಣೆಯ ಚಟುವಟಿಕೆಗಳನ್ನು ಯೋಜನೆಯಲ್ಲಿ ತೆಗೆದುಕೊಂಡು ಪ್ರಯಾಸದಿಂದ ನಿರ್ವಹಿಸಿದ್ದಕ್ಕಾಗಿ ವಿಶೇಷವಾಗಿ ಕೃಷಿಯಲ್ಲಿ ಉತ್ಪಾದನೆ ಹೆಚ್ಚಿಸುವಲ್ಲಿ ಉತ್ತಮ ಪರಿಣಾಮ ಸಿಕ್ಕಿತು.

ಕಡಿಮೆ ಮಳೆ ಮತ್ತು ಅನಿಶ್ಚಿತ ಹಂಚಿಕೆಯಾಗುವಿಕೆಯಿಂದ ಅಲ್ಲಿನ ಮಣ್ಣು ಮತ್ತು ತೇವಾಂಶ ರಕ್ಷಣೆಯ ಸಂಬಂಧ ಹಾಗೂ ಮಣ್ಣಿನ

ಫಲವತ್ತತೆ ಹೆಚ್ಚಿಸಿ ಆ ಮೂಲಕ ಕೃಷಿ ಉತ್ಪಾದನೆಯ ನಿಯಂತ್ರಣ ಮತ್ತು ಅಭಿವೃದ್ಧಿಗೋಸ್ಕರ ಉದ್ದೇಶಿತ ಯೋಜನೆಯ ಪರಿಚಯ ಅಗತ್ಯವಾಗಿತ್ತು. ಯೋಜನೆಯ ಭಾಗಿದಾರ ಎ.ಎಮ್.ಇ  ಫೌಂಡೇಶನ್ (AMEF) ಕೃಷಿ ಪದ್ಧತಿಯನ್ನು ಉತ್ತಮಗೊಳಿಸುವ ಕಾರ್ಯ ವಿಧಾನವನ್ನು ಸುಗಮಗೊಳಿಸಿತು.

ಮೊದಲಿಗೆ AMEF ಅವಶ್ಯವಾಗಿ ತಕ್ಷಣ ಆಗಬೇಕಾದ ನೆಲಗಡಲೆಯ ಕೆಲವು ಮುಖ್ಯ ಪೀಡೆಗಳು ಮತ್ತು ರೋಗಗಳ ನಿಯಂತ್ರಣ ಮಾಡಿ ರೈತರ ವಿಶ್ವಾಸಗಳಿಸಿತು. AMEF ಸುಮಾರು 500ರೈತರೊಂದಿಗೆ ಎರಡು ವರ್ಷಗಳ ಕಾಲ ಕೆಲಸ ಮಾಡಿ ಅವರಲ್ಲಿ ಭರವಸೆ ಮೂಡಿಸಿತು. ಜೈವಿಕ ಪರಿಕರಗಳು, ಅಂತರ ಬೆಳೆಗಳು, ಫಾಸ್ಪರಸ್ (ಸಿಂಗಲ್ ಸೂಪರ್ಪಾಸ್ಫೇಟ್) ಮತ್ತು ಸುಣ್ಣ (ಜಿಪ್ಸಂ)ಗಳಂತಹ ಸುಲಭ ತಂತ್ರಜ್ಞಾನ ಬಳಕೆಯ ಫಲಿತಾಂಶವಾಗಿ ಉತ್ತಮ ಇಳುವರಿ ಪಡೆಯಬಹುದೆಂದು ರೈತರು ಅರಿತುಕೊಂಡರು. ಪ್ರೇರೇಪಣೆಯಿಂದ ಉತ್ತಮ ಬದಲಾವಣೆ ಗಳು ಹೆಚ್ಚಿದವು. ಅಲ್ಲಿ ಮಣ್ಣು ಮತ್ತು ತೇವಾಂಶ ಸಂರಕ್ಷಣಾ ಆಚರಣೆ ಮತ್ತು ಮಣ್ಣಿನ ಫಲವತ್ತತೆಯ ಅಭಿವೃದ್ಧಿ, ಜೊತೆಗೆ ರೈತರಿಗೆ ಏಕಬೆಳೆ ನೆಲಗಡಲೆ ಬೆಳೆಯೊಂದಿಗೆ ಇತರ ಬೆಳೆಗಳ ಪರಿಚಯ ಮಾಡಿಸುವುದೂ ಸಹ ಎ.ಎಮ್.ಇ ಗುರಿಯಾಗಿತ್ತು. ಆದರೆ ನೆಲಗಡಲೆಯು ಒಂದು ಆರ್ಥಿಕ ಬೆಳೆಯಾದ್ದರಿಂದ, ರೈತರು ನೆಲಗಡಲೆಯ ಬದಲು ದ್ವಿದಳ ಧಾನ್ಯಗಳಿಗೋಸ್ಕರ ಒಂದು ಋತುವನ್ನೂ ಬಿಟ್ಟುಬಿಡಲು ಸಿದ್ಧರಾಗಲಿಲ್ಲ. ಇಂತಹ ಸನ್ನಿವೇಶದಲ್ಲಿ, ಪರ್ಯಾಯವಾಗಿ ಬೆಳೆಯುವಿಕೆಯ ಶೈಲಿಯಲ್ಲಿ ಧಾನ್ಯಗಳನ್ನು ಪರಿಚಯಿಸುವ ವಿಚಾರವನ್ನು ಮಾಡಲಾಯಿತು. ಬರವನ್ನು ಸಹಿಸುವ ಮತ್ತು ಬಡವರ ಬೆಳೆ ಎಂದು ಹೇಳಲಾಗುವ ಕಿರುಧಾನ್ಯಗಳು ಮೊಳಕೆಯೊಡೆಯಲು ಮಾತ್ರ ತೇವಾಂಶ ಬಯಸುತ್ತವೆ ಮತ್ತು ನಂತರದಲ್ಲಿ ವೇಗವಾಗಿ ಬೆಳೆದು ನಿಶ್ಚಿತ ಇಳುವರಿಯನ್ನು ಕೊಡುತ್ತದೆ. ಆದರೆ ನೆಲಗಡಲೆಯಂತಹ ಬೆಳೆಯು ಕೇವಲ ಮೊಳಕೆಯೊಡೆಯುವಾಗ ಮಾತ್ರವಲ್ಲ ಆಗಾಗ ಇನ್ನೂ ಕೆಲವು ಸಂದಿಗ್ಧ ಹಂತಗಳಾದ ಹೂ ಕಚ್ಚುವ ಕಾಲ ಮತ್ತು ಕಾಯಿ ಕಚ್ಚುವ ಕಾಲದಲ್ಲೂ ತೇವಾಂಶವನ್ನು ಬಯಸುತ್ತದೆ. ಇಲ್ಲದಿದ್ದರೆ ಬೆಳೆಯು ಮೇಲೇಳುವುದೇ ಇಲ್ಲ. ಹೀಗೆ ನೆಲಗಡಲೆ ಬೆಳೆಯ

ಮಧ್ಯದ ಪಟ್ಟಿಯಲ್ಲಿ ಧಾನ್ಯದ ಬೆಳೆಯ ಪಟ್ಟಿಗಳನ್ನು ರೈತರು ಆರಂಭಿಸಿದರು. ಈ ಜನಪ್ರಿಯ ತಂತ್ರಜ್ಞಾನವನ್ನು ಪಟ್ಟಿ

ಬೆಳೆಯುವಿಕೆ’ಎಂದು ಕರೆಯುತ್ತಾರೆ (ಟೇಬಲ್ 1 ನೋಡಿ).

ಪಟ್ಟಿ ಬೆಳೆ (ಬಾಕ್ಸ್ 1)

ಪಟ್ಟಿ ಬೆಳೆಗಳ ಪರಿಚಯವೆಂದರೆ ರೈತರು ಸಾಧಾರಣವಾಗಿ ಬೆಳೆ ಸಾಲುಗಳು, ಮುಖ್ಯ ಬೆಳೆಯ ಸಾಲಿನೊಂದಿಗೆ ಪರ್ಯಾಯವಾಗಿರುತ್ತವೆ. ಸಾಮಾನ್ಯವಾಗಿ ಇಳಿಜಾರಿಗೆ ಅಡ್ಡಲಾಗಿರುತ್ತದೆ.ಹರಿದುಹೋಗುವ ನೀರಿಗೆ ತಡೆಯಂತೆ ವರ್ತಿಸುತ್ತದೆ. ಉದಾಹರಣೆಗೆ, ಪಟ್ಟಿ ಬೆಳೆಗಳಾಗಿ ಕೆಂಪು ಜೋಳ, ಸಜ್ಜೆ, ನವಣೆ, ಹೆಸರು,ಉದ್ದು, ಹುರುಳಿ, ಬಟಾಣಿ, ಹೊಲದ ಅವರೆ, ಗುರೆಳ್ಳು, ಎಳ್ಳು,ಸೊಪ್ಪು, ತರಕಾರಿಗಳು ಇತ್ಯಾದಿ.ಪಟ್ಟಿ ಬೆಳೆಯು ಆಹಾರ, ಮೇವು ಮತ್ತು ಆದಾಯ ಭದ್ರತೆಯ ಭರವಸೆ, ಕಡಮೆ ಮಳೆಯ ಎದುರು ಜೀವವಿಮೆ, ಪೀಡೆ ಮತ್ತು ರೋಗ ಸಮಸ್ಯೆಯನ್ನು ತಗ್ಗಿಸಲು ಕಾರಣ. ನೈಸರ್ಗಿಕ ಸಂಪನ್ಮೂಲಗಳ ಉತ್ತಮ ಬಳಕೆ ಮತ್ತು ಏಕಬೆಳೆ ಪದ್ಧತಿಯ ಪರಿಣಾಮಗಳನ್ನು ಕಡಿಮೆಗೊಳಿಸುತ್ತದೆ.ಪಟ್ಟಿ ಬೆಳೆಯಿಂದಾಗುವ ಲಾಭಗಳು ಮಣ್ಣಿನಿಂದ ಹುಟ್ಟುವ ಕೀಟಗಳಿಗೆ ಮತ್ತು ರೋಗಕಾರಕಗಳಿಗೆ ಆಶ್ರಯ ಕೊಡದೇ ಆಹಾರ ಸಿಗದಂತೆ ಪಟ್ಟಿ ಬೆಳೆಯು ಪ್ರೇರೇಪಿಸುತ್ತದೆ. ಇಳಿಜಾರಿನಲ್ಲಿ ಬೆಳೆಯುವಿಕೆಯನ್ನು ಕೈಗೊಳ್ಳುವುದರಿಂದ, ರಾಗಿಯ ಸಸಿಗಳು ಹತ್ತಿರವಿರುವ ಕಾರಣ,ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.ಪಟ್ಟಿ ಬೆಳೆಯ ಸಂಯೋಜನೆಯಿಂದ ಪೋಷಕಾಂಶಗಳಿಗಾಗಿ ಮೇಲಿನ ಮತ್ತು ಆಳದ ಬೇರುಗಳ ಪೈಪೋಟಿ ಕಡಿಮೆಯಾಗುತ್ತದೆ ಮತ್ತು ಸಮಯ ಬಂದಾಗ ಬೆಳೆ ಸಂಯೋಜನೆಯು ಒಂದಕ್ಕೊಂದು ಪೋಷಕಾಂಶ ಸಿಗುವಂತೆ ಉಪಚರಿಸುತ್ತದೆ. ಇಲ್ಲಿ ಧಾನ್ಯದ ಬೆಳೆ ರಾಗಿಯು ದ್ವಿದಳ ಧಾನ್ಯವಾದ ನೆಲಗಡಲೆಯಿಂದ ಸಾರಜನಕವನ್ನು ಪಡೆದುಕೊಳ್ಳುತ್ತದೆ.

ಬೆಳೆಶೇಷವಾದ ರಾಗಿಯ ಕೂಳೆಗಳು ಕೊಯ್ಲಾದ ನಂತರ ಮಣ್ಣಿನಲ್ಲೇ ಉಳಿಯುತ್ತದೆ ಮತ್ತು ಮಣ್ಣಿನೊಂದಿಗೆ ಬೆರೆಯುತ್ತದೆ. ಹೀಗೆ ಪೋಷಕಾಂಶದ ಕೆಲವು ಭಾಗ ಪುನರಾವರ್ತನೆಯಾಗುತ್ತದೆ. ಅದೇ ನೆಲಗಡಲೆಯಲ್ಲಿ ಇಡೀ ಸಸಿಯನ್ನೇ ಬೇರುಸಹಿತ ಮೇಲೆತ್ತಲಾಗುತ್ತದೆ ಮತ್ತು ಮಣ್ಣಿನ ಕಣಗಳೊಂದಿಗೆ ಹೊಲದಿಂದ ಹೊರಗೊಯ್ಯಲಾಗುತ್ತದೆ.

ರೈತರನ್ನು ಸಶಕ್ತರನ್ನಾಗಿಸಲು, ವಿಭಿನ್ನ ಬೆಳೆಗಳ ಜೋಡಣೆಯ ಪ್ರಯತ್ನ ಮತ್ತು ಕುಟುಂಬದ ಅವಶ್ಯಕತೆಗಳ ಪೂರೈಕೆಗೆ ಅನುರೂಪವಾದ ತಂತ್ರಜ್ಞಾನದ ಅಳವಡಿಕೆಯಂತಹ ಪ್ರಮುಖ ತಂತ್ರಜ್ಞಾನಗಳ ವಿಷಯಗಳನ್ನು, ಸಹಭಾಗಿತ್ವದಲ್ಲಿ ತಂತ್ರಜ್ಞಾನ ಅಭಿವೃದ್ಧಿ (PTD) ಪದ್ಧತಿಯ ಮೂಲಕ ಪರಿಚಯಿಸಲಾಯಿತು.

ಪಟ್ಟಿ ಬೆಳೆಯುವಿಕೆಯಲ್ಲಿ ರೈತರ ಪ್ರಯತ್ನ

ನೆಲಗಡಲೆ ಬೆಳೆಯೊಂದಿಗೆ ಕೆಲವು ಧಾನ್ಯದ ಬೆಳೆಗಳನ್ನು ಪಕ್ಕದಲ್ಲಿ ಬೆಳೆಯಲು ರೈತರೊಂದಿಗೆ ಚರ್ಚಿಸಲಾಯಿತು. ರೈತರು ಪ್ರಯತ್ನಿಸುವ ಆಸಕ್ತಿಯನ್ನು ತೋರಿದರು ಮತ್ತು 2004ನೇ ಇಸವಿಯಲ್ಲಿ ಬೆಳೆಯಲು ಮುಂಗಾರು ಋತುವನ್ನು ಆಯ್ದುಕೊಂಡರು. ಎರಡು ಜಿಲ್ಲೆಗಳ 500 ರೈತರೊಂದಿಗೆ ಪಟ್ಟಿ ಬೆಳೆ ತಂತ್ರಜ್ಞಾನದ ಬಗ್ಗೆ ಸಂವಾದಗಳು ನಡೆದವು.

ಪಟ್ಟಿ ಬೆಳೆ ತಂತ್ರಜ್ಞಾನವು ರೈತರಿಗೆ ಹೊಸತು. ರೈತರಿಗೆ ಈ ತಂತ್ರಜ್ಞಾನದ ಬಗ್ಗೆ ಅವರದೇ ಆದ ಅನುಮಾನಗಳಿದ್ದವು. ಆದರೂ ಸಹ ಧಾನ್ಯದ ಬೆಳೆಗಳ ನೆರಳು ನೆಲಗಡಲೆಯ ಮೇಲೆ ಬೀಳುವ ಸಮಸ್ಯೆಯನ್ನು ಗ್ರಹಿಸಿದರು. (ಆಯ್ದ ಪಟ್ಟಿ ಬೆಳೆಗಳಾದ) ರಾಗಿ ಅಥವಾ ಸಜ್ಜೆಯಲ್ಲಿ ಸಿಗುವ ಹಣ ನೆಲಗಡಲೆಗೆ ಹೋಲಿಸಿದರೆ ಕಡಿಮೆ ಎನ್ನುವುದು ಅವರಿಗಿರುವ ಭಯ. ಅದಕ್ಕಿಂತಲೂ, ಮುಂಚೆಯೇ ಉತ್ತಮ ಮಳೆಯಾದ ಕಾರಣ ಅವರು ನೆಲಗಡಲೆಯಲ್ಲಿ ಉತ್ತಮ ಇಳುವರಿಯ ನಿರೀಕ್ಷೆ ಮಾಡಿದ್ದರು. ಅದಕ್ಕಾಗಿ ಅವರು ಹೊಸ ತಂತ್ರಜ್ಞಾನದ ಪ್ರಯತ್ನಕ್ಕೆ ಸಿದ್ಧರಾಗಲಿಲ್ಲ. ಇದರೊಂದಿಗೆ ಕುಟುಂಬದ ಇತರ ಸದಸ್ಯರು, ಅಕ್ಕಪಕ್ಕದವರು, ಸಾಲ ನೀಡುವವರೂ ಅವರನ್ನು ನಿರುತ್ಸಾಹಗೊಳಿಸಿದರು.

ಏನೆಲ್ಲಾ ಆದರೂ ಎಲ್ಲಾ ರೈತರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವರೆಂಬ ನಿರೀಕ್ಷೆ ಇರಲಿಲ್ಲ. ಇದಕ್ಕೆ ಪ್ರೋತ್ಸಾಹಿಸಿದ ಸುಮಾರು 80 ರೈತರು ಪ್ರಯತ್ನಿಸಲು ಒಪ್ಪಿದರು. ಆಮೇಲೆ, ರೈತರ ಗುಂಪುಗಳಲ್ಲಿ ಚರ್ಚಿಸಲಾಯಿತು. ಬಿತ್ತನೆಯ ಕಾಲದಲ್ಲಿ ನಿರಂತರವಾಗಿ ಹೊಲಕ್ಕೆ ಭೇಟಿ ನೀಡಲಾಯಿತು ಮತ್ತು ಪ್ರತಿಯೊಬ್ಬರನ್ನೂ ಪ್ರತ್ಯೇಕವಾಗಿ ಸಂಪರ್ಕಿಸುವುದರ ಜೊತೆಗೆ ಭರವಸೆಯನ್ನೂ ನೀಡಲಾಯಿತು. ಈ ಎಲ್ಲಾ ಪ್ರಯತ್ನಗಳಿಂದ ಸುಮಾರು 50 ರೈತರು ಈ ಪದ್ಧತಿಯನ್ನು ಅಳವಡಿಸಿದರು. ಈಗಾಗಲೇ ರಾಗಿ ಮತ್ತು ಸಜ್ಜೆ ಆಯ್ಕೆ ಮಾಡ ಬಹುದಾದ ಬೆಳೆಗಳೆಂದು ಪರಿಗಣಿಸಲಾಗಿತ್ತು. ಸುಮಾರು ಎಲ್ಲಾ ರೈತರು

ನೆಲಗಡಲೆಯೊಂದಿಗೆ ರಾಗಿಯ ಸಂಯೋಜನೆ ಅಳವಡಿಸಿದರು.

ಕಾರ್ಯಾಚರಣೆಯಲ್ಲಿ ಬಿಕ್ಕಟ್ಟುಗಳು

ತಂತ್ರಜ್ಞಾನ ಅಳವಡಿಸುವ ಕಾರ್ಯಾಚರಣೆಯಲ್ಲಿ ಬಿಕ್ಕಟ್ಟುಗಳು ಎದುರಾದವು. ನೆಲಗಡಲೆ ಬಿತ್ತನೆಯಲ್ಲಿ ಸಾಮಾನ್ಯವಾಗಿ ಎತ್ತುಗಳನ್ನು ಕಟ್ಟಿದ ಮೂರು ಅಲಗಿನ ನೇಗಿಲಿನಿಂದ ಉಳುತ್ತಾ ಬೀಜದ ಕುಣಿಗಳನ್ನುತೆಗೆಯುತ್ತಿದ್ದರು. ರೈತರು ಒಂಭತ್ತುಸಾಲು ನೆಲಗಡಲೆ, ಆರುಸಾಲು ರಾಗಿ ಬಿತ್ತಲು ಒಪ್ಪಿದರು. ನೆಲಗಡಲೆಯ ಮಧ್ಯೆ ರಾಗಿಯನ್ನು ಪರ್ಯಾಯವಾಗಿ ಮಾಡುವಾಗ, ನೆಲಗಡಲೆ ಮತ್ತು ರಾಗಿಯ ಬೀಜಗಳ ಗಾತ್ರದಲ್ಲಿ ವ್ಯತ್ಯಾಸವಿರುವುದಕ್ಕಾಗಿ ಬಿತ್ತುವಾಗ ಆಳವನ್ನು ಸರಿಹೊಂದಿಸಬೇಕಾದ ಕೆಲಸ ಮಾಡಬೇಕಾಯಿತು. ನೊಗ ಮತ್ತು ಬೀಜದ ಕುಣಿಯ ಮಧ್ಯದ ಹಗ್ಗವನ್ನು ಬಿಗಿಯಾಗಿ ಹಿಡಿದುಕೊಂಡು, ರಾಗಿ ಬೀಜಗಳು ಆಳದಲ್ಲಿ ಬೀಳದಂತೆ ಖಚಿತಪಡಿಸಿಕೊಳ್ಳಬೇಕಾಗಿತ್ತು.

ಎಚ್ಚರಿಕೆಯಿಂದ ಬಿತ್ತನೆ ಮಾಡಿದಾಗಲೂ, ಆಳದಲ್ಲಿ ಬಿತ್ತಲಾದ ರಾಗಿಯು ಮೊಳಕೆಯೊಡೆಯದೇ ಕೆಲವು ರೈತರು ಅಸಹಾಯಕರಾದರು. ಮಿಡತೆಗಳ ಪೀಡೆಯಿಂದಾಗಿ ರಾಗಿಯು ಕಡಿಮೆ ಬೆಳೆಯಲು ಕಾರಣವಾಯಿತು. ಕೆಲವು ರೈತರು ಮತ್ತೊಮ್ಮೆ ನೆಲಗಡಲೆಯ ಜೊತೆ ಮರುಬಿತ್ತನೆ ಮಾಡಲು ನಿಶ್ಚಯಿಸಿದರು. ಉತ್ತರ ದಕ್ಷಿಣವಾಗಿ ಬಿತ್ತನೆ ಮುಗಿದ ಮೇಲೆ ರಾಗಿಯ ಸಾಲುಗಳ ಪಕ್ಕದ ನೆಲಗಡಲೆ ಬೆಳೆಗಳ ಸಾಲಿನಲ್ಲಿ ಬೆಳವಣಿಗೆ ಗಿಡ್ಡವಾಗಿರುವುದು ಕಂಡುಬಂತು. ಕಾರಣ

ನೆರಳಿನ ಪರಿಣಾಮ. ಕೊಟ್ಟಕೊನೆಗೆ, 27ರೈತರು ಪಟ್ಟಿ ಬೆಳೆಯನ್ನು ಮುಂದುವರೆಸಿ ನಿರ್ವಹಿಸಿದರು.

ಹಣಕ್ಕಿಂತ ಹೆಚ್ಚು

ಪಟ್ಟಿ ಬೆಳೆಯ ವಿಧಾನದಲ್ಲಿ ನೆಲಗಡಲೆಯ ಉತ್ಪಾದನೆ ಎಕರೆಗೆ ಸುಮಾರು 276ಕಿಲೋಗ್ರಾಂ. ಕೇವಲ ನೆಲಗಡಲೆಯೊಂದನ್ನೇ ಬೆಳೆದ ಹೊಲದಲ್ಲಿ ಉತ್ಪಾದನೆ ಎಕರೆಗೆ 362ಕಿಲೋಗ್ರಾಂ (ನೋಡಿ ಟೇಬಲ್ 1). ಪೂರ್ಣಪ್ರಮಾಣದಲ್ಲಿ ನೋಡಿದಾಗ ಇದು ಕಡಿಮೆ ಎನಿಸುತ್ತದೆ. ಹಾಗಿದ್ದರೂ ಜಾಗದಲ್ಲಿ 125ಕಿಲೋಗ್ರಾಂ ಬೆಳೆದ ರಾಗಿಯ ಉತ್ಪಾದನೆಯನ್ನು ಸೇರಿಸಿದಾಗ ಪಟ್ಟಿ ಬೆಳೆಯ ವಿಧಾನದಲ್ಲಿ ಒಟ್ಟು ಉತ್ಪಾದನೆ ಸಾಕಷ್ಟು ಹೆಚ್ಚೇ ಆಗುತ್ತದೆ. ಹಾಗಾದರೆ ರೈತರು ಸಿಪ್ಪೆ ಸಹಿತ ನೆಲಗಡಲೆ ಹಾಗೂ ಮೇವಿನ ಮತ್ತು ರಾಗಿ ಹುಲ್ಲಿನ ಮಾರಾಟದಿಂದ ಸುಮಾರು 5,507ರೂಪಾಯಿಗಳ ಪ್ರತಿಫಲ ಪಡೆಯುತ್ತಾರೆ. ಜೊತೆಗೆ ಕುಟುಂಬದ ಬಳಕೆಗೆ ಕಾಳುಗಳು ಉಳಿಯುತ್ತವೆ.

ಕೃಷಿಗೆ ಪೂರಕ ಹವಾಮಾನ ವ್ಯವಸ್ಥೆಯಿರುವ ಪ್ರದೇಶದಲ್ಲಿ ಅಂತಹ ಸನ್ನಿವೇಶದಲ್ಲಿ ಕೇವಲ ಒಂದೇ ಬೆಳೆ ಮತ್ತು ಪಟ್ಟಿ ಬೆಳೆಗಳಿಂದ ಪ್ರತಿಫಲವನ್ನಂತೂ ಕಾಣಬಹುದು. ಬ್ಯಾಚುಲರ್ ಹೇಳುವುದೇನೆಂದರೆ (2000) ಪ್ರತಿ ಹತ್ತು ವರ್ಷಗಳ ಅವಧಿಯಲ್ಲಿ ವಿಭಿನ್ನ ತೀವ್ರತೆಯ ಐದು ಬರಗಳು ಬರುತ್ತವೆ. ಇದರಲ್ಲಿ ಎರಡು ಬರಗಳು ಮಧ್ಯಮ ಮಿತಿಯಲ್ಲೂ, ಎರಡು ಉಗ್ರವಾಗಿಯೂ ಮತ್ತು ಒಂದು ಅನಾಹುತಕಾರಿಯಾಗಿರುತ್ತದೆ. ಸಾಧಾರಣ ಮತ್ತು ಸಾಧಾರಣಕ್ಕಿಂತ ಹೆಚ್ಚು ಮಳೆಯು ಎರಡೂ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ. ಎರಡೂ ಜಲಾನಯನಗಳು ಸಾಧಾರಣಕ್ಕಿಂತ ಕಡಿಮೆ ಮಳೆ ಪಡೆವ ಪ್ರದೇಶವಾಗಿದ್ದರೂ ಪಟ್ಟಿ ಬೆಳೆ ಬೆಳೆದ ಉಪ್ಪರಹಳ್ಳಿ ಪ್ರದೇಶದವರ ಕಾರ್ಯ ನಿರ್ವಹಣೆ ಅತ್ಯುತ್ತಮ. ಹೀಗೆ ಪಟ್ಟಿ ಬೆಳೆಯು ಬರದಬವಣೆ ತಗ್ಗಿಸುವ ಕೌಶಲ್ಯ ಸಾಧಿಸಿದಂತಾಯಿತು.

ನೆಲಗಡಲೆಯೊಂದಿಗೆ ಪರ್ಯಾಯವಾಗಿ ರಾಗಿಯನ್ನು ಬೆಳೆಯುವುದರಿಂದ ಪೀಡೆಗಳ ದಾಳಿಯನ್ನು ಸಹ ಕಡಿಮೆ ಮಾಡಲು ಸಹಾಯಕವಾಯಿತು. ಗೊಡ್ಡುರೋಗದಂತಹ (PBND) ವೈರಸ್ ರೋಗವನ್ನು ಹಬ್ಬಿಸಲು ಕಾರಣವಾಗುವ ಥ್ರಿಪ್ಸ್ ತರಹದ ಕೀಡೆಗಳಿಗೆ ತಡೆಬೇಲಿ ಯಂತೆ ಕೆಲಸ ಮಾಡುತ್ತದೆ.ನೆಲಗಡಲೆಯೊಂದಿಗೆ ಬೇರೆ ಬೆಳೆಯನ್ನು ಮಿಶ್ರ ಮಾಡಿದಾಗ ಬದಲಾದಬೆಳೆ ಸಮೂಹದಿಂದಾಗಿ ರೋಗಕಾರಕಗಳಿಗೆ ಆಹಾರ ಸಿಗದೇ ಮಣ್ಣಿನಿಂದ ಅಕಸ್ಮಿಕವಾಗಿ ಹುಟ್ಟುವ ರೋಗಗಳು ಕಾಣಿಸಲಿಲ್ಲ.

ಈ ಪದ್ಧತಿಯಲ್ಲಿ ರಾಗಿ ಬೆಳೆಯುವಿಕೆ ಮಹಿಳೆಯರಿಗೆ ಬಹಳ ಇಷ್ಟವಾಯಿತು. ಇದಕ್ಕೆ ಸರಳವಾದ ಕಾರಣವೆಂದರೆ ಆಹಾರ ಭದ್ರತೆ. ಮಹಿಳೆಯರು ಮನೆಯ ಖರ್ಚುವೆಚ್ಚಗಳಿಗೆ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಲು ಸೊಪ್ಪು, ತರಕಾರಿಗಳು, ಹುರುಳಿ ಮತ್ತು ಬಟಾಣಿಯಂತಹ ಕಡಿಮೆ ಅವಧಿಯಲ್ಲಿ ಬೆಳೆಯುವ ಯಾವುದೇ ದ್ವಿದಳ ಧಾನ್ಯಗಳನ್ನು ಪಟ್ಟಿಯಲ್ಲಿ ಬೆಳೆಯಲು ಈಗ ವಿಶೇಷ ಉತ್ಸುಕರು. ಹೇಗೇ ಇರಲಿ, ಅವರ ಕೆಲಸದ ಹೊರೆಗೆ ಹೊಸ ಆಚರಣೆಯು ತೊಂದರೆಯನ್ನಂತೂ ಕೊಡುತ್ತಿಲ್ಲ. ರೈತರು ಪಟ್ಟಿ ಬೆಳೆಗಳಿಂದ ಇನ್ನೊಂದು ಲಾಭವನ್ನೂ ಕಂಡುಕೊಂಡಿದ್ದಾರೆ. ಸಾಂಪ್ರದಾಯಿಕ ಆಚರಣೆಯಲ್ಲಿ ರೈತರು ನೆಲಗಡಲೆಯನ್ನು ಬೇರುಸಹಿತ ಕಿತ್ತುಬಿಡುತ್ತಾರೆ. ಇದರಿಂದ ಮಣ್ಣಿನಲ್ಲಿ ಏನೂ ಉಳಿಯದು. ಆದರೆ ಧಾನ್ಯದ ಬೆಳೆಗಳನ್ನು

ಜೋಡಿಸುವುದರಿಂದ ರಾಗಿ ಬೆಳೆಯು ಕಾಳು ಕೊಯ್ಲು ಮಾಡಿದ ಮೇಲೆ ಅದರ ಕೂಳೆಗಳನ್ನು ಅಲ್ಲಿಯೇ ಬಿಡಲು ಸಾಧ್ಯವಾದರೆ ಅದರಿಂದ ಮಣ್ಣಿಗೆ ಸ್ವಲ್ಪ ಸಸ್ಯ ಪೋಷಕಾಂಶಗಳನ್ನು ಹಿಂದಿರುಗಿಸಿದಂತಾಗುತ್ತದೆ.

ನೆಲಗಡಲೆ ಬೆಳೆವ ರೈತರು ಕೊಯ್ದ ನೆಲಗಡಲೆಯನ್ನು ಶೇಖರಿಸಿಡಲು ಭತ್ತದ ಹುಲ್ಲು ಅಥವಾ ಇತರ ಧಾನ್ಯದ ಹುಲ್ಲನ್ನು ಕೊಳ್ಳುತ್ತಾರೆ. ಈಗ ರಾಗಿಯಹುಲ್ಲನ್ನು ಅಂಗಳದಲ್ಲಿ ಸಂಗ್ರಹಿಸಿದ ನೆಲಗಡಲೆ ರಾಶಿಯನ್ನು ಮುಚ್ಚಲು ಬಳಸಬಹುದು. ಹೀಗೆ ಹುಲ್ಲು ಖರೀದಿಯ ವೆಚ್ಚವು ಕಡಿಮೆಯಾಗುತ್ತದೆ.

2004ನೇ ಇಸವಿಯಲ್ಲಿ 27ರೈತರು ಪಡೆದ ಅನುಭವ ಅವರನ್ನುಮತ್ತು ಊರಿನ ಇತರರನ್ನೂ ಸಹ ಒಪ್ಪುವಂತೆ ಮಾಡಿದ್ದಲ್ಲದೆ, ದೊಡ್ಡ ಪ್ರಮಾಣದಲ್ಲಿ ಈ ಆಚರಣೆಯನ್ನು ಕೈಗೊಳ್ಳುವಂತಾಗಿದೆ. ಮುಂದಿನ ವರ್ಷಗಳಲ್ಲಿ ರೈತರು ಇನ್ನಷ್ಟು ಅನುಭವ ಪಡೆದು ಒಂದಕ್ಕಿಂತ ಹೆಚ್ಚು ಮಾರ್ಗಗಳಿಂದ ಇದರ ಪ್ರಯೋಜನ ಪಡೆಯುತ್ತಾರೆ.

ಉಪಸಂಹಾರ

ಈ ಆಚರಣೆಯನ್ನು ವಿಶಾಲವಾಗಿ ಅಳವಡಿಸುವುದಾದರೆ, ಬಹಳ ರೈತರು ಇದನ್ನು ಅಳವಡಿಸಬೇಕಾಗುತ್ತದೆ ಮತ್ತು ಏರಿಳಿತದ

ಸ್ಥಿತಿಯಲ್ಲೂ ಇದರ ಉಪಯುಕ್ತತೆಯನ್ನು ಪಡೆಯಲು ಒಪ್ಪಬೇಕು. ಇಷ್ಟೇ ಪ್ರಮುಖವಾದದ್ದೆಂದರೆ, ಬಳಕೆಯಲ್ಲಿರುವ ಬೆಳೆ ಪದ್ಧತಿ ಮತ್ತು ವಿವಿಧ ಬೆಳೆ ಸಂಯೋಜನೆಯು ರೈತರಿಗೆ ಸೂಕ್ತವೇ, ಆಹಾರ ಮತ್ತು ಮೇವಿನ ಅವಶ್ಯಕತೆಯನ್ನು ಪೂರೈಸುವುದೇ ಎಂದು ವಿಚಾರ ಮಾಡಿ ತೆಗೆದುಕೊಳ್ಳಬೇಕು. ಪ್ರಾರಂಭದಲ್ಲಿ ರೈತರೊಂದಿಗೆ ಚರ್ಚಿಸಿದಾಗ ಹೊರಬಂದದ್ದೇನೆಂದರೆ, ಈ ತಂತ್ರಜ್ಞಾನವನ್ನು ನ್ಯಾಯವಾಗಿ ಒಣಭೂಮಿ ತಂತ್ರಜ್ಞಾನವಾಗಿ ತೆಗೆದುಕೊಳ್ಳಬೇಕು. ಇದು ಅವರ ವೆಚ್ಚಗಳನ್ನು ತಗ್ಗಿಸುವುದಲ್ಲದೇ ಅವರ ಬದುಕಿನ ಬೆಳವಣಿಗೆಗೆ ಕೊಡುಗೆಯಾಗುತ್ತದೆ. ಮೊದಲ ವರ್ಷದಿಂದಲೇ ಪಟ್ಟಿ ಬೆಳೆಯಿಂದ ಬರುವ ಪ್ರತಿಫಲವು ಸರಿಸುಮಾರು ಕೇವಲ ಒಂದೇ ಬೆಳೆಯಿಂದ ಬರುವ ಇಳುವರಿಗೆ ಸಮಾನವಾಗಿರುತ್ತದೆ. ಪಟ್ಟಿ ಬೆಳೆಯು ಮಣ್ಣಿನ

ಫಲವತ್ತತೆಯನ್ನು ಹೆಚ್ಚಿಸುವ ಪರಿಣಾಮ ಮತ್ತು ಅದರಿಂದಾಗಿ ಮುಂದೆ ಪ್ರತಿಫಲವು ಹೆಚ್ಚಾಗುವ ಸಂಭಾವ್ಯತೆಯನ್ನು ನಿರೀಕ್ಷಿಸಬಹುದು ಮತ್ತು ಹೀಗೆ ಹೆಚ್ಚಿಸುವ ಇನ್ನಷ್ಟು ಹೆಚ್ಚು ಅವಕಾಶಗಳನ್ನು ಶೋಧಿಸಬಹುದು.

ಮೂಲ: ಲೀಸಾ ಇಂಡಿಯ ವಾಲ್ಯೂಮ್ 7, ನಂ 2, ಜೂನ್ 2005 ಗುರುದತ್ತ ಹೆಗಡೆ. ಎಮ್ ಸಹಾಯಕ ಪ್ರಾಧ್ಯಾಪಕರು ,ಕೃಷಿ ವಿಜ್ಞಾನ ಕೇಂದ್ರ, ಶಿರಸಿ & ರವೀಂದ್ರನಾಥ್‍ರೆಡ್ಡಿ ಕೇಂದ್ರೀಯ ಯೋಜನಾ ಅಧಿಕಾರಿ, AMEF

ನಂ.204, 200 ಅಡಿ ವರ್ತುಲ ರಸ್ತೆ, 3ನೇ  ಫೇಸ್ ಬನಶಂಕರಿ,ಎರಡನೇ ಬ್ಲಾಕ್, 3ನೇ ಸ್ಟೇಜ್, ಬೆಂಗಳೂರು-560085

e-mail: amebang@giasbg01.vsnl.net.in

ಅರುಣ್ ಬಳಮಟ್ಟಿ,ಕಾರ್ಯನಿರ್ವಾಹಕ ನಿರ್ದೇಶಕ, AMEF, ನಂ.204, 200 ಅಡಿ ವರ್ತುಲ ರಸ್ತೆ, 3ನೇ  ಫೇಸ್ ಬನಶಂಕರಿ,ಎರಡನೇ ಬ್ಲಾಕ್, 3ನೇ ಸ್ಟೇಜ್, ಬೆಂಗಳೂರು-560085

e-mail: amebang@giasbg01.vsnl.net.in

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate