অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಕೀಟನಾಶಕಗಳು

ಕೀಟನಾಶಕಗಳು

ಇವತ್ತಿನ ಕೃಷಿಯಲ್ಲಿ ಕೀಟನಾಶಕಗಳ ಬಳಕೆ ಇಲ್ಲದೆ ಉತ್ಪಾದನೆಯೇ ಇಲ್ಲ ಎನ್ನುವಂತಾಗಿದೆ. ಅದರಲ್ಲೂ ಕೆಲವೊಂದು ಕಡೆ ಸಾವಯವ ಅಥವಾ ಪರಿಸರ ಪೂರಕ ಕೃಷಿಯ ಮಾತು ಕೇಳಿಬರುತ್ತಿದ್ದರೂ ಒಟ್ಟಾರೆ ಆಹಾರ ಉತ್ಪಾದನೆಯಲ್ಲಿ ಅದರ ಪಾಲು ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಹಾಗಾಗಿ ಕೃಷಿ ಪೂರ್ಣ ವಿಷ ಮುಕ್ತವಾಗಿಲ್ಲ. ಹೀಗೆ ಉಣ್ಣುವ ಅನ್ನಕ್ಕೆ ಸೇರುತ್ತಿರುವ ವಿಷ ಅಚಾನಕ್ ಆಗಿ ಸೇರುತ್ತಿರುವುದಲ್ಲ. ಕೃಷಿಯಲ್ಲಿ ಕೀಟನಾಶಕಗಳ ಬಳಕೆಯಿಂದ ನಾವಾಗಿಯೇ ಸೇರಿಸುವ ಕೆಲಸ. ಇತರೆ ಉದ್ಯಮಗಳಲ್ಲಿ ಯಾವುದೋ ನೆಲೆಯಿಂದ ರಾಸಾಯನಿಕಗಳ ಬಳಕೆಯ ದೆಸೆಯಿಂದ ಹೊರ ಬರುವ ತ್ಯಾಜ್ಯದಿಂದ ವಿಷಕಾರಿಯಾಗುವುದುಂಟು. ಆದರೆ ಕೃಷಿಯಲ್ಲಿ ಮಾತ್ರ ಸಿಂಪರಣೆಯನ್ನು ಉತ್ಪಾದನೆ ಹೆಚ್ಚಲು ಬೇಕೆಂತಲೇ ಮಾಡುತ್ತೇವೆ. ಹಾಗಾಗಿ ಒಂದು ರೀತಿಯಲ್ಲಿ ವಾತಾವರಣದ ಕಲುಷಿತ ಸಂದರ್ಭಕ್ಕೆ ನಾವೇ ಕಾರಣರು. ಕೃಷಿ ಉತ್ಪಾದನೆಯನ್ನು ರಕ್ಷಿಸುವ ಉಪಾಯದಲ್ಲಿ ಬೆಳೆ ರಕ್ಷಣೆ ಎಂದರೆ ಮುಖ್ಯವಾಗಿ ಅದನ್ನು ಹಾಳು ಮಾಡುವ ಕೀಟಗಳಿಂದ ರಕ್ಷಣೆ. ಇದನ್ನ ಒಂದು ಪರಿಸರ ಪೂರಕ ಹಿನ್ನೆಲೆಯಲ್ಲಿ ನೋಡದೆ ಬೆಳೆ ರಕ್ಷಣೆ ಯೊಂದೇ ಮುಖ್ಯ ಗುರಿಯಾಗಿದ್ದು, ವಿಪರೀತ ರಾಸಾಯನಿಕ ಬಳಕೆ ಸಾಮಾನ್ಯವಾಗಿದೆ. 

ಇದೇನು ಹೊಸತಲ್ಲ. ಆದರೆ ಆತಂಕ ಏನೆಂದರೆ ಇದೀಗ ಹೊಸ ಅಧ್ಯಯನಗಳು ತೆರೆದಿಟ್ಟ ಅಪಾಯಕಾರಿ ಸಂಗತಿಗಳು. ಜಾಗತಿಕವಾಗಿ ಇಡೀ ನೆಲದ ಮೇಲಿನ ಸುಮಾರು ಪ್ರತಿಶತ 40ರಷ್ಟು ನೆಲದ ಮೇಲೆ ಹರಿವ ನೀರು ಕೃಷಿ ಕೀಟನಾಶಕಗಳಿಂದ ಮಲಿನವಾಗಿದೆ ಎಂಬ ವರದಿ ಇದೀಗ ಹೊರ ಬಂದಿದೆ. 

ಅಧ್ಯಯನಕಾರರು, ಅಮೆರಿಕ, ಯುರೋಪ್ ಮತ್ತು ಏಷ್ಯಾ ಖಂಡಗಳ ದೇಶಗಳ ವೈವಿಧ್ಯಮಯ ನೆಲಹಾಸುಗಳನ್ನು ಅಧ್ಯಯನದಲ್ಲಿ ತೊಡಗಿಸಿ ಕೊಂಡಿದ್ದಾರೆ. ಅದರಲ್ಲೂ ಬಹು ಮುಖ್ಯವಾಗಿ ದಕ್ಷಿಣ ಏಷ್ಯಾದ ನಮ್ಮ ದೇಶ ವನ್ನೂ ಒಳಗೊಂಡಂತೆ ಅನೇಕ ಕಡೆಗಳಲ್ಲಿ ಪರಿಸ್ಥಿತಿ ಗಮನಿಸಲೇಬೇಕಾದ ಹಂತದಲ್ಲಿದೆ. ಕಾರಣವೇನೆಂದರೆ ಬೆಳೆಗೆ ಸಿಂಪಡಿಸಿದ ಕೀಟನಾಶಕ ಕೇವಲ ಬೆಳೆಯನ್ನು ಮಾತ್ರವೇ ಸಂರಕ್ಷಿಸುವ ಕೆಲಸವನ್ನು ಮಾಡುವುದಿಲ್ಲ. ಅಂತಿಮವಾಗಿ ಅದು ತಲುಪುವ ಸ್ಥಳ, ನೆಲ ಮತ್ತು ಆ ಮೂಲಕ ಅದರ ಮೇಲೆ ಹರಿವ ನೀರು! ಆತಂಕ ಏನೆಂದರೆ ಇಡೀ ಭೂಮಂಡಲದ ನೆಲದ ಪ್ರತಿ ಎಕರೆಗೆ 100 ಗ್ರಾಂನಂತೆ ಕೀಟನಾಶಕವನ್ನು ಇಂದು ಬಳಸಲಾಗುತ್ತಿದೆ. ಪ್ರತಿ ವರ್ಷ ಸುಮಾರು 4 ದಶಲಕ್ಷ ಟನ್‌ಗಳಷ್ಟು ಕೀಟನಾಶಕ ಬಳಸಿ ಕೃಷಿ ಮಾಡುತ್ತಿದ್ದೇವೆ. ಈ ಹಿಂದಿನ ಸಂಶೋಧನೆಗಳು ಕೀಟನಾಶಕಗಳ ಪ್ರಭಾವದಿಂದ ಜಾಗತಿಕವಾಗಿ ಜೀವಿ ವೈವಿಧ್ಯವು ಆಪತ್ತಿನಲ್ಲಿದೆ ಎಂದು ಎಚ್ಚರಿಸಿದ್ದವು. ಇದೀಗ ಅದರ ಜತೆಗೆ ವಾತಾವರಣದ ಬದಲಾವಣೆಯ ಗಾಳಿ ಇದನ್ನು ಮತ್ತಷ್ಟು ಆಪತ್ತಿನ ಕಡೆಗೆ ಕೊಂಡ್ಯೊಯ್ದಿವೆ ಎನ್ನಲಾಗುತ್ತಿದೆ. ಅದಕ್ಕೆಂದೇ ಸುಸ್ಥಿರ ಸಸ್ಯ ರಕ್ಷಣೆ ಮುಂತಾಗಿ ಬಂದ ಚರ್ಚೆಗಳು ಹಾಗೇ ತೇಲಿಹೋದವೇ ಎಂಬ ಅನುಮಾನಗಳನ್ನು ಅಧ್ಯಯನಗಳು ಮತ್ತೀಗ ಹೊರಹಾಕಿವೆ. 

ಕೇವಲ ನೆಲ ಮಲಿನವಾಗುವುದು ಎಂದಲ್ಲ, ನೀರು ನೆಲದ ಮೇಲಿನ ಅತ್ಯಂತ ಚಲನಶೀಲವಾದ ದ್ರಾವಕ. ಇದು ಸುಲಭವಾಗಿ ಮತ್ತೊಂದೆಡೆಗೆ ರಾಸಾಯನಿಕಗಳನ್ನೂ ಸಾಗಿಸಬಲ್ಲದು. ನೀರಿನ ಕಾರಣದಿಂದ ನಮ್ಮ ಸಾಮಾನ್ಯ ಆತಂಕಕ್ಕೀಗ ವೇಗ ಹೆಚ್ಚಿದೆ. ಸಾಲದೆಂಬಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಅಧಿಕ ಇಳುವರಿ ನೆಪದಲ್ಲಿ ಹೆಚ್ಚಿನ ರಾಸಾಯನಿಕಗಳ ಹಾವಳಿ ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ನಂಬಲೂ ಅಸಾಧ್ಯವಾದ ಸಂಗತಿ ಎಂದರೆ ವಿಷ ತಿಂದು ಬದುಕುವುದನ್ನು ಕಲಿಯಬೇಕು ಎನ್ನ್ನುವಂತೆ ಕೆಲ ಕೀಟನಾಶಕಗಳ ತಯಾರಕರು ಹೇಳುತ್ತಿದ್ದಾರೆ. ಏಕೆಂದರೆ ಕೃಷಿಗೆ ಇವುಗಳಿಂದ ಸಂಪೂರ್ಣ ಮುಕ್ತಿ ಸಾಧ್ಯವೇ ಇಲ್ಲ ಎನ್ನುವ ನಿಲುವು. ಪ್ರಸ್ತುತ ಅಧ್ಯಯನವು ಸುಮಾರು 77,000 ಮಳೆ ಮಾಪಕಗಳನ್ನು ಆಧರಿಸಿ ಅಲ್ಲಿನ ಮಳೆ, ಅದರಲ್ಲಿ ಹರಿವ ನೀರಿನ ಒತ್ತಡ ಅದರಲ್ಲಿನ ಕೀಟನಾಶಕದ ಮಲಿನತೆ ಇವೆಲ್ಲವೂ ಸೇರಿ ವರದಿಯನ್ನು ನೀಡಿದೆ. ಈ ಮಳೆ ಮಾಪಕಗಳಿಂದ ಸಿಕ್ಕ ಮಾಹಿತಿಯಿಂದ ಅಲ್ಲಿನ ಇತರೇ ಸಂಗತಿಗಳನ್ನು ಒಟ್ಟು ಮಾಡಿ ನೆಲದ ಮೇಲ್ಮೈಯಲ್ಲಿನ ನೀರಿನ ಹರಿವನ್ನು ಮತ್ತದರ ಸಾಂದ್ರವನ್ನು ಲೆಕ್ಕಾಚಾರ ಮಾಡಿ ಒಂದು ತೀರ್ಮಾನಕ್ಕೆ ಬರಲಾಗಿದೆ. ಈ ತೀರ್ಮಾನಕ್ಕೆ ಆಯಾ ಪ್ರದೇಶದ ಬೆಳೆಗಳು ಮತ್ತವುಗಳ ಮೇಲೆ ಸಿಂಪಡಿಸುವ ಕೀಟನಾಶಕಗಳ ಮಾಹಿತಿಯನ್ನು ಬಳಸಲಾಗಿದೆ. ಈ ತೀರ್ಮಾನದಲ್ಲಿ ಮುಖ್ಯವಾಗಿ ಸಮಸ್ಯೆಗಳಿಂದ ಬಳಲುವ ನೆಲದ ನಕ್ಷೆಯನ್ನು ನಿರ್ಧರಿಸಲಾಗಿದೆ. ಹೆಚ್ಚು ಮಾನವ ಸಂಭಾವ್ಯವುಳ್ಳ ಕೇಂದ್ರ ಯೂರೋಪ್, ದಕ್ಷಿಣ ಏಷ್ಯಾ, ಪ್ರದೇಶಗಳ ನೀರಿನ ಸಂಪನ್ಮೂಲಗಳು ಇದರ ಹೆಚ್ಚಿನ ತೊಂದರೆಗೆ ಸಿಲುಕಿವೆ. ನಮ್ಮ ರೈತರಿಗೀಗ ಎಚ್ಚರಿಕೆ ಏನೆಂದರೆ ನಮ್ಮ ನೆಲದ ಹಾಸೂ ಇಲ್ಲಿನ ನೀರ ಹರಿವಿನ ಮೇಲೆ ಕೀಟನಾಶಕಗಳ ದಬ್ಬಾಳಿಕೆ ನಡೆಸಿದೆ ಎಂಬುದಾಗಿದೆ. ನೀರನ್ನು ಸೇರಿದ ವಿಷ ಅದರಲ್ಲಿನ ಮೀನು ಮತ್ತಿತರ ಜಲಚರಗಳಲ್ಲಿ ಮತ್ತೂ ಹೆಚ್ಚಿನ ಸೇರಿಕೆಯಾಗುವುದರಿಂದ ಅವು ಆಹಾರವಾದಲ್ಲಿ ನಮ್ಮ ಇಡೀ ಭವಿಷ್ಯತ್ತು ಹೇಗೆ ಎಂಬ ಚಿಂತೆ ಅಧ್ಯಯನ ದಿಂದ ಹೊರಬಂದಿದೆ. ನೀರಿದ್ದೆಡೆ ಜನ ವಸತಿ ಹೆಚ್ಚುವುದು ಸಹಜವೇ ಆಗಿದೆ. ಈಗ ಇದೇ ನೀರು ಆಪತ್ತಿಗೆ ಒಳಗಾದರೆ ಎಂಬ ಚಿಂತೆ ಆವರಿಸುತ್ತಿದೆ.

ಅದಕ್ಕೂ ಸಾಲದೆಂಬಂತೆ ಮತ್ತೆ ಇತರೆ ಅಧ್ಯಯನಗಳು 2050ರ ವೇಳೆಗೆ ನೀರಿನ ಸಮಸ್ಯೆಯು ದೊರಕುವಿಕೆಯ ಮೇಲೂ ಪರಿಣಾಮ ಬೀರುತ್ತದೆ ಎಂದಿದೆ. ಈಗಾಗಲೇ ನೀರು ಮಾರಾಟದ ವಸ್ತುವಾಗಿರುವುದು ಇದೀಗ ಹಳೆಯ ಮಾತು. ಅಂತಹದ್ದರಲ್ಲಿ ಕೃಷಿಯ ಮೇಲೆ ಗೂಬೆ ಕೂರಿಸಲು ಹೊಸತೊಂದು ರಾಗ ಸೇರಿಕೊಳ್ಳಲಿದೆ. ಇಡೀ ಉತ್ತರಾರ್ಧದ ಭೂಗೋಳವು ಅಧಿಕ ಸಮಸ್ಯೆಯನ್ನು ಎದುರಿಸಲಿದ್ದು ಇಲ್ಲಿ ಕೃಷಿಯೂ ಸೇರಿದಂತೆ ಒಟ್ಟಾರೆ ಜನ ಹಾಗೂ ಜೀವಿಗಳ ಜೀವನ ಕಷ್ಟವನ್ನು ಎದುರಿಸಲಿದೆ. ಹೀಗೆ ಸಮಸ್ಯೆಗಳನ್ನು ಹಿಗ್ಗಿಸಿ ಅಥವಾ ವೈಭವೀಕರಸಿ ಹೇಳುವುದು ಜ್ಞಾನ-ವಿಜ್ಞಾನದ ಕೆಲಸವಲ್ಲ. ಇದೀಗ ನಮ್ಮ ರೈತರಲ್ಲಿ ತಮ್ಮ ಬಳಕೆಯ ಕೀಟನಾಶಕ ಬೀದಿ ಬಂದುದಲ್ಲದೆ ನೀರಿಗೂ ಇಳಿದಿದೆ ಎಂಬುದನ್ನು ತಿಳಿಸುವ ಉದ್ದೇಶ ಹೊಂದಿದೆ. ಏಕೆಂದರೆ ಜಾಗತಿಕವಾಗಿ ಹೀಗೆ ನೀರಿನ ಒಟ್ಟಾರೆ ಕೀಟನಾಶಕಗಳ ಮಲಿನತೆಯನ್ನು ಸಂಶೋಧನೆಗಳ ಮೂಲಕ ತಿಳಿವಿಗೆ ತಂದದ್ದು ಇದೇ ಮೊದಲು. ಆದ್ದರಿಂದ ನಮ್ಮ ರೈತ ಸಮುದಾಯವು ತಮ್ಮ ಬೆನ್ನ ಹಿಂದಿನ ಸ್ಪ್ರೇಯರನ್ನು ಜಾಗರೂಕವಾಗಿ ಕಾಣಬೇಕಿದೆ. ಇದೀಗ ಸಮಸ್ಯಾ ತ್ಮಕ ಸಂಗತಿಗಳಿಂದ ಎಚ್ಚರಿಕೆ ವಹಿಸಲು ಬೇಕಾದ ಸಿದ್ಧತೆಗೆ ಅಣಿ ಮಾಡಬಹುದಾಗಿದೆ.

ಮೂಲ : ಟಿ  . ಎಸ್  ಚೆನ್ನೆಶ್

ಕೊನೆಯ ಮಾರ್ಪಾಟು : 7/10/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate