ಎಳನೀರು ಹೊಟ್ಟೆಗೆ ತಂಪು, ಆರೋಗ್ಯಕ್ಕೆ ಹಿತ.
ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಿದ ಪ್ರವಾಸಿಗರಾದ ಮಾರ್ಕೋಪೋಲೋ, ಬುಕಾನನ್ ಮುಂತಾದವರು ತಮ್ಮ ಅನುಭವ ಕಥನದಲ್ಲಿ ಎಳನೀರಿನ ಕುರಿತು ಪ್ರಸ್ತಾಪಿಸಿದ್ದಾರೆ. ಚಾರ್ಲ್ಸ್ ಡಾರ್ವಿನ್ `ಬೆಳ್ಳಂ ಬೆಳಿಗ್ಗೆ ತಂಪು ಹೊತ್ತಿನಲ್ಲಿ ತಂಪಾಗಿ ಎಳನೀರು ಕುಡಿದರೆ ಅದರ ಹೆಚ್ಚುಗಾರಿಕೆ ಏನೆಂಬುದು ಗೊತ್ತಾಗುತ್ತದೆ' ಎಂದಿದ್ದಾನೆ.
ಥೈಲೆಂಡ್ ಮೂಲದ್ದು ಎಂದು ನಂಬಲಾದ ತೆಂಗು ನಮ್ಮ ದೇಶದ ದಕ್ಷಿಣ ಭಾರತೀಯರ ಬದುಕಿಗೆ ಆಸರೆಯಾಗಿದೆ. ದೇವರ ಸ್ಥಾನದಲ್ಲಿ ತೆಂಗಿನ ಕಾಯಿ ಇಟ್ಟು ಪೂಜೆ ಮಾಡುವ ಸಂಪ್ರದಾಯವನ್ನು ನಾವು ರೂಢಿಸಿಕೊಂಡಿದ್ದೇವೆ. ಬಯಲು ಸೀಮೆ, ಮಲೆನಾಡು, ಕರಾವಳಿ ಎಲ್ಲಾ ಕಡೆ ಬೆಳೆಯುವ ಏಕೈಕ ಬೆಳೆ ತೆಂಗು.
ತೆಂಗಿನ ಮರ ಹಲವಾರು ಬೇಡಿಕೆಗಳನ್ನು ಈಡೇರುತ್ತದೆ. ಆಹಾರ, ಪಾನೀಯ, ಇಂಧನ, ಎಣ್ಣೆ, ಪೊರಕೆ, ಕಾರ್ಪೆಟ್, ಹಾಸಿಗೆ, ಸೂರು... ಹೀಗೆ ಮನುಷ್ಯನ ಹಲವಾರು ಬೇಡಿಕೆಗಳನ್ನು ಪೂರೈಸುತ್ತದೆ ತೆಂಗಿನ ಮರ. ಬೇಸರದ ಸಂಗತಿಯೆಂದರೆ, ಕಲ್ಪವೃಕ್ಷವನ್ನು ಮಡಿಲಲ್ಲೇ ಇಟ್ಟುಕೊಂಡ ರೈತರು ಸೋಲುತ್ತಿದ್ದಾರೆ. ಇದಕ್ಕೆ ಕಾರಣ ಹುಡುಕುತ್ತ ಹೋದರೆ ತೆಂಗಿನ ಉತ್ಪಾದನೆಯಲ್ಲಿ ಶೇ. 10ರಷ್ಟು ಮಾತ್ರ ಎಳನೀರು ಬಳಕೆಯಾಗುತ್ತಿದೆ. ಶೇ. 25ರಷ್ಟು ಎಳನೀರು ಬಳಕೆಯಾದರೆ ರೈತರ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎನ್ನುವುದು ಅಧ್ಯಯನದಿಂದ ತಿಳಿದು ಬಂದಿದೆ.
ಎಳನೀರನ ತಳಿಗಳು: ಎಳನೀರಿಗಾಗಿಯೇ ಹಲವಾರು ತಳಿಗಳು ನಮ್ಮಲ್ಲಿ ಪ್ರಚಲಿತದಲ್ಲಿದೆ. ಅವುಗಳಲ್ಲಿ ಪ್ರಮುಖವಾದವು- ತಿಪಟೂರು ಟಾಲ್, ಗಂಗಾಪಾಣಿ, ಚೌಗಾಟ್ ಹಳದಿ ಗಿಡ್ಡ ತಳಿ, ಚೌಗಾಟ್ ಹಸಿರು, ಶ್ರೀಲಂಕಾ ಗೋಲ್ಡನ್ ಕಿಂಗ್, ಮಲೇಷಿಯನ್ ಹಸಿರು ಗಿಡ್ಡ ತಳಿ, ಮಲೇಷಿಯನ್ ಕೆಂಪು ಗಿಡ್ಡ ತಳಿ, ಮಲೇಷಿಯನ್ ಟಾಲ್.
ಎಳನೀರು ಹೇಗಿರಬೇಕು?: ತೆಂಗಿನ ಮರ ಪ್ರತಿ ತಿಂಗಳು ಗರ್ಭ ಕಟ್ಟುತ್ತದೆ. ಪ್ರತಿ ತಿಂಗಳು ಹೆರುತ್ತದೆ. ಹನ್ನೆರಡು ತಿಂಗಳಿಗೆ ಗೊನೆ ಕೊಯ್ಲಿಗೆ ಬರುತ್ತದೆ. ಅದಕ್ಕಾಗಿಯೇ ತೆಂಗಿನ ಮರಕ್ಕೆ `ಸದಾ ತಾಯಿ' ಎನ್ನುವ ಹೆಸರಿದೆ. ಹೂ ಬಿಟ್ಟ ಆರು ತಿಂಗಳಿಗೆ ಎಳನೀರು ರೂಪ ಪಡೆಯುತ್ತದೆ. 180ರಿಂದ 220 ದಿನಗಳವರೆಗಿನ ಎಳನೀರು ಕುಡಿಯಲು ಯೋಗ್ಯವಾಗಿರುತ್ತದೆ. ಎಳನೀರನ್ನು ಕುರುಬು (ತೀರಾ ಎಳೆಯದು), ಹದವಾದದ್ದು (ಪೇಪರ್ ಗಂಜಿ), ದೋಸೆಯಷ್ಟು ದಪ್ಪ ಎಳೆಗಾಯಿ ಸಿಗುವ ಬಲಿತ ಎಳನೀರು- ಹೀಗೆ ಮೂರು ವಿಧದಲ್ಲಿ ಕೊಯ್ಲು ಮಾಡುತ್ತಾರೆ.
ಎಳನೀರು ಕೊಯ್ಲಿನ ಪ್ರಯೋಜನ: ತೆಂಗಿನಕಾಯಿಯನ್ನು ರೈತರು ವರ್ಷಕ್ಕೆ ನಾಲ್ಕು ಬಾರಿ ಮಾತ್ರ ಕೊಯ್ಲು ಮಾಡಬಹುದು. ಎಳನೀರನ್ನು ಆರು ಬಾರಿ ಕೊಯ್ಲು ಮಾಡಬಹುದು. ಎಳನೀರು ಮಾರುವುದರಿಂದ ತೆಂಗಿನ ಮರದಲ್ಲಿ ನ ಕಾಯಿ ಕಚ್ಚುವ ಪ್ರಮಾಣ ಹೆಚ್ಚಿಗೆ ಆಗುತ್ತದೆ. ಎಳನೀರು ಮಾರಾಟಕ್ಕಿಳಿದರೆ ಏಳು ತಿಂಗಳಿಗೆ ಹಣ ರೈತರ ಕೆ ಸೇರುತ್ತದೆ. ಆದೇ ಕೊಬ್ಬರಿ ಮಾರಿದರೆ 20 ರಿಂದ 22 ತಿಂಗಳವರೆಗೆ ಕಾಯಬೇಕಾದ ಅನಿವಾರ್ಯತೆ ಇರುತ್ತದೆ. ಸದ್ಯದ ಎಳನೀರು ಮಾರುಕಟ್ಟೆಯಲ್ಲಿ ರೈತರ ತೋಟಕ್ಕೆ ನೇರವಾಗಿ ಕೊಯ್ಲಿಗೆ ಬಂದರೆ 4 ರೂಪಾಯಿಗೆ ಖರೀದಿ ಮಾಡುತ್ತಾರೆ. ಅದೇ ಒಂದು ಕಾಯಿಗೆ 5 ರೂಪಾಯಿ ಇದೆ. ಎಳನೀರನ್ನು ವರ್ಷಕ್ಕೆ ಮೂರು ಕೊಯ್ಲು ಮಾಡಬಹುದು.
ಔಷಧಿಯ ಗುಣ: ಎಳನೀರು ಅಮೃತಕ್ಕೆ ಸಮಾನ ಎನ್ನುವ ಮಾತಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ನಿಶ್ಯಕ್ತರಾದ ಸೈನಿಕರ ರಕ್ತದ ಧಮನಿಗೆ ನೇರವಾಗಿ ಸೇರಿಸಿದ್ದರು. ಕಾರಣ ಎಳನೀರಿನಲ್ಲಿರುವ ಗ್ಲುಕೋಸ್ ಅಂಶ. ಒಂದು ದಿನದ ಕೂಸಿಗೂ ಎಳನೀರು ಕುಡಿಸಿದರೆ ಅಪಾಯವಿಲ್ಲ. ವೃದ್ಧರು, ರೋಗಿಗಳಿಗೆ ಹೊಸ ಚೈತನ್ಯ ನೀಡುವ ಶಕ್ತಿ ಎಳನೀರಿಗೆ ಇದೆ. ಶಿಶುವಿಗೆ ಭೇದಿಯಾದಾಗ ಎಳನೀರು ಕುಡಿಸಿದರೆ ಗುಣವಾಗುತ್ತದೆ. ನಿರ್ಜಲೀಕರಣಕ್ಕೆ ಇದು ಮದ್ದು. ಬೆಳವಣಿಗೆಗೆ ಪೂರಕವಾದ ಹಾರ್ಮೋನುಗಳನ್ನು ಇದು ಒದಗಿಸುತ್ತದೆ. ಬೇಸಿಗೆಯ ಬಿಸಿಲಿನ ಝಳದಿಂದ ಬೇಯುವ ಶರೀರಕ್ಕೆ ತಂಪು ನೀಡಿ ದೇಹದ ಸಮತೋಲನ ಕಾಪಾಡುವಲ್ಲಿ ಎಳನೀರು ಸಹಕಾರಿ. ಎಳನೀರಿನಲ್ಲಿರುವ ವಿಶೇಷ ಪೋಷಕಾಂಶಗಳಾದ ಅಲ್ಬಮಿನ್ ಮತ್ತು ಸಾಲಿನ್ ಕಾಲರಾ ರೋಗಕ್ಕೆ ಹೇಳಿ ಮಾಡಿಸಿದ ಔಷಧಿ.
ಡಿಹೈಡ್ರೇಷನ್ ಮತ್ತು ಗ್ಯಾಸ್ಟ್ರಿಕ್‌ಗೆ ಎಳನೀರು ಔಷಧಿಯಂತೆ ಕೆಲಸ ಮಾಡುತ್ತದೆ. ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಬಯೋಲಿಸಿಸ್ ಚಿಕಿತ್ಸಾ ವಿಧಾನಕ್ಕೆ ಎಳನೀರು ಅತಿಮುಖ್ಯ. ಎಳನೀರಿನಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಮೆಗ್ನಿಶಿಯಂ, ಫಾಸ್ಪರಸ್, ಕಬ್ಬಿಣ ಮತ್ತು ತಾಮ್ರದ ಅಂಶಗಳಿರುತ್ತವೆ. ಈ ಕಾರಣದಿಂದ ಎಳನೀರನ್ನು ರಕ್ತಕ್ಕೆ ಸಮನಾದ ಜೀವದ್ರವ ಎನ್ನುತ್ತಾರೆ.
ಎಳನೀರಿನ ಮೌಲ್ಯವರ್ಧನೆ: ಕೊಲ್ಕತ್ತಾ, ಬೆಂಗಳೂರು, ಚೆನ್ನೈ ಮುಂತಾದ ಪ್ರವಾಸಿ ಕೇಂದ್ರಗಳು ಎಳನೀರಿನ ಮುಖ್ಯ ಮಾರುಕಟ್ಟೆ. ಪಶ್ಚಿಮ ಬಂಗಾಳದಲ್ಲಿ ಒಟ್ಟು ಉತ್ಪನ್ನದಲ್ಲಿ ಶೇ. 80ರಷ್ಟು ಎಳನೀರು ಕುಡಿಯುತ್ತಾರೆ. ಅಲ್ಲಿನ ಕಾಲೇಜು, ಕಚೇರಿ, ಫ್ಯಾಕ್ಟರಿ, ಬ್ಯಾಂಕು ಎಲ್ಲೆಂದರಲ್ಲಿ ಎಳನೀರು ಲಭ್ಯ. ಕೇರಳದಲ್ಲೂ ಈಚೆಗೆ ಈ ಸಂಸ್ಕೃತಿ ಪ್ರಾರಂಭವಾಗಿದೆ. ಎಳೆನೀರನ್ನು ಸಂಸ್ಕರಿಸಿ ಮಾರುಕಟ್ಟೆಗೆ ತರಲಾಗುತ್ತಿದೆ. ವಿದೇಶಿ ಪೇಯಗಳನ್ನು ಸರಿಗಟ್ಟುವಂತೆ ಪ್ಯಾಕಿಂಗ್ ಮಾಡಿ ಜನರನ್ನು ಆಕರ್ಷಿಸಲಾಗುತ್ತಿದೆ. ಕೇರಳದಲ್ಲಿ ತಾಯ್ ಎಳನೀರನ್ನು ಮಾರಲಾಗುತ್ತಿದೆ. ಇದು ಎಳನೀರನ್ನು ಬಾಕ್ಸ್ಸ್ ಮಾದರಿಯಲ್ಲಿ ಮಾರುಕಟ್ಟೆಗೆ ತರುತ್ತಿದೆ. ಇದಕ್ಕಿಂತ ಮುಂದುವರೆದು ಸ್ನೋಬಾಲ್ ಮಾದರಿಯಲ್ಲಿ ತಯಾರಿಸಿ ಪ್ರತಿಷ್ಠಿತರನ್ನು ಸೆಳೆಯುವ ಯತ್ನ ನಡೆಯುತ್ತಿದೆ. ಮೈಸೂರಿನ ಡಿಫೆನ್ಸ್ ಫುಡ್ ರೀಸರ್ಚ್ ಲ್ಯಾಬೋರೆಟರಿಯು ತೆಂಗು ಮಂಡಳಿಯ ಸಹಕಾರದಿಂದ ಸಂಸ್ಕರಣ ತಂತ್ರವನ್ನು ಅಭಿವೃದ್ಧಿಪಡಿಸಿದೆ. ಇದರಿಂದ ಎಳನೀರನ್ನು ಪ್ಲಾಸ್ಟಿಕ್ ಸ್ಯಾಶೆಯಲ್ಲಿ ತುಂಬಲಿಕ್ಕೆ ಸಹಕಾರಿಯಾಗುತ್ತದೆ.
ಈ ರೀತಿಯಾಗಿ ಮೌಲ್ಯವರ್ಧನೆ ಮಾಡುವ ಮೂಲಕ ನುಸಿ ಪೀಡೆಯಿಂದ ಹೆದರಿ ಹೋಗಿದ್ದ ತೆಂಗಿನ ಬೆಳಗಾರರು ಕೆಲವು ಕಡೇ ಚೇತರಿಸಿ ಕೊಂಡಿದ್ದಾರೆ.
ಎಳನೀರು ನಮ್ಮಲ್ಲಿ ಬೇಕಾದಷ್ಟು ಇದೆ. ಆದರೆ ಬಣ್ಣ ಬಣ್ಣದ ಪಾನೀಯಗಳಿಗೆ ಮರುಳಾಗುವವರೆ ಹೆಚ್ಚು. ಕೃತಕ, ವಿಷಯುಕ್ತ ಬಾಟಲಿ ಪೇಯಗಳಿಂದ ಹೊರಬಂದು ನಮ್ಮಲ್ಲಿಯೇ ಸಿಗುವ ನೈಸರ್ಗಿಕ ಪೇಯವಾದ ಎಳನೀರನ್ನು ಕುಡಿಯುವ ಸಂಸ್ಕೃತಿ ಬೆಳೆಯುವ ಅಗತ್ಯವಿದೆ.
ಮೂಲ : ರೈತಾಪಿ
ಕೊನೆಯ ಮಾರ್ಪಾಟು : 7/18/2020