অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸೇವಾ ಇಲಾಖೆ

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

ಪೀಠಿಕೆ

ಪಶುಸಂಗೋಪನಾ ವಲಯವು ಕೃಷಿ ಆಧಾರಿತ ಗ್ರಾಮೀಣ ಅರ್ಥವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಚಟುವಟಿಕೆಗಳಲ್ಲಿ ಮುಖ್ಯವಾಗಿ ಹೈನುಗಾರಿಕೆ, ಕುರಿ ಸಾಕಾಣಿಕೆ, ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆ ಒಳಗೊಂಡಿವೆ. ಈ ಚಟುವಟಿಕೆಗಳು ನಿರ್ದಿಷ್ಠವಾಗಿ ಗ್ರಾಮೀಣ ಭಾರತದಲ್ಲಿ ಸಾಂಪ್ರದಾಯಿಕವಾಗಿದ್ದರೂ, ವೈಜ್ಞಾನಿಕ ಪ್ರಗತಿ, ಉದಾರೀಕರಣ ಮತ್ತು ಸುಧಾರಣೆಗಳ ಪ್ರಕ್ರಿಯೆಯು ಈ ವಲಯದಲ್ಲಿ ಖಾಸಗಿಯ ಸಣ್ಣ ಮತ್ತು ಬೃಹತ್ ಉದ್ಯಮದಾರರು ಬಂಡವಾಳ ಹೂಡಲು ದಾರಿಮಾಡಿಕೊಟ್ಟಿದೆ.

ದೂರದೃಷ್ಟಿ

ಜನುವಾರು, ಕೋಳಿ ಮತ್ತು ಮೆಲುಕು ಹಾಕುವ ಸಣ್ಣ ಪ್ರಾಣಿಗಳ ಸುಸ್ಥಿರ ಬೆಳವಣಿಗೆ ಅಥವಾ ಪೌಷ್ಠಿಕ ಭದ್ರತೆ ಮತ್ತು ಆರ್ಥಿಕ ಅಭಿವೃದ್ಧಿ.

ಗುರಿ

ಪ್ರಾಣಿ ಅನುವಂಶೀಯ ಸಂಪನ್ಮೂಲಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ, ಮತ್ತು ತ್ವರಿತ ತಳಿವೃದ್ಧಿಗಾಗಿ ತಳಿ ಅಭಿವೃದ್ಧಿ ಕಾರ್ಯಕ್ರಮ.

ಹೊಣೆಗಾರಿಕೆಗಳು

  • ಬ್ಯಾಕ್ಟೀರಿಯಾ ಹಾಗೂ ವೈರಸ್ ರೋಗಗಳ ಪತ್ತೆಹಚ್ಚುವಿಕೆ, ರೋಗದಿಂದ ನರಳುತ್ತಿರುವ ಪ್ರಾಣಿಗಳ ಚಿಕಿತ್ಸೆ ಹಾಗೂ ಪ್ರಾಣಿಗಳಿಗೆ ಉಚಿತ ಲಸಿಕಾ ಕಾರ್ಯಕ್ರಮ.
  • ಪಶುಸಂಗೋಪನಾ ಸೇವೆಗಳ ಮುಖಾಂತರ ದನ ಮತ್ತು ಎಮ್ಮೆಗಳ ತಳಿ ಸುಧಾರಣೆ.
  • ಸುಧಾರಿತ ತಳಿಗಳ ಟಗರು ಮರಿಗಳು ಹಾಗೂ ಹಂದಿ ಮರಿಗಳನ್ನು ಒದಗಿಸುವುದು.
  • ವಿಸ್ತರಣೆ ಮತ್ತು ತರಬೇತಿಯ ಮುಖಾಂತರ ವಿವಿಧ ಇಲಾಖಾ ಕಾರ್ಯಚಟುವಟಿಕೆಗಳನ್ನು ರೈತರಿಗೆ ತಲುಪಿಸುವುದು.
  • ಋತುಮಾನಕ್ಕನುಗುಣವಾಗಿ ಹಸಿ ಮೇವು ಉತ್ಪಾದನೆಗೆ ರೈತರಿಗೆ ವಿವಿಧ ಮೇವಿನ ಮಿನಿಕಿಟ್ ಗಳನ್ನು ಹಾಗೂ ಬೇರಿನ ಕಂದುಗಳನ್ನು ಒದಗಿಸುವುದು.
  • ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜಾನುವಾರುಗಳ ಆರೋಗ್ಯ ಪಾಲನೆ ಮತ್ತು ಮೇವು ಅಗತ್ಯತೆಗಳನ್ನು ಪೂರೈಸಲು ಕ್ರಮ ಕೈಗೊಳ್ಳುವುದು.

ಧ್ಯೇಯೋದ್ದೇಶಗಳು

  • ರೋಗಗ್ರಸ್ತ ಪ್ರಾಣಿಗಳ ಚಿಕಿತ್ಸೆಗಾಗಿ ಪಶುವೈದ್ಯ ಸೇವೆಗಳನ್ನು ಒದಗಿಸುವುದು ಹಾಗೂ ಪ್ರಾಣಿರೋಗಗಳ ತಡೆಗಟ್ಟುವಿಕೆ, ನಿಯಂತ್ರಿಸುವಿಕೆ ಮತ್ತು ನಿರ್ಮೂಲನೆ ಮಾಡುವಿಕೆ.
  • ಗುಣಮಟ್ಟ ನಿಯಂತ್ರಣದೊಂದಿಗೆ ಮೇವು ಹಾಗೂ ಪಶುಆಹಾರ ಅಭಿವೃದ್ಧಿಗೊಳಿಸುವುದು.
  • ದನಗಳು, ಎಮ್ಮೆಗಳು, ಮೆಲುಕು ಹಾಕುವ ಸಣ್ಣ ಪ್ರಾಣಿಗಳು, ಕೋಳಿ ಹಾಗೂ ಹಂದಿ ಸಾಕಾಣಿಕೆ ಅಭಿವೃದ್ಧಿಗೊಳಿಸುವುದು.
  • ಗುಣಮಟ್ಟ ಭರವಸೆಯೊಂದಿಗೆ ಹಾಲು, ಮಾಂಸ ಮತ್ತು ಮೊಟ್ಟೆಗಳ ಉತ್ಪಾದನೆಯನ್ನು ಹೆಚ್ಚಿಸುವುದು.
  • ಜಾನುವಾರು ಮತ್ತು ಕೋಳಿ ಸಾಕುವ ರೈತರು ಹಾಗೂ ಉದ್ಯಮಶೀಲರಿಗೆ ಆರ್ಥಿಕ ನೆರವು ಒದಗಿಸುವುದು.
  • ಜಾನುವಾರು ಉತ್ಪಾದನಾ ತಂತ್ರಜ್ಞಾನವನ್ನು ಸುಧಾರಣೆಗೊಳಿಸುವುದು.
  • ರಾಜ್ಯದಲ್ಲಿ ಆರೋಗ್ಯಕರ ಉತ್ಪಾದನಾ ವ್ಯವಸ್ಥೆ, ಹಾಲು, ಮಾಂಸ ಮತ್ತು ಮೊಟ್ಟೆಗಳ ಮಾರುಕಟ್ಟೆಯನ್ನು ಪ್ರೋತ್ಸಾಹಿಸುವುದು.
  • ಹಾಲು ಮತ್ತು ಮೊಟ್ಟೆಗಳಿಗೆ ಗುಣಮಟ್ಟ ನಿಯಂತ್ರಣ / ಪ್ರಮಾಣೀಕರಣ ಘಟಕಗಳನ್ನು ಸ್ಥಾಪಿಸುವುದು.
  • ಪ್ರಾಣಿ, ಪಶುವೈದ್ಯಕೀಯ ಮತ್ತು ಹೈನುಗಾರಿಕೆ ವಿಜ್ಞಾನಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸುವುದು.
  • ವಿಸ್ತರಣಾ ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸುವುದು.
  • ಅನುವಂಶೀಯ ನಕ್ಷೆಯೊಂದಿಗೆ ದೇಶೀಯ ತಳಿಗಳನ್ನು ಸಂರಕ್ಷಿಸುವುದು ಮತ್ತು ಅಭಿವೃದ್ಧಿಪಡಿಸುವುದು.
  • ಹಿಂದುಳಿದ ಪ್ರದೇಶಗಳನ್ನು ಕೇಂದ್ರೀಕರಿಸಿಕೊಂಡು ಪಶುವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸುವುದು / ಬಲಪಡಿಸುವುದು.
  • ಪಶುಸಂಗೋಪನಾ ಕಾರ್ಯಕ್ರಮಗಳ ಮೂಲಕ ಪರಿಶಿಷ್ಟ ಜಾತಿ / ಪಂಗಡಗಳು ಹಾಗೂ ಇತರೆ ಹಿಂದುಳಿದ ವರ್ಗಗಳು ಮತ್ತು ಮಹಿಳೆಯರಿಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.

ಕಾರ್ಯಕ್ರಮಗಳು

ಜಾನುವಾರುಗಳ ಸಂವರ್ಧನೆ, ಪಾಲನೆ, ಸಂರಕ್ಷಣೆ ಹಾಗೂ ಸುಧಾರಣೆ, ಪಶುಸಂಗೋಪನೆ ಮತ್ತು ಹೈನುಗರಿಕೆ ಅಭಿವೃದ್ಧಿ, ಪಶುವೈದ್ಯಕೀಯ ಸೇವೆಗಳ ಕ್ಷೇತ್ರದಲ್ಲಿ ಕಾರ್ಯನೀತಿ ಹಾಗೂ ಕಾರ್ಯಕ್ರಮಗಳ ರಚನೆ ಮತ್ತು ಅನುಷ್ಠಾನ ಇವುಗಳು ಇಲಾಖೆಯ ಜವಾಬ್ದಾರಿಯಾಗಿದೆ. ಇಲಾಖೆಯಲ್ಲಿನ ಕಾರ್ಯಚಟುವಟಿಕೆಗಳು ಮುಖ್ಯವಾಗಿ ಈ ಕೆಳಗಿನ ಅಂಶಗಳ ಮೇಲೆ ಹೆಚ್ಚಿನ ಆದ್ಯತೆಯನ್ನು ನೀಡುತ್ತವೆ:

  • ಪಶುಸಂಗೋಪನಾ ಉತ್ಪಾದಕತೆಯನ್ನು ಸುಧಾರಿಸುವುದಕ್ಕಾಗಿ ರಾಜ್ಯದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು.
  • ಹಾಲು ಮತ್ತು ಹಾಲಿನ ಉತ್ಪನ್ನಗಳ ನಿರ್ವಹಣೆ, ಸಂಸ್ಕರಣೆ ಮತ್ತು ಮಾರಾಟ ಮಾಡುವುದಕ್ಕೆ ಸಂಬಂಧಿಸಿದ ಮೂಲಸೌಲಭ್ಯಗಳನ್ನು ಒದಗಿಸುವುದು.
  • ದೇಶೀಯ ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ.
  • ಪಶು ಆರೋಗ್ಯ ಸೇವೆಯನ್ನು ಕಲ್ಪಿಸುವ ಮೂಲಕ ಜಾನುವಾರುಗಳ ಪಾಲನೆ ಹಾಗೂ ಸಂರಕ್ಷಣೆ.
  • ಅತ್ಯುತ್ಕೃಷ್ಟ ಅನುವಂಶೀಯತೆ ಅಭಿವೃದ್ಧಿಗಾಗಿ ಜಾನುವಾರು ಕ್ಷೇತ್ರಗಳನ್ನು ಬಲಪಡಿಸುವುದು.
  • ಸಾಮರ್ಥ್ಯವರ್ಧನೆ ಮತ್ತು ಮಾನವ ಸಂಪನ್ಮೂಲ ಅಭಿವೃದ್ಧಿ.
  • ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಚಟುವಟಿಕೆಗಳು.
  • ಜಾನುವಾರುಗಳ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಪ್ರೋತ್ಸಾಹ.
  • ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳ ಅನುಷ್ಠಾನ.

ಪಶುವೈದ್ಯ ಸಂಸ್ಥೆಗಳಲ್ಲಿ ದೊರೆಯುವ ಸೌಲಭ್ಯಗಳು

ಪಶುವೈದ್ಯ ಆಸ್ಪತ್ರೆ ಮತ್ತು ಔಷಧಾಲಯಗಳು:

  • ಎಕ್ಸ್-ರೇ ಸೌಲಭ್ಯ (ತಾಲ್ಲೂಕು ಆಸ್ಪತ್ರೆ)
  • ಕೃತಕ ಗರ್ಭಧಾರಣೆ
  • ರೋಗ ಪತ್ತೆಹಚ್ಚುವಿಕೆ
  • ಚಿಕಿತ್ಸೆ
  • ರೊಗನಿರೋಧಕ ಲಸಿಕೆಗಳು
  • ಪಶುವೈದ್ಯ ಸಂಸ್ಥೆಗಳು ಇಲ್ಲದಿರುವ ಸ್ಥಳಗಳಿಗೆ ಸಂಚಾರಿ ಪಶುವೈದ್ಯ ಸೇವೆಗಳು
  • ವಿಸ್ತರಣೆ, ಶಿಕ್ಷಣ ಮತ್ತು ತರಬೇತಿ
  • ಸಾಮಾಜಿಕ-ಆರ್ಥಿಕ ಕಾರ್ಯಕ್ರಮಗಳು

ಪ್ರಾಥಮಿಕ ಪಶುವೈದ್ಯ ಕೇಂದ್ರ ಮತ್ತು ಪಶುಸಂಗೋಪನಾ ಕೇಂದ್ರಗಳು:

  • ಚಿಕಿತ್ಸೆ
  • ಕೃತಕ ಗರ್ಭಧಾರಣೆ
  • ರೊಗನಿರೋಧಕ ಲಸಿಕೆಗಳು
  • ವಿಸ್ತರಣೆ, ಶಿಕ್ಷಣ ಮತ್ತು ತರಬೇತಿ

ಸೋದರ ಸಂಸ್ಥೆಗಳು

  • ಕೆ. ವಿ. ಎ. ಎಫ್. ಎಸ್. ಯು: ಪಶುವೈದ್ಯಕೀಯ ಮತ್ತು ಮಶುಸಂಗೋಪನಾ ಕ್ಷೇತ್ರದಲ್ಲಿ ಸಂಶೋಧನೆಯನ್ನು ಕೈಗೊಳ್ಳುವ ಪದವೀಧರರಿಗೆ ಮೂಲಭೂತ ಪಶುವೈದ್ಯಕೀಯ ಶಿಕ್ಷಣದ ಜೊತೆಗೆ ತಾಂತ್ರಿಕ ಮಾಹಿತಿಯನ್ನು ಒದಗಿಸುತ್ತದೆ.
  • ಕೆ. ಎಂ. ಎಫ್.: ರಾಜ್ಯದಲ್ಲಿನ ಹೈನುಗಾರಿಕೆ ಅಭಿವೃದ್ಧಿ ಕಾರ್ಯಚಟುವಟಿಕೆಗಳಿಗೆ ಹಾಲು ಉತ್ಪನ್ನಗಳ ಸಹಕಾರಿ ಅಗ್ರಸಂಸ್ಥೆಯಾಗಿದ್ದು, ಹಾಲು ಮತ್ತು ಹಾಲು ಉತ್ಪನ್ನಗಳಿಗೆ ನಿಖರವಾದ ಹಾಗೂ ಪ್ರೋತ್ಸಾಹದಾಯಕ ಬೆಲೆಯನ್ನು ಒದಗಿಸುತ್ತಿದೆ.
  • ಐ. ಎ. ಹೆಚ್. ಅಂಡ್ ವಿ. ಬಿ.: ಜಾನುವಾರುಗಳು ಮತ್ತು ಕೋಳಿಗಳಿಗೆ ಬಾಧಕವಾಗುವ ಬ್ಯಾಕ್ಟೀರಿಯಾ ಮತ್ತು ವೈರಸ್ ಸಂಬಂಧಿ ಕಾಯಿಲೆಗಳ ನಿಯಂತ್ರಣಕ್ಕೆ ಲಸಿಕೆಗಳನ್ನು ಉತ್ಪಾದಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ.
  • ಕುರಿ ಮಂಡಳಿ: ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವು ಮಿಶ್ರ ತಳಿ ಮತ್ತು ದೇಶೀಯ ತಳಿಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ರಾಜ್ಯದಲ್ಲಿ ಕುರಿ ಮತ್ತು ಮೇಕೆಗಳ ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಿದೆ.
  • ಕೆ. ಸಿ. ಪಿ. ಎಫ್.: ಕೋಳಿ ಸಾಕಾಣಿಕೆ, ಗಿರಿರಾಜ ಕೋಳಿಗಳ ಸಾಕಾಣಿಕೆ ಮತ್ತು ಮಾರಾಟ ಹಾಗೂ ಆಸಕ್ತ ರೈತರಿಗೆ ಹಣಕಾಸು ನೆರವನ್ನು ಒದಗಿಸುವ ಮೂಲಕ ಗ್ರಾಮೀಣ ಯುವಜನರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಗುರಿಯನ್ನು ಈ ಸಂಸ್ಥೆಯು ಹೊಂದಿದೆ.
  • ಆಡಳಿತ ವ್ಯವಸ್ಥೆ
  • ರಾಜ್ಯ ಮಟ್ಟದ ಆಡಳಿತ: ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಇಲಾಖಾ ಮುಖ್ಯಸ್ಥರಾಗಿರುತ್ತಾರೆ. ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ತಾಂತ್ರಿಕ ಆಡಳಿತದ ಮುಖ್ಯಸ್ಥರಾಗಿದ್ದು, ಆಯುಕ್ತರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಾರೆ.
  • ಜಿಲ್ಲಾ ಮಟ್ಟದ ಆಡಳಿತ: ಜಿಲ್ಲಾ ಮಟ್ಟದಲ್ಲಿ ಉಪ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಡಳಿತವು ಆಯಾ ಜಿಲ್ಲಾ ಪಂಚಾಯಿತಿಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತವೆ.
  • ತಾಲ್ಲೂಕು ಮಟ್ಟದ ಆಡಳಿತ: ತಾಲ್ಲೂಕು ಮಟ್ಟದಲ್ಲಿ ಸಹಾಯಕ ನಿರ್ದೇಶಕರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಆಡಳಿತ ವ್ಯವಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ಕುಂದುಕೊರತೆಗಳನ್ನು ಪರಿಣಾಮಕಾರಿಯಾಗಿ ನಿವಾರಿಸುವ ವ್ಯವಸ್ಥೆ ರಾಜ್ಯ ಮಟ್ಟದಲ್ಲಿ ಆಯುಕ್ತರು/ನಿರ್ದೇಶಕರು, ಜಿಲ್ಲಾ ಮಟ್ಟದಲ್ಲಿ ವಿವಿಧ ಜಿಲ್ಲೆಗಳ ಉಪ ನಿರ್ದೆಶಕರುಗಳು, ತಾಲ್ಲೂಕು ಮಟ್ಟದಲ್ಲಿ ಸಂಬಂಧಪಟ್ಟ ಸಹಾಯಕ ನಿರ್ದೇಶಕರುಗಳು ಅಥವಾ ನಿಯೋಜಿಸಲ್ಪಟ್ಟ ನೋಡಲ್ ಅಧಿಕಾರಿಗಳು ಸಾರ್ವಜನಿಕರ ಹಾಗೂ ಜಾನುವಾರು ಸಾಕಾಣಿಕೆದಾರರ ಕುಂದುಕೊರತೆಗಳನ್ನು ನಿವಾರಿಸಲು ಸೂಕ್ತ ಕ್ರಮ ವಹಿಸುತ್ತಾರೆ.

ಸಂಪರ್ಕಿಸಬೇಕಾದ ವಿಳಾಸ

ಮಾನ್ಯ ಆಯುಕ್ತರು,

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ,

ಎರಡನೇ ಮಹಡಿ, ವಿಶ್ವೇಶ್ವರಯ್ಯ ಚಿಕ್ಕ ಗೋಪುರ,

ಡಾ. ಬಿ. ಆರ್. ಅಂಬೇಡ್ಕರ್ ವೀಧಿ,

ಬೆಂಗಳೂರು - 560001 .

ದೂರವಾಣಿ: +91 80 22864989

ಫ್ಯಾಕ್ಸ್: +91 80 22861075

ಮೂಲ : ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ

ಕೊನೆಯ ಮಾರ್ಪಾಟು : 6/11/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate