অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಗೋವಿನ ವಿಶ್ವರೂಪ

ಗೋವಿನ ವಿಶ್ವರೂಪ

ಗಣಪತಿ ಹಾಸ್ಪುರ ಇಲ್ಲೊಂದು ಸರಕಾರಿ ಪಶು ಆಸ್ಪತ್ರೆ ನೋಡಲು ಜನ ಬರುತ್ತಾರೆ. ಮೂಗಿನ ಮೇಲೆ ಬೆರಳಿಡುತ್ತಾರೆ. ಅಯ್ಯೋ ಬಿಡಿ, ಅದು ಇದ್ದಿದ್ದೇ ಎನ್ನಬೇಡಿ ಮರಾಯ್ರೆ, ನೋಡಲು ಬಂದವರು ಮೂಗಿನ ಮೇಲೆ ಬೆರಳಿಡುವುದು ಅಚ್ಚರಿಯಿಂದ. ಇಂಥದ್ದೊಂದು ಅಪೂರ್ವ ಸರಕಾರಿ ಪಶು ಆಸ್ಪತ್ರೆ ಕೂಡ ಇರಲು ಸಾಧ್ಯವೇ ಎಂಬ ವಿಸ್ಮಯದಿಂದ.

ನಂಬಿದರೆ ನಂಬಿ, ಬಿಟ್ಟರೆ ಬಿಡಿ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿರುವ ಸರಕಾರಿ ಪಶು ಆಸ್ಪತ್ರೆ ಕೇವಲ ಪಶು ಚಿಕಿತ್ಸಾ ಕೇಂದ್ರವಾಗಿ ಉಳಿದಿಲ್ಲ. ಈ ಆಸ್ಪತ್ರೆಯಲ್ಲಿ ಗೋವಿನ ವಿಶ್ವರೂಪವೇ ತೆರೆದುಕೊಂಡಿದ್ದು, ಪಕ್ಕಾ ಱಪಶುಗಳ ವಿವಿಧ ಪರಿಕರಗಳ ಮ್ಯೂಜಿಯಂ' ಆಗಿ ಪರಿವರ್ತನೆಯಾಗಿದೆ. ಈ ಱಮ್ಯೂಜಿಯಂ'ನ ಮ್ಯಾಜಿಕ್ ಮಾಡಿದವರು ಪಶು ಆಸ್ಪತ್ರೆಯ ವೈದ್ಯ ಕ.ದಾ.ಕೃಷ್ಣರಾಜು.

ಆಸ್ಪತ್ರೆಯಲ್ಲೇನಿದೆ ವಿಶೇಷ?: ಬಹುತೇಕ ಗ್ರಾಮೀಣ ಪ್ರದೇಶದಲ್ಲಿರುವ ಪಶು ಆಸ್ಪತ್ರೆಗಳು ವೈದ್ಯರಿಲ್ಲದೆ ಬಾಗಿಲು ಮುಚ್ಚಿಕೊಂಡಿರುವ ಸಂದರ್ಭದಲ್ಲಿ, ಇರುವ ಏಕೈಕ ವೈದ್ಯರು ಸುತ್ತಲಿನ ಮೂರ‌್ನಾಲ್ಕು ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕಾದ ಪರಿಸ್ಥಿತಿ ಇದೆ. ಕೆಲವು ಪಶು ಚಿಕಿತ್ಸಾ ಕೇಂದ್ರಗಳು ಗೆದ್ದಲು ಹಿಡಿದು ಜೀರ್ಣಾವಸ್ಥೆ ಕಾಣುತ್ತಿದೆ. ಅಂಥದ್ದರಲ್ಲಿ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿರುವ ಸರಕಾರಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹೈನೋದ್ಯಮಿಗಳು, ಕೃಷಿಕರು ಮಾತ್ರವಲ್ಲ ಜನಸಾಮಾನ್ಯ ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ.

ಇದೆಲ್ಲ ಕೇಳಿದ ಮೇಲೆ ಏನಪ್ಪ ಅಂಥದ್ದಿದೆ ದಾರದಹಳ್ಳಿಯಲ್ಲಿರುವ ಸರಕಾರಿ ಪಶು ಆಸ್ಪತ್ರೆಯಲ್ಲಿ? ಉಳಿದ ಆಸ್ಪತ್ರೆಗಳಲ್ಲಿ ಕಾಣಲು ಸಿಗದ್ದು ಎಂಬ ಕುತೂಹಲ ಸಹಜವಾಗಿಯೇ ಮೂಡುತ್ತದೆ.

ಇಲ್ಲಿ ಕರ್ನಾಟಕದ ಯಾವ ಪ್ರದೇಶದಲ್ಲೂ ಕಾಣಲು ಸಿಗದ ಅಪರೂಪದ, ಆಕರ್ಷಕ ಗೋವಿನ ಪರಿಕರಗಳ ಬೃಹತ್ ಸಂಗ್ರಹವಿದೆ. ಗೋವಿನ ಚರ್ಮದ ಕೃಷಿ ವಸ್ತುಗಳು, 250 ವರ್ಷದ ಮರದ ನೊಗ, 100 ವರ್ಷದ ಗೋವಿನ ತುಪ್ಪ ಸಂಗ್ರಹದ ಮಡಿಕೆ, 150 ವರ್ಷದ ಚಿತ್ರಗಳು, 200 ವರ್ಷದ ಮರದ ಗಂಟೆ... ಹೀಗೆ ಗೋವುಗಳಿಗೆ ಶತಮಾನಗಳಿಂದ ಬಳಸುತ್ತಿರುವ ಪರಿಕರಗಳು ಇಲ್ಲಿ ಕಾಣಸಿಗುತ್ತವೆ. ಇದಲ್ಲದೆ ಗೋವಿನಿಂದ ತಯಾರಿಸಬಹುದಾದ ಸರಳ ಗ್ಯಾಸ್ ವ್ಯವಸ್ಥೆ, ವಿಶೇಷ ಮಾದರಿಯ ಗೊಬ್ಬರ ಸಂಗ್ರಹ ವ್ಯವಸ್ಥೆ, ಗೋವಿನ ಗಂಜಲದಿಂದ ತಯಾರಿಸಬಹುದಾದ ಕೃಷಿ ಔಷಧಗಳು, ಗೋವಿನ ಉತ್ಪನ್ನದಿಂದ ಹಲವು ರೋಗಗಳಿಗೆ ಬಳಸಬಹುದಾದ ಔಷಧಗಳು, ಸೆಗಣಿಯಿಂದ ಕೃಷಿ ಬೀಜ ಸಂರಕ್ಷಣೆ ವಿಧಾನ, ಸೊಳ್ಳೆ ನಿಯಂತ್ರಣಕ್ಕೆ ಸೆಗಣಿಯಿಂದ ತಯಾರಿಸಿದ ಸೊಳ್ಳೆಬತ್ತಿ, ಧೂಪದ ಬತ್ತಿ... ಹೀಗೆ ಹಲವಾರು ಮಾದರಿಗಳನ್ನು ತಮ್ಮ ಗೋಶಾಲೆಯಲ್ಲಿ ತಯಾರಿಸಿ ಪ್ರದರ್ಶನಕ್ಕೆ ಇಟ್ಟಿದ್ದಾರೆ ಕೃಷ್ಣರಾಜು.

ಸುಲಭದಲ್ಲಿ ಗೋಮೂತ್ರವನ್ನು ಶುದ್ಧೀಕರಿಸುವ ನಾನಾ ಮಾದರಿ, ಗೋವುಗಳಿಗೆ ಸಮತೋಲನ ಪಶು ಆಹಾರ ಮತ್ತು ಒಣ ಹುಲ್ಲಿನ ಪರಿಷ್ಕರಣೆ ತರಬೇತಿಯೂ ಇಲ್ಲಿ ಸಿಗುತ್ತದೆ. ಸೆಗಣಿಯಿಂದ ಮಾಡಿದ ಅಲಂಕಾರಿಕ ವಸ್ತುಗಳು ಮಕ್ಕಳಿಗೆ ಮುದ ನೀಡುತ್ತವೆ. ಗೋವಿನ ಮಹತ್ವ ತಿಳಿಸುವ ಉದ್ದೇಶದಿಂದ ಸೆಗಣಿಯಿಂದ ವಿದ್ಯುತ್, ಸೆಗಣಿಯಿಂದ ಓಡುವ ಗಡಿಯಾರ, ಗೋಮೂತ್ರ ಗಡಿಯಾರ, ಹುಳಿ ಮಜ್ಜಿಗೆ ಗಡಿಯಾರ ಕೂಡ ಇಲ್ಲಿ ನೋಡಲು ಸಿಗುತ್ತದೆ.

ಆವರಣದಲ್ಲಿ ಔಷಧ ವನ!: ದಾರದಹಳ್ಳಿಯಲ್ಲಿರುವ ಸರಕಾರಿ ಪಶು ಆಸ್ಪತ್ರೆ ಆವರಣದಲ್ಲಿ ಅಚ್ಚುಕಟ್ಟಾಗಿರುವ ಔಷಧದ ವನವನ್ನು ಕೃಷ್ಣರಾಜು ಬೆಳೆಸಿದ್ದಾರೆ. ಅಲ್ಲಿ ನೆಲಬೇವು, ಒಂದೆಲಗ, ಅಜೋಲ, ಭೃಂಗರಾಜ, ಬಜೆ, ಲಕ್ಕಿ, ಆಡುಸೋಗೆ, ಶತಾವರಿ, ನಿತ್ಯಪುಷ್ಪ, ತುಳಸಿ, ಸರ್ಪಗಂಧ ಮುಂತಾದ ನಾನಾ ಬಗೆಯ ಔಷಧ ಗಿಡಗಳನ್ನು ಕ.ದಾ.ಕೃಷ್ಣರಾಜು ಬೆಳೆಸಿದ್ದಾರೆ. ಒಬ್ಬ ಸರಕಾರಿ ಪಶು ವೈದ್ಯಾಕಾರಿ ಮನಸ್ಸು ಮಾಡಿದರೆ ಏನೆಲ್ಲ ಸಾಧನೆ ಮಾಡಬಹುದು ಎನ್ನುವುದಕ್ಕೆ ಈ ಅಕಾರಿ ನಿದರ್ಶನ. ಕ.ದಾ.ಕೃಷ್ಣರಾಜು ಅವರ ದೂ.ಸಂ. 9448073711.

ಗೋವಿನ ಕೊಂಬಿನಿಂದ ಕಹಳೆ!: ಗೋವಿನ ಕೊಂಬುಗಳಿಂದ ಕಹಳೆ, ಶಹನಾಯಿ, ಬೊಂಬಾರು... ಮುಂತಾದ ಪರಿಕರಗಳನ್ನು ಸಿದ್ಧ್ದಪಡಿಸಿ ಅವುಗಳ ನಾದದಿಂದ ಪಶು ವೈದ್ಯ ಕೃಷ್ಣರಾಜು ಸಂಗೀತ ಸುಧೆಯನ್ನು ಮೊಳಗಿಸುತ್ತಿದ್ದಾರೆ. ಇವರು ಅನೇಕ ಮಠ-ಮಂದಿರಗಳಿಗೆ ಹೋದಾಗ ಅಲ್ಲಿನ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಸುವ ಸಂಗೀತ ಪರಿಕರಗಳನ್ನು ಸೂಕ್ಷ್ಮವಾಗಿ ಗ್ರಹಿಸಿದರು. ಅಂತಹ ವಿಶಿಷ್ಠ ಪರಿಕರಗಳನ್ನು ಗೋವಿನಿಂದಲೂ ಪಡೆಯಲು ಸಾಧ್ಯ ಎಂಬುದನ್ನು ಮನಗಂಡರು. ಅಮೇಲೆ ಹೊರರಾಜ್ಯಗಳಲ್ಲಿ ಸಿಗಬಹುದಾದ ಗೋವಿನ ಕೊಂಬುಗಳನ್ನು ತರಿಸಿ, ಅದನ್ನು ಪಾಪಣ್ಣಾಚಾರ್ ಎಂಬರಲ್ಲಿ ತಮ್ಮ ಕಲ್ಪನೆಯಂತೆ ಅವುಗಳಿಗೆ ರೂಪ ನೀಡಿ, ಅದನ್ನು ಸಂಗೀತ ಪರಿಕರಗಳಾಗಿ ಮಾರ್ಪಡಿಸುವಲ್ಲಿ ಕೃಷ್ಣರಾಜು ಯಶಸ್ವಿಯಾದರು.

ಮೂಲ : ವಿಜಯ ಕರ್ನಾಟಕ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate