ಗರ್ಭ ಧರಿಸಿದ ಜಾನುವಾರುಗಳಿಗೆ ಸಾಮಾನ್ಯ ಆಕಳುಗಳಿಗಿಂತ ಜಾಸ್ತಿ ಸ್ಥಳದ ಅವಶ್ಯಕತೆ ಇರುತ್ತದೆ. ಅದಕ್ಕೆ ಉತ್ತಮ ಪೋಷಕಾಂಶಯುಕ್ತ ಆಹಾರಗಳೂ ತುಂಬಾ ಅವಶ್ಯ. ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಹಲವು ಕ್ರಮಗಳ ಕುರಿತು ಇಲ್ಲಿ ವಿವರಣೆ ನೀಡಲಾಗಿದೆ.
ಇದು ಜಾನುವಾರು ಸಾಕಾಣಿಕೆದಾರರು ಕೇಳುವ ಸಾಮಾನ್ಯ ಪ್ರಶ್ನೆ. ಗರ್ಭಧರಿಸಿದ ಮೇಲೆ ಸುಮಾರು 1–3 ತಿಂಗಳುಗಳ ಅವಧಿಯಲ್ಲಿ ಅಂದರೆ ಮೊದಲ ತ್ರೈಮಾಸಿಕದಲ್ಲಿ ಆಕಳು– ಎಮ್ಮೆಗಳಿಗೆ ಉತ್ತಮ ಸಮತೋಲನ ಪಶು ಆಹಾರ ಮತ್ತು ಗುಣಮಟ್ಟದ ಖನಿಜ ಮಿಶ್ರಣವನ್ನು ನೀಡಬೇಕು.
ವೈಜ್ಞಾನಿಕವಾಗಿ ಹೇಳಬೇಕೆಂದರೆ, ಆಕಳಿನ ಶರೀರದ ವಿವಿಧ ಕ್ರಿಯೆಗಳ ನಿರ್ವಹಣೆಗಾಗಿ ಒಂದು ಕೆ.ಜಿ ಪಶು ಆಹಾರ ಮತ್ತು ಪ್ರತಿ ಲೀಟರ್ ಹಾಲಿಗೆ ಅರ್ಧ ಕೆ.ಜಿ. ಪಶು ಆಹಾರವನ್ನು ಲೆಕ್ಕಾಚಾರ ಹಾಕಿ ಒಟ್ಟು ಅದನ್ನು ದಿನಕ್ಕೆ ಎರಡು ಸಲ ವಿಭಾಗಿಸಿ ಕೊಡಬೇಕು. ಉತ್ತಮ ಸಮತೋಲನ ಪಶುಆಹಾರವನ್ನೇ ಬಳಸಬೇಕು ಅಥವಾ ತಜ್ಞ ಪಶುವೈದ್ಯರ ಸಲಹೆ ಪಡೆದು ಅವರ ಮನೆಯಲ್ಲೇ ತಯಾರಿಸಿದ ಪಶು ಆಹಾರವನ್ನೂ ಬಳಸಬಹುದು.
ಉತ್ತಮ ಖನಿಜ ಮಿಶ್ರಣವನ್ನು ಪ್ರತಿ ಹೊತ್ತಿಗೆ ಸುಮಾರು 30 ಗ್ರಾಂ ನೀಡಬೇಕು. ಇದು ಬಹಳ ಅವಶ್ಯ. ಪಶು ಆಹಾರ ಸಮತೋಲವಾಗಿದ್ದಲ್ಲಿ ಮತ್ತು ಜಾನುವಾರು ದಿನಕ್ಕೆ 10 ಲೀಟರಿಗಿಂತ ಕಡಿಮೆ ಹಾಲು ನೀಡುತ್ತಿದ್ದಲ್ಲಿ ಇತರ ಆಹಾರಗಳಾದ ಬೂಸಾ, ಕಡಲೇಕಾಯಿ ಹಿಂಡಿ ಇವುಗಳ ಅವಶ್ಯಕತೆ ಇರುವುದಿಲ್ಲ. ಅದರಲ್ಲೂ ಹೊಟ್ಟೆ ತುಂಬಾ ಹಸಿ ಹುಲ್ಲು ದೊರೆತಲ್ಲಿ 10 ಲೀಟರಿಗಿಂತ ಕಡಿಮೆ ಹಾಲು ಹಿಂಡುವ ಆಕಳುಗಳಿಗೆ ಆಹಾರದ ಅವಶ್ಯಕತೆ ಇರುವುದಿಲ್ಲ.
ಯಾವ್ಯಾವಾಗ... ಏನೇನು...
ಜಾನುವಾರು ಗರ್ಭ ಧರಿಸಿದಾಗ ಪಶು ಆಹಾರ ನೀಡಿದಲ್ಲಿ ಕರು ದೊಡ್ಡದಾಗಿ ಬೆಳೆದು ಕರು ಹಾಕುವಾಗ ತೊಂದರೆಯಾಗುವುದೆಂಬ ಮೂಢ ನಂಬಿಕೆ ರೈತರಲ್ಲಿ ಇದೆ. ಆದರೆ ಕರು ತನ್ನ ಬೆಳವಣಿಗೆಗಾಗಿ ಅದಕ್ಕೆ ಅವಶ್ಯವಿರುವ ಎಲ್ಲಾ ಪೋಷಕಾಂಶಗಳನ್ನು ತಾಯಿಯಿಂದಲೇ ಹೊಕ್ಕಳು ಬಳ್ಳಿಯ ಮೂಲಕ ಹೀರುತ್ತದೆ. ಕಾರಣ ತಾಯಿ ಆಕಳಿಗೆ ಸರಿಯಾದ ಪೋಷಕಾಂಶಗಳನ್ನು ನೀಡದಿದ್ದಲ್ಲಿ ಅದು ನಿಶ್ಶಕ್ತಿಗೊಂಡು ಗರ್ಭಾವಧಿಯ ಅಂತಿಮ ಹಂತದಲ್ಲಿ ನೆಲ ಹಿಡಿದರೆ ಅದನ್ನು ಸರಿಪಡಿಸುವುದು ಬಹಳ ಕಷ್ಟ. ಆದ್ದರಿಂದ ಸೂಕ್ತ ಪಶು ಆಹಾರವನ್ನು ನಿಗದಿತ ಪ್ರಮಾಣದಲ್ಲಿ ನೀಡುವುದು ಉತ್ತಮ.
ಇನ್ನು, ಎರಡನೇ ತ್ರೈಮಾಸಿಕ ಅಂದರೆ 3–6ನೇ ಅವಧಿಯಲ್ಲಿ ಇನ್ನೂ ಹೆಚ್ಚಿನ ಕಾಳಜಿ ಅವಶ್ಯ. ಈ ಅವಧಿಯಲ್ಲಿ ಗರ್ಭಕೋಶ ದಲ್ಲಿರುವ ಕರು ದಿನಕ್ಕೆ ಸುಮಾರು 30–50 ಗ್ರಾಂ ಬೆಳೆಯಲು ಪ್ರಾರಂಭಿಸುತ್ತದೆ. ಇದೇ ಪ್ರಮಾಣದಲ್ಲಿ ಅದಕ್ಕೆ ಸಮತೋಲಿತ ಪಶುಆಹಾರವನ್ನು, ಹಸಿರು ಹುಲ್ಲನ್ನು ಮತ್ತು ಖನಿಜ ಮಿಶ್ರಣವನ್ನು ನೀಡುವುದು ಬಹಳ ಮುಖ್ಯ.
ಮೂರನೆಯ ಮತ್ತು ಕೊನೆಯ ತ್ರೈಮಾಸಿಕದಲ್ಲಿ ಹಲವಾರು ಕಾಳಜಿ ವಹಿಸಬೇಕಾಗುತ್ತದೆ. ಅವುಗಳಲ್ಲಿ ಮುಖ್ಯವಾದ ಒಂದು ಅಂಶವೆಂದರೆ ಹಾಲನ್ನು ಬತ್ತಿಸುವುದು. ಹೆಚ್ಚು ಹಾಲು ಹಿಂಡುವ ಆಕಳುಗಳಲ್ಲಿ ಇದು ಅಷ್ಟು ಸುಲಭದ ಮಾತಲ್ಲ. ಏಕೆಂದರೆ ಹಾಲು ಬತ್ತಿಸುವಾಗ ಸ್ವಲ್ಪ ಎಡವಟ್ಟಾದರೂ ಕೆಚ್ಚಲು ಬಾವಿನಿಂದ ಆಕಳು ಬಳಲಬಹುದು. ಕಾರಣ ತಜ್ಞ ಪಶುವೈದ್ಯರ ಸಲಹೆ ಪಡೆದು ಹಂತ ಹಂತವಾಗಿ ಸ್ವಲ್ಪ ಸ್ವಲ್ಪವೇ ಪಶು ಆಹಾರವನ್ನು ಕಡಿಮೆ ಮಾಡುತ್ತಾ ಕೆಚ್ಚಲಿನ ಕಡೆಗೆ ಗಮನ ಹರಿಸಿ ಜಾನುವಾರಿಗೆ 7ನೇ ತಿಂಗಳಲ್ಲಿ ಸಂಪೂರ್ಣವಾಗಿ ಹಾಲನ್ನು ಬತ್ತಿಸಬೇಕು.
ಏಕೆಂದರೆ ಆಕಳಿನ ಕೆಚ್ಚಲಿಗೆ ಕರು ಹಾಕುವ ಮುನ್ನ ಸಾಕಷ್ಟು ಪ್ರಮಾಣದಲ್ಲಿ ಶಕ್ತಿ ಮತ್ತು ಪ್ರೊಟೀನ್ ಅಂಶವನ್ನು ಶೇಖರಿಸಿ ಕರುವಿನ ಬೆಳವಣಿಗೆ ಮತ್ತು ಹಾಲನ್ನು ನೀಡಲು ಅವಶ್ಯವಿದೆ. ಇದರಿಂದ ಹಾಲನ್ನು ಸ್ರವಿಸುವ ಜೀವಕೋಶಗಳಿಗೆ ವಿಶ್ರಾಂತಿ ಸಿಕ್ಕಿ, ಹೊಸ ಜೀವಕೋಶಗಳು ಉತ್ಪನ್ನವಾಗಿ ಮುಂದೆ ಕರು ಹಾಕಿದಾಗ ಹಾಲಿನ ಇಳುವರಿ ಜಾಸ್ತಿಯಾಗುತ್ತದೆ.
ನಂತರದ ತಿಂಗಳುಗಳಲ್ಲಿ ಒಂದು ಸಲ ಹಾಲು ಬತ್ತಿಸಿಯಾದ ಮೇಲೆ ಆಕಳಿನ ಶರೀರ ನಿರ್ವಹಣೆಗೆ ಪ್ರತಿದಿನ ಅಂದಾಜು 400- 500 ಕೆ.ಜಿ. ದೇಹ ತೂಕದ ಜಾನುವಾರಿಗೆ 2 ಕೆ.ಜಿ. ಸಮತೋಲ ಪಶು ಆಹಾರ ಮತ್ತು ಕರುವಿನ ಬೆಳವಣಿಗೆಗೆ ಹೆಚ್ಚುವರಿಯಾಗಿ 1 ಕೆ.ಜಿ. ಪಶು ಆಹಾರ, ಅಂದರೆ ಒಟ್ಟಿನಲ್ಲಿ ದಿನಕ್ಕೆ 3ಕೆ.ಜಿ. ಪಶು ಆಹಾರ ನೀಡಬೇಕಾಗುತ್ತದೆ. ಅಲ್ಲದೇ ಆಕಳಿನ ಪೋಷಣೆಯ ಸಲುವಾಗಿ ಸಾಕಷ್ಟು ಪ್ರಮಾಣದಲ್ಲಿ ಅದು ಹೊಟ್ಟೆ ತುಂಬಾ ಅಂದರೆ ಸುಮಾರು 10 ಕೆ.ಜಿ. ಆಗುವಷ್ಟು ಒಣ ಹುಲ್ಲನ್ನು ಮತ್ತು ಹಸಿರು ಹುಲ್ಲು ನೀಡಬೇಕಾಗುತ್ತದೆ. ಉತ್ತಮ ಗುಣಮಟ್ಟದ ಪ್ರೊಟೀನ್‌ಯುಕ್ತ ಪಶು ಆಹಾರ ಬಹಳ ಮುಖ್ಯ. ಉತ್ತಮ ಗುಣಮಟ್ಟದ ಖನಿಜ ಮಿಶ್ರಣವನ್ನು ದಿನಕ್ಕೆ ಬೆಳಿಗ್ಗೆ 30 ಗ್ರಾಂ ಮತ್ತು ಸಂಜೆ 30 ಗ್ರಾಂ ನೀಡಿದಲ್ಲಿ ಕರುವಿನ ಬೆಳವಣಿಗೆಯೂ ಉತ್ತಮ ವಾಗಿ ಹಾಲಿನ ಉತ್ಪಾದನೆ ಮುಂದಿನ ಕರಾವಿನಲ್ಲಿ ಜಾಸ್ತಿಯಾಗು ತ್ತದೆ. ಚಳಿಗಾಲದಲ್ಲಿ ಇದರ ಪ್ರಮಾಣ ಸ್ವಲ್ಪ ಜಾಸ್ತಿಯಾಗಬೇಕಾಗುತ್ತದೆ.
ಗರ್ಭದಲ್ಲಿರುವ ಕರುವಿನ ಶೇ 70ರಷ್ಟು ಬೆಳವಣಿಗೆ ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳಲ್ಲಿ ಆಗುತ್ತದೆ. ಕಾರಣ ಜಾನುವಾರಿನ ದೇಹದ ತೂಕವನ್ನು ಗಮನಿಸಿ ಅದಕ್ಕೆ ತಕ್ಕಂತೆ ಪೋಷಕಾಂಶಗಳನ್ನು ಕೊಡಬೇಕಾಗುತ್ತದೆ. ಅಲ್ಲದೇ ಗರ್ಭ ಧರಿಸಿದ ಜಾನುವಾರಿಗೆ ತೀರಾ ಜಾಸ್ತಿ ಆಹಾರವನ್ನು ನೀಡಿದರೂ ಅದು ಕೊಬ್ಬಾಗಿ ಪರಿವರ್ತನೆಗೊಂಡು ಕರು ಹಾಕಿದ ನಂತರ ಕಿಟೋಸಿಸ್ ಇತ್ಯಾದಿ ಕಾಯಿಲೆಗಳಿಗೆ ತುತ್ತಾಗಬಹುದು. ಗರ್ಭಾವಸ್ಥೆಯಲ್ಲಿರುವ ಆಕಳಿಗೆ ಜಾಸ್ತಿ ಆಹಾರ ನೀಡಿದರೆ ಕರು ಬೆಳೆದು ಪ್ರಸವದ ತೊಂದರೆ ಆಗುತ್ತದೆ ಎಂಬ ಭಾವನೆ ಕೆಲ ರೈತರಲ್ಲಿದ್ದು, ಅದು ವೈಜ್ಞಾನಿಕವಲ್ಲ.
ಇದೂ ತಿಳಿದಿರಲಿ
ಗಮನಿಸಬೇಕಾದ ಮತ್ತೊಂದು ವಿಷಯವೇನೆಂದರೆ, ಕರು ಹಾಕುವ ದಿನ ಹತ್ತಿರ ಬಂದಂತೆ ಆಕಳು ಮಲಗಿದಾಗ ನೆಣೆ ಇತ್ಯಾದಿ ಬರುತ್ತಿದೆಯೇ ಅಥವಾ ವಾಸನಾಯುಕ್ತ ಸ್ರಾವವಿದೆಯೇ ಎಂಬುದನ್ನು ಗಮನಿಸಿ ತಜ್ಞ ಪಶು ವೈದ್ಯರನ್ನು ಸಂಪರ್ಕಿಸಬೇಕು.
ಕೆಲವೊಮ್ಮೆ ಗರ್ಭದಲ್ಲಿಯೇ ಕರುವಿನ ಸಾವು ಸಂಭವಿಸಿ ತಾಯಿ ಆಕಳ ಜೀವಕ್ಕೆ ಕುತ್ತು ತರುವ ಅಪಾಯ ಇರುತ್ತದೆ. ಅಂತಿಮ ಹಂತದಲ್ಲಿ ಕೆಲವೊಮ್ಮೆ ಆಕಳುಗಳಲ್ಲಿ ಗರ್ಭಪಾತವಾಗುವ ಸಾಧ್ಯತೆ ಇರುತ್ತದೆ. ಅದಕ್ಕಾಗಿ ಕರು ಹಾಕುವ ದಿನ ಹತ್ತಿರ ಬಂದಂತೆ ಜಾನುವಾರಿನ ಹಿಂಭಾಗವನ್ನು ಗಮನಿಸುತ್ತಾ ಇರಬೇಕು. ಕರು ಹಾಕಲು 24–48 ಗಂಟೆ ಸಮಯವಿದ್ದಾಗ ಹಿಂಭಾಗ ಸಡಿಲಗೊಂಡು ಲೋಳೆ ಸುರಿಯಲು ಪ್ರಾರಂಭಿಸುತ್ತದೆ.
ಈ ಸಂದರ್ಭದಲ್ಲಿ ಆಕಳನ್ನು ಇತರ ಜಾನುವಾರುಗಳಿಂದ ಪ್ರತ್ಯೇಕಿಸಿ ಅದಕ್ಕೆ ಮೆತ್ತನೆ ಹಾಸನ್ನು ಮಲಗಲು ನೀಡಬೇಕು. ಕೆಲವೊಮ್ಮೆ ಪ್ರಥಮ ಪ್ರಸೂತಿಯಲ್ಲಿ ಮಣಕಗಳ ಹಿಂಭಾಗದಲ್ಲಿ ಮತ್ತು ಕೆಚ್ಚಲಿನಲ್ಲಿ ಶರೀರದ ನೀರು ತುಂಬಿಕೊಂಡು ಬಾವು ಬರಬಹುದು. ಇದು ಸ್ವಾಭಾವಿಕ. ಇದು ಕ್ರಮೇಣ ಕಡಿಮೆಯಾಗಿ ಕೊನೆಗೆ ಸಾಮಾನ್ಯ ಸ್ಥಿತಿಗೆ ಬರುತ್ತದೆ. ಕರು ಹಾಕುವ ಮೊದಲು ಕರುವನ್ನು ಸುತ್ತಿಕೊಂಡಿರುವ ಚೀಲ ಹೊರಕ್ಕೆ ಬಂದು ಅದರಲ್ಲಿನ ದ್ರವವು ಆಚೆ ಬರುತ್ತದೆ. ನಂತರ ಕರುವಿನ ಮುಂಗಾಲು ಮತ್ತು ಮೂತಿ ಕಾಣಿಸಿಕೊಳ್ಳುತ್ತದೆ. ಇದು ಸ್ವಾಭಾವಿಕ ಪ್ರಸವ. ಈ ಸಮಯದಲ್ಲಿ ಆಕಳು ಕಷ್ಟ ಪಡುತ್ತಿದ್ದರೆ ಕರುವಿನ ಮುಂಗಾಲುಗಳನ್ನು ಹಿಡಿದುಕೊಂಡು ನಿಧಾನಕ್ಕೆ ಜಾರಿಸುತ್ತಾ ಬಂದರೆ ಪ್ರಸವ ಸುಲಭವಾಗುತ್ತದೆ.
ಸುಲಭವಾಗಿ ಪ್ರಸವದ ಸಾಧ್ಯತೆ ಇಲ್ಲದಿದ್ದಲ್ಲಿ ತಜ್ಞ ಪಶುವೈದ್ಯರನ್ನು ಕರೆಯುವುದು ಅತ್ಯಂತ ಸೂಕ್ತ. ಕರು ಹುಟ್ಟಿದ ಕೂಡಲೇ ಅದರ ಹೊಕ್ಕಳಬಳ್ಳಿಯನ್ನು ತಾಯಿಯಿಂದ ಬೇರ್ಪಡಿಸಿ ಅದನ್ನು ಶುದ್ಧ ಕತ್ತರಿಯಿಂದ ಕತ್ತರಿಸಿ ಕ್ರಿಮಿನಾಶಕ ಹಚ್ಚಿ ಸ್ವಚ್ಛ ದಾರದಿಂದ ಕಟ್ಟಿದಲ್ಲಿ ಮುಂದೆ ಅವುಗಳಲ್ಲಿ ಹೊಕ್ಕಳು ಬಾವು ಬರುವುದು ತಪ್ಪುತ್ತದೆ. ಕರು ಹಾಕಿದ ತಕ್ಷಣ ಅದಕ್ಕೆ ಸಾಕಷ್ಟು ಗಿಣ್ಣದ ಹಾಲನ್ನು ಕುಡಿಸಬೇಕು. ಈ ವಿಧಾನಗಳನ್ನು ಅನುಸರಿಸಿದರೆ ಮುಂದೆ ಉತ್ತಮ ಆಕಳು ಅಥವಾ ಎತ್ತುಗಳನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ 080–23415352.
ಮೂಲ :ಪ್ರಜಾವಾಣಿ
ಕೊನೆಯ ಮಾರ್ಪಾಟು : 2/15/2020
ಕೃಷಿ ಆಧಾರಿತ ಗ್ರಾಮೀಣ ರೈತರ ಆರ್ಥಿಕ ಅಭಿವೃದ್ಧಿಗೆ, ಜಾನುವ...
ಸಮುದಾಯ ಆಧಾರಿತ ಚಟುವಟಿಕೆಗಳ ಬಗ್ಗೆ ಕೆಲವು ವಿವರಗಳು
ಜಾನುವಾರುಗಳ ಅಭಿವೃದ್ಧಿಗಾಗಿ ಸಾಮಥ್ರ್ಯ ಹೆಚ್ಚಿಸಲು ತರಬೇತಿ...
ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಾನುವಾರು ಸಂವರ್...