অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಓಝೋನ್

ಓಝೋನ್ ಎಂದರೇನು?

ಓಝೋನ್, ಆಮ್ಲಜನಕದ ಒಂದು ರೂಪ. ಆದರೆ, ಆಮ್ಲಜನಕದಂತೆ ಜೀವ ಸ್ನೇಹಿಯಲ್ಲದ ಇದು ವಿಷಕಾರಿ ಅನಿಲವಾಗಿದೆ. ಪ್ರತಿ ಓಝೋನ್ ಅಣುವು, ಮೂರು ಆಕ್ಸಿಜನ್ ಪರಮಾಣುಗಳಿಂದ ರಚಿಸಲ್ಪಟ್ಟಿರುತ್ತದೆ. ಆದ್ದರಿಂದ ಇದರ ರಾಸಾಯನಿಕ ಫಾರ್ಮುಲಾ 03 ಆಗಿದೆ. ವಾತಾವರಣದ ಮೇಲ್ಪದರದಲ್ಲಿರುವ ಆಮ್ಲಜನಕ ಅಣುಗಳು ಅತಿನೇರಳೆ ಕಿರಣಗಳ ಹಾಯುವಿಕೆಯಿಂದ ಒಡೆದು, ಬಿಡುಗಡೆಗೊಂಡ ಆಮ್ಲಜನಕ ಪರಮಾಣುವು (O) ಆಮ್ಲಜನಕ ಅಣುವಿನೊಂದಿಗೆ (02) ಸೇರಿಕೊಳ್ಳುತ್ತದೆ. ಆಗ ಮೂರು ಆಮ್ಲಜನಕದ ಅಣುಗಳು ಒಟ್ಟಾಗಿ ಓಝೋನ್ ರೂಪದಲ್ಲಿ ಪುನರ್ರಚನೆಗೊಳ್ಳುತ್ತವೆ.

ಒಳ್ಳೆಯ ಹಾಗೂ ಕೆಟ್ಟ ಓಝೋನ್

ಭೂ ಮೇಲ್ಮೈಗಿಂತ 15 - 50 ಕಿ.ಮೀ. ಎತ್ತರದಲ್ಲಿರುವ ಸ್ಟ್ರಾಟೋಸ್ಪಿಯರ್ನಗಲ್ಲಿ ಓಝೋನ್ ಪದರವು ನೈಸರ್ಗಿಕವಾಗಿಯೇ ರಚನೆಗೊಂಡಿರುತ್ತದೆ ಮತ್ತು ಇದು ಸೂರ್ಯನ ಅತಿನೇರಳೆ ಕಿರಣಗಳು ಭೂಮಿಯನ್ನು ತಲುಪದಂತೆ ತಡೆಯುವ ಮೂಲಕ ಜೀವರಾಶಿಯನ್ನು ರಕ್ಷಿಸುತ್ತದೆ. ಭೂಮಿಗೆ ಸಮೀಪದಲ್ಲಿರುವ ವಾತಾವರಣದ ಪದರದಲ್ಲಿ, ವಾಹನಗಳು ಉಂಟು ಮಾಡುವ ಮಾಲಿನ್ಯದಿಂದಾಗಿ ನೈಟ್ರೋಜನ್ ಡೈಯಾಕ್ಸೈಡ್ ಮತ್ತು ಹೈಡ್ರೋಕಾರ್ಬನ್ ಮಟ್ಟದಲ್ಲಿ ಏರಿಕೆಯಾಗುತ್ತದೆ. ಸೂರ್ಯನ ಬೆಳಕಿನೊಂದಿಗೆ ವರ್ತಿಸಿ ಈ ರಾಸಾಯನಿಕಗಳು ಓಝೋನ್ ಅನ್ನು ರೂಪಿಸುತ್ತವೆ. ಈ ಓಝೋನ್, ಕೆಮ್ಮು, ಗಂಟಲು ಬೇನೆ, ಅಸ್ಥಮಾ, ಬ್ರಾಂಕೈಟಿಸ್ ಮೊದಲಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಲ್ಲದು. ಅಲ್ಲದೆ, ಬೆಳೆಹಾನಿಗೂ ಕಾರಣವಾಗಬಲ್ಲದು. ಸ್ಟ್ರಾಟೋಸ್ಪಿಯರ್ ಹಂತದಲ್ಲಿ ರೂಪುಗೊಳ್ಳುವ ಓಝೋನ್ ಪದರವು ಅತಿನೇರಳೆ ಕಿರಣಗಳಿಗೆ ನಿರ್ಬಂಧ ಒಡ್ಡುವ ಮೂಲಕ ಭೂಮಿಯ ಮೇಲಿನ ಜೀವಿಗಳಿಗೆ ಉಪಯುಕ್ತವಾಗಿ ಪರಿಣಮಿಸಿದರೆ, ಕೆಳ ಹಂತದ ವಾತಾವರಣದಲ್ಲಿ ರೂಪುಗೊಳ್ಳುವ ಓಝೋನ್ ಪದರವು ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುವ ಮೂಲಕ ಆತಂಕಕಾರಿಯಾಗಿ ವರ್ತಿಸುತ್ತದೆ.

ಓಝೋನ್ ಬರಿದಾಗುವಿಕೆ ಎಂದರೇನು?

ಕ್ಲೋರೋಫ್ಲೋರೋಕಾರ್ಬನ್ನುಗಳು ಓಝೋನ್ ಬರಿದು ಮಾಡುವ ಪ್ರಾಥಮಿಕ ರಾಸಾಯನಿಕಗಳಾಗಿವೆ. ಇವುಗಳು ಶೈತ್ಯಾಗಾರಗಳಲ್ಲಿ, ಹವಾ ನಿಯಂತ್ರಕಗಳೇ ಮೊದಲಾದವುಗಳಲ್ಲಿನ ಶೈತ್ಯಕಾರಕಗಳಾಗಿ ಬಳಸಲ್ಪಡುತ್ತವೆ. ಇವು ಕ್ಲೋರಿನ್ ಅನ್ನು ಹೊಂದಿರುತ್ತವೆ. ಓಝೋನ್ ಬರಿದಾಗುವ ಪ್ರಕ್ರಿಯೆ

  1. ಹಂತ 1 : ಮಾನವಿಕ ಚಟುವಟಿಕೆಗಳಿಂದ ಉತ್ಪತ್ತಿಯಾಗುವ ಕ್ಲೋರೋಫ್ಲೋರೋಕಾರ್ಬನ್ನುಗಳು ವಾತಾವರಣದಲ್ಲಿನ ಒಝೋನ್ ಪದರವನ್ನು ತಲಪುತ್ತವೆ.
  2. ಹಂತ 2: ಸೂರ್ಯನಿಂದ ಹೊಮ್ಮುವ ಅತಿನೇರಳೆ ಕಿರಣಗಳು ಕ್ಲೋರೋಫ್ಲೋರೋಕಾರ್ಬನ್ನುಗಳನ್ನು ಭೇದಿಸಿ ಕ್ಲೋರಿನ್ ಅನ್ನು ಬಿಡುಗಡೆ ಮಾಡುತ್ತವೆ.
  3. ಹಂತ 3 : ಕ್ಲೋರಿನ್ ಅಣುಗಳು ಓಝೋನ್ ಅಣುಗಳನ್ನು ಭೇದಿಸುತ್ತವೆ ಮತ್ತು ಆ ಮೂಲಕ ಓಝೋನ್ ಪದರದಲ್ಲಿ ರಂಧ್ರಗಳಾಗುತ್ತ ಸಾಗುತ್ತವೆ.

ಓಝೋನ್ ಬರಿದಾಗುವಿಕೆಯು ನಮ್ಮ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ?

ಓಝೋನ್ ಪದರದಲ್ಲಿ ರಂಧ್ರಗಳಾಗುವುದರಿಂದ ಸೂರ್ಯನಿಂದ ಹೊಮ್ಮುವ ಅತಿನೇರಳೆ ಕಿರಣಗಳು ಹೆಚ್ಚಿನ ಪ್ರಮಾಣದಲ್ಲಿ ಭೂಮಿಯ ಮೇಲೆರಗುತ್ತವೆ. ಇದರಿಂದಾಗಿ ಪ್ರಜನನ ಸಮಸ್ಯೆಗಳು, ಕಣ್ಣಿನ ತೊಂದರೆ ಹಾಗೂ ಜಲಚರಗಳ ಪ್ರಾಣಕ್ಕೆ ಸಂಚಕಾರವೇ ಮೊದಲಾದ ತೊಂದರೆಗಳು ಉದ್ಭವಿಸುತ್ತವೆ. ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಕುರಿತ ಸಭೆ, ಕೋಪನ್ಹೇಗನ್ ಹವಾಗುಣ ಬದಲಾವಣೆ ಕುರಿತಂತೆ ಕೋಪನ್ಹೇಗನ್ನಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಭೂತಾಪಮಾನ ಏರಿಕೆಗೆ ಕಾರಣವಾಗುವ ಅಂಶಗಳಲ್ಲಿ ಕಡಿತ ತರುವ ಹಾಗೂ ಪ್ರಗತಿಶೀಲ ರಾಷ್ಟ್ರಗಳಲ್ಲಿ ಹವಾಗುಣ ವ್ಯತ್ಯಯದ ದುಷ್ಪರಿಣಾಮಗಳನ್ನು ಸರಿದೂಗಿಸುವ ಕಾರ್ಯ ಯೋಜನೆಗಳಿಗಾಗಿ ಹಣ ಕಲೆಹಾಕುವ ನಿರ್ಣಯಗಳಿಗೆ ಸಹಿ ಹಾಕಲಾಯಿತು. ಈ ಸಭೆಯಲ್ಲಿ ವಿಶ್ವದ ಮುಂದಾಳುಗಳು 'ಕೋಪನ್ಹೇಗನ್ ಒಡಂಬಡಿಕೆ'ಗೆ ಸಹಿ ಹಾಕಿದರು. ಇದಕ್ಕೆ ಬಹುಪಾಲು ರಾಷ್ಟ್ರಗಳ ಸಮ್ಮತಿ ಮುದ್ರೆಯೂ ದೊರಕಿತು. ಕೋಪನ್ಹೇಗನ್ ಒಡಂಬಡಿಕೆಯು, ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನುಂಟು ಮಾಡುವ ಭೂತಾಪಮಾನ ಏರಿಕೆಯಲ್ಲಿ ಕನಿಷ್ಠ 2 ಡಿಗ್ರಿಗಳನ್ನಷ್ಟಾದರೂ ಕಡಿಮೆಗೊಳಿಸಬೇಕೆಂಬ ವೈಜ್ಞಾನಿಕ ಲೆಕ್ಕಾಚಾರವನ್ನು ಹಾಕಿಕೊಂಡಿತು. ಈ ಯೋಜನೆಯನ್ನು ಪೂರ್ಣಗೊಳಿಸುವ ಸಲುವಾಗಿ, 2010 ರ ಜನವರಿ 31ರ ಒಳಗೆ ಹೆಚ್ಚು ತಾಪವನ್ನು ಉಗುಳುವ ಕೈಗಾರಿಕೀಕರಣಗೊಂಡ ರಾಷ್ಟ್ರಗಳ ಪಟ್ಟಿಯನ್ನು ತಯಾರಿಸುವ ನಿರ್ಣಯ ಕೈಗೊಳ್ಳಲಾಯಿತು. ಒಡಂಬಡಿಕೆಯನ್ವಯ, ಈ ರಾಷ್ಟ್ರಗಳು 2020 ರ ವೇಳೆಗೆ ಸ್ವಂತವಾಗಿ ಇಲ್ಲವೇ ಜಂಟಿಯಾಗಿ ವಿಶ್ವಸಂಸ್ಥೆಯ ಯೋಜನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅನುಷ್ಠಾನಕ್ಕೆ ಸಿದ್ಧವಾಗಬೇಕು. ಸಶಕ್ತ ಆರ್ಥಿಕತೆಯನ್ನು ಪ್ರದರ್ಶಿಸುತ್ತಿರುವವೂ ಸೇರಿದಂತೆ ಹಲವಾರು ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಪ್ರತೀ ಎರಡು ವರ್ಷಕ್ಕೊಮ್ಮೆ ಪರಿಶೀಲನೆ ನಡೆಸಿ, ಹಸಿರುಮನೆ ಅನಿಲಗಳ ಉಗುಳುವಿಕೆಯಲ್ಲಿ ನಿಯಂತ್ರಣ ತಂದುಕೊಳ್ಳುವುದಾಗಿ ಸಮ್ಮತಿ ಸೂಚಿಸಿದವು. ಹಾಗೆಯೇ ಸ್ವ ಇಚ್ಛೆಯಿಂದ ತಮ್ಮ ವಿವರಗಳನ್ನು ಜನವರಿ 31, 2010ರ ಒಳಗೆ ಸಲ್ಲಿಸಲು ಮುಂದಾದವು.

ಮೂಲ: ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 3/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate