অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹುಳು ಹಾವಳಿ ನಿಯಂತ್ರಣ

ಹುಳು ಹಾವಳಿ ನಿಯಂತ್ರಣ

ಬಾಳೆ ಸುರುಳಿ ಹುಳು ಹಾವಳಿ ನಿಯಂತ್ರಣಕ್ಕೆ ಇಲ್ಲಿದೆ ಪರಿಹಾರ

ಬಾಳೆ ಎಲೆಗಳನ್ನು ತಿಂದು, ಕತ್ತರಿಸಿ, ಸುರುಳಿಸುತ್ತಿಕೊಂಡು ಅದರಲ್ಲಿ ಅವಿತುಕೊಳ್ಳುವ (Banana skipper) ಹುಳು ಬಾಳೆ ಕೃಷಿಗೆ ಈಗ ಹೊಸ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ವೈಜ್ನಾನಿಕವಾಗಿ ಪರಿಹಾರ ಕಂಡುಕೊಳ್ಳಲಾಗಿದೆ.

ಈ ಕೀಟವು ಮೊಟ್ಟೆಗಳನ್ನು ಎಲೆಯ ತಳಭಾಗದಲ್ಲಿ ಇಡುತ್ತದೆ. ಮೊಟ್ಟೆಯಿಟ್ಟ 5 ರಿಂದ 8 ದಿನಗಳಲ್ಲಿ ಮರಿ ಹುಳು ಹೊರಗೆ ಬಂದು ಎಲೆಯನ್ನು ತಿನ್ನಲು ಪ್ರಾರಂಭಿಸುತ್ತದೆ. ಈ ಹುಳುಗಳು ಬಿಳಿಬಣ್ಣದಿಂದ ಕೂಡಿದ್ದು, ಇದರ ತಲೆ ಕಪ್ಪು ಬಣ್ಣದ್ದಾಗಿದೆ. ಈ ಮರಿ ಹುಳುವಿನ ಹಂತವು 25 ರಿಂದ 30 ದಿನಗಳವರೆಗೆ ಇದ್ದು, ಈ ಹಂತದಲ್ಲಿ ಬಾಳೆಎಲೆಗಳನ್ನು ತಿಂದು ನಾಶಪಡಿಸುತ್ತದೆ. ಅನಂತರ ಈ ಮರಿ ಹುಳವು ಬಾಳೆ ಎಳೆಯನ್ನು ಸುರುಳಿಸುತ್ತಿಕೊಂಡು ಕೋಶಾವಸ್ಥೆಗೆ ಹೋಗಿ 10 ದಿನಗಳಲ್ಲಿ ಫ್ರೌಢ ಚಿಟ್ಟೆಯಾಗಿ ಹೊರಬರುತ್ತದೆ.

ಫ್ರೌಢಚಿಟ್ಟೆಯು ಕಡುಕಂದು ಬಣ್ಣದಿಂದ ಕೂಡಿದ್ದು ಚಿಟ್ಟೆಯು ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹಾರುತ್ತದೆ. ಈ ರೀತಿ ಈ ಕೀಟದ ಜೀವನಾವಸ್ಥೆಯಿದ್ದು, ಕೀಟ ಭಾದೆಯು ಇಡೀ ತೋಟಕ್ಕೆ ಪಸರಿಸಿ ತೋಟವನ್ನು ನಾಶಪಡಿಸುವ ಸಾದ್ಯತೆಯಿರುತ್ತದೆ.

ನಿಯಂತ್ರಣ: ಈ ಕೀಟ ಭಾದೆ ಗೊಳಗಾದ ಎಲೆಗಳು ಮತ್ತು ಸುರುಳಿ ಸುತ್ತಿಕೊಂಡು ನೇತಾಡುತ್ತಿರುವ ಎಲ್ಲಾ ಗ್ಯಾಲರಿಗಳನ್ನು ಕೈಯಿಂದ ತೆಗೆದು ನಾಶಮಾಡಬೇಕು. ಕೀಟ ಭಾದೆಯು ಕಡಿಮೆ ಪ್ರಮಾಣದಲ್ಲಿದ್ದರೆ 2.5 ಮಿ. ಲೀ ಬೇವಿನ ಎಣ್ಣೆಯನ್ನು ಮತ್ತು ಅಂಟು ದ್ರಾವಣವನ್ನು(1/2 pack shampoo) ಪ್ರತಿ ಲೀ. ನೀರಿಗೆ ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಕೆಲವು ಪಕ್ಷಿಗಳು (ಕಾಗೆ, ಗೀಜಗ) ಮರಿಹುಳುಗಳನ್ನು ತಿನ್ನುವುದು ಕಂಡುಬಂದಿದ್ದು ಇವುಗಳನ್ನು ಬಾಳೆ ತೋಟಕ್ಕೆ ಆಕರ್ಷಿಸಬೇಕು. ಕೀಟದ ಭಾದೆಯ ತೀವ್ರತೆಯನ್ನು ಗಮನಿಸಿ 2.0 ಮಿ. ಲೀ. ಬ್ಯಾಸಿಲಸ್ ತುರೆಂಜೆನಿಸಿಸ್ ಅಥವ 1 ಮಿ. ಲೀ. ಬೇವೆರಿಯಾ ಬಾಸಿಯಾನ ಜೈವಿಕ ಪೀಡೆನಾಶಕವನ್ನು ಪ್ರತಿ ಲೀ. ನೀರಿಗೆ ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಈ ಕೀಟದ ಭಾದೆ ತೀವ್ರವಾಗಿದ್ದಲ್ಲಿ 2.5 ಮಿ. ಲೀ, ಕ್ಲೋರೊಪೈರಿಫಾಸ್ ಅಥವಾ 2.0 ಮಿ. ಲೀ, ಪ್ರೋಫೆನೋಪಾಸ್ ಅಥವಾ 2.0 ಮಿ. ಲೀ, ಕ್ವಿನಾಲ್ಪಾಸ್ 2 ಮಿ. ಲೀ Dimethioate ಯಾವುದಾದರೊಂದು ಕೀಟನಾಶಕವನ್ನು ಪ್ರತೀ ಲೀಟರ್ ನೀರಿಗೆ ಬೆರೆಸಬೇಕು. ಪ್ರತಿ 10 ಲೀ. ನೀರಿಗೆ 5 ಮಿ.ಲೀ ಅಂಟನ್ನು ಬೆರೆಸಿ ಸಿಂಪರಣೆ ಮಾಡಬಹುದು.

ವಿಶೇಷ ಸೂಚನೆ;. ಮರಿ ಹುಳುವಿನ ಚರ್ಮ ಹಾಗೂ ಬಾಳೆ ಎಲೆಯ ಮೇಲೆ ಮೇಣದಂತಹ ಪದರ (Surface)) ಇರುವುದರಿಂದ ಕೀಟನಾಶಕ ಸೊಂಪರಣಿ ಮಾಡುವಾಗ ಅಂಟು (Sticking Agent) ಕಡ್ಡಾಯವಾಗಿ ಬಳಸಬೇಕು. ಇತ್ತೀಚಿಗೆ ಭಾದೆಗೊಳಗಾದ ತೋಟಕ್ಕೆ ಬೇಟಿನೀಡಿದಾಗ ಅಲ್ಲಲ್ಲಿ ಹುಳುಗಳಿಗೆ ಶ್ರೀಲಿಂದ್ರದ ರೋಗ ಬಂದಿರುವುದು ಕಂಡುಬಂದಿದೆ ಇದರಿಂದ ಜೈವಿಕ ನಿಯಂತ್ರಣ ಸಾದ್ಯವಿದೆ. ತೀವ್ರ ಹಾನಿಕಂಡುಬಂದಲ್ಲಿ ಕೀಟ ನಾಶಕವನ್ನು ಬಳಸಿ ಹತೋಟಿ ಮಾಡುವುದು ಅನಿರ್ವಾಯ, ಆದರೆ ಬಾಳೆಹಣ್ಣುಗಳನ್ನು ನೇರವಾಗಿ ಉಪಯೋಗಿಸುವುದರಿಂದ ಕೀಟನಾಶಕವನ್ನು ಬಳಸುವಾಗ ಜಾಗ್ರತೆವಹಿಸುವುದು ಅತ್ಯಗತ್ಯ.

ಹೆಚ್ಚಿನ ಮಾಹಿತಿಗಾಗಿ ವಲಯ ಸಂಶೋದನಾ ಕೇಂದ್ರ ಬ್ರಹ್ಮಾವರ- 9448154542 (ಡಾ//ಎಸ್. ಯು. ಪಾಟೀಲ್), ತೋಟಗಾರಿಕೆ ಇಲಾಖೆ, ತೋಟಗಾರಿಕಾ ಮಾಹಿತಿ ಹಾಗೂ ಸಲಹಾ ಕೇಂದ್ರ, ಉಡುಪಿ (0820-2520590), ಕೃಷಿ ವಿಜ್ಞಾನ ಕೇಂದ್ರ, ಉಡುಪಿ- 0820-2563923, ಪ್ರತೀ ತಾಲೂಕಿನಲ್ಲಿರುವ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಬಹುದು.

ಈರುಳ್ಳಿ ಬೆಳೆಯಲ್ಲಿ ಥ್ರಿಪ್ಸ್ ಮತ್ತು ನೇರಳೆ ಮಚ್ಚೆ ರೋಗದ ನಿರ್ವಹಣೆ

ಥ್ರಿಪ್ಸ್: ಈ ಹುಳುಗಳು ಎಲೆಗಳ ತಳಭಾಗದ ಹತ್ತಿರ ಒಟ್ಟಾಗಿದ್ದು, ಆಗಾಗ ಎಲೆಗಳ ಮೇಲೆ ಮತ್ತು ಎಲೆಗಳ ತಳಭಾಗದಲ್ಲಿ ಹರಿದಾಡಿ ರಸ ಹೀರುವುದರಿಂದ ಪ್ರಾರಂಭದಲ್ಲಿ ಎಲೆಗಳ ಮೇಲೆಲ್ಲಾ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ. ನಂತರ ತೀವ್ರವಾದಂತೆ ಮಚ್ಚೆಗಳು ಕೂಡಿಕೊಂಡು ದೊಡ್ಡ ಗಾತ್ರದ ಬಿಳಿ ಮಚ್ಚೆಗಳು ಕಾಣಿಸಿಕೊಳ್ಳುತ್ತವೆ.

ಹತೋಟಿ ಕ್ರಮಗಳು: ಮಾಗಿ ಹುಳುಮೆ ಮಾಡುವುದು. ಥ್ರಿಪ್ಸ್ ಕಡಿಮೆ ಪ್ರಮಾಣದಲ್ಲಿದ್ದರೆ ಶೇ.5 ರ ಬೇವಿನ ಕಷಾಯವನ್ನು 10-15 ದಿನಗಳ ಅಂತರದಲ್ಲಿ ಸಿಂಪರಣೆ ಮಾಡಬೇಕು. ನಂತರ ನಿಯಂತ್ರಣಕ್ಕೆ ಒಂದು ಲೀಟರ್ ನೀರಿಗೆ 3 ಗ್ರಾಂ ಸೆಕ್ಟಿನ್ ಅಥವಾ 1 ಗ್ರಾಂ ಅಕ್ರೋಬ್ಯಾಟ್ ಜೊತೆಗೆ ಮ್ಯಾಂಕೋಜೆಬ್ ಅನ್ನು ಬೆರೆಸಿ ಸಿಂಪರಣೆ ಮಾಡಬೇಕು.

ಬಾಧೆ ತೀವ್ರವಿದ್ದಲ್ಲಿ 0.3 ಮಿ.ಲೀ.ಇಮಿಡಾಕ್ಲೋಪ್ರಿಡ್ ಅಥವಾ 2 ಮಿ.ಲೀ.ಪೈಪ್ರೋನಿಲ್ ಅಥವಾ ಅಸಿಫೇಟ್ 1.5 ಗ್ರಾಂ ಅನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

ನೇರಳೆ ಮಚ್ಚೆ ರೋಗ: ಹೆಚ್ಚಿನ ಆರ್ಧ್ರತೆ (ಶೇ.80-90) ಮತ್ತು 28-30 ಡಿಗ್ರಿ ಸೆಲಿಸಿಯಸ್ ಉಷ್ಣತೆಯಿದ್ದಾಗ, ಈ ಮಚ್ಚೆ ರೋಗ ಮೊದಲು ಹಳೇ ತೊಪ್ಪಲಿನ ಮೇಲೆ ಕಾಣಿಸುತ್ತದೆ. ಉದ್ದನೆಯ ಬಿಳಿ ಮತ್ತು ನೇರಳೆ ಬಣ್ಣದ ಮಚ್ಚೆಗಳು ಒಂದಕ್ಕೊಂದು ಕೂಡಿಕೊಂಡು, ಈ ಮಚ್ಚೆಗಳ ಮೇಲೆ ಕಪ್ಪು ಶಿಲೀಂದ್ರದ ಬೆಳವಣಿಗೆಯಾಗಿ ಎಲೆಗಳು ಒಣಗುತ್ತವೆ.

ಹತೋಟಿ ಕ್ರಮಗಳು: ಮಾಗಿ ಹುಳುಮೆ ಮಾಡುವುದು ಮತ್ತು ಬೆಳೆ ಪರಿರ್ವತನೆ ಮಾಡುವುದು.

ಗೆಡ್ಡೆ ಬರುವ ಸಮಯದಲ್ಲಿ ಒಂದು ಲೀಟರ್ ನೀರಿಗೆ 2 ಗ್ರಾಂ ಮ್ಯಾಂಕೋಜೆಬ್ ಅಥವಾ ಥೈರಾಂ 2 ಮಿ.ಲೀ. ಅಥವಾ ಕ್ಲೋರೊಥಲೋನಿಲ್ 2 ಗ್ರಾಂ ಅನ್ನು ಬೆರೆಸಿ ಸಿಂಪರಣೆ ಮಾಡಬೇಕು. ನಂತರ ನಿಯಂತ್ರಣಕ್ಕಾಗಿ ಒಂದು ಲೀಟರ್ ನೀರಿಗೆ 3 ಗ್ರಾಂ ಸೆಕ್ಟಿನ್ ಅಥವಾ 1 ಗ್ರಾಂ ಅಕ್ರೋಬ್ಯಾಟ್ ಜೊತೆಗೆ ಮ್ಯಾಂಕೋಜೆಬ್ ಅಥವಾ 2 ಗ್ರಾಂ ಪ್ರೋಫಿನೆಬ್(ಅನ್‌ಟ್ರಾಕೋಲ್) ಅನ್ನು ಬೆರೆಸಿ ಸಿಂಪರಣೆ ಮಾಡಬೇಕು. ಈ ಬಗ್ಗೆ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.

ಮೆಣಸಿನಕಾಯಿ ಬೆಳೆಯಲ್ಲಿ ಬರುವ ಕೀಟಗಳು ಮತ್ತು ರೋಗಗಳ ನಿಯಂತ್ರಣ

ಕೋಲಾರ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಮೆಣಸಿನಕಾಯಿ ಬೆಳೆಯಲ್ಲಿ ಬರುವ ಕೀಟಗಳು ಮತ್ತು ರೋಗಗಳ ನಿಯಂತ್ರಣಗಳ ಬಗ್ಗೆ ಕೆಲವು ಔಷಧ ಹಾಗೂ ಅವುಗಳನ್ನು ಎಷ್ಟು ಪ್ರಮಾಣದಲ್ಲಿ ಗಿಡಗಳಿಗೆ ಉಪಯೋಗಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದೆ.

ಮಾಹಿತಿ ಈ ಕೆಳಗಿನಂತಿದ್ದು, ಇವುಗಳು ಮೆಣಸಿನ ಕಾಯಿ ಬೆಳೆಯುವ ರೈತರಿಗೆ ಉಪಯುಕ್ತವಾಗಲಿದೆ.

ಕೀಟಗಳು: ಥ್ರಿಪ್ಸ್ ನಿಯಂತ್ರಣಕ್ಕಾಗಿ 2 ಗ್ರಾಂ ಡೈಮಿಥೋಯೇಟ್ 30 ಇ.ಸಿ. ಅಥವಾ 2 ಮಿ.ಲೀ.ಫಿಪ್ರೋನಿಲ್ ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ. ಅಥವಾ 1.5 ಮಿ.ಲೀ.ಮಾನೋಕ್ರೋಟಫಾಸ್ 36 ಡಬ್ಲ್ಯು.ಎಸ್.ಸಿ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆಮಾಡಬೇಕು.

ನುಸಿ ನಿಯಂತ್ರಣಕ್ಕಾಗಿ 2.5 ಮಿ.ಲೀ.ಡೈಕೊಫಾಲ್ 18.5 ಇ.ಸಿ. ಅಥವಾ 0.5 ಮಿ.ಲೀ.ಅಭಾಮೆಕ್ಟಿನ್ 1.9 ಇ.ಸಿ. ಅಥವಾ 1 ಮಿ.ಲೀ.ಪೆನ್ ಅಜಾಕ್ವಿನ್ 10 ಇ.ಸಿ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.

ಹೇನುಗಳ ನಿಯಂತ್ರಣಕ್ಕಾಗಿ 2 ಮಿ.ಲೀ. ಡೈಮಿಥೋಯೇಟ್ 30 ಇ.ಸಿ. ಅಥವಾ 1 ಮಿ.ಲೀ.ಫೆನ್ವಲರೇಟ್ 20 ಇ.ಸಿ. ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ. ಅಥವಾ 0.5 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8.ಎಸ್.ಎಲ್. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

ಕಾಯಿಕೊರಕ ಹುಳುವಿನ ನಿಯಂತ್ರಣಕ್ಕಾಗಿ 1 ಮಿ.ಲೀ. ಫೆನ್ವಲರೇಟ್ 20 ಇ.ಸಿ. ಅಥವಾ 0.75 ಮಿ.ಲೀ.ಇಂಡಾಕ್ಸೋಕಾರ್ಬ 14.5 ಎಸ್.ಸಿ. ಅಥವಾ 0.3 ಮಿ.ಲೀ.ಸ್ಪೈನೊಸಾಡ್ 2.5 ಎಸ್.ಸಿ. ಅಥವಾ 1 ಮಿ.ಲೀ.ಸೂಪರ್‌ಮೆಥ್ರಿನ್ 25 ಇ.ಸಿ. ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

ರೋಗಗಳು: ಸಸಿ ಸಾಯುವ ರೋಗದ ನಿಯಂತ್ರಣಕ್ಕೆ ಬಿತ್ತನೆಯಾದ 3 ವಾರಗಳ ನಂತರ ಸಸಿ ಮಡಿಗಳಿಗೆ 1 ಮಿ.ಲೀ ಮಾನೊಕ್ರೊಟೋಫಾಸ್ ಅಥವಾ 1.7 ಮಿ.ಲೀ.ಡೈಮಿಥೋಯೇಟ್ 30 ಇ.ಸಿ. ಅನ್ನು 1.5 ಗ್ರಾಂ ಮ್ಯಾಂಕೋಜೆಬ್‌ದೊಂದಿಗೆ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.

ನಾಟಿ ಮಾಡಿದ 7 ರಿಂದ 11 ವಾರಗಳ ನಂತರ ಬೆಳೆಗೆ 2 ಗ್ರಾಂ ಮ್ಯಾಂಕೋಜೆಬ್ ಅಥವಾ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಜೊತೆಗೆ 2 ಮಿ.ಲೀ.ಡೈಕೋಫಾಲ್ 30 ಇ.ಸಿ. ಅಥವಾ 1 ಮಿ.ಲೀ.ಮಾನೊಕ್ರೊಟೋಫಾಸ್ 30 ಎಸ್.ಎಲ್. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ದುಂಡಾಣು ಸೊರಗು ರೋಗದ ನಿಯಂತ್ರಣಕ್ಕೆ 0.5 ಗ್ರಾಂ ಸ್ಟ್ರೆಪ್ಟೋಸೈಕ್ಲೀನ್ ಮತ್ತು 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡಬೇಕು.

ಎಲೆ ಚುಕ್ಕೆ ರೋಗದ ನಿಯಂತ್ರಣಕ್ಕೆ ಪ್ರತಿ ಲೀಟರ್ ನೀರಿಗೆ 2 ಮಿ.ಲೀ.ಕ್ಲೋರೋಥಲೋನಿಲ್ ಅನ್ನು ಬೆರೆಸಿ ಸಿಂಪಡಿಸಬೇಕು..

ಎಲೆ ಮುರುಟು ರೋಗದ ನಿಯಂತ್ರಣಕ್ಕೆ 1.7 ಮಿ.ಲೀ.ಡೈಮಿಥೋಯೇಟ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸ್ಪ್ರೆ ಮಾಡಬೇಕು.,

ಬೂದಿ ರೋಗ ಮತ್ತು ಚಿಬ್ಬು ರೋಗದ ನಿಯಂತ್ರಣಕ್ಕೆ 3 ಗ್ರಾಂ ಕಾರ್ಬನ್‌ಡೈಜಿಮ್ ಅಥವಾ 2 ಗ್ರಾಂ ಮ್ಯಾಂಕೋಜೆಬ್ ಅಥವಾ 2 ಮಿ.ಲೀ.ಕ್ಲೋರೋಥಲೋನಿಲ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು.

ಹೆಚ್ಚಿನ ಮಾಹಿತಿಗಾಗಿ ಕೋಲಾರ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಜಿಲ್ಲಾ ಪಂಚಾಯತ್ ರವರನ್ನು ಅಥವಾ ದೂರವಾಣಿ ಸಂಖ್ಯೆ : 7829512236 ನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

ದಾಳಿಂಬೆ ಬೆಳೆಗೆ ದಾಳಿಯಿಡುವ ಹಣ್ಣು ಕೊಳೆ ರೋಗ ನಿವಾರಣಾ ಕ್ರಮ

ಚರ್ಮವ್ಯಾದಿ, ಶೂಲಬಾಧೆ, ಮತ್ತಿತರ ರೋಗಗಳಿಗೆ ರಾಮಬಾಣದಂತಿರುವ ದಾಳಿಂಬೆ ಹಣ್ಣಿಗೆ ಕೊಳೆ ರೋಗ/ ಕಜ್ಜಿರೋಗ ದಾಳಿಯಿಟ್ಟಾಗ ರೈತ ಕಂಗಾಲಾಗುವುದು ಸಹಜ. ಸಾಮಾನ್ಯವಾಗಿ ಬೇಸಿಗೆ ನಂತರ ಆರಂಭವಾಗುವ ಮಳೆಗಾಲದಲ್ಲಿ ದಾಳಿಂಬೆಹಣ್ಣಿನಲ್ಲಿ ಕಂಡುಬರುವ ರೋಗವೇ ಈ ಹಣ್ಣು ಕೊಳೆ ರೋಗ ಅಥವಾ ಅಂಥ್ರಾಕ್ನೋಸ್. ಈ ರೋಗ ಲಕ್ಷಣಗಳು ಹಾಗೂ ರೋಗನಿವಾರಣಾ ಕ್ರಮಗಳ ಪರಿಚಯವೇ ಈ ಲೇಖನ.

ರೋಗಲಕ್ಷಣಗಳು :- ದಾಳಿಂಬೆ ಹಣ್ಣಿನ ಮೇಲೆ ಬೇಸಿಗೆ ನಂತರದ ಮೊದಲ ಮಳೆ ಹನಿಗಳು ಬಿದ್ದ ಕೂಡಲೇ ಕಪ್ಪು ಮಚ್ಚೆಗಳು ಕಾಣಲು ಶುರುವಾಗುತ್ತದೆ. ಇದೊಂದು ಶಿಲೀಂಧ್ರದಿಂದ ಬರುವ ರೋಗವಾಗಿದ್ದು, ಕಾಯಿ, ಎಲೆ, ಹಣ್ಣುಗಳ ಮೇಲೆ ಕೆಂಪು ಮತ್ತು ಕಪ್ಪು ಬಣ್ಣದ ಸಣ್ಣ ಮಚ್ಚೆಗಳು ಕಂಡು ಬರುತ್ತವೆ. ಈ ಮಚ್ಚೆಗಳು ಬರು ಬರುತ್ತಾ ದೊಡ್ಡದಾಗುತ್ತಾ ಇಡೀ ಹಣ್ಣು ಕೊಳೆಯಲು ಪ್ರಾರಂಭವಾಗುತ್ತದೆ.

ಹಣ್ಣಿನ ಮೇಲೆ ಈ ಕಪ್ಪು ಮಚ್ಚೆಗಳಿದ್ದರೆ ಮಾರುಕಟ್ಟೆಯಲ್ಲಿ ನಿಗದಿತ ಬೆಲೆ ದೊರೆಯದೆ 1 ಕೆ.ಜಿ. ಹಣ್ಣಿಗೆ 80 ರೂ. ನಿಂದ 100 ರೂ.ಗೆ ಮಾರಬೇಕಾದ ಹಣ್ಣನ್ನು 20ರಿಂದ 30 ರೂ.ಗೆ ಮಾರುವ ಪರಿಸ್ಥಿತಿ ಬರುತ್ತದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆಸಿದವರು ಇದರಿಂದ ಹತಾಶರಾಗುವ ಸಂಭವ ಬರುತ್ತದೆ. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ರೋಗ ನಿರ್ವಹಣಾ ಕ್ರಮಗಳನ್ನು ಅನುಸರಿಸುವುದರಿಂದ ಅಂಥ್ರಾಕ್ನೋಸ್ ರೋಗ ತಡೆಗಟ್ಟಬಹುದಾಗಿದೆ.

ರೋಗ ನಿರ್ವಹಣಾ ಕ್ರಮ :- ದಾಳಿಂಬೆ ಹಣ್ಣಿನಲ್ಲಿ ಈ ರೋಗ ಕಂಡು ಬಂದ ಕೂಡಲೇ ತೋಟದಲ್ಲಿ ಕಳೆಯನ್ನು ಸ್ವಚ್ಚಗೊಳಿಸಿ ನೆಲಕ್ಕೆ ತಾಗಿರುವ ಕೊಂಬೆಗಳನ್ನು ಕತ್ತರಿಸಬೇಕು ಅಥವಾ ಮೇಲಕ್ಕೆ ಎತ್ತಿ ಕಟ್ಟಬೇಕು.

ರೋಗ ತಗಲಿದ ಕಾಯಿಗಳನ್ನು ಕಿತ್ತು ಸುಟ್ಟು, ಪ್ರತಿ ಲೀಟರ್ ನೀರಿಗೆ 1 ಗ್ರಾಂ ಥಯೋಫಿನೇಟ್ ಮಿಥೈನ್ ಅಥವಾ 2 ಗ್ರಾಂ ಕ್ಲೋರೊಥಲೋನಿಲ್ ಅಥವಾ 2 ಗ್ರಾಂ ಮ್ಯಾಂಕೊಜೆಬ್ ಬೆರೆಸಿ ಸಿಂಪಡಿಸುವ ಮೂಲಕ ರೋಗ ನಿವಾರಣೆಗೆ ಮಾರ್ಗೋಪಾಯ ಕಂಡುಕೊಳ್ಳಬಹುದು.

ಜಿಲ್ಲೆಯ ನಿಟ್ಟೂರು ಹೋಬಳಿ ಕಳ್ಳೇನಹಳ್ಳಿ ಗ್ರಾಮದ ಗಂಗಾಧರಯ್ಯ ಅವರು ಈ ರೋಗ ನಿರ್ವಹಣಾ ವಿಧಾನವನ್ನು ಅನುಸರಿಸಿದವರಲ್ಲೊಬ್ಬರು. ಇವರು ತಮ್ಮ 5 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆದಿದ್ದು, ಸಸಿಗೆ ಆಧಾರ ಕಡ್ಡಿ ಕೊಡುತ್ತಿದ್ದಾಗ ಮಳೆ ಪ್ರಾರಂಭವಾಯಿತು. ಮಳೆ ಆರಂಭವಾದ 4 ದಿನಗಳ ನಂತರ ದಾಳಿಂಬೆ ಹಣ್ಣುಗಳಿಗೆ ಕಪ್ಪು ಚುಕ್ಕೆ ಆವರಿಸಿರುವುದು ಕಂಡು ಬಂದಿದ್ದರಿಂದ ಕಪ್ಪು ಚುಕ್ಕೆ ಆವರಿಸಿದ ಸುಮಾರು 2,000 ಕೆ.ಜಿ. ಹಣ್ಣುಗಳನ್ನು ಕಿತ್ತು ಸುಟ್ಟು ಹಾಕಬೇಕಾಯಿತು. ಈ ನಿಟ್ಟಿನಲ್ಲಿ ಜಿಲ್ಲೆಯ ರೈತರು ರೋಗದ ಬಗ್ಗೆ ಸುಳಿವು ಸಿಕ್ಕ ಕೂಡಲೇ ಮುಂಜಾಗ್ರತೆ ಕ್ರಮ ಕೈಗೊಂಡು ರೋಗ ನಿವಾರಣಾ ಕ್ರಮ ಅನುಸರಿಸಿ ಉತ್ತಮ ದಾಳಿಂಬೆ ಬೆಳೆ ಬೆಳೆಯುವುದು ಸೂಕ್ತ.

ದಾಳಿಂಬೆ ಹಣ್ಣಿಗೆ ತಗಲುವ ಕಜ್ಜಿ ರೋಗದ ಗುಣಲಕ್ಷಣಗಳು ಮತ್ತು ರೋಗ ನಿರ್ವಹಣಾ ಕ್ರಮದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ತುಮಕೂರು ತೋಟಗಾರಿಕಾ ಉಪನಿರ್ದೇಶಕರ ಕಛೇರಿ ಆವರಣದಲ್ಲಿರುವ ಹಾರ್ಟಿ ಕ್ಲಿನಿಕ್‌ನ ವಿಷಯತಜ್ಞ ರಾಮಚಂದ್ರ ಹೆಗಡೆ (ಮೊ. 9980290951) ಅವರನ್ನು ಸಂಪರ್ಕಿಸಬಹುದಾಗಿದೆ.

ವರದಿ :- ಆರ್. ರೂಪಕಲಾ.
ವಾರ್ತಾ ಇಲಾಖೆ, ತುಮಕೂರು

ಕಾಫಿ ಬೆಳಗಾರರಿಗೆ ಕೀಟಗಳ ಹತೋಟಿಗೆ ಸಲಹೆ

ಕೀಟಗಳ ಹತೋಟಿ ಕ್ರಮಗಳ ಬಗ್ಗೆ ಕಾಫಿ ಬೆಳಗಾರರಿಗೆ ಇಲ್ಲದೊಂದಿಷ್ಟು ಸಲಹೆಗಳನ್ನು ನೀಡಲಾಗಿದೆ. 
ಕಾಫಿ ಬಿಳಿಕಾಂಡ ಕೊರಕ:-ಕಾಫಿ ಬೆಳೆಯುವ ಕೆಲವು ಪ್ರದೇಶಗಳಲ್ಲಿ ಸತತವಾಗಿ ಸುರಿದ ಮುಂಗಾರು ಮಳೆಯು ಬಿಡುವು ಕೊಟ್ಟಿದೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಅಧಿಕವಾಗಿ ಸುರಿದ ಮಳೆಯಿಂದ ಕಾಫಿ ಕಾಂಡದ ಒಳಗಡೆ ಬೋರರ್ ಲಾರ್ವಗಳ ಚಟುವಟಿಕೆಯು ಕುಂಠಿತವಾಗಿದ್ದು, ಕೆಲವು ಸತ್ತು ಹೋಗಿರುತ್ತವೆ. ಕೀಟ ಪೀಡಿತ ಗಿಡಗಳನ್ನು ಗುರುತಿಸಿ ತೆಗೆಯಲು ಇದು ಸಕಾಲವಾಗಿರುತ್ತದೆ. ಪ್ರೌಢ ಕೀಟಗಳು ಈಗಾಗಲೇ ಕಾಂಡದಿಂದ ಹೊರಬರಲು ಸಿದ್ಧವಾಗಿರುವುದರಿಂದ ಕೀಟ ಪೀಡಿತ ಗಿಡಗಳನ್ನು ಗುರುತಿಸಿ ತೆಗೆದು ಕೂಡಲೇ ನಾಶ ಪಡಿಸಬೇಕು.

ಇದರಿಂದ ಪ್ರೌಢ ಕೀಟಗಳಿಂದ ಕಾಫಿ ಗಿಡಗಳಿಗೆ ಉಂಟಾಗಬಹುದಾದ ಸಂಭಾವಿತ ಹಾನಿಯನ್ನು ತಪ್ಪಿಸಬಹುದು. ಅಲ್ಲದೆ ಈ ತಿಂಗಳ ಕೊನೆಯ ವಾರದಲ್ಲಿ ಅಥವಾ ಅಕ್ಟೋಬರ್ ತಿಂಗಳ ಮೊದಲನೆ ವಾರದಲ್ಲಿ ಮೋಹಕ ಬಲೆಗಳನ್ನು (ಫೆರಮೋನ್ ಟ್ರಾಪ್ಸ್) ಅಳವಡಿಸಬಹುದು. ಈ ಮೋಹಕ ಬಲೆಗಳು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆಯಲ್ಲಿ ದೊರಕುತ್ತವೆ. ಆಸಕ್ತಿಯುಳ್ಳ ಬೆಳೆಗಾರರು ಸ್ಥಳೀಯ ವಿಸ್ತರಣಾ ವಿಭಾಗದ ಸಂಪರ್ಕಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಅವಶ್ಯಕವಾದ ಮೋಹಕ ಬಲೆಗಳಿಗೆ ಬೇಡಿಕೆಯನ್ನು ಸಲ್ಲಿಸಬಹುದು. ಎಕರೆಯೊಂದಕ್ಕೆ 1೦ ಮೋಹಕ ಬಲೆಗಳನ್ನು (ಫೆರಮೋನ್ ಟ್ರಾಪ್ಸ್) ಅಳವಡಿಸಬೇಕೆಂದು ಶಿಫಾರಸ್ಸು ಮಾಡಲಾಗಿದೆ.

ಕಾಫಿ ಕಾಯಿಕೊರಕ:-ಅಧಿಕವಾದ ಮಳೆಯಿಂದಾಗಿ ಕಾಫಿ ಕಾಯಿಕೊರಕದ ಚಟುವಟಿಕೆಯು ಸಾಕಷ್ಟು ಕುಂಠಿತವಾಗಿರುತ್ತದೆ. ಆದರೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಗಿಡಗಳಲ್ಲಿ ಉಳಿದಿರುವ ಹಾಗೂ ಅಕಾಲಿಕ ಕಾಫಿ ಹಣ್ಣುಗಳಲ್ಲಿರುವ ಕೀಟಗಳ ಹರಡುವಿಕೆ ಪ್ರಾರಂಭವಾಗುತ್ತದೆ. ಆದುದರಿಂದ ಈ ತಿಂಗಳಿಂದ ತೋಟದಲ್ಲಿ ಬ್ರೋಕೋ ಟ್ರ್ಯಾಪ್‌ಗಳನ್ನು ಅಳವಡಿಸುವುದರಿಂದ ಕೀಟದ ವಲಸೆಯನ್ನು ತಪ್ಪಿಸಬಹುದು. ಈ ರೀತಿ ಅಳವಡಿಸಿದ ಬ್ರೋಕೋ ಟ್ರ್ಯಾಪ್‌ಗಳನ್ನು ಮುಂದಿನ ಹೂ ಮಳೆ, ಹಿಮ್ಮಳೆ ಬರುವವರೆಗೂ ನಿರ್ವಹಿಸುವುದರಿಂದ ಕಾಫಿ ಕಾಯಿಕೊರಕ ಕೀಟಗೋಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತದೆ.

ಕಾಫಿ ಹಣ್ಣಿನ ಕೊಯಿಲಿನ ಸಂದರ್ಭದಲ್ಲಿ ಕಾಫಿ ಕಣದ ಸುತ್ತಲೂ ಬ್ರೋಕೋ ಟ್ರ್ಯಾಪ್‌ಗಳನ್ನು ಅಳವಡಿಸಬೇಕು. ಈ ಬ್ರೋಕೋ ಟ್ರ್ಯಾಪ್‌ಗಳು ಕೇಂದ್ರೀಯ ಕಾಫಿ ಸಂಶೋಧನಾ ಸಂಸ್ಥೆ, ಬಾಳೆಹೊನ್ನೂರು ಮತ್ತು ಕಾಫಿ ಸಂಶೋಧನಾ ಪ್ರಾಂತೀಯ ಸಂಸ್ಥೆ, ಚೆಟ್ಟಳ್ಳಿಯಲ್ಲಿ ದೊರಕುತ್ತವೆ. ಪ್ರತಿ ಟ್ರ್ಯಾಫ್ ಒಂದರ ಬೆಲೆಯು ( 1೦ ಮಿ.ಲೀ.ಲ್ಯೂರ್ ನೊಂದಿಗೆ) ರೂ.12 ಆಗಿರುತ್ತದೆ. ಈ ಟ್ರ್ಯಾಪ್‌ಗಳನ್ನು 25೦ ಮಿ.ಲೀ.ಲ್ಯೂರ್‌ನೊಂದಿಗೆ 25 ಟ್ರ್ಯಾಪ್‌ಗಳ ಸೆಟ್‌ನಲ್ಲಿ ರೂ.3೦೦/-ಕ್ಕೆ ಮಾರಾಟ ಮಾಡಲಾಗುತ್ತದೆ. ಅಲ್ಲದೆ ಈ ಲ್ಯೂರ್ ಪದಾರ್ಥವು ಪ್ರತ್ಯೇಕವಾಗಿ ಲೀಟರೊಂದಕ್ಕೆ ರೂ.೧೦೦/-ಕ್ಕೆ ಸಿಗುತ್ತದೆ. ಕಣದ ಸುತ್ತಲಿನ ಗಿಡಗಳಿಂದ ಕುಯಿಲನ್ನು ಕೊನೆಯಲ್ಲಿ ಮಾಡಬೇಕು.

ಆದಾಗ್ಯೂ ಹಣ್ಣು ಕಾಫಿಯನ್ನು ಆಗಿಂದ್ದಾಗಲೇ ಕುಯಿಲು ಮಾಡಬೇಕು. ಕುಯಿಲು ಮಾಡುವಾಗ ತಾಟುಗಳನ್ನು (ಕುಯಿಲು ಚಾಪೆ) ಬಳಸುವುದು ತುಂಬಾ ಸೂಕ್ತವಾಗಿರುತ್ತದೆ. ಇದರೊಟ್ಟಿಗೆ ಬೆಳೆದಿರುವ ಕಳೆಗಳನ್ನು ಸ್ವಚ್ಚವಾಗಿ ತೆಗೆಯುವುದರಿಂದ ಹನಕಲುಗಳನ್ನು ಹೆರಕಲು ತುಂಬಾ ಸಹಕಾರಿಯಾಗುತ್ತದೆ. ಕುಯಿಲು ಮಾಡುವಾಗ ಯಾವುದೇ ಕಾಫಿಯು ಗಿಡದಲ್ಲಿ ಉಳಿಯದಂತೆ ಎಚ್ಚರಿಕೆ ವಹಿಸಬೇಕು. ಕಾಯಿ ಹಣ್ಣಾದ ಕೂಡಲೇ ಯಾವುದೇ ವಿಳಂಬವಿಲ್ಲದೆ ಕುಯಿಲು ಮಾಡಬೇಕು. ಕುಯಿಲು ಮಾಡುವುದು ವಿಳಂಬವಾದಲ್ಲಿ ಕಾಯಿಕೊರಕದ ಹಾನಿಯ ತೀವ್ರತೆ ಹೆಚ್ಚಾಗುತ್ತದೆ.

ಭತ್ತದ ಬೆಳೆಗೆ ಎಳೆಸುರಳಿ ಹುಳು ಹಾಗೂ ಬೆಂಕಿರೋಗ ಹತೋಟಿಗೆ ಸಲಹೆ

ಶಿವಮೊಗ್ಗ ಜಿಲ್ಲೆಯ ಆಯ್ದ ತಾಲೂಕುಗಳಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಕೂರಿಗೆ ಹಾಗೂ ನಾಟಿ ಮಾಡಿದ ಭತ್ತದ ಬೆಳೆಯಲ್ಲಿ ಎಲೆಸುರಳಿ ಹುಳು ಮತ್ತು ಬೆಂಕಿರೋಗದ ಬಾಧೆ ಕಂಡುಬಂದಿದ್ದು, ಕೀಟ ಮತ್ತು ರೋಗದ ಬಾಧೆ ನಿರ್ವಹಣೆಗೆ ಸಲಹೆ ನೀಡಿದ್ದು, ರೈತರು ಅನುಸರಿಸುವಂತೆ ಜಂಟಿ ಕೃಷಿ ನಿರ್ದೇಶಕ ಕೆ.ಮಧುಸೂದನ್ ಅವರು ತಿಳಿಸಿದ್ದಾರೆ.

ಎಲೆಸುರುಳಿ ಹುಳು: ಭತ್ತದ ಗರಿಯ ಅಂಚುಗಳನ್ನು ಸೇರಿಸಿ ಉದ್ದಕ್ಕೆ ಒಳಗೆ ಸುತ್ತಿ ಜೀವಿಸುವ ಎಲೆಸುರಳಿ ಹುಳುವು ಎಲೆಗಳನ್ನು ತಿಂದು ಜೀವಿಸುತ್ತದೆ. ಈ ಹುಳುವು ಗರಿಯ ಹರಿತ್ತನ್ನು ತಿನ್ನುವುದರಿಂದ ಗರಿಯ ಮೇಲೆ ಬಿಳಿ ಮಚ್ಚೆಗಳು ಗೋಚರಿಸುತ್ತವೆ.

ಈ ರೋಗದ ಹತೋಟಿಗಾಗಿ ಬದು ಹಾಗೂ ಗದ್ದೆಗಳಲ್ಲಿರುವ ಕಳೆ ಅಥವಾ ಆಶ್ರಯ ಸಸ್ಯಗಳನ್ನು ಇಲ್ಲದಂತೆ ನೋಡಿಕೊಳ್ಳಬೇಕು. ರಾಸಾಯನಿಕ ಕ್ರಮವಾಗಿ ಕ್ಲೋರೋಫೈರಿಫಾಸ್ 2ಮಿ.ಲೀ. ಅಥವಾ ಮಾನೋಕ್ರೋಟೊಫಾಸ್ 1.5ಮಿ.ಲೀ. ಅಥವಾ ಕ್ವಿನಾಲ್‌ಫಾಸ್ 2ಮಿ.ಲೀ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಒಂದು ಎಕರೆಗೆ 2೦೦ಲೀ. ಸಿಂಪರಣಾ ದ್ರಾವಣ ಬೇಕಾಗುವುದು.

ಬೆಂಕಿರೋಗ: ಎಲೆ ಮೇಲೆ ಕಂದು ಬಣ್ಣದ ಶಂಖಾಕೃತಿ ಅಥವಾ ವಜ್ರಾಕೃತಿ ಆಕಾರದ ಚುಕ್ಕೆಗಳು ಕಂಡುಬರುತ್ತವೆ. ರಾತ್ರಿ ವೇಳೆಯಲ್ಲಿ ಕಡಿಮೆ ಉಷ್ಣಾಂಶ ಹಾಗೂ ಹೆಚ್ಚಿನ ತೇವಾಂಶದಿಂದ ರೋಗದ ತೀವ್ರತೆ ಹೆಚ್ಚಾಗಿ ಎಲೆಗಳ ಮೇಲೆ ಉಂಟಾದ ಕಂದು ಚುಕ್ಕೆಗಳು ಒಂದಕ್ಕೊಂದು ಸೇರಿ ಸಂಪೂರ್ಣ ಎಲೆ ಒಣಗಿ ಸುಟ್ಟಂತೆ ಕಾಣುತ್ತದೆ. ತೆಂಡೆ ಬರುವ ಹಂತದಲ್ಲಿ ಗಣ್ಣು ಬಾದೆಗೊಳಗಾದರೆ ಗಣ್ಣಿನ ಮೇಲಿನ ಬುಡದ ಭಾಗ ಸಾಯುತ್ತದೆ ಅಲ್ಲದೇ ತೆನೆ ಪೂರ್ತಿ ಮುರಿದು ಬೀಳುತ್ತದೆ.

ಈ ರೋಗದ ಹತೋಟಿಗಾಗಿ ಗದ್ದೆಯಲ್ಲಿ ನಿಂತ ನೀರನ್ನು ಸಂಪೂರ್ಣವಾಗಿ ಬಸಿದು ತೆಗೆಯಬೇಕು. ಅಧಿಕ ಸಾರಜನಕಯುಕ್ತ ರಸಗೊಬ್ಬರಗಳನ್ನು ಕೊಡಬಾರದು. 1ಗ್ರಾಂ ಕಾರ್ಬನ್‌ಡೈಜಿಂ ಅಥವಾ 1ಮಿ.ಲೀ. ಕಿಟಾಜಿನ್ ಪ್ರತಿ ಲೀಟರ್‌ಗೆ ನೀರಿಗೆ ಬೆರಸಿ ಸಿಂಪಡಿಸಬೇಕು. ರೋಗದ ತೀವ್ರತೆ ಜಾಸ್ತಿಯಾದಲ್ಲಿ ಟ್ರೈಸೈಕ್ಲೋಜೋಲ್ ೦.6ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ಹೆಚ್ಚಿನ ವಿವರಗಳಿಗಾಗಿ ಸಮೀಪದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಹೋಬಳಿ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.

ಬಿಟಿ ಹತ್ತಿಯಲ್ಲಿ ರಸ ಹೀರುವ ಕೀಟಗಳು ಮತ್ತು ಸಮಗ್ರ ಹತೋಟಿ ಕ್ರಮಗಳು


 

ಮುಖ್ಯವಾಗಿ ರಸಹೀರುವ ಕೀಟಗಳು ಹತ್ತಿ ಬೆಳೆಯ ಕಾಲಾವಧಿಯುದ್ದಕ್ಕೂ ಬೇರೆ ಬೇರೆ ಹಂತಗಳಲ್ಲಿ ಕಾಣಿಸಿಕೊಂಡು ರಸವನ್ನು ಹೀರಿ ಬೆಳವಣಿಗೆಯ ಮೇಲೆ ನೇರ ಪರಿಣಾಮವನ್ನುಂಟುಮಾಡುತ್ತವೆ. ರಸ ಹೀರುವ ಕೀಟಗಳಾದ ಹೇನು, ಥ್ರಿಪ್ಸ್ ನುಸಿ, ಮೈಟ್‌ನುಸಿ, ಹಸಿರು ಜಿಗಿ, ಬಿಳಿನೊಣ, ಮತ್ತು ಇತ್ತಿತ್ತಲಾಗಿ ಮಿರಿಡ್ ಮತ್ತು ಹಿಟ್ಟು ತಿಗಣೆಗಳು ಬೆಳೆಯ ವಿವಿಧ ಹಂತಗಳಲ್ಲಿ ಕಾಣಿಸಿಕೊಂಡು ಬೆಳವಣಿಗೆ ಕುಂಠಿತಗೊಳಿಸುವುದರಿಂದ ಇಳುವರಿ ಕಡಿಮೆಯಾಗುತ್ತಿದೆ. 2೦13 ರ ಮುಂಗಾರು ಬೆಳೆಯಲ್ಲಿ ಹೊಸದಾಗಿ ಹೂ ಮೊಗ್ಗು ಮ್ಯಾಗಟ್ ಕೀಟ ತೀವ್ರವಾಗಿ ಕಾಣಿಸಿಕೊಂಡಿದೆ.

ಥ್ರಿಪ್ಸ ನುಸಿ: ಎಲೆಯ ಕೆಳಭಾಗದಲ್ಲಿದ್ದುಕೊಂಡು ಎಲೆಗಳನ್ನು ಕುಕ್ಕಿ ರಸವನ್ನು ಹೀರುತ್ತವೆ. ಅಂತಹ ಎಲೆಗಳು ಚಿಬ್ಬುಗಟ್ಟಿದಂತಾಗಿ ಮುದುಡಿಕೊಳ್ಳುತ್ತವೆ ಮತ್ತು ಬೆಳವಣಿಗೆ ಕುಂಠಿತವಾಗಿ ಇಳುವರಿ ಕಡಿಮೆಯಾಗುತ್ತದೆ.

ಸಸ್ಯ ಹೇನು: ಬೆಳೆಯುತ್ತಿರುವ ಕುಡಿ, ಎಲೆಗಳ ಕೆಳಭಾಗ ಮತ್ತು ಮೊಗ್ಗುಗಳಲ್ಲಿ ಕಂಡುಬಂದು ರಸ ಹೀರುವುದರಿಂದ ಸಸಿಗಳು ಬಾಡಿದಂತಾಗಿ ಬೆಳವಣಿಗೆ ಕುಂಠಿತವಾಗುವುದು ಮತ್ತು ಅಂತಹ ಸಸಿಗಳ ಮೇಲೆ ಕಪ್ಪು ಬಣ್ಣದ ಶಿಲೀಂದ್ರ ಬೆಳೆದು ಕೆಲವೊಮ್ಮೆ ಸಸಿಗಳು ಸಾಯುತ್ತವೆ.

ಹಸಿರು ಜಿಗಿ: ರಸವನ್ನು ಹೀರುತ್ತ ತನ್ನ ವಿಷಕಾರಿಯಾದ ಜೊಲ್ಲನ್ನು ಎಲೆಗಳ ಕೋಶಗಳಲ್ಲಿ ಸ್ರವಿಸುವುದರಿಂದ ಎಲೆಗಳು ಅಂಚಿನಿಂದ ಮಧ್ಯಭಾಗದವರೆಗೆ ಹಳದಿ ಆಗುತ್ತಾ ಬಂದು ಕೆಂಪಾಗುವವು. ಎಲೆಗಳು ಮುರುಟಿದಂತಾಗಿ ಬಿರುಸಾಗಿ ಸುಟ್ಟಂತೆ ಕಾಣುವವು.

ಬಿಳಿನೊಣ: ಕೀಟದ ಮೈತುಂಬ ಬಿಳಿ ಬಣ್ಣದ ಮೇಣದಂತಹ ಹುಡಿ ಇರುತ್ತದೆ. ಪ್ರೌಢ ಕೀಟಗಳು ಹಾಗೂ ಮರಿಗಳು ಸತತವಾಗಿ ರಸಹೀರುವುದರಿಂದ ಎಲೆಗಳು ಹಳದಿ ವರ್ಣಕ್ಕೆ ತಿರುಗಿ ಉದುರುತ್ತವೆ, ಮೊಗ್ಗು ಕಾಯಿಗಳೂ ಉದುರುತ್ತವೆ. ಕಾಯಿಗಳು ಇರುಕಲಾಗಿ ಒಡೆಯುವವು. ಈ ಕೀಟಗಳು ಜೇನಿನಂತಹ ದ್ರವವನ್ನು ಸ್ರವಿಸುವದರಿಂದ ಅವುಗಳ ಮೇಲೆ ಕಪ್ಪು ಬಣ್ಣದ ಬೂಸ್ಟು ಬೆಳೆದು ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಸ್ಥಗಿತವಾಗುವುದು.

ಮಿರಿಡ್ ತಿಗಣೆ: ಪ್ರೌಢ ಮಿರಿಡ್ ತಿಗಣೆಯು ತಿಳಿ ಹಳದಿ ಮತ್ತು ಕಂದು ಬಣ್ಣ ಹೊಂದಿದ್ದು. ಪ್ರತಿ ಹೆಣ್ಣು ತಿಗಣೆಯು ಒಂದು ವಾರದ ಅವಧಿಯಲ್ಲಿ ಸುಮಾರು 7೦-17೦ ಮೊಟ್ಟೆಗಳನ್ನು ಎಲೆಯ ಒಳಭಾಗದಲ್ಲಿ ಇಡುತ್ತದೆ. ಮೊಟ್ಟೆಯೊಡೆದು ಹೊರ ಬಂದ ಮರಿಗಳು ಹಸಿರು ಬಣ್ಣ ಹೊಂದಿದ್ದು ಕಂದು ಬಣ್ಣದ ಕುಡಿ ರೆಕ್ಕೆಗಳನ್ನು ಹೊಂದಿರುತ್ತವೆ. ಪ್ರೌಢ ಕೀಟಗಳು ಹಾಗೂ ಮರಿಗಳು ಸತತವಾಗಿ ಮೊಗ್ಗು ಹಾಗು ಕಾಯಿಗಳಿಂದ ರಸಹೀರುವುದರಿಂದ ಮೊಗ್ಗು ಹಾಗೂ ಸಣ್ಣ ಕಾಯಿಗಳ ಬೆಳವಣಿಗೆ ಕುಂಠಿತಗೊಂಡು ಉದುರುತ್ತವೆ. ಅಲ್ಲದೇ ಕಾಯಿಗಳು ಇರುಕಲಾಗಿ ಒಡೆಯುವವು. ಈ ರೀತಿಯ ಕಾಯಿಗಳಿಂದ ಬರುವ ಹತ್ತಿಯ ಗುಣಮಟ್ಟ ಕಡಿಮೆ ಆಗಿ ಉತ್ತಮ ಬೆಲೆ ಸಿಗುವುದಿಲ್ಲ.

ಸಾಂದರ್ಭಿಕ ಚಿತ್ರ

ಹೂಮೊಗ್ಗು ಮ್ಯಾಗಟ್ ಕೀಟ: ಈ ಕೀಟವು ಅತ್ಯಂತ ಚಿಕ್ಕದಾಗಿದ್ದು (2 ಎಮ್.ಎಮ್) ಇದರ ಮರಿ ಕೀಟಗಳು ಕೆಂಪು ಬಣ್ಣದಾಗಿದ್ದು ಮೊಗ್ಗು ಮತ್ತು ಹೂಗಳನ್ನು ಆಶ್ರಯಿಸಿ ಹಾವಳಿ ಮಾಡುವವು. ಇದರಿಂದ ಮೊಗ್ಗುಗಳು ಹೂವಾಗದೆ ಕಂದು ಬಣ್ಣಕ್ಕೆ ತಿರುಗುತ್ತವೆ. ಈ ಕೀಟದ ಹಾವಳಿಯಿಂದ ಯಾವುದೇ ಕಾಯಿಗಳು ಬೆಳವಣಿಗೆಯಾಗದೆ ಹತ್ತಿಯ ಬೆಳೆಯಲ್ಲಿ ಸುಮಾರು 5೦ ರಿಂದ 9೦ ಪ್ರತಿ ಶತ ಹಾನಿಯಾಗುತ್ತದೆ. ಈ ಕೀಟದ ನಿಯಂತ್ರಣಕ್ಕಾಗಿ ಮೆಲಾಥಿಯಾನ್ ಶೇ.50 ಇಸಿ ಕೀಟನಾಶಕವನ್ನು ಪ್ರತಿ ಲೀಟರ ನೀರಿಗೆ 2ಮಿಲಿಯಂತೆ ಬೆರೆಸಿ ಸಿಂಪರಣೆ ಮಾಡುವುದು.

ಈ ರಸಹೀರುವ ಕೀಟಗಳ ನಿರ್ವಹಣೆಗೆ ಕೇವಲ ಕೀಟನಾಶಕ ಬಳಕೆ ಮಾಡದೆ ಈ ಕೆಳಗಿನ ಸಮಗ್ರ ರೀತಿಯ ಕ್ರಮಗಳಿಂದ ನಿರ್ವಹಣೆ ಮಾಡುವುದು ಮುಖ್ಯವಾಗಿದೆ.

ಹೀರುವ ಕೀಟಗಳ ಗರಿಷ್ಟ ಆರ್ಥಿಕ ಸಂಖ್ಯೆಯನ್ನು ಅನುಸರಿಸಿ ಶೇ. 5 ರ ಬೇವಿನ ಬೀಜದ ಕಷಾಯ ಅಥವಾ ಬೇವಿನ ಕೀಟನಾಶಕ ಅಥವಾ ಅಂತರವ್ಯಾಪಿ ಕೀಟನಾಶಕಗಳಾದ 1.5 ಮಿ.ಲೀ. ಆಕ್ಸಿಡೆಮೆಟಾನ್ ಮೀಥೈಲ್ 25 ಇ.ಸಿ. ಅಥವಾ 2.೦ ಮಿ.ಲೀ. ಡೈಮಿಥೋಯೇಟ್ 3೦ ಇ.ಸಿ. ಅಥವಾ 1.೦ ಮಿ.ಲೀ. ಮೊನೋಕ್ರೋಟೊಫಾಸ್ 36 ಎಸ್.ಎಲ್ ಅಥವಾ ೦.5೦ ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಅಥವಾ ೦.2 ಗ್ರಾಂ ಅಸೆಟಮಿಪ್ರಿಡ್ 2೦ ಎಸ್.ಪಿ, ೦.2 ಗ್ರಾಂ ಥಯ ಮೆಥಾಕ್ಸಮ್ 25ಡಬ್ಲೂ ಜಿ ಕೀಟನಾಶಕವನ್ನು ಒಂದು ಲೀ. ನೀರಿಗೆ ಬೆರೆಸಿ ಹೆಕ್ಟೇರಿಗೆ 4೦೦-5೦೦ ಲೀ. ದ್ರಾವಣ ಸಿಂಪಡಿಸಬೇಕು.

ಮೇಲಿನ ಸಿಂಪರಣೆ ಸಾಧ್ಯವಾಗದಿದ್ದಲ್ಲಿ 1.೦ ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ಕೀಟನಾಶಕಗಳನ್ನು 2೦ ಮಿ.ಲೀ. ನೀರಿನಲ್ಲಿ ಬೆರೆಸಿ ಕುಡಿಯ ಭಾಗದ ಕಾಂಡಕ್ಕೆ ಒಂದು ಅಂಗುಲ ಸವರಬೇಕು. ಒಂದು ಹೆಕ್ಟೇರಿಗೆ 3೦- 4೦ ಮಿ.ಲೀ. ಕೀಟನಾಶಕ ಬೇಕಾಗುತ್ತದೆ.

ಮಿರಿಡ್ ತಿಗಣೆ ನಿರ್ವಹಣೆಗೆ ಮೊಗ್ಗುಗಳಲ್ಲಿ ಅವಿತ ಕೊಂಡಿರುವ ತಿಗಣೆಯನ್ನು ವೀಕ್ಷಿಸಿ ಅಸಿಫೇಟ 7೦ ಎಸ್.ಪಿ ಕೀಟನಾಶಕವನ್ನು ಪ್ರತಿ ಲೀ. ನೀರಿಗೆ 1 ಗ್ರಾಂ ನಂತೆ ಬೆರೆಸಿ ಸಿಂಪರಿಸಬೇಕು. ಅವಶ್ಯವಿದ್ದಲ್ಲಿ ಇದೇ ಸಿಂಪರಣೆಯನ್ನು 1೦-12 ದಿನಗಳ ಅಂತರದಲ್ಲಿ ಕೈಗೊಳ್ಳಬೇಕು.

ಹತ್ತಿ ಬೆಳೆಗೆ 8೦-9೦ ದಿನಗಳಾದಾಗ ಗಿಡದ ತುದಿ ಚಿವುಟಿ ತೆಗೆಯುವುದರಿಂದ ರಸ ಹೀರುವ ಕೀಟಗಳ ಬಾಧೆ ಕಡಿಮೆಗೊಳಿಸಬಹುದು. ಬಿಳಿ ನೊಣದ ನಿಯಂತ್ರಣಕ್ಕಾಗಿ ಶೇ. 5ರ ಬೇವಿನ ಬೀಜದ ಕಷಾಯ ಅಥವಾ ಬೇವಿನ ಕೀಟನಾಶಕ ಅಥವಾ ಪ್ರತಿ ಲೀ. ನೀರಿಗೆ 1.5 ಮಿ.ಲೀ. ಟ್ರೈಅಜೋಫಾಸ್ 4೦ ಇ.ಸಿ. ಕೀಟನಾಶಕಗಳನ್ನು ಬಿಳಿ ನೊಣಗಳ ಸಂಖ್ಯೆ ಆಧರಿಸಿ ಸಿಂಪಡಿಸಬೇಕು.

ಬಿಳಿ ನೊಣದ ಬಾಧೆ ಇದ್ದಾಗ ಪೈರಿಥ್ರಾಯಿಡ್ ಕೀಟನಾಶಕಗಳನ್ನು ಬಳಸಬಾರದು ಮತ್ತು ಎಕರೆಗೆ 2೦ ರಂತೆ ಹಳದಿ ಬಣ್ಣದ ಅಂಟಿನ ಬಲೆಗಳನ್ನು ಬೆಳೆಯ ಎತ್ತರಕ್ಕೆ ನೆಡಬೇಕು. ಮೈಟ್ ನುಶಿ ಕಂಡು ಬಂದರೆ ಪ್ರತಿ ಲೀಟರ್ ನೀರಿಗೆ 3.೦ ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ 2.5 ಮಿ.ಲೀ. ಢೈಕೋಫಾಲ್ 18.5 ಇ.ಸಿ. ಬೆರೆಸಿ ಸಿಂಪಡಿಸಬೇಕು.

ಬದನೆ ಬೆಳೆಯ ಕಾಯಿ ಕೊರಕ ರೋಗಕ್ಕೆ ಜೈವಿಕ ತಂತ್ರಜ್ನಾದ ಪರಿಹಾರ

ಬದನೆ ಬೆಳೆಯ ಕಾಂಡ ಕೊರಕ ಹಾಗೂ ಕಾಯಿ ಕೊರಕ ರೋಗಕ್ಕೆ ಜೈವಿಕ ತಂತ್ರಜ್ನಾದ ಮೂಲಕ ಪರಿಹಾರವೊಂದನ್ನು ಕಂಡುಹಿಡಿಯಲಾಗಿದೆ. ಇದೇನಿದು ಅಂದ್ಕೊಂಡ್ರಾ.... ಹೌದು. ಬದನೆ ಬೆಳೆಯ ಕಾಂಡ ಕೊರಕ ಹಾಗೂ ಕಾಯಿ ಕೊರಕ ಹುಳುವಿನ ನಿಯಂತ್ರಣ ಸಾಧ್ಯ, ಎಂದು ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಕೀಟಶಾಸ್ತ್ರ ವಿಭಾಗದ ವಿಜ್ನಾನಿಗಳು ಸಾಬೀತು ಮಾಡಿದ್ದಾರೆ.

ಪರೋಪ ಜೀವಿಯಾದ ಟ್ರೈಕೋಗ್ರಾಮ ಕಿಲ್ಲೋನಿಸ್ ಹಾಗೂ ಬ್ರಾಸಿಲಸ್ ಟುರೆನ್ ಜೆನಿಸ್ ಎಂಬ ದ್ರಾವಣವನ್ನು ಸಿಂಪಡಿಸುವುದರಿಂದ ಕೊರಕ ಹುಳುವಿನ ಮೊಟ್ಟೆ ಹಾಗೂ ತೆವಳುವ ಹುಳುವನ್ನು ನಿಯಂತ್ರಿಸಬಹುದು. ಗಿಡ ನಾಟಿ ಮಾಡಿದ 1ತಿಂಗಳ ನಂತರ ಟ್ರೈಕೋಗ್ರಾಮ ಕಿಲ್ಲೋನಿಸ್ ಎಂಬ ಪರೋಪಜೀವಿಯನ್ನು ಹಾಕಬೇಕು ಎಂದು ವಿಜ್ನಾನಿ ಡಾ.ಗಂಗಾ ವಿಶಾಲಾಕ್ಷಿ ತೀಳಿಸಿದ್ದಾರೆ.

ಬದನೆ ಹೂವಿನ ಪ್ರಮಾಣ ಹೆಚ್ಚಾಗಿದ್ದಾಗ ಬ್ರಾಸಿಲಸ್ ಟುರೆನ್ ಜೆನಿಸ್ ದ್ರಾವಣವನ್ನು 10ದಿನಗಳ ಅಂತರದಲ್ಲಿ ಪ್ರತಿ ಲೀಟರ್ ನೀರಿಗೆ ಒಂದು ಎಂ.ಎಲ್ ನಂತೆ 2 ಬಾರಿ ಸಿಂಪಡಿಸಬೇಕು. ಈ ವಿಧಾನದಿಂದ ಕಾಯಿಕೊರಕ ಹುಳುವಿನ ಸಂಖ್ಯೆಯು ಶೇ. 75ರಿಂದ 95ರವರೆಗೆ ಕಡಿಮೆಯಾಗಿ ಫಸಲು ಚನ್ನಾಗಿ ಬರುತ್ತದೆ. ಈ ವಿಧಾನವನ್ನು ಎಲ್ಲ ಜಾತಿಯ ಬದನೆ ಬೆಳೆಯಲ್ಲಿ ಕಾಂಡ ಮತ್ತು ಕಾಯಿಕೊರಕ ಹುಳುವಿನ ನಿಯಂತ್ರಣಕ್ಕಾಗಿ ಬಳಸಬಹುದು ಎಂದು ಅವರು ತಿಳಿಸುತ್ತಾರೆ.ಗಳೂರು ಹಾಗೂ ಸುತ್ತಮುತ್ತಲಿನ ಕೆಲ ಪ್ರದೇಶಗಳಲ್ಲಿನ ಬದನೆ ತೋಟಗಳಲ್ಲಿ ಈಗಾಗಲೇ ಈ ವಿಧಾನಗಳನ್ನು ಅಳವಡಿಸಲಾಗಿದ್ದು, ಕಾಯಿಕೊರಕ ಹುಳುಗಳನ್ನು ನಿಯಂತ್ರಿಸಲಾಗಿದೆ ಎಂದು ಅವರು ವಿವರಿಸುತ್ತಾರೆ.

ಕೀಟನಾಶಕಗಳ ಉಪಯೋಗಕ್ಕಾಗಿ ಪ್ರತಿ ವಾರ ಸುಮಾರು 1000-1500 ರೂ ಖರ್ಚಾಗುತ್ತದೆ. ಆದರೆ ಜೈವಿಕ ತಂತ್ರಜ್ನಾನ ವಿಧಾನದಿಂದ 150-200 ರೂ ಮಾತ್ರ ಖರ್ಚಾಗಲಿದೆಯಂತೆ.

ಅಲ್ಲದೇ ಈ ಸಂಸ್ಥೆಯಲ್ಲಿ ಅಧಿಕ ಪ್ರಮಾಣದಲ್ಲಿ ಪರೋಪಜೀವಿಗಳನ್ನು ಉತ್ಪಾದನೆ ಮಾಡುತ್ತಿದ್ದು, ರೈತರಿಗೆ ಕಡಿಮೆ ಬೆಲೆಯಲ್ಲಿ ಕೊಡಲು ಯೋಜಿಸಲಾಗಿದೆ. ಅಲ್ಲದೇ ಆಸಕ್ತಿಯುಳ್ಳ ರೈತರಿಗೆ ಈ ರೀತಿಯ ಜೈವಿಕ ತಂತ್ರಜ್ನಾನ ಹಾಗೂ ಜೀವಿಯ ಉತ್ಪತ್ತಿ ಮಾಡುವ ವಿಧಾನಗಳ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.

ಈ ತಂತ್ರಜ್ನಾನಗಳನ್ನು ಕಡಿಮೆ ಖರ್ಚಿನಲ್ಲಿ ಅಧಿಕ ರೈತರು ಅಳವಡಿಸಿಕೊಳ್ಳುವುದರಿಂದ ಅಧಿಕ ಲಾಭವಿದ್ದು, ಯಾವುದೇ ರಾಸಾಯನಿಕಗಳಿಲ್ಲದೇ ಜೈವಿಕ ಕೀಟ ನಿಯಂತ್ರಣದಿಂದ ಪರಿಸರ ರಕ್ಷಣೆಯನ್ನೂ ಮಾಡಬಹುದು ಎಂಬುದು ಇಲ್ಲಿನ ವಿಜ್ನಾನಿಗಳ ಅಭಿಪ್ರಾಯ.

ಸೋಯಾಬಿನ್ ಬೆಳೆಯ ಹಾನಿಕಾರಕ ಕೀಟಗಳು ಹಾಗೂ ಅವುಗಳ ನಿರ್ವಹಣೆ

 

ಸೋಯಾಬಿನ್ ಬೆಳೆಯು ಬೆಳಗಾವಿ ಜಿಲ್ಲೆಯ ಪ್ರಮುಖ ಎಣ್ಣೆಕಾಳು ಬೆಳೆಯಾಗಿದ್ದು ಮುಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ಬೆಳೆಯುತ್ತಾರೆ. ಈ ಬೆಳೆಯನ್ನು 2012-13ರ ಮುಂಗಾರು ಹಂಗಾಮಿನಲ್ಲಿ 115550 ಹೆಕ್ಟೇರ ಪ್ರದೇಶದಲ್ಲಿ ಬೆಳೆಯಲಾಗಿತ್ತು. ಜಿಲ್ಲೆಯ ಸರಾಸರಿ ಇಳುವರಿ ಹೆಕ್ಟೇರಿಗೆ 14.16 ಕ್ವಿಂಟಾಲ್ ಮತ್ತು ಒಟ್ಟು ಉತ್ಪಾದನೆ 16,36,520 ಕ್ವಿಂಟಾಲ್ ದಾಖಲಾಗಿದೆ.

ಜಗತ್ತಿನ ವಿವಿಧ ಭಾಗಗಳಲ್ಲಿ ಸೋಯಾಬಿನ ಬೆಳೆಗೆ 275 ಕೀಟಗಳು ಹಾನಿಕಾರಕವೆಂದು ಕಂಡು ಬಂದಿವೆ. ಅವುಗಳಲ್ಲಿ 15-2೦ ಕೀಟಗಳು ಮಾತ್ರ ಭಾರತ ದೇಶದಲ್ಲಿ ಸೋಯಾಬಿನ್ ಬೆಳೆಗೆ ಹಾನಿಕಾರಕವೆಂದು ಕಂಡುಕೊಳ್ಳಲಾಗಿದೆ. ಸೋಯಾಬಿನ್ ಬೆಳೆಯಲ್ಲಿ ಕೀಟಗಳಿಂದ ಶೇಕಡಾ 28 ರಿಂದ 3೦ ರಷ್ಟು ಹಾನಿಯಾಗುತ್ತಿರುವುದು ಕಂಡು ಬಂದಿದೆ.

ಕೀಟ ಪೀಡೆಗಳ ಪ್ರಮುಖವಾದವುಗಳೆಂದರೆ ಕಾಂಡದ ನೊಣ ಕೊಂಡಿಲು ಹುಳು, ನೀಲಿ ದುಂಬಿ, ಸುರುಳಿ ಹುಳು, ಎಲೆ ತಿನ್ನುವ ಹುಳು, ಕಾಯಿಕೊರಕಗಳು ಮತ್ತು ಹಿಲಿಯೋಥಿಸ್ ಕೀಟಗಳು ಪ್ರಮುಖವಾದವುಗಳು.

ಕಾಂಡದ ನೊಣ: ಮರಿಹುಳುಗಳು ಎಲೆ ತುಂಬು ಹಾಗೂ ಕಾಂಡವನ್ನು ಪ್ರವೇಶಿಸಿ ಕಾಂಡದ ಮಧ್ಯದ ಭಾಗವನ್ನು ತಿನ್ನುತ್ತವೆ. ಇದರಿಂದ ಹಾನಿಯಾದ ಭಾಗದಿಂದ ಮೇಲ್ಬಾಗಕ್ಕೆ ಆಹಾರ ಹಾಗೂ ನೀರು ಸಾಗಾಣಿಕೆ ಕುಂಠಿತಗೊಳ್ಳುವುದರಿಂದ ಈ ಭಾಗ ಮೊದಲು ಬಾಡಿ ನಂತರ ಒಣಗುತ್ತದೆ.

ಸುರಳಿ ಹುಳು: ತಿಳಿ ಹಳದಿ ಬಣ್ಣದ ಚಿಕ್ಕ ಮರಿ ಹುಳುಗಳು ಎಲೆಯನ್ನು ಕೊರೆದು ಸುರಂಗ ಮಾಡುತ್ತವೆ. ನಂತರ ದೊಡ್ಡ ಕೀಡೆಗಳು ಎಲೆಗಳನ್ನು ಕೂಡಿಸಿಕೊಂಡು ಒಳಗಿನಿಂದಲೇ ಎಲೆಯನ್ನು ಕೆರೆದು ತಿನ್ನುತ್ತವೆ. ಇದರಿಂದ ಬೆಳೆಯ ಎಲೆಗಳು ಸುಟ್ಟಂತೆ ಕಾಣುತ್ತವೆ.

ನೀಲಿದುಂಬಿ: ಈ ದುಂಬಿಯ ತಲೆಯ ಭಾಗ ಕೆಂಪು ಬಣ್ಣದ್ದಿದ್ದು ಇನ್ನುಳಿದ ದೇಹದ ಭಾಗ ಕಡು ನೀಲಿ ಬಣ್ಣದ್ದಿರುತ್ತದೆ. ಈ ದುಂಬಿಯು ಎಳೆಯ ಎಲೆ ಹಾಗೂ ಕುಡಿಯ ಭಾಗವನ್ನು ತಿನ್ನುತ್ತದೆ. ಕೀಟದ ಬಾಧೆ ಹೆಚ್ಚಾದಂತೆ ಎಲೆಗಳು ಕತ್ತರಿಸಿದಂತೆ ಕಾಣುತ್ತವೆ.

ಕೊಂಡಿಲು ಹುಳು: ಹಸಿರು ಹಾಗೂ ಕಂದು ಬಣ್ಣದ ಕೀಡೆಗಳು ಚಲಿಸುವಾಗ ಹೊಟ್ಟೆಯ ಭಾಗವನ್ನು ಕೊಂಡಿಯ ತರಹ ಬಾಗಿಸುತ್ತವೆ. ಮೊದಲ ಹಂತದ ಮರಿ ಕೀಡೆಗಳು ಎಲೆಗಳನ್ನು ಕೆರೆದು ಹಸಿರು ಭಾಗವನ್ನು ತಿನ್ನುವುದರಿಂದ ಎಲೆಯ ಅಳಿದುಳಿದ ಭಾಗ ಜಾಳಿಗೆಯಂತೆ ಕಾಣುತ್ತದೆ. ಇನ್ನು ಬಲಿತ ಕೀಡೆಗಳು ಎಲೆಗಳನ್ನು ಅಂಚಿನಿಂದ ಕತ್ತರಿಸಿ ತಿನ್ನುತ್ತವೆ.

ಸ್ಪೊಡೊಪ್ಟೆರಾ ಕೀಡೆ: ಮರಿ ಕೀಡೆಗಳು ಎಲೆಯ ಹಸಿರು ಭಾಗವನ್ನು ಕೆರೆದು ತಿನ್ನುತ್ತವೆ. ದೊಡ್ಡ ಕೀಡೆಗಳು ಎಲೆಗಳನ್ನು ಪೂರ್ತಿಯಾಗಿ ತಿನ್ನುತ್ತವೆ. ಎಳೆಯ ಕಾಯಿಯನ್ನು ಕೂಡಾ ಕತ್ತರಿಸಿ ತಿನ್ನುತ್ತವೆ. ಈ ಕೀಡೆಗಳು ರಾತ್ರಿ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತವೆ.

ಕಾಯಿ ಕೊರಕಗಳು: ಎಳೆಯ ಕಾಯಿ, ಕಾಯಿಯ ತೊಗಟೆ, ಕಾಳುಗಳನ್ನು ಸ್ಪೊಡೊಪ್ಟೆರಾ ಕೀಡೆ, ಹಿಲಿಯೊಥಿಸ ಕೀಡೆ ಮತ್ತು ಸಿಡಿಯಾ ಹುಳುಗಳು ತಿನ್ನುವುದರಿಂದ ಇಳುವರಿ ಕುಂಠಿತವಾಗುತ್ತದೆ.

ಸೋಯಾಬಿನ್ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ:

ಬೆಳೆಯ ವಿವಿಧ ಹಂತಗಳಲ್ಲಿ ಹಲವಾರು ಕೀಟ ಪೀಡೆಗಳು ಹಾನಿ ಮಾಡುವುದರಿಂದ ಸಮಗ್ರ ಪೀಡೆ ನಿರ್ವಹಣೆ ಹೆಚ್ಚು ಸೂಕ್ತವಾಗುತ್ತದೆ.

ಸಮಗ್ರ ಪೊಷಕಾಂಶಗಳ ಉಪಯೋಗ: ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಗಂಧಕ ಪೋಷಕಾಂಶಗಳನ್ನು ಹೆಕ್ಟೇರಿಗೆ 2೦: 6೦-8೦ : 2೦ : 2೦ ಕಿ.ಗ್ರಾಂ. ಪ್ರಮಾಣದಲ್ಲಿ, ಬಿತ್ತನೆ ಸಮಯದಲ್ಲಿ ಮಣ್ಣಿಗೆ ಸೇರಿಸಬೇಕು. ಮಣ್ಣು ಪರೀಕ್ಷೆಯ ಆಧಾರದ ಮೇಲೆ ಈ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಬಹುದು. ಸಾರಜನಕವನ್ನು ಶಿಫಾರಿತ ಪ್ರಮಾಣಕ್ಕಿಂತ ಹೆಚ್ಚಿಗೆ ಹಾಕುವುದರಿಂದ ಎಲೆ ತಿನ್ನುವ ಕೀಡೆಗಳು ಉಲ್ಬಣವಾಗುವುದನ್ನು ತಡೆಯಬಹುದು. ಸರಿಯಾಗಿ ಕಳಿತ ಸಾವಯವ ಗೊಬ್ಬರ ಹಾಕುವುದರಿಂದ ಗೊಣ್ಣೆ ಹುಳುವಿನ ಬಾಧೆ ಕಡಿಮೆ ಮಾಡಿಬಹುದು. ಬಿತ್ತನೆ ಸಮಯದಲ್ಲಿಯೇ ಎಲ್ಲ ರಸಗೊಬ್ಬರಗಳನ್ನು ಹಾಕಬೇಕು.

ತಳಿ: ಜೆ.ಎಸ್ 71-೦೫, ಜೆ.ಎಸ್ 8೦-21, ಜೆ.ಎಸ್ 93-೦5 ಮತ್ತು ಎಮ್.ಎ.ಯು.ಎಸ್ 45೦: ಈ ತಳಿಗಳು ಎಲೆ ತಿನ್ನುವ ಕೀಟ ಬಾಧೆಗೆ ಸಹನ ಶೀಲತೆ ಹೊಂದಿವೆ.

ಲೈಂಗಿಕಾಕರ್ಷಕ ಬಲೆ: ಮೋಹಕ ವಸ್ತು ಹೊಂದಿದ ಬಲೆಗಳನ್ನು ಬಳಸಿ ಗಂಡು ಪತಂಗಗಳನ್ನು ಆಕರ್ಷಿಸಿ ನಾಶಪಡಿಸಬಹುದು ಅಥವಾ ಪತಂಗ ಸಮೀಕ್ಷೆ ನಡೆಸಿ ಜೈವಿಕ ಅಥವಾ ರಸಾಯನಿಕ ಕ್ರಮಗಳನ್ನು ಕೈಗೊಂಡು ಕೀಟ ನಿರ್ವಹಣೆ ಮಾಡಬಹುದು. ಎಕರೆಗೆ 4 ಬಲೆ ಹಾಕಿ ಪತಂಗ ಆಕರ್ಷಿಸಿ ನಾಶಪಡಿಸಬೇಕು. ಬಿತ್ತನೆಯಾದ 15 ದಿನಗಳ ನಂತರ ಪತಂಗ ಸಮೀಕ್ಷೆ ಕೈಗೊಳ್ಳಲು ಬಲೆ ಬಳಸಬಹುದು.

ಪಕ್ಷಿ ಆಶ್ರಯ: ಗಿಡಗಳ ಟೊಂಗೆ ಮತ್ತು ಇನ್ನಿತರ ವಸ್ತು ಬೆಳೆಯ ಜಮೀನಿನಲ್ಲಿ ನಿಲ್ಲಿಸಿ ಪಕ್ಷಿಗಳು ಕುಳಿತುಕೊಳ್ಳಲು ಆಶ್ರಯ ಒದಗಿಸುವುದರಿಂದ, ಪಕ್ಷಿಗಳು ಕೀಡೆಗಳನ್ನು ಆರಿಸಿ ತಿನ್ನುತ್ತವೆ. ಹೀಗಾಗಿ ಕೀಡೆ ಸಂಖ್ಯೆ ಕಡಿಮೆಯಾಗುತ್ತದೆ ಪ್ರತಿ ಎಕರೆಗೆ 15-2೦ ಟೊಂಗೆಗಳನ್ನು ನಿಲ್ಲಿಸಬೇಕು. ಬಿತ್ತನೆಯಾದ 15 ದಿನಗಳ ನಂತರ ಪಕ್ಷಿ ಆಶ್ರಯಗಳನ್ನು ಬೆಳೆಯಲ್ಲಿ ನಿಲ್ಲಿಸಬೇಕು.

ಕೀಟಗಳು ಉಲ್ಬಣಗೊಳ್ಳದಂತೆ ನಿರ್ವಹಣೆ ಮಾಡುವ ಉಪಾಯಗಳು:

ಬಾಧೆಗೊಳಗಾದ ಸಸ್ಯ ನಾಶಪಡಿಸುವಿಕೆ: ಕಾಂಡ ಕೊರಕ, ತಂಬಾಕಿನ ಎಲೆ ತಿನ್ನುವ ಕೀಡೆಗಳು ಬಾಧೆಗೊಳಗಾದ ಸಸ್ಯಗಳ ಮೇಲೆ ಜಾಸ್ತಿಯಿರುವುದರಿಂದ ಇಂಥಹ ಸಸ್ಯಗಳನ್ನು ನಾಶಪಡಿಸುವುದರಿಂದ ಕೀಡೆ/ಕೀಟಗಳ ಪ್ರಮಾಣ ಕಡಿಮೆ ಮಾಡಬಹುದು. ಸಸ್ಯದ ಮೇಲೆ ಕೀಟ ಪ್ರಮಾಣ ಸಮೀಕ್ಷೆ ಮಾಡಿ ಬಾಧೆಗೊಳಗಾದ ಸಸ್ಯಗಳನ್ನು ನಾಶಪಡಿಸಬೇಕು.

ಜೈವಿಕ ಕೀಟನಾಶಕಗಳ ಉಪಯೋಗ: ಜೈವಿಕ ಕೀಟನಾಶಕಗಳನ್ನು ಉಪಯೋಗಿಸುವುದರಿಂದ ಪರಿಸರ ಮತ್ತು ಮಿತ್ರ ಕೀಟಗಳಿಗೆ ತೊಂದರೆಯಾಗದಂತೆ ಹಾನಿಕಾರಕ ಕೀಟ ಬಾಧೆ ಕಡಿಮೆ ಮಾಡಬಹುದು ಇವುಗಳಲ್ಲಿ ಹಲವಾರು ವಿಧಗಳಿವೆ.

ಬಿಟಿ ಕೀಟನಾಶಕ: ಬ್ಯಾಕ್ಟೀರಿಯಾದಿಂದ ಉತ್ಪಾದಿಸಲ್ಪಟ್ಟ ವಿಷವನ್ನು ಎಲೆ ತಿನ್ನುವ ಕೀಡೆಗಳನ್ನು ನಿರ್ವಹಿಸಲು 1ಲೀಟರ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಉಪಯೋಗಿಸಬಹುದು.

ಶಿಲೀಂದ್ರ ಕೀಟನಾಶಕ: ನೊಮೊರಿಯಾ ರಿಲಾಯಿ ಶಿಲೀಂದ್ರ ಜನ್ಯ ಕೀಟನಾಶಕವನ್ನು ಎಲೆ ತಿನ್ನುವ ಕೀಟ ಹತೋಟಿಗೆ 1 ಲೀಟರ ನೀರಿಗೆ 1 ಗ್ರಾಂ ಪ್ರಮಾಣದಲ್ಲಿ ಉಪಯೋಗಿಸಿ ಕೀಡೆ ನಿರ್ವಹಣೆ ಮಾಡಬಹುದು. ಈ ಕೀಟನಾಶಕಗಳನ್ನು ತಂಪಾದ ಹಾಗೂ ಹೆಚ್ಚು ಆರ್ಧ್ರತೆಯುಳ್ಳ ವಾತಾವರಣವಿರುವಾಗ ಸಿಂಪರಿಸುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದು.

ಪೊರೆ ಕಳಚುವಿಕೆ ಕ್ರಿಯೆ ಮುಂದೂಡಿಕೆ ಕೀಟನಾಶಕಗಳು:

ಪೊರೆ ಕಳಚುವಿಕೆ ಕ್ರಿಯೆ ಮುಂದೂಡುವುದರಿಂದ ಕೀಡೆ ಒಂದೇ ಹಂತದಲ್ಲಿ ಬಹಳ ದಿನಗಳವರೆಗೆ ಉಳಿದು ಸಾವನ್ನಪ್ಪುತ್ತವೆ. ಡೈಪ್ಲುಬೆಂಜುರಾನ 25 ಡಬ್ಲೂಪಿ - ೦.6 ಗ್ರಾಂ ಅಥವಾ ಲ್ಯುಫೆನುರಾನ 5 ಇ.ಸಿ. 1 ಮಿ.ಲಿ. ಒಂದು ಲೀಟರ ನೀರಿಗೆ ಬೆರೆಸಿ ಸಿಂಪರಿಸಬೇಕು.

ರಾಸಾಯನಿಕ ಕೀಟನಾಶಕಗಳ ಉಪಯೋಗ:

ಕೀಟಗಳ ಮೊಟ್ಟೆ ಕೀಡೆ ಮತ್ತು ಪ್ರೌಢ ಹಂತಗಳನ್ನು ನಾಶಪಡಿಸಲು ಪರಿಣಾಮಕಾರಿಯಾಗಿ ಕೀಟನಾಶಕಗಳನ್ನು ಸಿಂಪಡಿಸಬಹುದು. ಕ್ಲೋರೊ ಪೈರಿಫಾಸ 2೦ ಇ.ಸಿ. - 2 ಮಿ.ಲಿ. ಅಥವಾ ಟ್ರೈಜೋಫಾಸ 4೦ ಇ.ಸಿ. 2 ಮಿ.ಲಿ. ಅಥವಾ ಲ್ಯಾಂಬ್ಡಾಸಾಯಲಥ್ರಿನ - 5 ಇ.ಸಿ. - ೦.5 ಮಿ.ಲಿ. ಒಂದು ಲೀಟರ ನೀರಿಗೆ ಬೆರೆಸಿ ಸಿಂಪರಿಸುವುದರಿಂದ ಕೀಡೆಗಳನ್ನು ನಿರ್ವಹಿಸಬಹುದು. ಮೊಟ್ಟೆ ಹಾಗೂ ಕೀಡೆ ನಾಶಕ ಮಿಥೊಮಿಲ್ ೪೦ ಎಸ್.ಪಿ. 1 ಮಿ.ಲಿ. ಒಂದು ಲೀಟರ ನೀರಿಗೆ ಬೆರೆಸಿ ಸಿಂಪರಿಸಬೇಕು.

ಕಾಂಡ ಕೊರಕ ರಸ ಹೀರುವ ಕೀಟಗಳನ್ನು ನಿರ್ವಹಣೆ ಮಾಡಲು ಥೈಯಾಮಿಥಾಕ್ಸಾಮ್ - 25 ಡಬ್ಲೂಪಿ- ೦.2 ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. ೦.2 ಮಿ.ಲಿ. ಅಥವಾ ಮೊನೋಕ್ರೋಟೋಪಾಸ್ 36 ಎಸ್.ಎಲ್. 1ಮಿ.ಲಿ. ಒಂದು ಲೀಟರ ನೀರಿಗೆ ಬೆರೆಸಿ ಸಿಂಪರಿಸಬೇಕು.

ಈ ಮೇಲೆ ತಿಳಿಸಿದ ಕೀಟ ನಾಶಕಗಳನ್ನು ಕೈಚಾಲಿತ ಸ್ಪ್ರೇಯರ್ ಅಥವಾ ಪಂಪುಗಳಿಗೆ ಶಿಫಾರಿಸಲಾಗಿದೆ. ಪೆಟ್ರೋಲ್ ಅಥವಾ ಪವರ್ ಚಾಲಿತ ಪಂಪುಗಳಿಗೆ ಒಂದು ಲೀಟರ ನೀರಿಗೆ ಈ ಮೇಲೆ ಸೂಚಿಸಲಾದ ಕೀಟನಾಶಕಗಳ ಪ್ರಮಾಣವನ್ನು 2.5 ಪಟ್ಟು ಹೆಚ್ಚಿಸಿ ಉಪಯೋಗಿಸಬೇಕು.

ಮೂಲ : ಬ್ಯಾಂಗಲೋರ್ ವೇವ್ಸ್

ಕೊನೆಯ ಮಾರ್ಪಾಟು : 6/8/2020© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate