ಪ್ರತಿ ವರ್ಷ ಬರ¬ದಿಂದ ದೀಪಾ¬ವಳಿ ಹಬ್ಬ ಮಾಡಾಕ ಆಗೂ¬ದಿಲ್ರಿ. ಈ ವರ್ಷ ನಾವು ಬೆಳಿ ಚೆನ್ನಾಗಿಬಂದಿತ್ರಿ. ಆದ್ರ ನೆರಿ ಬಂದು ಎಲ್ಲಾ ಹಾಳಗಿ ಹೋತ್ರಿ. ದೊಡ್ಡ¬ಹ-ಬ್ಬಕ್ಕ ದೀಪ ಹಚ್ಚಾಕ ಮನಿನೇಕೊಚ್ಚಿ ಹೋಗ್ಯಾವ್ರಿ' ಎನ್ನು¬ವಾಗ ನೆರೆ ಪೀಡಿತ ಪ್ರದೇ¬ಶದ ರೈತನ ಕಣ್ಣಂ¬ಚಿ¬ನಿಂದ ನೀರು...
ನಿಜ, ಏನು ಆಗಬಾರದಿತ್ತೋ ಅದು ಆಗಬಾರದ ಸಮಯದಲ್ಲಿ ಆದರೆ ಕಷ್ಟ ಖಂಡಿತ. ಹಾಗೆಯೇ ಬರಬಾರದ ಸಮಯದಲ್ಲಿ ಬಂದ ಮಳೆಯ ಆರ್ಭಟಕ್ಕೆ ಸಹಸ್ರಾರು ರೈತರು ಬೆಳೆಯ ಜೊತೆಗೆ ನೆಲೆಯನ್ನು ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ. ನಾಲ್ಕು ದಿನದ ಮಳೆಯಲ್ಲಿ ಕೊಚ್ಚಿ ಹೋದ ಸಂಪತ್ತನ್ನು ಪುನಃ ಸಂಗ್ರಹಿಸಲು ನಲವತ್ತು ವರ್ಷ ಬೇಕಾಗಬಹುದು ಎಂದರೆ ಅತಿಶಯೋಕ್ತಿಯಲ್ಲ.
ಕೊಯ್ಲಿಗೆ ಬಂದ ಜೋಳ, ರಾಗಿ, ಭತ್ತದ ಗದ್ದೆಗಳು ಸಂಪೂರ್ಣ ನಾಶವಾಗಿದೆ. ಸಹಸ್ರಾರು ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯದ ಜನತೆಗೆ ಅನ್ನ ನೀಡುವ ಕೈಗಳು ತುತ್ತು ಅನ್ನಕ್ಕಾಗಿ ಕೈಚಾಚುವ ಪರಿಸ್ಥಿತಿ ಬಂದಿರುವುದು ವಿಪರ್ಯಾಸದ ಸಂಗತಿ.
ನೆರೆಯಿಂದ ಬೆಳೆ ಹಾನಿ: ನೆರೆ ಇಳಿಯುತ್ತಿದ್ದಂತೆ ಉಂಟಾದ ಹಾನಿಯ ಪ್ರಮಾಣ ಗೊತ್ತಾಗುತ್ತಿದೆ. ಆದರೆ ನಿಖರ ಮಾಹಿತಿ ಲಭ್ಯವಾಗುತ್ತಿಲ್ಲ. ಒಂದು ಅಂದಾಜಿನ ಪ್ರಕಾರ ಬೆಳಗಾವಿಯಲ್ಲಿ ಹತ್ತಿರ ಹತ್ತಿರ ಎರಡು ಲಕ್ಷ ಹೆಕ್ಟೇರ್ ಬೆಳೆನಾಶವಾಗಿದೆ. ಹಾವೇರಿಯಲ್ಲಿ ಒಂದು ಲಕ್ಷ, ಧಾರವಾಡದಲ್ಲಿ ಒಂದು ಲಕ್ಷ, ಗದಗದಲ್ಲಿ ತೊಂಬತ್ತೊಂಬತ್ತು ಸಾವಿರ, ಕಲಬುರ್ಗಿಯಲ್ಲಿ ಎರಡು ಲಕ್ಷ ಹೆಕ್ಟೇರ್ ಬಾಗಲಕೋಟೆಯಲ್ಲಿ ನಲವತ್ತು ಸಾವಿರ, ವಿಜಾಪುರದಲ್ಲಿ ಮೂವತ್ತೆರಡು ಸಾವಿರ ಹೆಕ್ಟೇರ್ ಭೂಮಿಯಲ್ಲಿನ ಬೆಳೆಗಳು ನಾಶವಾಗಿದೆ. ಬಳ್ಳಾರಿ, ಶಿರಗುಪ್ಪ, ಹೊಸಪೇಟೆ, ಕೊಯ್ಲಿಗೆ ಬಂದು ನಿಂತಿದ್ದ ಮೆಣಸು, ಭತ್ತ, ಮೆಕ್ಕೆ ಜೋಳ ನಾಶವಾಗಿದೆ.
ರೈತರ ಅಳಲು: `ನಾವು ಭತ್ತ, ಮೆಣಸಿನಕಾಯಿ, ಮೆಕ್ಕೆ ಜೋಳವನ್ನು ಬೆಳೆಯುತ್ತೆವೆ. ನಮಗೆ ಭತ್ತದ ಬೆಳೆಯಲ್ಲಿ ಒಂದು ಎಕರೆಗೆ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚಿಗೆ ನಷ್ಟವಾಗಿದೆ. ಮೆಕ್ಕೆ ಜೋಳ ಒಂದು ಎಕರೆಗೆ 30 ಚೀಲ ಬರುತ್ತಿತ್ತು. ಈಗ 10 ಚೀಲ ಬಂದರೆ ಹೆಚ್ಚಿಗೆ. ಕೆಂಪು ಮೆಣಸಿನ ಬೆಳೆ ಸಂಪೂರ್ಣ ನಾಶವಾಗಿದೆ. ಇದನ್ನು ಕಿತ್ತು ಹಾಕಬೇಕು. ನಮ್ಮೂರಿನ ಕೆರೆ
ಒಡೆದು ನೂರಾರು ಪಂಪ್ ಸೆಟ್ಗಳು ಕೊಚ್ಚಿಹೋಗಿದೆ. ಈಗ ನಮ್ಮ ಜಮೀನನನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಾಲ್ಕು ತಿಂಗಳಿಂದ ಉತ್ತಮ ಬೆಳೆ ಬಂದು ಒಳ್ಳೆಯ ಆದಾಯವನ್ನು ಪಡೆಯುತ್ತೇವೆ ಎನ್ನುವ ಆಸೆಯಲ್ಲಿದ್ದೇವು. ನಮ್ಮ ಆಸೆ, ಕನಸು ನಮ್ಮ ಬೆಳೆಯೊಂದಿಗೆ ನೆರೆಯಲ್ಲಿಯೇ ಕೊಚ್ಚಿ ಹೋಯಿತು' ಎಂದು ಸಂಕಟ ಪಡುತ್ತಾರೆ ಬಳ್ಳಾರಿಯ ಬಾಗನಹಟ್ಟಿಯ ರೈತ ಶಿವಶಂಕರ್.
ಗಂಗಾವತಿಯ ರೈತರ ಗೋಳು ಮತ್ತೊಂದು ರೀತಿಯದ್ದು. ಒಂದು ಕಡೆ ನೆರೆಯಿಂದ ಭತ್ತದ ಬೆಳೆ ನಾಶವಾದರೆ, ಮತ್ತೊಂದು ಕಡೆಯಲ್ಲಿ ತುಂಗಭದ್ರಾ ನಾಲೆ ಒಡೆದು ಬೆಳೆ ನಾಶವಾಗಿದೆ. ಇಲ್ಲಿನ ರೈತ ವೇಣುಗೋಪಾಲ್ ಅವರ ಪ್ರಕಾರ `ಸಾವಿರಾರು ಎಕರೆ ಭತ್ತದ ಹೊಲಗಳಲ್ಲಿ ಎಕರೆಗೆ ಹತ್ತು ಚೀಲ ಬೆಳೆಯು ಸಿಗುವುದಿಲ್ಲ. ನೆರೆಯಿಂದ ಆದಷ್ಟೇ ಹಾನಿ. ನಾಲೆ ಒಡೆದು ಆಗಿದೆ. ನಾಲೆಯ ನೀರನ್ನೇ ಆಶ್ರಯಿಸಿ ಸಿಂದನೂರು, ಗಂಗಾವತಿ, ಮಸ್ಕಿ, ಮಾನ್ವಿ ಯ ಸಾವಿರಾರು ರೈತರು ಭತ್ತ, ಕೆಂಪು ಮೆಣಸಿನಕಾಯಿ, ಹತ್ತಿ ಬೆಳೆಯುತ್ತಾರೆ. ಈ ಬಾರಿ ನಾಲೆ ಒಡೆದು ಬೇಕಾದ ಸಮಯಕ್ಕೆ ನೀರನ್ನು ಬಿಡಲಾಗದೆ ಬೆಳೆಗಳು ಒಣಗಿ ಹೋಗಿದೆ. ನಾವು ಒಂದು ಕಡೆ ನೀರು ಹೆಚ್ಚಾಗಿ ಬೆಳೆ ಹಾನಿಯಾದರೆ, ಮತ್ತೊಂದು ಕಡೆ ನೀರಿಲ್ಲದೆ ಸಂತ್ರಸ್ತರಾಗಿದ್ದೇವೆ' ಎನ್ನುತ್ತಾರೆ.
ಗದಗದ ರೈತರ ಸಂಕಷ್ಟ ಮತ್ತೊಂದು ರೀತಿಯದ್ದು. ಇಲ್ಲಿನ ರೈತ ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ಇವರನ್ನು ಮಾತನಾಡಿಸಿದಾಗ ನೆರೆಗೆ ಒಳಗಾದ ರೈತರ ಕಷ್ಟವನ್ನು ಎಳೆಎಳೆಯಾಗಿ ಬಿಡಿಸಿಡುತ್ತಾರೆ. `ಗದಗದ ಹುಲಗನಗೇರಿ, ಮೆಣಸಿ, ಕಾಡಗೂಳಿ, ಕುರವಿನಕೊಪ್ಪದಲ್ಲಿ ರೈತರು ಅಕ್ಷರಶಃ ನಿರ್ಗತಿಕರಾಗಿದ್ದಾರೆ. ಈ ಭಾಗದಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಈ ಬಾರಿ ರೈತರು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಆಗಿದ್ದೆ ಬೇರೆ. ತಾನೊಂದು ಬಗೆದರೆ ದೈವ ಮತ್ತೊಂದು ಬಗೆಯಿತು ಎನ್ನುವ ಹಾಗೆ. ನಮ್ಮ ಅನ್ನವಾದ ಜೋಳ, ರಾಗಿ ಎಲ್ಲ ನೀರು ಪಾಲಾಗಿದೆ. ಈರುಳ್ಳಿ ಬೆಳೆ ಸಂಪೂರ್ಣ ಕೊಳೆತು ಹೋಗಿದೆ. ಈಗ ನಮ್ಮ ರೈತರ ಹೊಲಕ್ಕೆ ಹೋಗಿ ನೋಡಿದರೆ ಹೂಳು ಮಾತ್ರ ಇದೆ. ನೆರೆ ಬೆಳೆಯನ್ನು ಮಾಯ ಮಾಡಿಕೊಂಡು ಹೋಗಿದೆ. ನೇಗಿಲು, ನೊಗ ನೀರು ಪಾಲಾಗಿದೆ. ರೈತರು ಶಾಲೆ, ರೈಲು ನಿಲ್ದಾಣದಲ್ಲಿ ವಾಸಿಸುತ್ತಿದ್ದಾರೆ.
ರೋಣ ತಾಲೂಕಿನಲ್ಲಿ ಬೆಣ್ಣೆಹಳ್ಳ ಮತ್ತು ಮಲಪ್ರಭಾ ನದಿ ಸೇರುವ ಜಾಗದಲ್ಲಿ ಯಾವಾಗಲೂ ನೆರೆ ಆಗುತ್ತಿತ್ತು. ಆದರೆ ಈ ಬಾರಿ ನಿರೀಕ್ಷೆಗೂ ಮೀರಿ ನೆರೆ ಬಂದು ಬಿಟ್ಟಿತು. ಬೆಣ್ಣೆಹಳ್ಳದ ಬಗ್ಗೆ ಬಹಳಷ್ಟು ವರ್ಷದಿಂದ ಗೊತ್ತಿರುವ ಜನಪ್ರತಿನಿಧಿಗಳು ಮೌನ ವಹಿಸಿರುವುದು ನೋವಿನ ಸಂಗತಿ. ಇದು ಒಂದೆಡೆಗೆ ಆದರೆ ಬಡ ರೈತರು ಮನೆಯಲ್ಲಿ ಕಣಜ ಮಾಡಿಕೊಂಡು ದಾಸ್ತಾನು ಮಾಡಿಟ್ಟುಕೊಂಡ ಬೆಳೆಯೆಲ್ಲ ಕೊಚ್ಚಿ ಹೋಗಿದೆ' ಎನ್ನುತ್ತಾರೆ.
ಸೋಯಾ ಬೀನ್, ಭತ್ತ, ರಾಗಿ, ಜೋಳ, ಸೂರ್ಯಕಾಂತಿ, ತೊಗರಿ, ಮೆಣಸು, ದ್ರಾಕ್ಷಿ, ದಾಳಿಂಬೆ, ತರಕಾರಿ, ಕಬ್ಬು, ಶೇಂಗಾ, ಮುಂತಾದ ಬೆಳೆಗಳು ನಾಶವಾಗಿದೆ. ಸದಾ ಕಷ್ಟದಲ್ಲಿಯೇ ಜೀವನ ಸಾಗಿಸುವ ರೈತನಿಗೆ ನೆರೆ ಎನ್ನುವುದು ಗಾಯದ ಮೇಲೆ ಬರೆ ಹಾಕಿದಂತೆ ಆಗಿದೆ. ಬೆಳೆ ಬೆಳೆಯಲು ಹಾಕಿದ ಬಂಡವಾಳ ಸಮೇತ ಬೆಳೆಯು ಇಲ್ಲದಂತಾಗಿದೆ. ಜೊತೆಯಲ್ಲಿ ಖಾಸಗಿ ಸಾಲ, ಬ್ಯಾಂಕ್ ಸಾಲ ತೀರಿಸುವ ಹೊಣೆಯು ರೈತನಿಗಿದೆ.
ಇಂತಹ ರೈತರಿಗೆ ಪರಿಹಾರದ ಜೊತೆ ಆತ್ಮ ಸ್ಥೈರ್ಯ ಮುಖ್ಯ. ನೆರೆ ಸಂತ್ರಸ್ತ ರೈತರು ಬದುಕುವ ಉತ್ಸಾವನ್ನೇ ಕಳೆದು ಕೊಂಡಿದ್ದಾರೆ. ಇವರಿಗೆ ಪರಿಹಾರ ನೀಡಿದರೆ ಸಾಲದು ಬದುಕುವ ಉತ್ಸಾಹವನ್ನು ಮೂಡಿಸುವ ಅಗತ್ಯವಿದೆ.
ಮುಗಿಸುವ ಮುನ್ನ: ಬದುಕಲು ಅವಶ್ಯಕವಾದ ಆಹಾರ ಬೆಳೆಗಳು ನಾಶವಾಗಿರುವುದು ಕೇವಲ ಬೆಳೆ ಬೆಳೆಯುವ ರೈತನಿಗೆ ಮಾತ್ರವಲ್ಲ ಅದನ್ನು ಉಣ್ಣುವ ರಾಜ್ಯದ ಇತರ ಭಾಗದ ಜನತೆಯ ಮೇಲೂ ಪರಿಣಾಮ ಬೀರಲಿದೆ.ಮೂಲ : ರೈತಾಪಿ
ಕೊನೆಯ ಮಾರ್ಪಾಟು : 2/15/2020
ಮಳೆನೀರನ್ನು ಬಹು ಹಂತದ ಮೆಟ್ಟಿಲು ಹೊಂಡಗಳಿಂದ ಕೊಯ್ಲು ಮಾಡಲ...
ಪರ್ಯಾಯ ಕೃಷಿ ಪದ್ದತಿ ಹತ್ತಿಯಿಂದ ಜೋಳಕ್ಕೆಕಲಿಕೆಯ ಲಾಭವನ್ನ...
ಮಳೆ ಹೆಚ್ಚಿದಾಗ ಮಲೆನಾಡಿನ ಗದ್ದೆ, ಬಿಲಗಳಲ್ಲೆಲ್ಲ ನೀರು ತು...
ಲಿಂಗಣ್ಣ ಗೌಡರವರ ತೋಟ, ಹಾವೇರಿ