অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಅಡಿಕೆ ಕೃಷಿಕರ

ಅಡಿಕೆ ಕೃಷಿಕರ

ವ್ಯವಸ್ಥಿತ ತೋಟವೆಂದರೆ ನೋಡಲು ಚೆನ್ನಾಗಿ ಇರಬೇಕು. ಬೆಳೆಯ ಹೊರತಾಗಿ ಬೇರೆ ಸಸ್ಯಗಳು ಬೆಳೆಯಬಾರದು. ಅನಗತ್ಯ ಸಸಿಗಳ ನಿಯಂತ್ರಣಕ್ಕಾಗಿ ಇಂದು ಬಹಳಷ್ಟು ಔಷಧಿಗಳು ಇವೆ. ದೊಡ್ಡ ಹಿಡುವಳಿಯನ್ನು ಹೊಂದಿರುವ ಕೃಷಿಕರು ಕಳೆನಾಶಕವನ್ನು ಬಳಸುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಇದು ಸಾವಯವ ಕೃಷಿಗೆ ಪೂರಕವಾದುದಲ್ಲಾ. ಕಳೆ ನಿಯಂತ್ರಣ ಮತ್ತು ಪೋಷಕಾಂಶ ನಿರ್ವಹಣೆ ಸಲುವಾಗಿ ಸಾವಯವ ಕೃಷಿಕರು ಮುಚ್ಚಿಗೆಯನ್ನು ಮಾಡುತ್ತಿದ್ದಾರೆ. ಮುಚ್ಚಿಗೆ ಎನ್ನುವುದು ಸದ್ಯದಲ್ಲಿ ಎಲ್ಲಾ ಬೆಳೆಗಳಿಗೆ ಬಳಸುವ ಕೃಷಿ ವಿಧಾನಗಳಲ್ಲಿ ಒಂದಾಗಿದೆ. ಶಿರಸಿ-ಸಿದ್ದಾಪುರ ಭಾಗದ ಅಡಿಕೆ ಕೃಷಿಕರು ಮುಚ್ಚಿಗೆಯನ್ನು ಬಹಳ ಹಿಂದಿನಿಂದಲೂ ಮಾಡುತ್ತಿದ್ದಾರೆ.


ಅಡಿಕೆ ತೋಟದಲ್ಲಿ ಮುಚ್ಚಿಗೆ : ಈಗಿನ ತಲೆಮಾರಿನ ಅಡಿಕೆ ಕೃಷಿಕರಿಗೆ ಮುಚ್ಚಿಗೆಯನ್ನು ಎಷ್ಟು ವರ್ಷದಿಂದ ಮಾಡುತ್ತಿದ್ದೀರಿ? ಎಂಬ ಪ್ರಶ್ನೆಯನ್ನು ಕೇಳಿದರೆ ಅವರ ಹತ್ತಿರ ಸಿಗುವ ಉತ್ತರ ನನಗೆ ಗೊತ್ತಿರುವ ಹಾಗೇ ನಮ್ಮ ಅಜ್ಜನ ಕಾಲದಿಂದಲೂ ಮುಚ್ಚಿಗೆ ಯನ್ನು ಮಾಡುತ್ತಿದ್ದಾರೆ. ನಾವು ಮುಂದುವರೆಸಿಕೊಂಡು ಬಂದಿದ್ದೇವೆ ಎನ್ನುತ್ತಾರೆ. ಅಂದರೆ ಅಡಿಕೆ ಕೃಷಿಕರು ಮುಚ್ಚಿಗೆ ಎನ್ನುವುದನ್ನು ಪರಂಪರಾಗತವಾಗಿ ರೂಢಿಸಿಕೊಂಡು ಬಂದಿದ್ದಾರೆ ಎಂದು ತಿಳಿಯಬಹುದು.
ಎರಡು ಅಡಿಕೆ ಮರಗಳ ಸಾಲುಗಳನ್ನು ಹೊಂದಿರುವ ಭರಣಗಳಿಗೆ ಮುಚ್ಚಿಗೆಯನ್ನು ಮಾಡುತ್ತಾರೆ. ಸಾಮಾನ್ಯವಾಗಿ ಇನ್ನೇನು ಮಳೆಗಾಲ ಪ್ರಾರಂಭವಾಗುತ್ತದೆ ಎನ್ನುವಾಗ ಮುಚ್ಚಿಗೆ ಮಾಡಲು ಶುರು ಮಾಡುತ್ತಾರೆ. ಬೇಸಿಗೆಯಲ್ಲಿ ಒಟ್ಟು ಮಾಡುವ ಎಲೆದರಕನ್ನು ಮುಚ್ಚಿಗೆಯಾಗಿ ಬಳಸುತ್ತಾರೆ. ಅಡಿಕೆ ಸೋಗೆ, ಹಾಳೆ, ಕರಡ (ಹುಲ್ಲು) ಸೊಪ್ಪು ಮತ್ತು ಬಾಳೆಎಲೆಗಳನ್ನು ತೋಟಕ್ಕೆ ಮುಚ್ಚುತ್ತಾರೆ.


ಮುಚ್ಚಿಗೆ ಪ್ರಯೋಜನ : ಮುಚ್ಚಿಗೆ ಸಾಂಪ್ರದಾಯಿಕವಾಗಿ ಅನುಸರಿಸಿಕೊಂಡು ಬಂದ ಕೃಷಿಯಾದರೂ ವೈಜ್ಞಾನಿಕವಾಗಿಯೂ ಒಪ್ಪಿದ ಕೃಷಿಯಾಗಿದೆ. ಮುಚ್ಚಿಗೆಯಿಂದ ಹಲವಾರು ರೀತಿಯ ಉಪಯೋಗವಿದೆ.


ಕಳೆ ನಿಯಂತ್ರಣ : ಅಡಿಕೆ ತೋಟದಲ್ಲಿ ಅನಗತ್ಯ ಕಾಳುಗಳು ಬೆಳೆಯುವುದು ಹೆಚ್ಚು. ಇದನ್ನು ಕೈಯಿಂದ ಕಿತ್ತು ನಿಯಂತ್ರಣದಲ್ಲಿಡುವ ರೂಢಿ ಇದೆ. ಕೆಲಸಗಾರರ ಸಮಸ್ಯೆ ಇಂದು ಹೆಚ್ಚಿರುವುದರಿಂದ ಇದನ್ನು ಮಾಡುವುದು ಕಷ್ಟಸಾಧ್ಯ. ಅದಕ್ಕಾಗಿ ಮುಚ್ಚಿಗೆಯನ್ನು ಮಾಡುತ್ತಾರೆ. ದಪ್ಪದಾಗಿ ಮುಚ್ಚಿಗೆಯನ್ನು ಮಾಡುವುದರಿಂದ ತಾನಾಗಿಯೇ ಕಳೆ ನಿಯಂತ್ರಣವಾಗುತ್ತದೆ.


ಪೋಷಕಾಂಶ : ಮುಚ್ಚಿಗೆ ಕೇವಲ ಕಳೆ ನಿಯಂತ್ರಣಕ್ಕಾಗಿ ಮಾತ್ರವಲ್ಲ, ತೋಟಕ್ಕೆ ಉತ್ತಮ ಪೋಷಕಾಂಶವು ಸಹ ಹೌದು. ಸೋಗೆ, ದರಕುಗಳನ್ನು ಮುಚ್ಚುವುದರಿಂದ ಗಿಡಗಳಿಗೆ ನೀಡಿದ ಗೊಬ್ಬರದ ಅಂಶ ಆವಿಯಾಗುವುದಿಲ್ಲ. ಎಲೆದರಕು ಮತ್ತು ಸೋಗೆ ಇತ್ಯಾದಿ ಮುಚ್ಚಿಗೆ ಮಾಡಿದ ವಸ್ತುಗಳ ಅಲ್ಲಿಯೇ ಕರಗಿ ಎರೆಹುಳುಗಳನ್ನು ಉತ್ಪತ್ತಿ ಮಾಡುತ್ತದೆ. ಮಣ್ಣು ಬರಡಾಗದೇ ಸದಾ ಫಲವತ್ತಾಗಿಡಲು ಇದು ಸಹಕಾರಿಯಾಗುತ್ತದೆ.

ಆದ್ರತೆ : ಸಾಮಾನ್ಯವಾಗಿ ಹಿಂದಿನ ಅಡಿಕೆ ತೋಟದಲ್ಲಿ ನೀರಾವರಿ ವ್ಯವಸ್ಥೆ ಇರಲಿಲ್ಲ. ಅವುಗಳ ಬದಲಾಗಿ ಮುಚ್ಚಿಗೆಯನ್ನು ಹೆಚ್ಚು ಮಾಡಿದರೆ ಮಳೆಗಾಲದಲ್ಲಿ ಬಿದ್ದ ನೀರನ್ನು ಮುಚ್ಚಿಗೆ ಹಿಡಿದಿಟ್ಟುಕೊಳ್ಳುತ್ತದೆ. ಭೂಮಿಯ ತಂಪು ಕಡಿಮೆಯಾಗುವುದಿಲ್ಲ. ಮುಚ್ಚಿಗೆ ಮಾಡದ ತೋಟಗಳಿಗೆ ಹೆಚ್ಚಾಗಿ ಚಳಿಗಾಲದ ಕೊನೆ ಅಂದರೆ ಜನವರಿ ತಿಂಗಳಿಂದ ನೀರು ಬಿಡುವ ಅಗತ್ಯ ಬಹಳ ಕಡೆಗೆ ಇರುತ್ತದೆ. ಆದರೆ ಮುಚ್ಚಿಗೆ ಮಾಡಿದ ತೋಟಕ್ಕೆ ನೀರನ್ನು ಹಾಯಿಸುವ ಪ್ರಮೇಯವಿರುವುದಿಲ್ಲ. ಮಣ್ಣಿನಲ್ಲಿ ಸದಾ ತೇವಾಂಶವಿರುತ್ತದೆ. ಮುಚ್ಚಿಗೆ ಮಾಡಿದ ತೋಟದಲ್ಲಿ ಸಾಮಾನ್ಯವಾಗಿ ಬಿರು ಬೇಸಿಗೆ ಕಾಲದಲ್ಲೂ ಮಣ್ಣನ್ನು ಉಂಟೆ ಕಟ್ಟುವಷ್ಟು ಮೃದುವಾಗಿರುತ್ತದೆ. ಭೂಮಿ ಉಷ್ಣವಾದರೆ ಅಡಿಕೆ ಹೂ ಕಾಯಿ ಕಟ್ಟುವ ಸಮಯಕ್ಕೆ ಉದುರುವ ಸಾಧ್ಯತೆ ಇರುತ್ತದೆ. ಮುಚ್ಚಿಗೆಯಿಂದ ತೋಟದ ಆದ್ರತೆ ಯಾವಾಗಲೂ ಇದ್ದು ಹೂ ಉದುರುವುದು ಕಂಡು ಬರುವುದಿಲ್ಲ.


ಕಚ್ಚಾ ಸಾಮಗ್ರಿ : ಅಡಿಕೆ ತೋಟಗಳಿಗೆ ಮುಚ್ಚಿಗೆಯನ್ನು ಮಾಡಿದರೆ ಗೊಬ್ಬರ ತಯಾರಿಸಲು ಕಚ್ಚಾ ಸಾಮಗ್ರಿಗಳನ್ನು ಹುಡುಕುವ ತಾಪತ್ರಯ ಇರುವುದಿಲ್ಲ. ಮುಚ್ಚಿಗೆ ಮಾಡಿದ ಒಂದು ವರ್ಷಕ್ಕೆ ಇದನ್ನೇ ಕಚ್ಚಾವಸ್ತುಗಳಾಗಿ ಬಳಸಿಕೊಳ್ಳಬಹುದು. ಇಂದು ಬಂದಿರುವ ರಸಾವರಿ ಪೋಷಕಾಂಶ ನೀಡುವ ಕ್ರಮಕ್ಕೆ ಅಳವಡಿಸಬೇಕಾದರೆ ಮುಚ್ಚಿಗೆಯಿದ್ದರೆ ಅನುಕೂಲ.


ಮಳೆಗಾಲದ ಪ್ರಾರಂಭದಲ್ಲಿ ನಾವು ಅಡಿಕೆ ಸಸಿಗಳನ್ನು ನೆಡುತ್ತೇವೆ. ಅಂತಹ ಗಿಡಗಳಿಗೆ ಮಣ್ಣು ಸಿಡಿಯಬಾರದು. ಮಳೆಗಾಲದಲ್ಲಿ ದೊಡ್ಡ ಅಡಿಕೆ ಮರದಿಂದ ಬೀಳುವ ನೀರು ನೆಲಕ್ಕೆ ಬಿದ್ದಾಗ ಅರಲುಮಣ್ಣು ಸಣ್ಣ ಗಿಡಗಳ ಸುಳಿಗಳಿಗೆ ಸಿಡಿದರೆ ಗಿಡ ಸಾಯುವ ಸಾಧ್ಯತೆ ಇರುತ್ತದೆ. ಈ ಕಾರಣದಿಂದ ನಾನು ಮುಚ್ಚಿಗೆಯನ್ನು ಪ್ರತಿವರ್ಷವೂ ತಪ್ಪದೇ ಮಾಡುತ್ತೇನೆ ಎಂದು ಉತ್ತರಕನ್ನಡ ಸಿದ್ದಾಪುರದ ಕೃಷಿಕ ಹೊನಮಾಂವ ಭಾಸ್ಕರ ಹೇಳುತ್ತಾರೆ.


ಮಧುಕೇಶ್ವರ ಬಕ್ಕೇಮನೆ ಅವರ ಪ್ರಕಾರ ಮುಚ್ಚಿಗೆಯಿಂದ ಕಳೆಗಳು ನಿಯಂತ್ರಣಕ್ಕೆ ಬರುತ್ತವೆ. ಅಲ್ಲದೇ ನಾವು ಅಡಿಕೆಮರಗಳಿಗೆ ನೀಡುವ ಪೋಷಕಾಂಶ ಆವಿಯಾಗದೇ ಅಲ್ಲಿಯೇ ಇರುತ್ತದೆ. ಇಳುವರಿಯಲ್ಲಿಯೂ ಕೂಡ ಯಾವುದೇ ಏರು-ಪೇರಾಗದೆ ಒಂದೇ ರೀತಿಯ ಇಳುವರಿ ಬರುತ್ತದೆ.
ಅಡಿಕೆ ಕೃಷಿಕರು ಸದಾ ಕಾರ್ಮಿಕರ ಕೊರತೆಯನ್ನು ಅನುಭವಿಸುತ್ತಿದ್ದರೂ ತಾವು ಅನುಸರಿಸಿಕೊಂಡು ಬಂದ ಮುಚ್ಚಿಗೆ ಮಾಡುವ ಕೆಲಸವನ್ನು ಬಿಡದೇ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಹಲವಾರು ಅನುಕೂಲಗಳಿರುವುದರಿಂದ ಮುಚ್ಚಿಗೆ ಕೃಷಿ ಪದ್ಧತಿಯನ್ನು ಅಡಿಕೆ ಕೃಷಿಗೆ ಮಾತ್ರವಲ್ಲದೆ ಬೇರೆ ಬೇರೆ ಕೃಷಿಗಳಿಗೆ ಪರಿಣಾಮಾತ್ಮಕವಾಗಿ ಅಳವಡಿಸಿಕೊಂಡರೆ ಉತ್ತಮ.

ಮೂಲ : ರೈತಾಪಿ

ಕೊನೆಯ ಮಾರ್ಪಾಟು : 7/10/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate