ಕೃಷಿ ಅರಣ್ಯ ಮಾಡುವಾಗ ನಾವು ನಮ್ಮ ಹೊಲದಲ್ಲಿ ನೀರಿನ ಉಪಯೋಗವನ್ನು ಎರಡು ದೃಷ್ಟಿಯಿಂದ ನೋಡಬೇಕು.ಒಂದು ಬೆಳೆ.ಇನ್ನೊಂದು ಮರ.ಈಗ ಕೊಟ್ಟೂರಿನಲ್ಲಿ ವಾರ್ಷಿಕ ಸರಾಸರಿ ಮಳೆ ೮೦ ಸೆಂ.ಮೀ ಇದೆ ಎಂದುಕೊಳ್ಳೋಣ. ಅಲ್ಲಿ ಒಂದು ಎಕರೆಯಲ್ಲಿ ಎಷ್ಟು ನೀರು ಬರುತ್ತದೆ? ಸಧ್ಯಕ್ಕೆ ಹೊಲಕ್ಕೆ ಬೇರೆ ಕಡೆಯಿಂದ ಹರಿದು ಬರುವ ನೀರನ್ನು ಬತ್ತು ಜಮೀನಿನಲ್ಲಿ ಬರುವ ನೀರನ್ನು ಮಾತ್ರ ತೆಗೆದುಕೊಳ್ಳೋಣ. ೮೦ ಸೆಂ. ಮೀ. ವಾರ್ಷಿಕ ಮಳೆ ಅಂದಾಗ ಒಂದು ಎಕರೆಗೆ ಮೂರುವರೆ ಸಾವಿರ ಕ್ಯುಬಿಕ್ ಮೀಟರ್ ಆಯಿತು. ಈ ನೀರು ಎಗ ನಮಗೆ ಬೆಳೆ ಮತ್ತು ಮರ ಎರಡಕ್ಕೂ ಬೇಕು.
ಶೇಂಗಾ, ಮೆಕ್ಕೆ ಜೋಳಗಳಿಗೆ ಒಂದು ಬೆಳೆ ಸಮರ್ಪಕವಾಗಿ ಬೆಳೆಯಲು ೪೦ ಸೆಂ.ಮೀ. ನೀರು ಬೇಕು. ಹೀಗಾಗಿ ೧೭೫೦ ಕ್ಯು.ಮೀಟರ್ ಬೆಲೆಗೆ ಹೋಯಿತು ಎಂದು ಲೆಕ್ಕ ಹಾಕಿಕೊಳ್ಳೋಣ.
ಇಲ್ಲಿ ಮೊದಲನೇ ತೊಂದರೆ ಅಂದರೆ, ಪ್ರತಿ ವರ್ಷವೂ ೮೦ ಸೆಂ.ಮೀ. ಮಳೆ ಬರುವುದಿಲ್ಲ. ಇದರಿಂದ ರೈತರಿಗೆ ಬೆಳೆ ಹಾಳಗಬಾರದು. ಮರ ಸ್ವಲ್ಪ ಕಡಿಮೆಯಾದರೂ ಅಡ್ಡಿಯಿಲ್ಲ. ಆದ್ದರಿಂದ ನಾವೀಗ ಕೊಟ್ಟೂರಿನಲ್ಲಿ ಬರುವ ಅತಿ ಕಡಿಮೆ ಮಳೆಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ. ೧೦೦ ವರ್ಷದ ಮಳೆಯ ಲೆಕ್ಕಾಚಾರದ ಪ್ರಕಾರ ಕೊಟ್ಟೂರಿನಲ್ಲಿ ಅತಿ ಕಡಿಮೆ ಮಳೆ ಎಂದರೆ ೪೫ ಸೆಂ.ಮೀ. ಕೊಟ್ಟೂರಿನಲ್ಲಿ ಕಳೆದ ೧೦೦ ವರ್ಷದಲ್ಲಿ ೪೫ ಸೆಂ ಮೀ. ಮಳೆ ಯಾವ ವರ್ಷವೂ ಬಂದಿಲ್ಲ. ಹಾಗಾಗಿ ನಾವು ಇಲ್ಲಿ ೮೦ ಸೆಂ ಮೀ ತೆಗೆದುಕೊಳ್ಳದೆ ೪೫ ಸೆಂ ಮೀ. ತೆಗೆದುಕೊಳ್ಳಬೇಕು. ನಾವು ಯೋಜನೆ ಮಾಡುವಾಗ ಅತ್ಯಂತ ಕೆಟ್ಟ ಮಳೆಯ ವರ್ಷಕ್ಕೆ ಯೋಜನೆ ಮಾಡಬೇಕು. ಹಾಗೆ ತೆಗೆದುಕೊಂಡಾಗ ನಮಗೆ ಸಿಕ್ಕುವುದು ೨೦೦೦ ಕ್ಯು. ಮೀಟರ್. ಇದರಲ್ಲಿ ೧೭೫೦ ಕ್ಯು.ಮೀ. ಬೆಲೆಗೆ ಹೋಗಿದೆ. ಉಳಿಯುವುದು ೨೫೦ ಕ್ಯು ಮೀಟರ್. ಒಂದು ದಿನಕ್ಕೆ ಒಂದು ಮರಕ್ಕೆ ೨೫ ಲೀಟರ್ ನೀರು ಬೇಕು. ವರ್ಷಕ್ಕೆ ೪೦೦ ದಿನ (ಸ್ವಲ್ಪ ಹೆಚ್ಚೇ ಇರಲಿ) ಎಂದು ತೆಗೆದುಕೊಂಡರೆ ೧೦೦೦೦ ಲೀಟರ್ ಆಯಿತು. ೨೫೦ ಕ್ಯು. ಮೀಟರ್ ಗೆ ೨,೫೦,೦೦೦ ಲೀಟರ್ ಆಯಿತು. ೧೦ ಸಾವಿರ ಲೀಟರ್ ಗೆ ಒಂದು ಮರ ಆದರೆ ೨,೫೦,೦೦೦ ಲೀಟರಿಗೆ (ಒಂದು ಎಕರೆಗೆ) ೨೫ ಮರ.
ಕೊಟ್ತೂರಲ್ಲಿ ಯಾವುದೇ ರೈತ ಅತ್ಯಂತ ಬರಗಾಲದ ಸ್ಥಿತಿಯಲ್ಲಿ ೨೫ ಮರಗಳನ್ನು ಹಾಕಬಹುದು. ಮೇಲೆ ಹೆಚ್ಚಿದಾಗ ಇದಕ್ಕಿಂತ ಹೆಚ್ಚಿಗೆ ಮರಗಳನ್ನು ಬೆಳೆಯಬಹುದು. ಉತ್ತಮ ಮಳೆ ಮತ್ತು ಹೊರಗಡೆಯಿಂದ ಹರಿದು ಬರುವ ನೀರು ಇದೆಲ್ಲಾ ಬೋನಸ್ ಇದ್ದ ಹಾಗೆ. ಈ ನೀರನ್ನು ನಾವು ಭೂಮಿಯ ಒಳಪದರಗಳಿಗೆ ಇಂಗಿಸುತ್ತಿರುತ್ತೇವೆ. ಭೂಮಿ ಒಳಗಡೆ ಇದು ಒಂದು ಟ್ಯಾಂಕ್ ನಲ್ಲಿ ನೀರು ಇಟ್ಟಹಾಗೆ ಶೇಖರವಾಗಿರುತ್ತದೆ.ಈ ವರ್ಷ ಮಳೆ ಬರಲಿಲ್ಲ. ಆದರೆ ಹಿಂದಿನ ವರ್ಷದ ಖಾತೆಯಲ್ಲಿ ಜಮಾ ಮಾಡಿದ್ದು, ಹಿಂದಿನ ವರ್ಷಗಳ ಮಳೆಗಳಲ್ಲಿ ಶೇಖರಿಸಿದ ನೀರು ಎಲ್ಲೂ ಹೋಗಿಲ್ಲ. ಇದು
ನಮ್ಮ ಮನಸ್ಸಿನಲ್ಲಿ ಯಾವಾಗಲೂ ಇರಬೇಕು. ಈ ಲೆಕ್ಕಾಚಾರದಿಂದ ೨೫ ಮರಗಳು ಎಂದು ಹಾಕಿದ ಲೆಕ್ಕಾಚಾರವನ್ನು ೨೫೦ ಮರಗಳೆವರೆಗೂ ಹಿಗ್ಗಿಸಬಹುದು. ಅತ್ಯಂತ ಕಡಿಮೆ ಮಳೆ ಎಲ್ಲಾ ನೀರಿನ ಪೂರೈಕೆಯ ಸಾಧ್ಯತೆಗಳನ್ನು ತೆಗೆದುಕೊಂಡಾಗ ೨೫೦ ಮರಗಳು.
ನಾವು ಹಾಕುವ ಮರಗನ್ನು ನಾವು ವಿಂಗಡಣೆ ಮಾಡಿಕೊಳ್ಳಬೇಕು. ಈ ಮರಗಳನ್ನು ಎರಡು ಭಾಗ ಮಾಡಿಕೊಳ್ಳೋಣ. ಮೊದಲನೆಯದು, ಗ್ಯಾರಂಟಿ ಮಳೆಯನ್ನೂ ಆಧರಿಸಿ ಬೆಳೆಯುವಂತಹ ಮರಗಳು. ಏನೇ ಕಷ್ಟ ಬಂದರೂ ಇದಕ್ಕೆ ನೀರಿನ ಕೊರತೆ ಆಗುವುದಿಲ್ಲ. ನಾವು ತುಂಬಾ ಇಷ್ಟಪಡುವ, ಬೆಲೆಕೊಡುವ ಮರಗಳು ಇವು. ಇವು ಹೆಚ್ಚು ಆದ್ಯತೆಯ ಮರಗಳು.
ಇನ್ನೊಂದು ಕಡಿಮೆ ಆದ್ಯತೆಯ ಮರಗಳು. ಈ ಆದ್ಯತೆಯನ್ನು ನಿರ್ಧಾರ ಮಾಡುವವರು ರೈತರೇ. ಅದು ರೈತರ ಆಯ್ಕೆ. ಯಾವ ಜಾತಿಯ ಮರಗಳಿಗೆ ಹೆಚ್ಚು ಆದ್ಯತೆ ಕೊಡುತ್ತೇವೆ ಮತ್ತು ಅವುಗಳ ಸಂಖ್ಯೆ ಎಷ್ಟು ಇರಬೇಕು? ಕಡಿಮೆ ಆದ್ಯತೆ ಕೊಡುವ ಮರಗಳ ಜಾತಿ ಯಾವುದು? ಅವುಗಳ ಸಂಖ್ಯೆ ಎಷ್ಟಿರಬೇಕು?
ಕೊಟ್ಟೂರಲ್ಲಿ ಕನಿಷ್ಠ ೨೫ ಗಿಡ ಹಾಕಬಹುದು ಎಂದು ತೀರ್ಮಾನ ಮಾಡಿಕೊಂಡೆವು. ಅದರ ಜೊತೆಗೆ, ಹೊಲಕ್ಕೆ ಹರಿದು ಬರುವ ನೀರು ಮಣ್ಣಿನಡಿ ಶೇಖರಿಸಿದ ನೀರು, ಹೆಚ್ಚು ಮಳೆ ಇದನೆಲ್ಲ ಲೆಕ್ಕ ಹಾಕಿ ೨೫೦ ಮರಗಳವರೆಗೂ ಹಾಕಬಹುದು ಎಂದು ಯೋಚಿಸಿದೆವು.ಒಂದು ಸರಾಸರಿ ೫ ಎಕರೆಯಿಂದ ನೀರು ಹರಿದು ಬರುತ್ತದೆ ಮತ್ತು ಮಣ್ಣು ಹತ್ತಡಿ ಆಳ ಇದೆ ಅಂದುಕೊಂಡರೆ ಹೆಚ್ಚು ಆದ್ಯತೆಯ ೧೫೦ ಮರಗಳನ್ನು ಧಾರಾಳವಾಗಿ ಹಾಕಬಹುದು.
ಕಡಿಮೆ ಆದ್ಯತೆಯ ಮರಗಳನ್ನು ೧೦೦-೮೦೦ ವರೆಗೂ ಹಾಕಬಹುದು. ಹೇಗೆಂದರೆ, ಸರಾಸರಿ ವಾರ್ಷಿಕ ೮೦ ಸೆಂ.ಮೀ ಮಳೆ ಇದ್ದಾಗ ಅನೇಕ ವರ್ಷಗಳು ಸರಾಸರಿಗಿಂತ ಹೆಚ್ಚು ಮಳೆಯಾಗಿರುತ್ತದೆ. ದೊಡ್ದದಾಗುವವರೆಗೂ ಮರಗಳು ೨೫ ಲೀಟರ್ ತೆಗೆದುಕೊಳ್ಳುವುದಿಲ್ಲ. ನೀರು ಉಳಿಯುತ್ತದೆ. ಈ ಮಿಕ್ಕಿರುವ ನೀರನ್ನು ಉಪಯೋಗಿಸಿ ನಾವು ಕಡಿಮೆ ಆದ್ಯತೆಯ ಮರಗಳನ್ನು ಹಾಕಬಹುದು.ಯಾವುದೋ ಕೆಲ ವರ್ಷ ಜೋರು ಮಳೆ ಬಂದಾಗ ಆ ನೀರು ಹತ್ತಡಿಯ ಮಣ್ಣಿನಲ್ಲಿ ಶೇಖರಾಗಿರುತ್ತದೆ. ಆ ನೀರನ್ನ ಉಪಯೋಗಿಸಿ ಸುಮಾರು ೮೦೦ ಗಿಡಗಳವರೆಗೆ ಬೆಳೆಯಬಹುದು.
ಈಗ ಕಡಿಮೆ ಆದ್ಯತೆಯ ಮತ್ತು ಹೆಚ್ಚು ಆದ್ಯತೆಯ ಮರಗಳಿಗೆ ವ್ಯತ್ಯಾಸ ನೋಡೋಣ? ಕೆಲವರು ನನಗೆ ಮೇವಿನ ಮರಗಳು ಬೇಕು. ಜಾನುವಾರು ಸಾಕಣೆ ನಮ್ಮ ಆದ್ಯತೆ ಎಂದಿರಿ. ಹಾಗೆಯೇ ಸಾಗವಾನಿ ಬೇಕು ಅಂದಿರಿ. ಗೊಬ್ಬರದ ಮರಗಳು ನಮಗೆ ಅಗತ್ಯವಿಲ್ಲ ಎಂದಿರಿ. ಅಂಥವರಿಗೆ ನಾವು ಮೇವಿನ ಮರಗಳು ಮತ್ತು ಸಾಗವಾನಿಯನ್ನು ಅಧಿಕ ಆದ್ಯತೆಯ ಪಟ್ಟಿಯಲ್ಲಿ ಹಾಕಿ ಗೊಬ್ಬರದ ಮರಗಳನ್ನು ಕಡಿಮೆ ಆದ್ಯತೆಯ ಪಟ್ಟಿಯಲ್ಲಿ ಹಾಕುತ್ತೇವೆ. ಕಡಿಮೆ ಮಳೆ ಬಿದ್ದ ವರ್ಷಗಳಲ್ಲಿ ಶಿವರಾತ್ರಿ ವೇಳೆಗೆ ಕಡಿಮೆ ಆಧ್ಯತೆಯ ಮರಗಳನ್ನು ಸಂಪೂರ್ಣ ನೆಲಮಟ್ಟಕ್ಕೆ ಸವರಿ ಬಿಡುತ್ತೇವೆ. ಹೆಚ್ಚು ಆದ್ಯತೆಯ ಮರಗಳನ್ನು ಮುಟ್ಟುವುದಿಲ್ಲ. ಅವು ಹಾಗೆ ಬೆಳೆಯುತ್ತಿರುತ್ತವೆ. ಮಳೆ ಚೆನ್ನಾಗಿ ಅದಾಗ ಕಡಿಮೆ ಆದ್ಯತೆಯ ಮರಗಳನ್ನು ಬೆಳೆಯಲು ಬಿಡುತ್ತೇವೆ. ತುಂಬಾ ನೀರು ಕಡಿಮೆಯಾದರೆ ಅವನ್ನು ಬೇರು ಸಮೇತ ಕಿತ್ತೂ ಹಾಕೋಣ. ಎನೂ ತೊಂದರೆ ಇಲ್ಲ. ನರ್ಸರಿ ನಮ್ಮದೇ. ಒಂದು ಸಸಿಗೆ ೫೦ ಪೈಸೆ. ಏನೂ ನಷ್ಟ ಇಲ್ಲ.
ಇಷ್ಟೊಂದು ಸಂಖ್ಯೆಯಲ್ಲಿ ಮರಗಳು ಬೇಕಾಗಿರುವುದು ಗೊಬ್ಬರಕ್ಕೆ ಮತ್ತು ನೀರು ಇಂಗುವುದಕ್ಕೆ, ತೇವಾಂಶ ಹಿಡಿದಿಡಲಿಕ್ಕೆ. ಇದು ನಾವು ಹೇಳುವ ವಿಜ್ಞಾನದಲ್ಲಿ ಬಹಳ ವಿಶೇಷವಾದ ಅಂಶ. ನೀವು ಹೆಚ್ಚು ಮರ ಹಾಕದೆ ಇದ್ದಾರೆ ನೀರು ಇಂಗುವುದಿಲ್ಲ. ನೀರು ಇಂಗುವುದು ಕೇವಲ ಗುಣಿಯಿಂದಲ್ಲ, ಬೇರಿನಿಂದ. ನಾವು ಇಷ್ಟೊಂದು ಮರಗಳನ್ನು ಹಾಕದೆ ಇದ್ದಾರೆ, ಬೇರುಗಳು ಬೆಳೆದು ಗಟ್ಟಿಆಗಿರುವ ಮಣ್ಣಿನ ಪದರಗಳನ್ನು ಒಡೆಯುವುದಿಲ್ಲ. ಹೀಗೆ ಒಡೆಯದೆ ಇದ್ದಾರೆ ನೀರು ಒಳಗಡೆ ಇಳಿಯುವುದಿಲ್ಲ. ಬೇರಿಗೆ ಬಂಡೆಗಳನ್ನು ಸೀಳಿಕೊಂಡು ಕೆಳಕ್ಕೆ ಹೋಗುವ ಶಕ್ತಿ ಇದೆ. ನಂತರ ಬೇರು ಸತ್ತು ಹೋದರೂ ಚಿಂತೆಯಿಲ್ಲ. ಎರಡು ವರ್ಷ ಆದಮೇಲೆ ಪೂರ್ತಿ ಕಡಿದು ಹಾಕಿದರೂ ಅದರ ಕೆಲಸವನ್ನು ಅದು ಮಾಡಿರುತ್ತದೆ. ಬೇರು ಜಾಸ್ತಿಯಾದಂತೆ ಎರೆ ಹುಳುಗಳು ಜಾಸ್ತಿಯಾಗ್ತವೆ. ಅಗಾ ನೀರಿನ ಇಂಗುವಿಕೆ ಇನ್ನೂ ಜಾಸ್ತಿಯಾಗುತ್ತದೆ.
ಹೆಚ್ಚು ಮತ್ತು ಕಡಿಮೆ ಆದ್ಯತೆಯ ಮರಗಳು ಎನ್ನುವುದು ನಮಗೆ ಅರ್ಥ ಆದ ಮೇಲೆ ಮತ್ತು ಮರಗಳ ಸಂಖ್ಯೆ ತೀರ್ಮಾನವಾದ ಮೇಲೆ ಯಾವ ಜಾತಿಯ ಗಿಡಗಳನ್ನು ಹಾಕಬೇಕು ಅನ್ನುವುದು ಮುಂದಿನ ಪಶ್ನೆ.ಜಾತಿಯನ್ನು ಆಯ್ಕೆ ಮಾಡುವಾಗ ನಮ್ಮ ಉದ್ದೇಶ ಸ್ಪಷ್ಟವಾಗಿರಬೇಕು. ನನಗೆ ಮೇವಿನ ಗಿಡಗಳೆ ಬೇಕು ಎಂದು ತೀರ್ಮಾನಿಸಿದ ಮೇಲೆ ಜಾತಿಯನ್ನು ಹುಡುಕುವುದು ಸುಲಭ. ಇದನ್ನು ಹುಡುಕಲು ನಾವು ಕಂಪುತೆರ್ನಲ್ಲಿ ಒಂದು ಪ್ರೋಗ್ರಾಮ್ ಮಾಡಿದ್ದೇವೆ ಈ ಪ್ರೋಗ್ರಾಮ್ ನಲ್ಲಿ ನನ್ನ ಬಳಿ ೨೨೫ ಜಾತಿಯ ಮರಗಳ ಬಗ್ಗೆ ಪ್ರಪಂಚದಲ್ಲಿ ಸಿಗುವ ಎಲ್ಲ ಮಾಹಿತಿ ಇದೆ. ಸುಮಾರು ೨೦ ಸಾವಿರ ಪುಟದ ಮಾಹಿತಿ ಇದೆ. ೫-೬ ವರ್ಷದ ಪರಿಶ್ರಮ ಇದು. ಕರಿ ಜಾಲಿ, ಹೆಬ್ಬೆವು, ಬೇವು, ಶಿವನೆ ಹೀಗೆ ನಮಗೆ ಪರಿಚಯವಿರುವಂಥ ಎಲ್ಲ ಮರ ಗಿಡಗಳು ಇವೆ. ಪ್ರತಿ ಮರದ ಉತ್ಪನ್ನ ಎಷ್ಟು? ಎಷ್ಟು ಬೇಗ ಬೆಳೆಯುತ್ತದೆ? ಅದರ ಆರೈಕೆ ಹೇಗೆ? ಹೀಗೆ ಗಿಡಗಳ ಇಡೀ ಜಾತಕವನ್ನು ನಾವು ಮಾದಿಟ್ಟಿದ್ದಿವಿ. ರೈತರು ಇದನ್ನು ಉಪಯೋಗಿಸಿ ತಮಗೆ ಯಾವ ಜಾತಿ ಮರ ಬೇಕು ಅನ್ನುವುದನ್ನು ನಿರ್ಧಾರ ಮಾಡಿ ಆಯ್ಕೆ ಮಾಡಲು ಸುಲಭ ಆಗುವಂತೆ. ರೈತರ ಉಪಯೋಗಿಗಳ ಮೇಲೆ ೨೨೫ ಮರಗಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿದ್ದೆವೆ.
೧. ಮರಮುಟ್ಟುಗಳು. ೨.ಮೇವು.೩.ಬೇಲಿ.೪.ಮರಮುಟ್ಟು + ಮೇವು. ೫.ಮರಮುಟ್ಟು+ಮೇವು+ಬೇಲಿ.೬.ಅಲಂಕಾರಿಕ + ಮರಮುಟ್ಟು. ೭.ಔಷದ+ಮರಮುಟ್ಟು. ೮.ಔಷದ + ಮೇವು. ೯.ಉರುವಲು. ಹೀಗೆ ಇನ್ನೂ ಅನೇಕ ವಿಭಾಗಗಳು ನಮ್ಮಲ್ಲಿ ಇವೆ. ಹಣ್ಣಿನ ಗಿಡಗಳ ಬಗ್ಗೆ ತೋಟಗಾರಿಕೆ ಇಲಾಖೆಯಲ್ಲಿ ಮಾಹಿತಿ ಸಿಗುವುದರಿಂದ ಅದನ್ನು ಇಲ್ಲಿ ಒಳಗೊಳಿಸಿಲ್ಲ. ಯಾವುದು ಇಲ್ಲವೋ ಅದನ್ನು ನಾವು ಮಾಡಿದ್ದೇವೆ. ಬೇಕಾದರೆ ಹಣ್ಣಿನ ಗಿಡಗಳನ್ನು ಸಹ ಸೇರಿಸಬಹುದು. ಉದಾ:ನಿಮಗೆ ಮರಮುಟ್ಟು+ಮೇವು ಎರಡೂ ಇರುವಂಥವು ೨೫ ಜಾತಿ ಸಿಗಬಹುದು. ನಿಮ್ಮ ಉದ್ದೇಶಕ್ಕೆ ತಕ್ಕಂತೆ ಮರಗಳ ಪ್ರತ್ಯೇಕ ಪಟ್ಟಿ ಮಾಡಿ ಕೊಡುತ್ತೇವೆ.
ಲಾಭಕ್ಕೆ ಸಂಬಂಧಿಸಿ ಎರಡು ಅಂಶ ಬರುತ್ತದೆ. ಒಂದು, ಮರದ ಸಲೆಯೊಂದಕ್ಕೆ ಬೆಲೆ ಎಷ್ಟು? ಇನ್ನೊಂದು, ಒಂದು ವರ್ಷಕ್ಕೆ ಒಂದು ಎಕರೆಗೆ ಎಷ್ಟು ಸಲೆ ಬೆಳೆಯಬಹುದು? ಸಲೆ ಅಂದರೆ ಒಂದು ಘನ ಅಡಿ ಈ ಮಾಹಿತಿ ಕೂಡ ನಮ್ಮಲ್ಲಿ ಇದೆ. ಉದಾಹರಣೆಗೆ, ಹೆಬ್ಬೇವಿಗೆ ಸಲೆಗೆ ೬೦೦-೧೦೦೦ ರೂ, ನೀಲಗಿರಿ ೪೦೦-೭೦೦ ರೂ, ಜಾಲಿ ೪೦೦-೮೦೦ ರೂ, ಸಿಲ್ವರ್ ಓಕ್ ೬೦೦-೯೦೦ ರೂ, ತೇಗ ೩೦೦೦ ರೂ ದಾಟಿದೆ. ಹೂವರಸಿ ಮರಕ್ಕೆ ಕರ್ನಾಟಕದಲ್ಲಿ ರೇಟ್ ಇಲ್ಲ. ಹೊಸೂರಿನಲ್ಲಿ (ತಮಿಳುನಾಡು) ಸಲೆಗೆ ೧೨೦೦ ರೂ ಇದೆ. ಹೀಗೆ ಲಾಭಕ್ಕಾಗಿ ಮರ ಬೆಳೆಯುತ್ತೇವೆ ಎಂದಾಗ ಮಾರುಕಟ್ಟೆಯಲ್ಲಿ ಎಷ್ಟು ರೇಟ್ ಇದೆ ಎಂದು ತಿಳಿದುಕೊಂಡಿರಬೇಕು.
ಎರಡನೆಯದು, ಒಂದು ವರ್ಷಕ್ಕೆ ಓದು ಎಕರೆಗೆ ಎಷ್ಟು ಸಲೆ ಬೆಳೆಯುತ್ತದೆ? ಉದಾಹರಣೆ, ಬೆಂಗಳೊರಿನ ಸುತ್ತಮುತ್ತ ಇರುವ ನೀಲಗಿರಿ ತೋಪನ್ನು ಗಮನಿಸಿ ( ಯಾರೂ ನೀಲಗಿರಿ ಬೆಳೆಯುವುದು ಬೇಡ!) ಒಂದು ಎಕರೆಗೆ ಐದು ವರ್ಷಕ್ಕೆ ಎಪ್ಪತ್ತು ಟನ್ ಬೆಳೆಯುತ್ತಾರೆ. ಒಂದು ವರ್ಷಕ್ಕೆ ೧೪ ಟನ್ ಆಯ್ತು. ೬೪೦ ಸಲೆ. ಮರದ ಈ ಬೆಳವಣಿಗೆ ನೀರು, ಮಣ್ಣು, ಜಾತಿ, ಹವಾಮಾನ , ವಾತಾವರಣ, ಪೋಷಕಾಂಶ, ಗಿಡಗಳ ಸಾಂದ್ರತೆ, ಇತ್ಯಾದಿಗಳನ್ನು ಮೇಲೆ ಅವಲಂಭಿಸಿರುತ್ತದೆ.
ಟ್ರಿಂಚ್ ಕಂ ಬಂಡ್ ಬಗ್ಗ ಹಿಂದೆಯೇ ಚರ್ಚಿಸಿದ್ದೇವೆ. ಇದನ್ನು ಮಾಡುವಾಗ ಇಳಿಜಾರಿನಲ್ಲಿ ಕೆಳಗೆ ಹೋದ ಹಾಗೆ ಬದುವಿನ ಎತ್ತರ ಜಾಸ್ತಿಯಾಗುತ್ತದೆ. ಅಂದರೆ ಗುಣಿಗಳನ್ನು ಆಳ ಮಾಡುತ್ತೇವೆ. ಹೀಗೆ ಇಳಿಜಾರಿನಲ್ಲಿ ಕೆಳಗೆ ಬರುತ್ತಾ ಗುಣಿ ಆಳ ಜಾಸ್ತಿಯಾಗುತ್ತಾ ಬದುವಿನ ಎತ್ತರ ಜಾಸ್ತಿಯಾಗುತ್ತಾ ಹೋಗುತ್ತದೆ. ನೀರು ಹರಿದು ಬರುತ್ತಾ ಗುಣಿಯಲ್ಲಿ ನಿಂತುಕೊಳ್ಳುತ್ತಾ ಮುಂದಕ್ಕೆ ಹೋಗುತ್ತದೆ. ಗುಣಿಯಲ್ಲಿ ನಾವು ನಮ್ಮ ಸಾವಯವ ಪದಾರ್ಥವನ್ನು ತುಂಬುತ್ತೇವೆ, ಪಾರ್ಥೇನಿಯಮ್, ಲಂಟಾನ ಏನಾದರೂ, ನೀರು ಮತ್ತು ಸಾವಯವ ಪದಾರ್ಥ ಒಟ್ಟಿಗೆ ಗುಣಿಯಲ್ಲಿ ಸೇರಿದಾಗ ಗುಣಿ ಗೊಬ್ಬರದ ಗುಂಡಿ ಆಗುತ್ತದೆ.
ಇಲ್ಲಿ ಗುನಿಗಳ ಮಧ್ಯ ಮಧ್ಯ ಜಾಗ ಇರುತ್ತದೆ. ಗುಣಿ ಮೇಲೆ ಇರುವ ಬದು ನೆತ್ತಿಗೆ ಹೋಗುತ್ತದೆ. ಅದು ತುಂಡಾಗುವುದಿಲ್ಲ, ಏಕ ಹೋಗುತ್ತೆ. ಗುಣಿಗಳನ್ನು ಮಾತ್ರ ಕಾಲುವೆ ಥರ ಮಾಡಬಾರದು.ಮಧ್ಯ ಮಧ್ಯ ಅಡ್ಡ ಜಾಗ ಬಿಡಬೇಕು. ಆಗ ಈ ಗುಣಿಗಳನ್ನು ತುಂಬಿರುವ ಗೊಬ್ಬರ ಗಿಡಗಳಿಗೆ ಚೆನ್ನಾಗಿ ಸಿಗುತ್ತದೆ.
ನಮ್ಮ ವಿನ್ಯಾಸದಲ್ಲಿ ಮರಗಳನ್ನ ನೆಡುವುದು ಗುಣಿ ಮತ್ತು ಬದುವಿನಲ್ಲಿ ಬೇರೆ ಎಲ್ಲೂ ಅಲ್ಲ. ಗುಣಿ ಯಾವಗಲೂ ಒಂದೇ ಮೀಟರ್ ಅಗಲ ಇರುತ್ತದೆ. ಈ ಗುಣಿ ತೆಗೆದು ಮಣ್ಣನ್ನು ಪಕ್ಕಕ್ಕೆ ಹಾಕುವಾಗ ಕನಿಷ್ಠ ಒಂದಡಿ ದೂರದಲ್ಲಿ ಹಾಕಬೇಕು. ಇದು ನಮ್ಮ ವಿನ್ಯಾಸದಲ್ಲಿ ಬಹಳ ಮುಖ್ಯ. ಪಕ್ಕ ಹಾಕಬಾರದು. ಒಂದಡಿ ಕಂಠ ಬಿಟ್ಟು ಹಾಕಬೇಕು.
ಗುಣಿ ಒಂದು ಘನ ಮೀಟರ್ ಇದ್ದಾಗ ಎತ್ತಿ ಹಾಕಿದ ಮಣ್ಣು ಕನಿಷ್ಠ ಒಂದೂವರೆ ಮೀಟರ್ ಬರುತ್ತದೆ. ನಾವು ಗಿಡ ಮರ ಹಚ್ಚುವುದು ಈ ಬದುವಿನಲ್ಲಿ.ಈ ಗುಣಿ ಮತ್ತು ಬದುಗಳಲ್ಲೇ ಸಸಿಗಳನ್ನ ಯಾಕೆ ನೆಡಬೇಕು, ಬೇರೆ ಕಡೆ ಯಾಕೆ ನೆಡಬಾರದು ಅಂದರೆ, ಗುಣಿ ತೋಡಿ ಪಕ್ಕದಲ್ಲಿ ಹೊಸ ಮಣ್ಣು ಹಾಕಿರುತ್ತೇವೆ.ಹೊಸ ಮಣ್ಣಿನಲ್ಲಿ ಗಿಡ ಬಹಳ ಚನ್ನಾಗಿ ಬರುತ್ತದೆ. ನಾವು ಮಳೆಯಾಶ್ರಿತದಲ್ಲಿ ಮಾಡುತ್ತಿರುವುದು ಎಂಬುದು ನೆನಪಿರಲಿ. ನೀರೆಲ್ಲ ಗುಣಿಯಲ್ಲಿ ಶೇಖರವಾಗಿರುತ್ತದೆ. ಪೋಷಕಾಂಶಗಳು ಅಲ್ಲೇ ಇರುತ್ತವೆ.ಬೇರಿನ ಬೆಳವಣಿಗೆ ನಿರಾತಂಕವಾಗಿ ಆಗುತ್ತದೆ. ಗುಣಿಯಲ್ಲಿ ಬೇರು ಸುಲಭವಾಗಿ ಆಳಕ್ಕೆ ಹೊರಟು ಹೋಗುತ್ತದೆ.
ನಾವು ಗಿಡಮರ ಹಾಕಿ ಗುಣಿನಲ್ಲಿ ಬೇರು ಬರಲು ಪ್ರಾರಂಭಿಸಿದಾಗ, ಎರಡು ವರ್ಷದಲ್ಲಿ ಗುಣಿಯ ಮೂರರಷ್ಟು ಆಳಕ್ಕೆ ಬೇರು ಹೋಗುತ್ತವೆ. ಬೇರನ್ನು ಒಳಗಡೆಗೆ ಕಳಿಸಬೇಕು ಏಕೆಂದರೆ, ಗುಣಿನಲ್ಲಿ ನೀರು ನಿಂತಿದ್ದಾಗ ಬೇರು ನೀರನ್ನು ಕುಡಿದುಕೊಳ್ಳುತ್ತಾ ಆಳಕ್ಕೆ ಹೋಗುತ್ತಿರುತ್ತದೆ. ಒಂದು ಮೀಟರ್ ಬೇರು ಒಳಗಡೆ ಹೋದರೆ ಒಂದು ಮೀಟರ್ ನೀರು ಒಳಗಡೆ ಹೋದಂತೆ. ಹೀಗೆ ಬೇರು ವರ್ಷಾನುವರ್ಷ ಒಳಗಡೆ ಹೋದಂತೆಲ್ಲಾ ನೀರು ಆಳಕ್ಕೆ ಇಳಿಯುತ್ತದೆ. ನಾವು ಬೇರೆ ಬೇರೆ ವರ್ಷದಲ್ಲಿ ಬೇರನ್ನು ಅಗೆದು ನೋಡಿ ಇದನ್ನ ಖಾತ್ರಿಪಡಿಸಿಕೊಂಡಿದ್ದೇವೆ. ಹೀಗೆ ಒಂದಕ್ಕೊಂದು ಪೂರಕವಾಗಿ ಹೋಗುತ್ತಾ ಬಂಡೆವರೆಗೂ ಹೋಗಿ ಬಂಡೆ ಒಡೆದು ಒಳಗೆ ಹೋಗುತ್ತದೆ.
ನಾವು ತುಂಬಾ ಸಂಖ್ಯೆಯಲ್ಲಿ ಮರಗಳನ್ನು ಹಾಕಬೇಕು ಅನ್ನುವುದು ನೀರು ಇಂಗುವುದಕ್ಕೊಸ್ಕರ. ಇದನ್ನ ನೀವು ಬಹಳ ಕ್ರಮಬದ್ದವಾಗಿ ಮಾಡಬೇಕು. ಇದನ್ನ ಬಿಟ್ಟು ಬೇರೆ ಕಡೆ ಹಾಕಿದರೆ ಮರಗಳು ಬೆಳೆಯುವುದಿಲ್ಲ.ಬೆಳವಣಿಗೆ ಕುಂಟಿತವಾಗುತ್ತೆ. ಮತ್ತೆ ಬೆಳೆ ಮರಗಳ ಪೈಪೋಟಿಯಾಗಿರುತ್ತದೆ. ಹೆಚ್ಚು ಆದ್ಯತೆಯ ಮರಗಳನ್ನು ಬದು ಮತ್ತು ಗುಣಿ ನಡುವೆ ಇರುವ ಕಂಟದಲ್ಲಿ ಹಾಕುತ್ತೇವೆ. ಇದು ತುಂಬಾ ಶ್ರೇಷ್ಠವಾದ ಜಾಗ ಇದು. ಇಲ್ಲಿ ಸಡಿಲವಾದ ಮಣ್ಣು ಸಿಗುತ್ತದೆ ಮತ್ತು ಬೇರು ಗುಣಿಗೆ ಇಳಿಯಲು ಅನಕೂಲವಾಗುತ್ತದೆ.
ಕಡಿಮೆ ಆಧ್ಯತೆಯ ಮರಗಳನ್ನು ಬೇರೆ ಎಲ್ಲಾ ಕಡೆ ತುಂಬಿಸಬೇಕು. ನನ್ನ ಪ್ರಕಾರ ಒಂದು ಚದುರಡಿಗೆ ಒಂದು ಮರ ಇರುಅದೆ. (ನರ್ಸರಿ ನಮ್ಮದೇ ಎಂದು ನೆನಪಿರಲಿ) ಇಷ್ಟು ಒತ್ತಾಗಿ ಮರ ಹಾಕದಿದ್ದರೆ ಬದುವಿನ ಮೇಲೆ ಹುಲ್ಲು ಹತ್ತಿ ಬಿಡುತ್ತದೆ. ಬದು ಮೇಲೆ ಹುಲ್ಲು ಹತ್ತಿದರೆ ಹತೋಟಿಗೆ ತರುವುದು ಬಹಳ ಕಷ್ಟ. ಹೊಸ ಮಣ್ಣಾದ್ದರಿನ್ದ ಬಹಳ ಬೇಗ ಹುಲ್ಲು ಹತ್ತುತ್ತದೆ. ಆದ್ದರಿಂದ ಬದುವಿನಲ್ಲಿ ಜಾಗ ಖಾಲಿ ಇದ್ದಲ್ಲಿ ಕಡಿಮೆ ಆಧ್ಯತೆಯ ಮರಗಳನ್ನು ತುಂಬಿಸಿದಬೇಕು. ನಂತರ ಕೊಚ್ಚಿ ಹಾಕಿದರೂ ಪರವಾಗಿಲ್ಲ. ಈ ವಿನ್ಯಾಸದಲ್ಲಿ ಸಂಕೀರ್ಣವಾದ ಅಂಶಗಳು ಇವೆ. ಈ ಗುಣಿಗಳು ಇರುವುದರಿಂದ ಮರಗಳ ಬೇರುಗಳು ಗುಣಿ ದಾಟಿ ಆಚೆಗೆ ಹೋಗುವುದಿಲ್ಲ. ತಂತು ಬೇರುಗಳ ಕೆಲಸ ನೀರು ಮತ್ತು ಆಹಾರವನ್ನು ಹುಡುಕುವುದು. ಈ ಗುಣಿಯಲ್ಲಿ ಇವೆರಡನ್ನೂ ಇಟ್ಟಿದ್ದೇವೆ.
ನಿಮ್ಮ ಊರಿನಲ್ಲಿ ಒಂದು ಎಕರೆಯಲ್ಲಿ ಒಂದು ವರ್ಷಕ್ಕೆ ಅತಿ ಹೆಚ್ಚು ಸಲೆ ಬರುವಂತಹ ಮರಗಳನ್ನ ಬೆಳೆಯಬೇಕು. ಅಂದರೆ ಅಲ್ಲಿಗೆ ಹೊಂದುವಂತಹ ಮರಗಳನ್ನ ಹಾಕಬೇಕು. ನಿಮ್ಮ ಹವಾಗುಣ, ಮಣ್ಣುಗಳಿಗೆ ಹೊಂದುವ ಜಾತಿಯನ್ನು ಆಯ್ಕೆ ಮಾಡಬೇಕು.
ಒಂದು ಮರ ಚನ್ನಾಗಿ ಬರಬೇಕು ಅಂದರೆ ಮಣ್ಣಿನ ರಚನೆ ಏನಿರಬೇಕು? ಎಷ್ಟು ಆಳ ಇರಬೇಕು? ಮಣ್ಣು , ಮಣ್ಣಿನಲ್ಲಿ ರಸಸಾರ ಎಷ್ಟಿರಬೇಕು ? ಲವಣಾಂಶ ಎಷ್ಟಿರಬೇಕು? ನೀರು ನಿಂತರೆ ತದೆದುಕೊಳ್ಳುತ್ತದಾ ? ಈ ಥರ ಒಂದು ಮರ ಬೆಳೆಯಲು ಬೇಕಾದ ಎಲ್ಲ ಪಾರಿಸಾರಿಕ ವಿವರಗಳನ್ನ ಲೆಕ್ಕ ಹಾಕಿದ್ದೇವೆ. ಪ್ರತಿ ಗಿಡಕ್ಕೆ ಬೇಕಾದ ತಾಪಾಂಶವನ್ನು ಲೆಕ್ಕ ಹಾಕಿದ್ದೇವೆ. ೪೬ ಡಿಗ್ರಿ ಬಿಸಿಲಿನವರೆಗೆ, 15 ಡಿಗ್ರಿ ಚಳಿಯವರೆಗೆ ಈ ಮರ ತಡೆದುಕೊಳ್ಳುತ್ತದಾ? ಇಬ್ಬನಿ ಇದ್ದಾಗ ತಡೆಯುತ್ತದಾ ? ಅದಕ್ಕೆ ಬೆಳೆಯಲು ಮಳೆ ಎಷ್ಟು ಬೇಕು? ಹೀಗೆ ಗಿಡವೊಂದು ಉತ್ತಮವಾಗಿ ಬೆಳೆಯಲು ಬೇಕಾದ ಎಲ್ಲ ಅಂಶಗಳನ್ನು ವಿಶ್ಲೇಷಣೆ ಮಾಡಿದ್ದೇವೆ. ಇದನ್ನ ೨೨೫ ಮರಗಳಲ್ಲಿ ಪ್ರತಿಯೊಂದಕ್ಕೂ ಮಾಡಿದ್ದೇವೆ. ನಿಮ್ಮ ಹೊಲದ ಮಣ್ಣು, ನಿಮ್ಮ ಹವಾಮಾನ ಗೊತ್ತಿದ್ದರೆ ನಿಮಗೆ ಬೇಕಾದಂಥ ಜಾತಿಯನ್ನು ಈ ಲೆಕ್ಕಾಚಾರ ಉಪಯೋಗಿಸಿ ನೀವೇ ಆರಿಸಿಕೊಳ್ಳಬಹುದು. ನೀವು ಈ ಥರ ಆಯ್ಕೆ ಮಾಡಿದ್ದಾಗ ಉತ್ಪತ್ತಿ ಹೆಚ್ಚಾಗುತ್ತದೆ. ಉತ್ಪತ್ತಿ ಹೆಚ್ಚಾಗುವುದು ನಿಮ್ಮ ಹೊಂದಾಣಿಕೆಯಿಂದ . ಜೋಡಣೆ ಸರಿಯಾಗಿದ್ದರೆ ಉತ್ಪಾದನೆ ಹೆಚ್ಚಾಗುತ್ತದೆ . ಜೋಡಣೆ ಸರಿಯಿಲ್ಲ ದಿದ್ದರೆ ಉತ್ಪಾದನೆ ಕಡಿಮೆಯಾಗುತ್ತದೆ. ನೀವು ನಿಮ್ಮ ಉದ್ದೇಶವನ್ನು ಸ್ಪಷ್ಟವಾಗಿ ಇಟ್ಟುಕೊಳ್ಳಿ. ಮಾರುಕಟ್ಟೆ ನಿಮ್ಮ ಉದ್ದೇಶ ಆಗಿದ್ದಾಗ ಅದಕ್ಕೆ ಸರಿಯಾದದ್ದನ್ನ ಆರಿಸಿಕೊಳ್ಳಿ. ಇಂತಿಷ್ಟು ಸಮಯ ಮತ್ತು ಜಾಗದ ಪರಿಮಿತಿಯಲ್ಲಿ ಮರ ಅತಿ ಹೆಚ್ಚು ಬೆಳವಣಿಗೆಯಾಗುವುದು, ಒಂದು ವರ್ಷಕ್ಕೆ ಎಷ್ಟು ವೇಗವಾಗಿ ಬೆಳೆಯುತ್ತದೆ ಎನ್ನುವುದು ನಮ್ಮ ಇಲ್ಲಿ ನಮ್ಮ ಕಾಳಜಿ.
ನೀರಿನ ಮೇಲೆ ಸಂಖ್ಯೆಯನ್ನು ಲೆಕ್ಕಾಚಾರ ಹಾಕುತ್ತೇವೆ. ಮಣ್ಣು, ಹವಾಮಾನದ ಮೇಲೆ ಜಾತಿ ಆಯ್ಕೆ ಮಾಡುತ್ತೇವೆ. ಇವೆರಡನ್ನೂ ಸರಿಯಾಗಿ ಮಾಡಿದರೆ ನಮ್ಮ ವಿನ್ಯಾಸಕ್ಕೆ ಹಿಡಿತ ಸಿಕ್ಕ ಹಾಗೆ.
ಈಗ ವಿನ್ಯಾಸದ ಮುಂದಿನ ಹಂತಕ್ಕೆ ಹೋಗೋಣ. ಈ ವಿನ್ಯಾಸದಲ್ಲಿ ಅನೇಕ ತೊಡಕುಗಳಿವೆ. ಮೊದಲನೇ ತೊಡಕೆಂದರೆ ಬೆಲೆ ಮತ್ತು ಮರಗಳ ಪೈಪೋಟಿ. ಇಷ್ಟೊಂದು ಮರ ಹಾಕಿಬಿಟ್ಟರೆ ಬೆಳೆಗಳಿಗೆ ತೊಂದರೆಯಿಲ್ಲವೇ? ಮರ ಮತ್ತು ಬೆಲೆಯ ಪೈಪೋಟಿಯನ್ನು ತಪ್ಪಿಸುವುದು ಹೇಗೆ? ಪೈಪೋಟಿಯನ್ನು ಕಡಿಮೆ ಮಾಡಬಹುದೇ ವಿನಃ ಸಂಪೂರ್ಣ ತಪ್ಪಿಸುವುದು ಅಸಾದ್ಯ. ಮರ ಮತ್ತು ಬೆಳೆಗಳು ಪೈಪೋಟಿ ಮಾಡುವುದು ಸಾಮಾನ್ಯವಾಗಿ ನೀರು, ಬೆಳಕು, ಪೋಷಕಾಂಶ, ಆರ್ಥಿಕ ಲಾಭ ಇತ್ಯಾದಿಗಳಿಗೆ, ನೀರಿನ ಪೈಪೋಟಿಯಾಗದಂತೆ ನಾವು ಈಗಾಗಲೇ ಬೆಲೆಗೆ ಬೇಕಾದಷ್ಟು ನೀರನ್ನು ಮೀಸಲು ಇತ್ತುಬಿದಳು ತೀರ್ಮಾನಿಸಿದ್ದೇವೆ. ಆದರೂ ಸ್ವಲ್ಪ ಮಟ್ಟಿಗೆ ಪೈಪೋಟಿ ಇದ್ದೆ ಇರುತ್ತದೆ. ಅದನ್ನು ಸೊನ್ನೆ ಮಾಡಲು ಆಗುವುದಿಲ್ಲ.
ನೀರನ್ನು ಆಧರಿಸಿ ಮರಗಳ ಸಂಖ್ಯೆ ಲೆಕ್ಕ ಹಾಕುತ್ತೇವೆ. ಮಣ್ಣು, ಹವಾಮಾನದ ಮೇಲೆ ಮರದ ಜಾತಿ ಆಯ್ಕೆ ಮಾಡುತ್ತೇವೆ.
ಎರಡನೆಯದ್ದು ಬೆಳಕಿನ ಪೈಪೋಟಿ. ಬೆಳಕಿನ ಪೈಪೋಟಿಯನ್ನು ಬಹು ಮಹಡಿ ವಿಧಾನದಿಂದ ತಪ್ಪಿಸುತ್ತೇವೆ. ಈ ವಿಧಾನವನ್ನು ಈಗಾಗಲೇ ಬಹಳಷ್ಟು ಕಡೆಗಳಲ್ಲಿ ಮಾಡಿದ್ದಾರೆ. ಇದು ಪ್ರಕ್ರುತಿಸಹಜವಾದ ವಿಧಾನ. ಪ್ರಕೃತಿಯಲ್ಲಿ ಯಾವುದೇ ಸಸ್ಯರಾಶಿ ಒಂದೇ ಮಹಡಿಯಲ್ಲಿ ಇರುವುದಿಲ್ಲ (ನಾವು ಕ್ರುಸ್ಶಿಯಲ್ಲಿ ಏಕ ಮಹಡಿ ಮಾಡಿ ತಪ್ಪು ಮಾಡುತ್ತಿದ್ದೇವೆ.) ಸಸ್ಯಗಳು ಬಹುಮಹಡಿಯಲ್ಲಿ ಇದ್ದಾಗ ಸಮನಾಗಿ ಬೆಳಕಿನ ಹಂಚಿಕೆಯಾಗುತ್ತದೆ. ನಮ್ಮಲ್ಲಿ ಸೂರ್ಯನ ಬಿಸಿಲು ಬಹಳ ಪ್ರಖರವಾಗಿದೆ. ದ್ಯುತಿ ಸಂಶ್ಲೇಷಣೆ ಕ್ರಿಯೆ (ಆಹಾರ ತಯಾರಿಕೆ) ಆದಾಗ ಶಾಖ ಉತ್ಪತ್ತಿಯಾಗುತ್ತದೆ.ನಮ್ಮಲ್ಲಿ ಸೂರ್ಯನ ಬಿಸಿಲು ಅತಿಯಾದಾಗ ಗಿಡ ದ್ಯುತಿ ಸಂಶ್ಲೇಷಣ ಕ್ರಿಯೆ ನಿಲ್ಲಿಸಿಬಿಡುತ್ತದೆ. ಅದಕ್ಕೆ ಅಷ್ಟು ಪ್ರಖರ ಬೆಳಕು ಉಪಯೋಗಿಸಲು ಆಗುವುದಿಲ್ಲ. ಇದನ್ನ "ಫೋಟೋ ಸ್ಯಾಚು ರೇಶನ್" ಅನ್ನುತ್ತಾರೆ. ಅಷ್ಟರ ಮಟ್ಟಿಗೆ ಪ್ರಖರತೆ ಇರುತ್ತದೆ ನಮ್ಮ ಉಷ್ಣವಲಯದಲ್ಲಿ. ಆದ್ದರಿಂದ ನಮ್ಮಲ್ಲಿ ಬೆಳಕಿನ ಪೈಪೋಟಿಯ ಅಂಥ ಸಮಸ್ಯೆ ಇಲ್ಲ. ಬಹುಮಹಡಿ ಇದ್ದಾರೆ ಸಾಕು. ಅದರ ಬಗ್ಗೆ ಹೆಚ್ಚಿಗೆ ಯೋಚಿಸಬೇಕಾಗಿಲ್ಲ. ಪೈಪೋಟಿಯಾದಾಗ ಹೆಚ್ಚು ಆದ್ಯತೆಯ ಮರಗಳನ್ನು ಪಕ್ಕಗಳಲ್ಲಿ ಸವರಿ ನೆಟ್ಟಗೆ ಹೋಗುವಂತೆ ಮಾಡಬಹುದು. ಕಡಿಮೆ ಆದ್ಯತೆಯ ಗಿಡಗಳನ್ನು ಬುಡದಿಂದ ಕತ್ತರಿಸಿ ಗುಣಿಯಲ್ಲಿ ಹಾಕಿಬಿಟ್ಟರೆ ಒಳ್ಳೆ ಗೊಬ್ಬರವಾಗುತ್ತದೆ.
ಈ ತತ್ವಗಳನ್ನು ಅರ್ಥ ಮಾಡಿಕೊಂಡರೆ ಈ ವಿನ್ಯಾಸ ಒಂದು ರೀತಿಯಲ್ಲಿ ಸರಳ. ಆದರೆ ನಾವು ಬಹಳಷ್ಟು ಸರಳ. ಆದರೆ ನಾವು ಬಹಳಷ್ಟು ಸಂಕೀರ್ಣ ಲೆಕ್ಕಾಚಾರಗಳನ್ನೂ, ತಂತ್ರಗಳನ್ನು ಒಳಗೊಲ್ಲಿಸಿ ಕಂಪ್ಯೂಟರ್ ಪ್ರೋಗ್ರಾಮ್ ಮಾಡಿದ್ದೇವೆ. ಅದಕ್ಕೆ ಇಂಗ್ಲೀಷಿನಲ್ಲಿ ಸಿಮ್ಯುಲೇಶನ್ ಎನ್ನುತ್ತೇವೆ. ಇಲ್ಲಿ ಅನೇಕ ಲೆಕ್ಕಾಚಾರಗಳನ್ನು ಕಂಪ್ಯೂಟರ್ ಮಾಡುತ್ತದೆ. ಇದರಲ್ಲಿ ೨೦೦-೩೦೦ ಲೆಕ್ಕಚಾರಗಳಿವೆ. ಕನಿಷ್ಠ ೨೦-೨೫ ತೊಂದರೆಗಳಿದ್ದಾವೆ. ಅದನ್ನೆಲ್ಲ ಗಮನಿಸಿ ಲೆಕ್ಕಾಚಾರ ಹಾಕಿದ್ದೇವೆ. ಲೆಕ್ಕಾಚಾರವನ್ನು ಹೆಚ್ಹೆಚ್ಚು ಸಂಕೀರ್ಣ ಮಾಡುತ್ತಾ ಹೋದ ಹಾಗೆ ಖರ್ಚು ಕಡಿಮೆ ಅಧಿಕ ಉತ್ಪಾದನೆಯ ಹೆಚ್ಹಿನ ಸಾಧ್ಯತೆಗಳು.ಬಿಚ್ಚಿಕೊಳ್ಳುತ್ತಾ ಹೋಗುತ್ತವೆ.
ಉದಾಹರಣೆಗೆ, ಒಂದು ಎಕರೆಗೆ ನಿಮ್ಮ ಖರ್ಚು ೨೦ ಸಾವಿರ ಎಂದು ಸರಳವಾಗಿ ಹೇಳಿದರೆ, ನಿಮ್ಮ ಲಾಭ ೭೦-೮೦ ಸಾವಿರ ಬರಬಹುದು. ಒಂದು ಲಕ್ಷ ಅಂದುಕೊಳ್ಳಿ ಅದೇ ನಾವು ಬೇರೆ ಬೇರೆ ವಿಷಯಗಳನ್ನು ಆಧರಿಸಿ ಸಂಕೀರ್ಣವಾಗಿ ಲೆಕ್ಕಾಚಾರ ಮಾಡಿದರೆ ನಿಮ್ಮ ಖರ್ಚು ೨೦ ಸಾವಿರದಿಂದ ೧೨ ಸಾವಿರಕ್ಕೆ ಬರಬಹುದು. ಲಾಭ ಒಂದೂವರೆ ಲಕ್ಷಕ್ಕೆ ಹೋಗಬಹುದು. ನೀವು ನಿಮ್ಮ ವಿನ್ಯಾಸದ ವಿವರಗಳನ್ನು ಒದಗಿಸಿದರೆ ನಾವು ಅಗತ್ಯವಿರುವ ಎಲ್ಲ ಲೆಕ್ಕಾಚಾರ ಮಾಡಿ ಕೊಡುತ್ತೇವೆ. ನೀವು ನಿಮ್ಮ ಹೊಲಗಳಿಗೆ ತಕ್ಕ ವಿನ್ಯಾಸವನ್ನು ತೆಗೆದುಕೊಂಡು ಹೋಗಬೇಕು ಅನ್ನುವಂಥದ್ದು ನಮ್ಮ ಇಡೀ ಕಾರ್ಯಾಗಾರದ ಉದ್ದೇಶ.
ನಿಮಗೆ ತತ್ವಗಳು ಅರ್ಥವಾಗಿದೆ. ವಿನ್ಯಾಸವನ್ನು ಶುರು ಮಾಡಬಹುದು. ಆದರೆ ಪೂರ್ತಿ ಮಾಡಲು ಆಗುವುದಿಲ್ಲ. ನಿಮ್ಮ ವಿನ್ಯಾಸವನ್ನು ಸರಳ ರೀತಿ ಯಲ್ಲಿ ಮಾಡಬಹುದು. ಆದರೆ ಅಷ್ಟು ಸಮರ್ಪಕವಾಗಿ ಆಗಿರುವುದಿಲ್ಲ. ವಿನ್ಯಾಸವನ್ನು ಕಾರ್ಯಾಗಾರದ ನಂತರವೂ ಮುಂದುವರೆಸೋಣ.
ಮೂಲ: ಸಹಜ ಸಾಗುವಳಿ
ಕೊನೆಯ ಮಾರ್ಪಾಟು : 4/1/2020
ಕೇಜರಿ ಮರ ಮತ್ತು ಬಿಶ್ನಾಯ್ ಜನಾಂಗ ಕುರಿತು
ಕೃಷಿ ಪರಿಸರ ಒಂದು ಜೀವವೈವಿದ್ಯತೆಯ ದೊಡ್ಡಸಾಗರ. ಇಲ್ಲಿಮಾನ...