অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತರಬೇತಿ ಕೈಪಿಡಿ-2012

ವಿವಿಧ ಕಾರ್ಯಕ್ರಮಗಳು

ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ, ಕಾವೇರಿ ಜಲಾನಯನ ಯೋಜನೆಗಳು, ಮೈಸೂರು ವತಿಯಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಬೃಹತ್ ನೀರಾವರಿ ಯೋಜನೆಗಳಾದ ಕಬಿನಿ, ಹಾರಂಗಿ, ಕೃಷ್ಣರಾಜಸಾಗರ ಮತ್ತು ಹೇಮಾವತಿ ಹಾಗೂ ಮಧ್ಯಮ ನೀರಾವರಿ ಯೋಜನೆಗಳಾದ ಕಣ್ವ, ಬೈರಮಂಗಲ, ಮಂಚನಬೆಲೆ, ಮಾರ್ಕೋನಹಳ್ಳಿ, ವಾಟೆಹೊಳೆ, ತಾರಕ, ಗುಂಡಾಲ್, ನುಗು ಉಡುತೊರೆಹಳ್ಳಿ, ಅರ್ಕಾವತಿ, ಇಗ್ಗಲೂರು ಬ್ಯಾರೇಜ್, ಸುವರ್ಣಾವತಿ ಚಿಕ್ಲಿಹೊಳೆ, ಚಿಕ್ಕಹೊಳೆ ಮತ್ತು ವರುಣನಾಲೆ ಅಚ್ಚುಕಟ್ಟು ಪ್ರದೇಶಗಳಲ್ಲಿ ಬರುವ ಜಮೀನುಗಳ ಅಭಿವೃದ್ದಿ, ನೀರು ನಿರ್ವಹಣೆ, ಬೆಳೆ ಉತ್ಪಾದನೆ ಹಾಗೂ ಅಚ್ಚುಕಟ್ಟುದಾರರ ಆರ್ಥಿಕ ಅಭಿವೃದ್ದಿಗಾಗಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ನೆರವಿನಿಂದ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ.

ಮುಖ್ಯವಾದ ಯೋಜನೆಗಳೆಂದರೆ :

  • ಬಿಸಿಗಾಲುವೆಗಳ ನಿರ್ಮಾಣ.
  • ಹೆಚ್ಚಾದ ನೀರನ್ನು ಜೌಗು ಪ್ರದೇಶಗಳಿಂದ ಹೊರಹಾಕಲು ಬಸಿಗಾಲುವೆಗಳನ್ನು ‘ಕಾಡಾ’ ವತಿಯಿಂದ ರೈತರ ಜಮೀನಿನಲ್ಲಿ ನಿರ್ಮಿಸಿ ರೈತರು ಬೆಳೆ ಉತ್ಪಾದನೆ ಕೈಗೊಳ್ಳಲು ಈ ಯೋಜನೆಯಡಿಯಲ್ಲಿ ಅನುಕೂಲ ಮಾಡಿಕೊಡಲಾಗುತ್ತಿದೆ.

  • ವಾರಾಬಂಧಿ ಪದ್ದತಿ ಅಳವಡಿಕೆ :
  • ನೀರು ನಿರ್ವಹಣೆಯಲ್ಲಿ ಸಾಮಾಜಿಕ ನ್ಯಾಯಾದ ಪರಿಕಲ್ಪನೆಯ ಆಧಾರದ ಮೇಲೆ ನಿಗಧಿತ ದಿನಾಂಕ ಮತ್ತು ವೇಳೆಯಲ್ಲಿ ನೀರಿನ ವಿತರಣೆ ಮಾಡಿ ನಾಲೆಯ ಕೊನೆಯ ಹಂತರ ರೈತರಿಗೂ ಸಹ ನೀರು ಲಭ್ಯವಾಗುವಂತೆ ನೋಡಿಕೊಳ್ಳುವುದೇ ಈ ಯೋಜನೆಯ ಮುಖ್ಯ ಉದ್ದೇಶ. ಈ ಕಾರ್ಯಕ್ರಮವನ್ನು ‘ಕಾಡಾ’ ವತಿಯಿಂದ ಯೋಜಿಸಿ, ವಿವಿಧ ತೂಬುಗಳ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

  • ಬೆಳೆ ಪ್ರಾತ್ಯಕ್ಷಿಕೆಗಳು :
  • ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ಅಭಿವೃದ್ದಿ ಪಡಿಸಿರುವ ಶಿಫಾರಸ್ಸು ಮಾಡಿರುವ ತಂತ್ರಜ್ಞಾನವನ್ನು ರೈತರ ಜಮೀನಿನಲ್ಲಿ ಅಳವಡಿಸಿ ರೈತ ಸಮುದಾಯಕ್ಕೆ ಪರಿಚಯಿಸಿ ತನ್ಮೂಲಕ ರೈತರ ಕೃಷಿ ಉತ್ಪಾದನೆ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದು ಯೋಜನೆಯ ಉದ್ದೇಶವಾಗಿದ್ದು, ಪ್ರಾಧಿಕಾರದ ವತಿಯಿಂದ ಬೆಳೆ ಪ್ರಾತ್ಯಕ್ಷಿಕೆಗಳನ್ನು ವಿವಿಧ ಬೆಳೆಗಳು, ತಳಿಗಳು, ಬೇಸಾಯ ಪದ್ದತಿಗಳು ಹಾಗೂ ಕೃಷಿ ಪದ್ದತಿಗಳು ಹಾಗೂ ಕೃಷಿ ಪದ್ದತಿಗಳ ಮೇಲೆ ಕೈಗೊಳ್ಳಲಾಗುತ್ತಿದೆ.

  • ಭೂ ಅಭಿವೃದ್ದಿ ತರಬೇತಿ :
  • ಅಚ್ಚುಕಟ್ಟು ಪ್ರದೇಶದಲ್ಲಿ ಬರುವ ರೈತರಿಗೆ ಹಾಗೂ ನೀರು ಬಳಕೆದಾರರ ಸಹಕಾರ ಸಂಘದ ಪದಾಧಿಕಾರಿಗಳಿಗೆ ಕೃಷಿ, ಸಹಕಾರ ಮತ್ತು ನೀರಾವರಿ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳು ವೈಜ್ಞಾನಿಕ ಬೇಸಾಯ ಹಾಗೂ ನೀರಿನ ಸಮರ್ಥ ಬಳಕೆ ಬಗ್ಗೆ ತರಬೇತಿ ಕೇಂದ್ರಗಳಲ್ಲಿ, ರಾಜ್ಯ, ಜಿಲ್ಲಾ ಮಟ್ಟದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ತರಬೇತಿಗಳನ್ನು ನೀಡಲಾಗುತ್ತಿದೆ. ಇದರಿಂದ ರೈತರು ನುರಿತ ವಿಜ್ಞಾನಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಹೊಸ ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ.

  • ನೀರು ನಿರ್ವಹಣೆಯಲ್ಲಿ ರೈತರ ಭಾಗವಹಿಸುವಿಕೆ :
  • ನೀರಿನ ನಿರ್ವಹಣೆಯ ಸಮರ್ಥ ಬಳಕೆ ಹಾಗೂ ಲಾಭದಾಯಕ ಬೆಳೆ ಉತ್ಪಾದನೆಯಲ್ಲಿ ರೈತರು ನೇರವಾಗಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ನೀರು ಬಳಕೆದಾರರ ಸಹಕಾರ ಸಂಘಗಳನ್ನು ರಚಿಸಿ ಅವುಗಳ ಮೂಲಕ ನೀರಿ ನಿರ್ವಹಣೆಯನ್ನು ಸಮರ್ಪಕವಾಗಿ ಕೈಗೊಳ್ಳಲು ಪ್ರಾಧಿಕಾರದ ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾದ ಉದ್ದೇಶಗಳೆಂದರೆ,

    1. ಜಲ ಸಂಪನ್ಮೂಲ ಇಲಾಖೆಯಿಂದ ನೀರನ್ನು ಸಂಗ್ರಹಿಸಿ ಅದನ್ನು ರೈತರ ಅಗತ್ಯತೆ ಆಧಾರದ ಮೇರೆಗೆ ಸಮವಾಗಿ ವಿತರಣೆ ಮಾಡುವುದು.
    2. ಪ್ರತಿಯೊಬ್ಬ ರೈತರ ಜಮೀನಿಗೂ ಸರಾಗವಾಗಿ ನೀರು ಹರಿಯುವಂತೆ ಮಾಡಲು ಹೊಲಗಾಲುವೆಗಳನ್ನು ನಿರ್ಮಾಣ ಮಾಡುವುದು.
    3. ನೀರಿನ ಬಳಕೆಯ ಬಗ್ಗೆ ರೈತರಲ್ಲಿ ಉಂಟಾಗಬಹುದಾದ ಜಗಳಗಳನ್ನು ಪರಿಹರಿಸುವುದು.
    4. ನೀರಿನ ಮಿತ ಬಳಕೆ ಮಾಡುವುದು.
    5. ಬೆಳೆ ವಿಧಾನವನ್ನು ಕ್ರಮಗೊಳಿಸುವುದು.
    6. ಚೌಳು, ಸವಳು ಮತ್ತು ಕ್ಷಾರ ಪ್ರದೇಶವನ್ನು ಕೃಷಿ ಯೋಗ್ಯ ಮಾಡುವಿಕೆ:

    ಅವೈಜ್ಞಾನಿಕ ಬೇಸಾಯ ಕ್ರಮಗಳಿಂದ ಉಂಟಾಗಿರುವ ಚೌಳು, ಸವಳು, ಕ್ಷಾರ ಪ್ರದೇಶಗಳಲ್ಲಿ ಭೂಕ್ಷಾರ ನಿವಾರಣೆಯನ್ನು ಮಾಡಿ ಕೃಷಿ ಯೋಗ್ಯವಲ್ಲದ ಭೂಮಿಯನ್ನು ಮತ್ತೆ ಕೃಷಿ ಯೋಗ್ಯವನ್ನಾಗಿ ಮಾಡುವುದೇ ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ.

    ಈ ಯೋಜನೆಯಡಿಯಲ್ಲಿ ಸಮಸ್ಯಾತ್ಮಕ ಪ್ರದೇಶಗಳನ್ನು ಗುರ್ತಿಸಿ ಪ್ರಾಧಿಕಾರದ ವತಿಯಿಂದ ಜಲಾನಯನ ಅಭಿವೃದ್ದಿ ಇಲಾಖೆಯ ಮೂಲಕ ಸಮಸ್ಯಾತ್ಮಕ ಜಮೀನುಗಳನ್ನು ಕೃಷಿಗೆ ಯೋಗ್ಯವನ್ನಾಗಿ ಮಾಡಲಾಗುತ್ತಿದೆ.

  • ಶೈಕ್ಷಣಿಕ ಪ್ರವಾಸಗಳು :
  • ನಮ್ಮ ರೈತರು ರಾಜ್ಯದ ಇತರೆ ಜಿಲ್ಲೆಗಳಿಗೆ ಹಾಗೂ ಕೃಷಿ ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿಯ ಕೃಷಿ ಚಟುವಟಿಕೆಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳುವುದರ ಮೂಲಕ ಹೊಸ ಹೊಸ ಕೃಷಿ ಪದ್ದತಿಗಳನ್ನು ಕಲಿತು ಅದನ್ನು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಿ ಕೊಳ್ಳಬೇಕೆನ್ನುವ ಉದ್ದೇಶದೊಂದಿಗೆ ಶೈಕ್ಷಣಿಕ ಪ್ರವಾಸ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

  • ಗೋದಾಮುಗಳ ನಿರ್ಮಾಣ.:
  • ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಕಛೇರಿ ಹಾಗೂ ಗೋದಾಮು ನಿರ್ಮಾಣ ಮಾಡಿಕೊಳ್ಳಲು ಆರ್ಥಿಕ ನೆರವನ್ನು ನೀಡಲಾಗುತ್ತಿದೆ. ಇದರಿಂದ ಸಂಘದ ಕಛೇರಿಯಲ್ಲಿ ದೈನಂದಿನ ಕಾರ್ಯ ಚಟುವಟಿಕೆಗಳು, ಸಭೆಗಳು ಇತ್ಯಾದಿಗಳನ್ನು ಸರಾಗವಾಗಿ ನಡೆಸಿಕೊಂಡು ಹೋಗಲು ಹಾಗೂ ಕೃಷಿಗೆ ಬೇಕಾದ ಅಗತ್ಯ ಪರಿಕರಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಲು ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಅನುಕೂಲವಾಗುತ್ತದೆ.

  • ಆಯಕಟ್ಟು ರಸ್ತೆಗಳು :
  • ಕೃಷಿಗೆ ಬೇಕಾದ ಬೀಜ, ರಸಗೊಬ್ಬರ, ಕ್ರಿಮಿನಾಶಕ ಇತ್ಯಾದಿಗಳನ್ನು ಜಮೀನಿಗೆ ಸಾಗಿಸಲು ಹಾಗೂ ಜಮೀನಿನಲ್ಲಿ ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಸರಾಗವಾಗಿ ಸಾಗಿಸಲು ರೈತರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಈ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಆಯಕಟ್ಟು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ.

  • ಪಿಕ್‍ಅಪ್‍ಗಳ ನಿರ್ಮಾಣ :
  • ನೀರು ಹಾಯಿಸುವಾಗ ಸಾಕಷ್ಟು ನೀರು ವ್ಯರ್ಥವಾಗಿ ಹರಿದು ಹಳ್ಳಗಳನ್ನು ಸೇರುತ್ತಿದ್ದು, ಇದನ್ನು ತಡೆಗಟ್ಟಲು ಸೂಕ್ತವಾದ ಕಡೆಗಳಲ್ಲಿ ಪಿಕ್‍ಅಪ್‍ಗಳನ್ನು ಪ್ರಾಧಿಕಾರದ ವತಿಯಿಂದ ನಿರ್ಮಿಸಿ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    1. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳು :
    2. ಈ ಯೋಜನೆಗಳಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ರೈತರುಗಳನ್ನು ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಸದಸ್ಯರನ್ನಾಗಿ ಉಚಿತವಾಗಿ ನೊಂದಾಯಿಸಿಕೊಳ್ಳಲು ಮತ್ತು ಈ ವರ್ಗದ ರೈತರುಗಳಿಗೆ ಉಚಿತವಾಗಿ ಸಸ್ಯ ಸಂರಕ್ಷಣಾ ಉಪಕರಣಗಳು, ಡೀಸೆಲ್ ಮತ್ತು ಸೀಮೆಎಣ್ಣೆ ಚಾಲಿತ ಪಂಪ್ ಸೆಟ್‍ಗಳು, ಸಬ್‍ಮರ್ಸಿ ಬಲ್ ಪಂಪ್‍ಸೆಟ್‍ಗಳು, ಟಾರ್ ಪಾಲಿನ್‍ಗಳು ಹಾಗೂ ದಾಸ್ತಾನು ಕಣಜಗಳನ್ನು ವಿತರಿಸಲು ಕಾರ್ಯಕ್ರಮ ರೂಪಿಸಲಾಗಿದೆ.

      1. ಇತರೆ ಕಾರ್ಯಕ್ರಮಗಳು :

      ಇತರೆ ಕಾರ್ಯಕ್ರಮಗಳಡಿಯಲ್ಲಿ ಮೈಸೂರು ದಸರಾ ವಸ್ತುಪ್ರದರ್ಶನದಲ್ಲಿ ಪ್ರಾಧಿಕಾರದ ಚಟುವಟಿಕೆಗಳನ್ನು ಬಿಂಬಿಸುವ ಮಳಿಗೆಯೊಂದನ್ನು ತೆರೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

      ಅಚ್ಚುಕಟ್ಟು ಪ್ರದೇಶದಲ್ಲಿ ಸಾವಯವ ಕೃಷಿ ಪದ್ದತಿಗಳು

      ಸುಮಾರು 19 ನೇ ಶತಮಾನದವರೆಗೆ ಅಂದರೆ ರಾಸಾಯನಿಕ ಗೊಬ್ಬರಗಳು ದೊರೆಯುವುದಕ್ಕಿಂತ ಮೊದಲು ಜೀವನಾಧರಿತ ಕೃಷಿಯನ್ನೇ ಅವಲಂಬಿಸಿದ್ದ ಕೃಷೀಕರು ಲಭ್ಯವಿದ್ದ, ಸಾವಯವ ವಸ್ತುಗಳನ್ನು ಮಣ್ಣಿಗೆ ಸೇರಿಸಿ, ಬೆಳೆಗಳ ಇಳುವರಿಯನ್ನು ಪಡೆಯುತ್ತಿದ್ದರು. ಅಂದರೆ ಮಣ್ಣು-ಸಸ್ಯ-ಪ್ರಾಣಿಗಳ ಸಂಬಂಧವು ಒಂದಕ್ಕೊಂದು ನಿಕಟವಾಗಿತ್ತು. ನಂತರದ ವರ್ಷಗಳಲ್ಲಿ ಪರಿವರ್ತನೆಯ ಹಾದಿ ಹಿಡಿಯಿತು. ಹೆಚ್ಚುತ್ತಿದ್ದ ಜನಸಂಖ್ಯೆಯ ಅವಶ್ಯಕತೆಯನ್ನು ಪೂರೈಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಆದ್ಯತೆ ಕೊಟ್ಟು ಕೃಷಿಯಲ್ಲಿ ಆಹಾರ ಬೆಳೆಗಳ ಇಳುವರಿಯನ್ನು ಹೆಚ್ಚಿಸುವ ಕ್ರಮಗಳನ್ನು ಕೈಗೊಂಡರೂ, ಅದು ಸಾಧ್ಯವಾಗಲು ಸುಮಾರು 20 ವರ್ಷಗಳೇ ಕಳೆದುಹೋದವು. 1970 ರಿಂದ 1990 ರವರೆಗೆ ನಮ್ಮ ದೇಶದ ಕೃಷಿಯು ಇತಿಹಾಸದಲ್ಲಿ ಚಿರಸ್ಮರಣೀಯವಾಗಿ ಉಳಿಯುವ ಕಾಲ, ಆಧುನಿಕ ತಾಂತ್ರಿಕತೆಯಿಂದ ಅಧಿಕ ಇಳುವರಿ ಕೊಡುವ ಬೀಜಗಳು, ಅದಕ್ಕೆ ಪೋಷಕವಾಗಿ ರಾಸಾಯನಿಕ ಗೊಬ್ಬರಗಳು, ನೀರಾವರಿಯ ಅನುಕೂಲ ದೊರೆತು, ಹಸಿರು ಕ್ರಾಂತಿಯಾಯಿತು. ಒಂದು ಕಾಲದಲ್ಲಿ ಹೊರ ದೇಶಗಳಿಂದ ಆಮದು ಆಗುತ್ತಿದ್ದ, ಆಹಾರಕ್ಕೆ ಕಾಯುವ ಬದಲು ಸ್ವದೇಶದಲ್ಲಿಯೇ ಘಟಿಸಿದ ಕೃಷಿ ಕ್ರಾಂತಿಯಿಂದ ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಹಾರದ ಅವಶ್ಯಕತೆಯನ್ನು ಪೂರೈಸಲು ಸಾಧ್ಯವಾಯಿತು. ಆದರೆ, ಇದೇ ಕಾಲದಲ್ಲಿ ಹಲವಾರು ನ್ಯೂನತೆಗಳು ಕಂಡುಬಂದರೂ, ಅವುಗಳ ತೊಂದರೆಯನ್ನು ಗುರುತಿಸಲು ಸುಮಾರು 10 ವರ್ಷಗಳು ಬೇಕಾಯಿತು. 20ನೇ ಶತಮಾನದ ಕೊನೆಯ ದಶಕದಲ್ಲಿ ರೈತರು, ವಿಜ್ಞಾನಿಗಳು, ಆಡಳಿತಗಾರರಿಗೆ ಹಲವಾರು ಸಮಸ್ಯೆಗಳು ಎದುರಾದವು. ಅವುಗಳಲ್ಲಿ ಮುಖ್ಯವಾಗಿ ಕಲುಷಿತ ಮಣ್ಣು, ನೀರು, ವಾತಾವರಣ ಹಾಗೂ ಬೆಳೆಗಳ ಇಳುವರಿ ಇಳಿಮುಖವಾಗಿದ್ದಲ್ಲದೆ ಉತ್ಪಾದನಾ ವೆಚ್ಚ ಹೆಚ್ಚುತ್ತಾ ಹೋಯಿತು. ಈ ದಶಕದಲ್ಲಯೇ ಹಲವಾರು ಚಿಂತನೆಗಳು ನಡೆದು ಇತ್ತೀಚೆಗೆ ಪ್ರಚಾರಗೊಳಿಸುತ್ತಿರುವ ನಿರಂತರ ಕೃಷಿ ಅಥವಾ ಸಾವಯವ ಕೃಷಿ ಪದ್ದತಿಗಳು ರೈತರ ಗಮನ ಸೆಳೆದಿರುವುದು ಸಹಜವೇ.

      ಸಾವಯವ ಕೃಷಿ :

      ಕೃಷಿ ಉತ್ಪಾದನೆಗಳಲ್ಲಿ ರಾಸಾಯನಿಕ ಗೊಬ್ಬರಗಳು, ಕೀಟ ಹಾಗೂ ರೋಗ ನಾಶಕಗಳು ಬೆಳೆಯ ಬೆಳವಣಿಗೆಯನ್ನು ಪ್ರಚೋದಿಸುವ ಹಾಗೂ ಜಾನುವಾರುಗಳಿಗೆ ಕೊಡುವ ಮೇವುಗಳಲ್ಲಿಯೂ ಸಹ ಯಾವುದೇ ರಾಸಾಯನಿಕ ವಸ್ತುಗಳನ್ನು ನಿಷೇಧಿಸುವುದು ಸಾವಯವ ಬೇಸಾಯದ ಮೂಲ ತತ್ವ. ಅನ್ಯ ವಸ್ತುಗಳನ್ನು ಅವಲಂಬಿಸದೆ ಜಮೀನಿನಲ್ಲಿಯೇ, ಅದಷ್ಟು ಲಭ್ಯವಿರುವ ವಸ್ತುಗಳನ್ನೇ ಉಪಯೋಗಿಸಿಕೊಂಡು, ವ್ಯವಸಾಯ ನಡೆಸಿಕೊಂಡು ಹೋಗುವ ಪದ್ದತಿಗೆ ಸಾವಯವ ಬೇಸಾಯವೆನ್ನಬಹುದು.

      ಸುಸ್ಥಿರ ಕೃಷಿ:ಇದರ ಮೂಲ ಗುರಿ ಸ್ಥಳೀಯರಿಂದ, ಸ್ಥಳೀಯವಾಗಿ ದೊರೆಯುವ ಮೂಲವಸ್ತುಗಳಿಂದ ಬಿತ್ತನೆ, ಗೊಬ್ಬರ ನೀರು ಮತ್ತು ಸಲಕರಣೆಗಳ ಸಂಪನ್ಮೂಲಗಳನ್ನು ಬಳಸಿ, ಪರಿಸರಕ್ಕೆ ಹಾನಿಯಾಗದಂತೆ, ಹವಾಮಾನಕ್ಕೆ ಹೊಂದಿಕೊಂಡು, ಇಳುವರಿಯನ್ನು ಸದಾ ಒಂದು ಗರಿಷ್ಠ ಮಟ್ಟದಲ್ಲಿ ಕಾಪಾಡಿಕೊಂಡು ಬರುವಂತಹ ನೈಸರ್ಗಿಕ ಬೇಸಾಯಕ್ಕೆ ಸುಸ್ಥಿರ ಕೃಷಿ ಎಂದು ಹೇಳಬಹುದು.

      ಸಾವಯವ ಬೇಸಾಯದ ಅವಶ್ಯಕತೆ : ಹೆಚ್ಚು ಇಳುವರಿ ಪಡೆಯುವ ಹಂಬಲದಲ್ಲಿ ಆಧುನಿಕ ಕೃಷಿಯನ್ನು ಕೈಗೊಂಡು, ಮಣ್ಣಿನ ಆರೋಗ್ಯ ಕೆಟ್ಟಿರುವುದು ಮಾತ್ರವಲ್ಲದೆ, ಆಹಾರ ವಸ್ತುಗಳ ಗುಣಮಟ್ಟ ಇಳಿಮುಖವಾಗಿರುವುದು ಒಂದು ಕಾರಣವಾದರೆ, ಇವುಗಳ ಬಳಕೆಯಿಂದ ಆಗುತ್ತಿರುವ ಅನಾಹುತಗಳ ಬಗೆಗೆ ನಮ್ಮ ಜನರಲ್ಲಿ ತಿಳುವಳಿಕೆ ಮೂಡಿರುವುದು ಮತ್ತೊಂದು ಕಾರಣ. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ಪೂರೈಸಲು, ಆಹಾರ ಪದಾರ್ಥಗಳ ಗುಣಮಟ್ಟ ಕಾಪಾಡಿಕೊಂಡು ಬರಲು ಹಾಗೂ ಪ್ರಕೃತಿದತ್ತವಾದ ಮಣ್ಣು, ನೀರು ವಾತಾವರಣ ಕೆಡುವುದನ್ನು ನಿಯಂತ್ರಿಸುವ ದೃಷ್ಟಿಯಿಂದ ಸಾವಯವ ಬೇಸಾಯದ ಕಡೆ ನಮ್ಮ ಕೃಷಿಕರು ಗಮನಹರಿಸಬೇಕಾದ ಕಾಲ ಈಗ ಒದಗಿ ಬಂದಿದೆ.

      ಸಾವಯವ ಬೇಸಾಯದ ಗುರಿಗಳು

      1. ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸುವುದು.
      2. ಪ್ರಕೃತಿಯಲ್ಲಿ ಸಹಜವಾಗಿ ನಡೆಯುವ ಕ್ರಿಯೆಗಳನ್ನು ಉತ್ತೇಜಿಸಿ ಅವುಗಳನ್ನು ಸ್ವೀಕರಿಸುವುದು.
      3. ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಂಡು ಹೋಗುವುದು ಮತ್ತು ನೀರಿನ ಬಳಕೆಯಲ್ಲಿ ಎಚ್ಚರವಹಿಸಿ, ಸಂರಕ್ಷಿಸುವುದು.
      4. ಮಣ್ಣಿಗೆ ಸಾವಯವ ವಸ್ತುಗಳನ್ನು ಹಾಗೂ ಬೆಳೆಗಳಿಗೆ ಬೇಕಾಗುವ ಪೋಷಕಾಂಶಗಳನ್ನು ಮಣ್ಣು-ಸಸ್ಯ ಪ್ರಾಣಿ ಸಂಬಂಧಗಳ ಮೂಲಕ ಪಡೆಯುವುದು ಹಾಗೂ ಮಣ್ಣು-ನೀರು-ವಾತಾವರಣಗಳನ್ನು ಕಲುಷಿತಗೊಳಿಸದಿರುವುದು.
      5. ಸಸ್ಯ, ಪ್ರಾಣಿ ಹಾಗೂ ವಿವಿಧ ಪ್ರಭೇಧಗಳನ್ನು ಪೋಷಿಸುವುದು ಹಾಗೂ ರಕ್ಷಿಸುವುದು.
      6. ಹಳೆಯ ಅನುಕೂಲಕರ ಪದ್ದತಿಗಳನ್ನು ಉಳಿಸಿ ಬೆಳಸಿಕೊಳ್ಳುವುದು. ಸಾವಯವ ಬೇಸಾಯದ ಅಡಿಗಲ್ಲು ಮಣ್ಣಿನ ಗುಣಮಟ್ಟ ಹಾಗೂ ಉತ್ಪಾದಕ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಅಡಗಿದೆ.

      ನಮ್ಮ ದೇಶದ ಸ್ವಾತಂತ್ರ್ಯ ಪೂರ್ವದ ಕೃಷಿ, ಸಾವಯವ ಬೇಸಾಯಕ್ಕೆ ಹತ್ತಿರವಾಗಿ ಹಾಗೂ ಸಹಜವಾಗಿ ನಡೆದುಕೊಂಡು ಬರುತ್ತಿತ್ತು ಎನ್ನಬಹುದು. ಈಗ ಸಾವಯವ ಬೇಸಾಯದಲ್ಲಿ ಹಳೆಯ ಪದ್ದತಿಗಳನ್ನು ಮೈಗೂಡಿಸಿಕೊಂಡು ಹೊಸ ಜ್ಞಾನಗಳನ್ನು ತಿಳಿದುಕೊಂಡು ಹೊಂದಾಣಿಕೆ ಮಾಡಿಕೊಂಡು ಹೋಗಬೇಕು. ಒಂದು ಬೆಳೆಗೆ ಸುಮಾರು 68 ಕೆ.ಜಿ. ಸಾರಜನಕದ ಅವಶ್ಯಕತೆಯನ್ನು ಕೇವಲ ಮೂರು ಮೂಟೆಯೂರಿಯಾ ಗೊಬ್ಬರವನ್ನು ಬೆಳೆಗೆ ಕೊಡುವುದರ ಮೂಲಕ ಪೂರೈಸಬಹುದಾಗಿತ್ತು. ಆದರೆ ಸಾವಯವ ಬೇಸಾಯ ಕ್ರಮದಲ್ಲಿ ಭೂಮಿಗೆ ಕೊಡಬೇಕಾದರೆ 6 ಟನ್ ಕೊಟ್ಟಿಗೆ ಗೊಬ್ಬರ ಕೊಡಬೇಕಾಗುತ್ತದೆ. ಆದ್ದರಿಂದ ಸಾವಯವ ಬೇಸಾಯದ ರೈತರು ಹೆಚ್ಚು ಹೆಚ್ಚಾಗಿ ಸಹಜವಾಗಿ ದೊರೆಯುವ ಹಸಿರು ಗಿಡಗಳನ್ನು ಹಾಗೂ ಸೊಪ್ಪು, ಜಾನುವಾರುಗಳ ಸಗಣಿ, ಗಂಜಲಗಳನ್ನು ಸಂಗ್ರಹಿಸಿಕೊಂಡು ಕಾಂಪೋಸ್ಟ್ ಮಾಡಿಕೊಳ್ಳುವುದು ಅತ್ಯಗತ್ಯ ಜಮೀನಿನಲ್ಲಿ ಹಸಿರೆಲೆಗೊಬ್ಬರ ಬೆಳೆಗಳು, ದ್ವಿದಳಧಾನ್ಯದ ಬೆಳೆಗಳನ್ನು ಬೆಳೆಗಳ ಉತ್ಪಾದಕ ಚಕ್ರದಲ್ಲಿ ಅನುಸರಿಸುವುದರ ಮೂಲಕ ಭೂಮಿಯ ಗುಣಮಟ್ಟವನ್ನು ಅಭಿವೃದ್ದಿಪಡಿಸಲು ಸಾಧ್ಯವಾಗುತ್ತದೆ. ಈ ಕ್ರಮಗಳನ್ನು ಅನುಸರಿಸಬೇಕಾದಲ್ಲಿ ಸಾಕಷ್ಟು ಜನರು ದುಡಿಯಬೇಕು. ಇದರ ಬಗ್ಗೆ ಗಮನ ಕೊಡದೆ ಇದ್ದರೆ ಸಾವಯವ ಬೇಸಾಯ ಸಾಧ್ಯವೇ ಇಲ್ಲ.

      ಆಧುನಿಕ ಬೇಸಾಯದಿಂದ ಸಾವಯವ ಬೇಸಾಯಕ್ಕೆ ಪರಿವರ್ತನೆ. ಕಳೆದ 30-35 ವರ್ಷಗಳಿಂದ ಆಚರಣೆಯಲ್ಲಿರುವ ಬೆಳೆ ಉತ್ಪಾದನೆ ಕ್ರಮಗಳಿಂದ ಹೊರಬಂದು ಸಾವಯವ ಬೇಸಾಯಗಾರರಾಗಲು ಸುಮಾರು 2-3 ವರ್ಷಗಳು ಬೇಕಾಗುತ್ತವೆ. ಪ್ರಾರಂಭಿಕ ವರ್ಷದ ತೋಟಗಳನ್ನು 2 ವರ್ಷಗಳಲ್ಲಿಯೇ ಸಾವಯವ ತೋಟವನ್ನಾಗಿ ಪರಿವರ್ತಿತಗೊಳ್ಳಬಹುದು. ತೋಟಗಾರಿಕೆಯ ಬಹುವಾರ್ಷಿಕ ಬೆಳೆಯನ್ನು ಸಾವಯವ ಬೆಳೆಯಾಗಿ ಪರಿವರ್ತನೆ ಮಾಡಬೇಕಾದರೆ 3 ರಿಂದ 4 ವರ್ಷಗಳು ಬೇಕಾಗುತ್ತವೆ. ಅಂದರೆ ಈ ಪರಿವರ್ತನೆಯ ಕಾಲದಲ್ಲಿ ಬೀಜ, ಗೊಬ್ಬರ, ಕೀಟನಾಶಕ ಮತ್ತು ರೋಗನಿಯಂತ್ರಣಗಳನ್ನು ಸಾವಯವ ವಿಧಾನಗಳನ್ನು ಬಳಸಿ ಮಾಡಬೇಕಾಗುತ್ತದೆ.

      ಸಾವಯವ ಬೇಸಾಯಕ್ಕೆ ಪ್ರಾರಂಭಿಕವಾಗಿ ಗಮನಿಸಬೇಕಾದ ವಿಷಯಗಳು :

      ಆಹಾರ ಬೆಳೆಗಳಾಗಲಿ, ತೋಟಗಾರಿಕ ಬೆಳೆಗಳೇ ಆಗಲಿ ಅವುಗಳಿಗೆ ಸಾವಯವ ಗೊಬ್ಬರಗಳನ್ನಷ್ಟೆ ಕೊಟ್ಟು ಬೆಳೆದಾಗ ಪ್ರಾರಂಭದ ಕೆಲವು ವರ್ಷಗಳಲ್ಲಿ ಇಳುವರಿಯು ಕಡಿಮೆಯಾಗುತ್ತದೆ. ಮಣ್ಣಿನಲ್ಲಿ ಸಾವಯವ ವಸ್ತುಗಳ ಅಂಶ ಹೆಚ್ಚಿಸುವ ಕಾರ್ಯ ಮತ್ತು ಮಣ್ಣಿನ ಭೌತಿಕ, ರಾಸಾಯನಿಕ ಹಾಗೂ ಜೈವಿಕ ಗುಣಗಳ ಮಟ್ಟ ಹೆಚ್ಚಾಗುತ್ತಿದ್ದಂತೆ ಆ ಭೂಮಿಯಲ್ಲಿ ಬೆಳೆದ ಬೆಳೆಯ ಇಳುವರಿ ಹೆಚ್ಚುತ್ತಾ ಹೋಗುತ್ತದೆ. ಇಲ್ಲಿ ಕಂಡು ಬರುವ ಸಮಸ್ಯೆ ಎಂದರೆ, ಸಾವಯವ ಬೇಸಾಯಗಾರ ಈ ಇಳಿತದ ಕಾಲವನ್ನು ಮೆಟ್ಟಿನಿಲ್ಲುವ ಶಕ್ತಿಯನ್ನು ಪಡೆದಿರಬೇಕು. ಎರಡನೆಯದಾಗಿ, ಸಾವಯವ ಬೇಸಾಯದ ಬೆಳೆಗೆ, ಮಾರುಕಟ್ಟೆಯ ಬಗ್ಗೆ ಎಚ್ಚರಿಕೆಯಿರಬೇಕು. ಇಳುವರಿ ಕಡಿಮೆಯಾದಾಗ ಸಹಜವಾಗಿ ಬೆಳೆಯ ಬೆಲೆಯನ್ನು ಹೆಚ್ಚಿಸಬೇಕಾಗುತ್ತದೆ. ಬೆಳೆದ ಬೆಳೆಯು ನಗರ ಪ್ರದೇಶಗಳಿಗೆ ತಲುಪುವಂತಾಗಬೇಕು ಇಲ್ಲವೇ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪ್ರವೇಶವಾಗಬೇಕು. ಇವುಗಳು ಸಾಧ್ಯವಾಗಬೇಕಾದರೆ ಸಾವಯವ ಬೇಸಾಯಗಾರರಾಗುವ ಮೊದಲೇ ನೀಲಿ ನಕಾಶೆಯಾಗದ ಹೊರತು ಸಾವಯವ ಬೇಸಾಯ ಆಶಾದಾಯಕವಾಗುವುದು ಕಷ್ಟಕರವಾಗುತ್ತದೆ.

      ಸಾವಯವ ಬೇಸಾಯದ ಕ್ರಮಗಳು : ಸಕಾಲದಲ್ಲಿ ಉಳುಮೆ ಮತ್ತು ಬಿತ್ತನೆ ಮಾಡಿದಾಗ ಇಳುವರಿ ಹೆಚ್ಚುವುದಲ್ಲದೇ ಹಲವಾರು ರೋಗ, ಕೀಟಗಳ ಬಾಧೆಯನ್ನು ಹತೋಟಿಯಲ್ಲಿ ಇಡಬಹುದಾಗಿದೆ. ಬದುಗಳ ಮೇಲೆ, ಬೆಳೆಯ ಪ್ರದೇಶವನ್ನು ಅದಷ್ಟು ಕಳೆ ಬೀಳದಂತೆ ನಿಯಂತ್ರಿಸಿದಾಗ, ಬೆಳೆಗಳ ರೋಗಾಣುಗಳಿಗೆ ಆಶ್ರಯವಿಲ್ಲದಂತಾಗಿ ಬೆಳೆಗಳಿಗೆ ಕಂಡುಬರುವ ಕೀಟ, ರೋಗಗಳ ಬಾಧೆ ಕಡಿಮೆಯಾಗುತ್ತದೆ. ಬಳಸುವ ಬಿತ್ತನೆ ಬೀಜವನ್ನು ಆಯ್ಕೆ ಮಾಡಿಕೊಳ್ಳುವಾಗ ಹಾಗೂ ಬಿತ್ತುವಾಗ ಎಚ್ಚರಿಕೆ ಅವಶ್ಯಕ. ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಕೊಡುವುದಿಲ್ಲವಾದ್ದರಿಂದ, ಭೂಮಿಗೆ ಹೆಚ್ಚು ಸಾವಯವ ವಸ್ತುಗಳನ್ನು ಬೆಳೆಯ ಬಿತ್ತನೆ ಮುಂಚಿತವಾಗಿ ಸೇರಿಸಿದಾಗ ಮಾತ್ರ ಪೋಷಕಾಂಶಗಳು ದೊರೆಯುತ್ತವೆ. ಆದ್ದರಿಂದ ಕಾಂಪೋಸ್ಟ್ ಮಾಡಿಕೊಂಡು ಹಾಕುವುದು ಒಳ್ಳೆಯದು. ಇಲ್ಲಿ ಎರೆಹುಳುವಿನ ಕಾಂಪೋಸ್ಟ್ ತಯಾರಿಸಿಕೊಂಡು ಹಾಕುವುದರ ಬಗೆಗೂ ಗಮನ ಕೊಡಬೇಕು. ಪ್ರಕೃತಿದತ್ತವಾಗಿ ದೊರೆಯುವ ಶಿಲಾರಂಜಕ, ಡಲೋಮೈಟ್, ಸುಣ್ಣ ಜಿಪ್ಸಮ್ ಇವುಗಳನ್ನು ಬೆಳೆಗಳಿಗೆ ಕೊಡಬಹುದು. ಬೀಜೋಪಚಾರದ ಮೂಲಕವಾಗಲಿ, ಮಣ್ಣಿಗೆ ಸೇರಿಸುವುದರ ಮೂಲಕವಾಗಲಿ, ಜೀವಾಣು ಗೊಬ್ಬರಗಳನ್ನು ಬೆಳೆಗಳಿಗೆ ಕೊಡಬಹುದಾಗಿದೆ. ಮಣ್ಣಿಗೆ ಸೇರಿಸುವಾಗ ಕೋಳಿಗೊಬ್ಬರವಾಗಲಿ, ಸಗಣಿ ಕೊಡುವ ಜಾನುವಾರುಗಳಿಗೆ ಯಾವುದೇ ರೀತಿಯ ರಾಸಾಯನಿಕ ವಸ್ತುಗಳನ್ನು ಅವುಗಳಿಗೆ ಆಹಾರದಲ್ಲಾಗಲಿ, ಔಷಧಿಗಳ ಮೂಲಕವಾಗಲಿ ಕೊಡಬಾರದು.

      ಬೆಳೆಗಳ ರಕ್ಷಣಾ ಕ್ರಮಗಳು : ಬೇಸಾಯ ಕ್ರಮದಲ್ಲಿ ಬೋನು ಬೆಳೆಯಾಗಿ ಬೆಳೆಯ ಸುತ್ತ ಬೆಳೆದುಕೊಳ್ಳುವ ಮೂಲಕ ಹಲವು ಕೀಟಗಳನ್ನು ನಿಯಂತ್ರಿಸಬಹುದಾಗಿದೆ. ಉದಾಹರಣೆಗೆ ಕೋಸು ಬೆಳೆಯಲ್ಲಿ ಸಾಸುವೆ ಗಿಡಗಳನ್ನು ಬೆಳೆಸಬಹುದು. ಕೆಲವು ಕಡೆ ಹುಳ ಹುಪ್ಪಟೆಗಳನ್ನು ಕೈಗಳಿಂದ ಹಿಡಿದು ನಾಶಮಾಡಲೂಬಹುದು. ಬೇವಿನ ಹಿಂಡಿ, ಹೊಂಗೆ ಹಿಂಡಿ, ಇವುಗಳನ್ನು ನಿಗಧಿತ ಪ್ರಮಾಣದಲ್ಲಿ ಸೇರಿಸುವುದರ ಮೂಲಕ ಮಣ್ಣಿನೊಳಗಡೆ ಕಾಣಿಸುವ ಕೀಟಗಳನ್ನು ಹತೋಟಿಯಲ್ಲಿ ಇಡಬಹುದು. ಮಣ್ಣಿನ ಗುಣಮಟ್ಟ ಹೆಚ್ಚಿದಾಗ ಸೂಕ್ಷ್ಮಾಣುಗಳು ಹಾಗೂ ಉಪಯುಕ್ತ ಕೀಟಗಳು ಹೆಚ್ಚಿ ಉಪದ್ರವ ಕೀಟಗಳು ವೃದ್ದಿಯಾಗುವಂತೆ ತಡೆಯುತ್ತವೆ. ನಾಶಮಾಡಬಲ್ಲ ಪರೋಪ ಜೀವಿಗಳ ಸಂಖ್ಯೆಯನ್ನು ಸಾಕಷ್ಟು ನಿಸರ್ಗದಲ್ಲಿ ಹೆಚ್ಚಿಸಬಹುದು ಬೀಜಾಣು ನಂಜು ರೋಗಾಣುಗಳನ್ನು ಸಹ ಬೆಳೆಗೆ (ಉದಾ: ತೊಗರಿಬೆಳೆಗೆ) ಸಿಂಪಡಿಸುವ ಮೂಲಕ ಕಾಯಿಕೊರಕದ ಬಾಧೆಯನ್ನು ತಡೆಯಬಹುದು. ಮೋಹಕ ಬಲೆಗಳನ್ನು ಬಳಸುವುದರ ಮೂಲಕ ಹಲವು ಕೀಟಗಳನ್ನು ನಿಯಂತ್ರಿಸಬಹುದು. ಈ ಎಲ್ಲಾ ಕ್ರಮಗಳನ್ನು ಸಾಮೂಹಿಕವಾಗಿ ಕೈಗೊಂಡಾಗ ಮಾತ್ರ ಕೀಟಗಳ ಬಾಧೆಯನ್ನು ನಿಯಂತ್ರಿಸಲು ಸಾಧ್ಯ. ಅಲ್ಲದೆ ಇತ್ತೀಚಿನ ವರ್ಷಗಳಲ್ಲಿ ಬಿಡುಗಡೆಯಾಗಿರುವ ಹಲವು ರೋಗಬಾಧೆ ನಿರೋಧಿಸುವ ಶಕ್ತಿಯಿರುವ ತಳಿಗಳನ್ನು ಬಿತ್ತನೆಗೆ ಬಳಸಬೇಕು. ಜೈವಿಕ ರೀತಿಯಲ್ಲಿಯೂ ರೋಗಗಳ ಹತೋಟಿ ಸಾಧ್ಯವಾಗಿದೆ. ಇವುಗಳಲ್ಲದೆ ಸಾವಯವ ರೋಗನಾಶಕಗಳಾದ ಸಸ್ಯ ಮತ್ತು ಪ್ರಾಣಿ ಜನ್ಯದ ಕಷಾಯಗಳನ್ನು ಸಿಂಪಡಿಸುವುದರ ಮೂಲಕ ರೋಗಗಳ ಬಾಧೆಯನ್ನು ತಡೆಯಬಹುದಾಗಿದೆ. ಸಾವಯವ ಬೇಸಾಯದಲ್ಲಿ ರಾಸಾಯನಿಕ ಕೀಟನಾಶಕ ಹಾಗೂ ರೋಗನಾಶಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.

      ಸಾವಯವ ಬೇಸಾಯದ ಪ್ರಮಾಣ ಪತ್ರ (ಸರ್ಟಿಫಿಕೇಟ್) : ಸಾವಯವ ರೈತರು ಬೆಳೆದ ಆಹಾರ ಬೆಳೆಗಳು, ಹಣ್ಣು ಹಂಪಲುಗಳು, ತರಕಾರಿ ಬೆಳೆಗಳನ್ನು ಸಾವಯವ ಬೇಸಾಯ ಕ್ರಮದಿಂದ ಬೆಳೆದ ಉತ್ಪನ್ನಗಳೆಂದು ಖಾತರಿಯಾಗಲು ಕೆಲವು ಸಂಘ ಸಂಸ್ಥೆಗಳು ಈ ಕೆಲಸ ಮಾಡಿಕೊಡಲು ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲಾಗಿದೆ. ಉದಾಹರಣೆಗೆ, ಐಪೋಮ್, ಏಷ್ಯಾ ಅಂಗ ಸಂಸ್ಥೆಗಳು ನಮ್ಮ ದೇಶದಲ್ಲಿ ಈ ಜವಾಬ್ದಾರಿಯನ್ನು ಹೊತ್ತಿವೆ. ಅವರ ಜೊತೆ ಸಂಪರ್ಕ ಬೆಳೆಸಿಕೊಂಡು, ಅವರು ನೇಮಿಸಿದ ವ್ಯಕ್ತಿಗಳು ಹಲವಾರು ಬಾರಿ ಸಾವಯವ ಬೇಸಾಯದ ತಾಕುಗಳನ್ನು ಪರೀಕ್ಷಿಸಿ ಸರ್ಟಿಫಿಕೇಟ್ ಕೊಟ್ಟಾಗಲೇ ನಿಮ್ಮ ಬೆಳೆ ಸಾವಯವ ಬೇಸಾಯದ ಉತ್ಪನ್ನವೆಂದು ಗುರುತಿಸಲಾಗುತ್ತದೆ. ಕೆಲವು ಅಂತರರಾಷ್ಟ್ರೀಯ ರಫ್ತು ಸಂಸ್ಥೆಗಳು ಹೊರದೇಶಗಳೊಡನೆ ಸಂಪರ್ಕವಿಟ್ಟುಕೊಂಡು ಅವಶ್ಯಕತೆಯಿರುವ ಬೆಳೆಗಳು ಹಾಗೂ ಪ್ರಮಾಣದ ಬಗೆಗೆ ಮಾಹಿತಿ ಕೊಡುತ್ತಿರುತ್ತಿವೆ. ಸಾವಯವ ಕೃಷಿಕರು ಇವರೊಡನೆ ಮುಂದಾಗಿ ಸಂಪರ್ಕ ಬೆಳೆಸಿಕೊಂಡು, ನಿಗದಿತ ಗುಣಮಟ್ಟದಲ್ಲಿ ಬೆಳೆದ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡಿ ಹೆಚ್ಚು ಲಾಭಗಳಿಸಲು ಸಾಧ್ಯವಿದೆ. ಸಾವಯವ ಬೇಸಾಯಗಾರರು ಸಂಘಟಿಸಿಕೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಾವಯವ ಬೇಸಾಯದ ಬೆಳೆಗಳಿಗೆ ಹೆಚ್ಚು ಬೆಲೆ ನಿಗಧಿಪಡಿಸುವಂತೆಯೂ ಒತ್ತಾಯಿಸಲು ಸಾಧ್ಯ.

      ಮೂಲ :ಡಾ. ಎನ್. ದೇವಕುಮಾರ್, ಡಾ. ಕೆ.ಟಿ. ಕೃಷ್ಣೇಗೌಡ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು.

      ಪೀಡೆನಾಶಕ

      ಆಧುನಿಕ ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳು, ರೋಗನಾಶಕಗಳು, ಕಳೆನಾಶಕಗಳು, ನುಸಿನಾಶಕಗಳು ಮತ್ತು ಇತರ ಪೀಡೆನಾಶಕಗಳು ಬಳಕೆ ಅನಿವಾರ್ಯವಾಗಿದೆ. ಬಹುತೇಕ ಪೀಡೆ ನಾಶಕಗಳು ವಿಷ ಪದಾರ್ಥಗಳಾಗಿದ್ದು, ಅವುಗಳ ಅಸಮರ್ಪಕ ಬಳಕೆಯಿಂದ ಮನುಷ್ಯ ಅನ್ಯ ಜೀವಿಗಳು ಹಾಗೂ ಪರಿಸರದ ಮೇಲೆ ದುಷ್ಪರಿಣಾಮಗಳಾಗುವ ಸಾಧ್ಯತೆಗಳಿವೆ. ಇದಲ್ಲದೆ ರಾಸಾಯನಿಕಗಳ ಯಥೇಚ್ಛ ಬಳಕೆಯ ಪರಿಣಾಮವಾಗಿ ಕೆಲವು ಪೀಡೆಗಳು ನಿರೋಧಕ ಶಕ್ತಿ ಪಡೆದುಕೊಂಡರೆ ಇನ್ನೂ ಕೆಲವು ತೀವ್ರವಾಗಿ ವೃದ್ದಿಗೊಂಡು ಬೆಳೆಗಳಿಗೆ ಹೆಚ್ಚಿನ ಬಾಧೆಯನ್ನುಂಟು ಮಾಡುತ್ತವೆ. ಈ ಸಮಸ್ಯೆಗಳಿಗೆ ಪೂರಕವಾಗಿ ರೈತರು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪೀಡೆನಾಶಕಗಳನ್ನು ಬಳಸಿದಾಗ ಸಸ್ಯ ಸಂರಕ್ಷಣೆಯ ವೆಚ್ಚ ಅತಿಯಾಗಿ ಬೆಳೆಯಿಂದ ಸಿಗುವ ಆರ್ಥಿಕ ಆದಾಯ ಕಡಿಮೆಯಾಗುತ್ತದೆ. ಪೀಡೆನಾಶಕಗಳ ಸಮರ್ಪಕ ಮತ್ತು ಸುರಕ್ಷಿತ ಬಳಕೆಯಿಂದ ಈ ಎಲ್ಲಾ ತೊಂದರೆಗಳನ್ನು ತಪ್ಪಿಸಬಹುದಾಗಿದೆ.

      ಸಮರ್ಪಕ ಬಳಕೆಯ ವಿಧಾನಗಳು

      1. ಪೀಡೆಗಳ ಸಂಖ್ಯೆ ಆರ್ಥಿಕ ಹಾನಿಯ ಮಟ್ಟಕ್ಕಿಂತ ಹೆಚ್ಚಾಗಿದ್ದಾಗ ಮಾತ್ರ ರಾಸಾಯನಿಕಗಳನ್ನು ಉಪಯೋಗಿಸಿದಲ್ಲಿ ಅವುಗಳ ಅನಾವಶ್ಯಕ ಬಳಕೆಯನ್ನು ತಡೆಯಬಹುದು.
      2. ಸಾಧ್ಯವಿದ್ದಲ್ಲಿ ಇತರೆ ಹತೋಟಿ ಕ್ರಮಗಳನ್ನು ಅನುಸರಿಸಿ ಪೀಡೆ ನಿರ್ವಹಣೆ ಮಾಡುವುದು ಸೂಕ್ತ. ಪೀಡೆನಾಶಕಗಳ ಬಳಕೆ ಅಂತಿಮ ಆಯ್ಕೆಯಾಗಬೇಕು.
      3. ಶಿಫಾರಸ್ಸು ಮಾಡಿದ ಪೀಡೆ ನಾಶಕಗಳನ್ನು ಮಾತ್ರ ನಿಗಧಿತ ಪ್ರಮಾಣದಲ್ಲಿ ಬಳಸಬೇಕು.
      4. ಒಂದೇ ರಾಸಾಯನಿಕವನ್ನು ಪದೇ ಪದೇ ಉಪಯೋಗಿಸಬಾರದು.
      5. ಅವೈಜ್ಞಾನಿಕವಾಗಿ 2-3 ಕೀಟನಾಶಕಗಳನ್ನು ಅಥವಾ ರೋಗನಾಶಕಗಳನ್ನು ಬೆರೆಸಿ ಸಿಂಪಡಿಸುವುದರಿಂದ, ಹೆಚ್ಚಿನ ಹತೋಟಿ ದೊರೆಯುವುದಿಲ್ಲ. ಇದರಿಂದಾಗುವ ದುಷ್ಪರಿಣಾಮಗಳು ಹೆಚ್ಚು.
      6. ಎರಡು ಸಿಂಪರಣೆಗಳ ಮಧ್ಯೆ ಕನಿಷ್ಟ 8 ರಿಂದ 15 ದಿನಗಳ ಅಂತರವಿರಬೇಕು. ಪದೇ ಪದೇ ಸಿಂಪರಣೆ ಮಾಡುವುದರಿಂದ ಹೆಚ್ಚಿನ ಹತೋಟಿ ದೊರೆಯುವುದಿಲ್ಲ.
      7. ಪೀಡೆನಾಶಕಗಳನ್ನು ಸರಿಯಾದ ಸಮಯದಲ್ಲಿ (ಪೀಡೆಯ/ರೋಗದ/ಬೆಳೆಯ ಹಂತ) ಸಮರ್ಪಕ ಉಪಕರಣಗಳನ್ನು ಬಳಸಿ ಸಿಂಪಡಿಸಿದಲ್ಲಿ ಉತ್ತಮ ಹತೋಟಿ ಮಾಡಬಹುದಾಗಿದೆ. ಬೆಳೆಗಳಿಗನುಗುಣವಾಗಿ ಒಂದು ಎಕರೆಗೆ ಸರಾಸರಿ 200 ರಿಂದ 400 ಲೀಟರ್ ಸಿಂಪರಣಾ ದ್ರಾವಣವನ್ನು ಬಳಸಬೇಕು.

      ಸುರಕ್ಷಿತ ಬಳಕೆಯ ವಿಧಾನಗಳು :

      1. ಶೇಖರಣೆ :
      2. ಪೀಡೆ ನಾಶಕಗಳನ್ನು ಆಹಾರ ಪದಾರ್ಥಗಳ ಜೊತೆಗೆ ಶೇಖರಣೆ ಮಾಡಬಾರದು.

        ಮಕ್ಕಳ ಕೈಗೆ ಸಿಗುವ ಹಾಗೆ ಇಡಬಾರದು.

        ಬಳಸಿ ಉಳಿದ ಕೀಟನಾಶಕವನ್ನು ಅದೇ ಡಬ್ಬಿ / ಬಾಟಲಿಯಲ್ಲಿ ಇಡಬೇಕು.

      3. ಸಿಂಪರಣಾ ದ್ರಾವಣ ತಯಾರಿಕೆ :
      4. ರಾಸಾಯನಿಕ ಬಳಸುವ ಮುನ್ನ ಉಪಯೋಗಿಸುವ ವಿಧಾನದ ಬಗ್ಗೆ ಮಾಹಿತಿಯನ್ನು ಓದಿ ತಿಳಿಯಬೇಕು. ಕೀಟನಾಶಕ ದ್ರಾವಣವನ್ನು ಬರಿಗೈಯಿಂದ ಮುಟ್ಟಬಾರದು.

        ರಾಸಾಯನಿಕಗಳನ್ನು ನೀರಿನಲ್ಲಿ ಬೆರೆಸಲು ಪ್ರತ್ಯೇಕವಾದ ಬಕೆಟ್ ಅಥವಾ ಡ್ರಮ್‍ಗಳನ್ನು ಬಳಸಬೇಕು.

      5. ಸಿಂಪರಣೆ :
      6. ಬೆಳಿಗ್ಗೆ ಅಥವಾ ಸಾಯಂಕಾಲದ ಸಮಯದಲ್ಲಿ ಸಿಂಪರಣೆ ಮಾಡುವುದು ಉತ್ತಮ.

        ಚಿಕ್ಕ ಮಕ್ಕಳುಮೈಮೇಲೆ ಗಾಯವಿರುವವರು ಮತ್ತು ಅನಾರೋಗ್ಯದಿಂದ ಬಳಲುವವರನ್ನು ಸಿಂಪರಣಾ ಕ್ರಿಯೆಯಲ್ಲಿ ತೊಡಗಿಸಬಾರದು.

        ಮೈಮೇಲೆ ರಾಸಾಯನಿಕ ಬೀಳದ ಹಾಗೆ ಸಿಂಪರಿಸಬೇಕು.

        ನಾಜಲ್ ಕಟ್ಟಿಕೊಂಡರೆ ಬಾಯಿಯಿಂದ ಊದಿ ಸರಿಪಡಿಸಲು ಪ್ರಯತ್ನಿಸಬಾರದು.

        ಸಂಪೂರ್ಣ ಮೈ ಮುಚ್ಚುವ ಹಾಗೆ ಕೋಟು, ಕೈ ಚೀಲಗಳು ಮತ್ತು ಬೂಟುಗಳನ್ನು ಧರಿಸಬೇಕು.

        ಸಿಂಪಡಿಸುವಾಗ ಆಹಾರ ಸೇವನೆ, ಧೂಮಪಾನ ಮಾಡಬಾರದು.

      7. ಸಿಂಪರಣೆಯ ನಂತರ :
      8. ಸಿಂಪರಣಾ ಉಪಕರಣಗಳನ್ನು ನೀರು ಉಪಯೋಗಿಸಿ ತೊಳೆದಿಡಬೇಕು. ಬಾವಿಯಲ್ಲಿ / ಕೆರೆಕಟ್ಟೆಗಳಲ್ಲಿ ಅಥವಾ ನಾಲೆಗಳಲ್ಲಿ ತೊಳೆಯಬಾರದು.

        ಖಾಲಿ ಪೀಡೆನಾಶಕ ಡಬ್ಬ / ಬಾಟಲಿಗಳನ್ನು ಜಜ್ಜಿ ಮಣ್ಣಿನಲ್ಲಿ ಮುಚ್ಚಬೇಕು.

        ಬಳಸಿ ಉಳಿದ ಸಿಂಪರಣಾ ದ್ರಾವಣವನ್ನು ಶೇಖರಿಸಿಡಬಾರದು, ಸಿಂಪರಣೆಯ ನಂತರ ಚೆನ್ನಾಗಿ ಸ್ನಾನಮಾಡಿ, ಬಟ್ಟೆ ಬದಲಾವಣೆ ಮಾಡಬೇಕು.

        ಸಿಂಪಡಿಸಿದ ಪ್ರದೇಶದಲ್ಲಿ ಜಾನುವಾರುಗಳನ್ನು ಹುಲ್ಲು ಮೇಯಲು ಬಿಡಬಾರದು.

        ಸಿಂಪಡಿಸಿದ ಯಾವುದೇ ಪದಾರ್ಥವನ್ನು ಸುರಕ್ಷಿತ ಅವಧಿ ಮುಗಿಯುವವರೆಗೆ ಸೇವಿಸಲು ಬಳಸಬಾರದು. ಅಂದರೆ ಸಿಂಪರಣೆ ನಂತರ ಕನಿಷ್ಟ 10-12 ದಿನಗಳವರೆಗೆ ಬೆಳೆಯನ್ನು ಕಟಾವು ಮಾಡಬಾರದು ಮತ್ತು ಹಣ್ಣು, ಕಾಯಿಗಳನ್ನು ಕೀಳಬಾರದು.

      9. ಪ್ರಥಮ ಚಿಕಿತ್ಸೆ
      10. ಮೈ ಮೇಲೆ ಅಥವಾ ಕಣ್ಣಲ್ಲಿ ರಾಸಾಯನಿಕ ಬಿದ್ದಲ್ಲಿ, ತಕ್ಷಣ ಹೆಚ್ಚು ನೀರನ್ನು ಬಳಸಿ ತೊಳೆದುಕೊಳ್ಳಬೇಕು. ರಾಸಾಯನಿಕವನ್ನು ಸೇವಿಸಿದ್ದ ಪಕ್ಷದಲ್ಲಿ, ತಕ್ಷಣ ವಾಂತಿ ಮಾಡಿಸಬೇಕು. ನಂತರ ಹಾಲು ಅಥವಾ ನೀರು ಮತ್ತು ಹಿಟ್ಟನ್ನು ಮಿಶ್ರಣ ಮಾಡಿ ಕುಡಿಸುವುದರಿಂದ ಹೊಟ್ಟೆಯಲ್ಲಿ ವಿಷದ ಪರಿಣಾಮ ಕಡಿಮೆಯಾಗುತ್ತದೆ. ನಂತರ ರೋಗಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಬೇಕು. ರಾಸಾಯನಿಕದ ಡಬ್ಬ / ಬಾಟಲನ್ನು ವೈದ್ಯರಿಗೆ ತೋರಿಸಿ ಸೂಕ್ತ ಚಿಕಿತ್ಸೆ ಮಾಡಿಸಬೇಕು.

    ಕೊನೆಯ ಮಾರ್ಪಾಟು : 5/31/2020



    © C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
    English to Hindi Transliterate