অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಳೆ ನೀರು ಸಂಗ್ರಹಣೆಯ ವಿವಿಧ ವಿಧಾನಗಳು

ಮಳೆ ನೀರು ಸಂಗ್ರಹಣೆಯ ವಿವಿಧ ವಿಧಾನಗಳು

ಅಂತರ್ಜಲ ಮರುಪೂರಣ ಅಚನಾ ವಿಧಾನಗಳನ್ನು ಬಲಕೆಯಲ್ಲಿರುವ ಪದ್ಧತಿಯನುಸಾರ ನೇರ ಮತ್ತು ಬಳಸು ವಿಧಾನವೆಂದು ಎರಡು ಗುಂಪುಗಳಾಗಿ ವಿಂಗಡಿಸಬಹುದಾಗಿದೆ. ಬಳಕೆಯಲ್ಲಿರುವ ವಿವಿಧ ವಿಧಾನಗಳನ್ನು ಈ ಕೆಳಗೆ ವಿವರಿಸಲಾಗಿದೆ.

1. ನೇರ ವಿಧಾನ

ಅ. ಶಾಶ್ವತ ಆಕೃತಿಗಳು

1. ತಡೆ ಆಣೆ (ಚೆಕ್ ಡ್ಯಾಂ)
2. ನಾಲಾ ಬದು (ಜಿನುಗು ಕೆರೆ)
3. ಇಂಗು ಕೊಳ
4. ತೊರೆ ಕಾಲುವೆ (ಗುಂಡಿ ಮತ್ತು ಉಳುಮೆ ಸಾಲು ವಿಧಾನ)
5. ಕೃಷಿ ಹೊಂಡ

ಆ. ಜಲವಾಹಿನಿಗಂಟ ಅಲ್ಪ ವೆಚ್ಚದ ಆಕೃತಿಗಳು

1. ಗ್ಯಾಬಿಯನ್ ಆಕೃತಿಗಳು
2. ಉಸುಕಿನ ಚೀಲದ ಆಣೆ

2. ಬಳಸು ವಿಧಾನ

1. ಮರು ಪೂರೈಕೆ ಸುರಂಗಗಳು
2. ಇಂಗು ಗುಂಡಿಗಳು
3. ಪ್ರತ್ಯೇಕ ಬಾವಿ ಮರು ಪೂರೈಕೆ

3. ಸಂಯುಕ್ತ ವಿಧಾನಗಳು

4. ಮೇಲ್ಛಾವಣೆ ಮಳೆ ನೀರಿನ ಕೊಯ್ಲು

1. ನೇರ ವಿಧಾನ

ಅ. ಶಾಶ್ವತ ಆಕೃತಿಗಳು

1. ತಡೆ ಆಣೆ (ಚೆಕ್ ಡ್ಯಾಂ)

ಇದು ಆಳವಾದ ಹಳ್ಳಗಳಿಗೆ ಅಡ್ಡವಾಗಿ ಕಟ್ಟಿದ ಕಲ್ಲು, ಸಿಮೆಂಟ್, ಗಾರೆಯ ರಚನೆಯಾಗಿದ್ದು ಇದನ್ನು ಕೆಳಗಿನ ಉದ್ದೇಶಗಳಿಗಾಗಿ ಕಟ್ಟಲಾಗುತ್ತದೆ.

ಉದ್ದೇಶಗಳು

1. ಹರಿದು ಹೋಗುವ ನೀರನ್ನು ತಡೆಗಟ್ಟಿ ಭೂಮಿಯಲ್ಲಿ ಇಂಗುವಂತೆ ಮಾಡಿ ಭೂಮಿಯಲ್ಲಿಯ ಅಂತರ್ಜಲ ಪಾತಳಿಯನ್ನು ಹೆಚ್ಚಿಸುವುದು.
2. ಹಳ್ಳಿಗಳಲ್ಲಿ ಹೆಚ್ಚು ದಿನಗಳವರೆಗೆ ದನ-ಕರುಗಳಿಗೆ ಕುಡಿಯಲು ಮತ್ತು ಗೃಹ ಬಳಕೆಗೆ ನೀರು ಲಭ್ಯವಾಗುವಂತೆ ಮಾಡುವುದು.
3. ರಕ್ಷಣಾತ್ಮಕ ನೀರಾವರಿಗೆ ನೀರನ್ನು ಬಳಸಿ ಕೃಷಿ ಉತ್ಪಾದನೆ ಹೆಚ್ಚಾಗಲು ನೆರವಾಗುವುದು.

2. ನಾಲಾ ಬದು/ ಜಿನಗು ಕರೆ/ ನಾಲಾ ಬಂಡಿಂಗ್

ಅಂತರ್ಜಲದ ಮರು ಪೂರಣದ ದಿಶೇಯಲ್ಲಿ ಒಂದು ಹೆಜ್ಜೆಯಾಗಿ ಬಸಿಯುವ ಹಳ್ಳದ ಮಣ್ಣಿನ ಒಡ್ಡುಗಳ ನಿರ್ಮಾಣ ಕಾರ್ಯವನ್ನು ಕೈಕೊಳ್ಳಲಾಗುತ್ತಿದೆ. ನಾಲಾ ಬದುವಿನ ಉದ್ದೇಶಗಳೆಂದರೆ

• ಸಂಗ್ರಹಿಸಿದ ನೀರು ಭೂಮಿಯಲ್ಲಿ ಇಂಗುವಂತೆ ಮಾಡಿ ಭೂಮಿಯಲ್ಲಿ ನೀರಿನ ಪ್ರಮಾಣ ಹೆಚ್ಚಿಗೆ ಮಾಡುವುದು
• ಅಂತರ್ಜಲ ಅಸಮತೋಲನ ನಿವಾರಿಸುವುದು
• ಈ ರೀತಿ ಬದುವನ್ನು ಕಟ್ಟುವ ಸ್ಥಳವು ಹೆಚ್ಚು ನೀರು ಇಂಗುವ ಮತ್ತು ಬಸಿಯುವ ಗುಣವುಳ್ಳದ್ದಾಗಿರಬೇಕು. ಒಟ್ಟಿನಲ್ಲಿ ಕೆಳಗಡೆಯ ಕ್ಷೇತ್ರವಾದಲ್ಲಿ ಬಾವಿಗಳು ಇರಬೇಕು ಹಾಗೂ ಒಡ್ಡು ನಿರ್ಮಿಸಬೇಕಾದ ಸ್ಥಳದಲ್ಲಿ ಎರಡೂ ಬದಿಗೂ ದಿನ್ನೆ ಇರತಕ್ಕದ್ದು.

3. ಇಂಗು ಕೊಳಗಳು

ಇವುಗಳು ಹೆಚ್ಚು ಆಳವಿಲ್ಲದ ತಗ್ಗುಗಳಾಗಿದ್ದು, ಪ್ರಾಕೃತಿಕವಾಗಿ ಹರಿದು ಹೋಗುವಂತಹ ತೊರೆಗಳ ಹರಿವಿನ ಪ್ರದೇಶದಲ್ಲಿ ನಿರ್ಮಿಸಬಹುದಾಗಿದೆ. ಭೌಗೋಳಿಕವಾಗಿ ಸಮತಟ್ಟು ಪ್ರದೇಶ ಅಥವಾ ಕಿರು ಇಳಿಜಾರು ಪ್ರದೇಶದಲ್ಲಿ ಇಂಗು ಕೊಳಗಳನ್ನು ನಿರ್ಮಿಸಬಹುದಾಗಿದೆ. ಆಯ್ಕೆ ಮಾಡಲಾಗುವ ಸ್ಥಳಗಳು ಹೆಚ್ಚು ನೀರು ಇಂಗುವುದಕ್ಕೆ ಸಹಕರಿಸುವಂತಿರಬೇಕು ಹಾಗೂ ನೀರು ಹೆಚ್ಚಾಗಿ ಆವಿಯಾಗುವುದಕ್ಕೆ ಅವಕಾಶವಿರಬಾರದು. ಇಳಿಜಾರು ಪ್ರದೇಶಗಳಲ್ಲಿ ಇಂಗು ಕೊಳ ನಿರ್ಮಿಸಿದಲ್ಲಿ ಇಂಗಿದ ನೀರು ಇಳಿಜಾರಿನಲ್ಲಿ ಹರಿದು ಹೋಗಿ ಹೆಚ್ಚು ನೀರು ಇಂಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

4. ತೊರೆ ಕಾಲುವೆ ವಿಧಾನ (ಗುಂಡಿ ಮತ್ತು ಉಳುಮೆ ಸಾಲು ವಿಧಾನಗಳು)

ಈ ವಿಧಾನದಲ್ಲಿ ನೀರು ಬಸಿಯುವಂತೆ ಮಾಡಲು ನೀರು ಶೇಖರಣಾ ಸ್ಥಳದ ವಿಸ್ತೀರ್ಣ ಹಾಗೂ ನೀರು ನಿಲ್ಲುವ ಕಾಲಮಿತಿ ಹೆಚ್ಚಾಗಿರಬೇಕಾಗುತ್ತದೆ. ಈ ವಿಧಾನವನ್ನು ಅಳವಡಿಸಿದ ಪ್ರದೇಶದ ಮೇಲ್ಹರಿವಿನಲ್ಲಿ ನೀರು ಶೇಖರಣಾ ವ್ಯವಸ್ಥೆಯಿದ್ದಲ್ಲಿ ತೊರೆಗಳ ಮೂಲಕ ನೀರು ನಿರಂತರವಾಗಿ ಹರಿದು ಬರುತ್ತಿದ್ದು, ಇಂಗುವಿಕೆಗೆ ಸಹಕಾರಿಯಾಗುತ್ತದೆ. ತೊರೆಯಲ್ಲಿ ಹೆಚ್ಚು ಛಿದ್ರತೆ ಹಾಗೂ ಶಿಥಿಲಯಿರುವ ಕಲ್ಲುಗಳಿದ್ದಲ್ಲಿ, ಇಂಗುವಿಕೆಗೆ ಬಹಳ ಅನುಕೂಲವಾಗುತ್ತದೆ. ತೊರೆಯ ಅಗಲವನ್ನು ಹೆಚ್ಚಿಸುವುದು, ಮಟ್ಟಮಾಡುವುದು, ಅಲ್ಲಲ್ಲಿ ತಗ್ಗು ತೆಗೆಯುವುದು, ಸಾಧ್ಯವಿರುವಡೆ ಚಿಕ್ಕ ಚೆಕ್ ಡ್ಯಾಂಗಳ ನಿರ್ಮಾಣ, ಮುಂತಾದವುಗಳಿಂದ ನೀರು ಶೇಖರಣೆಗೊಂಡು ಇಂಗುವಿಕೆಗೆ ಸಹಕಾರಿಯಾಗುತ್ತದೆ. ತೊರೆಯ ಇಕ್ಕೆಲಗಳಲ್ಲಿ ಗೋಡೆಗಳ ನಿರ್ಮಾಣದಿಂದ ನೀರು ಹರಡಿ ಹೋಗದಂತೆ ಮಾಡಿ ನಿಶ್ಚಲ ಮಾರ್ಗದಲ್ಲಿ ಹರಿದು ಹೋಗುವುದಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ.

5. ಕೃಷಿ ಹೊಂಡ

ಕೃಷಿ ಹೊಂಡಗಳನ್ನು ಜಮೀನಿನ ಅತಿ ಇಳಿಜಾರಿನ ಪ್ರದೇಶದಲ್ಲಿ ನಿರ್ಮಿಸಲಾಗುವುದು. ಸಾಮಾನ್ಯವಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು ಹೆಕ್ಟೇರ್ ಜಲಾನಯನ ಪ್ರದೇಶಕ್ಕೆ 150 ಘ.ಮೀ. ಸಾಮಥ್ರ್ಯದ ಕೃಷಿ ಹೊಂಡ ಬೇಕಾಗುವುದು. ಕೃಷಿ ಹೊಂಡದಲ್ಲಿಯ ನೀರನ್ನು ಬೆಳೆಗಳಿಗೆ ಜೀವರಕ್ಷಕ ನೀರನ್ನು ಪೂರೈಸಲು, ದನಕರುಗಳಿಗೆ ನೀರುಣಿಸಲು, ಉಳ್ಳಾಗಡ್ಡಿ, ಮೆಣಸಿನಕಾಯಿ ಅಥವಾ ಇನ್ನಿತರೇ ಸಸಿ ಮಡಿಗಳನ್ನು ಮಾಡಲು (ನಿರ್ವಹಿಸಲು) ಉಪಯೋಗಿಸಬಹುದು.

ಆ. ಜಲವಾಹಿನಿಗುಂಟ ಅಲ್ಪ ವೆಚ್ಚದ ಆಕೃತಿಗಳು

1. ಒಣಕಲ್ಲಿನ ತಡೆ ಆಣೆ

ನೀರನ್ನು ಹೆಚ್ಚಾಗಿ ನಿಲ್ಲಿಸುವ ಅವಶ್ಯಕತೆ ಇಲ್ಲದೆ ಇರುವ ಹಾಗೂ ಮಣ್ಣನ್ನು ಮಾತ್ರ ಕೊಚ್ಚಿ ಹೋಗುವುದನ್ನು ತಡೆ ಹಿಡಿಯಲು (ನೀರು ಬಸಿದು ಹೋಗಲು) ಕಮರಿನ ಸುಧಾರಣೆಗಾಗಿ ಮಧ್ಯಸ್ತರದ ಜಲವಾಹಿನಿಗಳಲ್ಲಿ ಇದನ್ನು ಕಟ್ಟಲಾಗುತ್ತದೆ. ಒಣಕಲ್ಲಿನ ತಡೆಅಣೆಗಳ ನಿರ್ಮಾಣದಿಂದ ರೇವೆ ಮಣ್ಣಿನ (ಸಿಲ್ಟ್) ಸಂಗ್ರಹವಾಗಿ, ಕೊರಕಲುಗಳಲ್ಲಿ ತೇವಾಂಶ ಹೆಚ್ಚಿ ಸಸ್ಯಗಳು ಬೆಳೆಯಲು ಅನುಕೂಲವಾಗಿ, ಕೊರಕಲುಗಳಲ್ಲಿ ಸವಕಳಿಯಾಗುವುದು ತಪ್ಪುತ್ತದೆ.

2. ಉಸುಕಿನ ಚೀಲದ ಆಣೆ

ಇವುಗಳು ಸಂದ್ರ ತಡೆಗಳಾಗಿರುತ್ತವೆ. ಇವುಗಳಲ್ಲಿ ಖಾಲಿ ಇರುವ ಸಿಮೆಂಟ/ಗೊಬ್ಬರದ ಚೀಲಗಳಲ್ಲಿ ಮರಳನ್ನು ತುಂಬಿ ಇಳಕಲಿಗೆ ಅಡ್ಡಲಾಗಿ ಇಡಲಾಗುತ್ತದೆ. ಇವುಗಳು ಕಡಿಮೆ ವೇಗದಲ್ಲಿ ನೀರು ಬರುವ ಸ್ಥಳಗಳಲ್ಲಿ ಹೆಚ್ಚು ಉಪಯುಕ್ತವಾಗಿರುತ್ತವೆ.

3. ಗೇಬಿಯನ್ ರಚನೆ

ಈ ರಚನೆಯನ್ನು ಸಣ್ಣ ತೊರೆಗಳಲ್ಲಿ ಹರಿದು ಹೋಗುವ ನೀರನ್ನು ತಡೆ ಹಿಡಿಯಲು ಕಟ್ಟಲಾಗುತ್ತದೆ ಆದರೆ ಇದಕ್ಕೆ ತೊರೆಯ ತಳಭಾಗದಿಂದ ಅಡಿಪಾಯವಿರುವುದಿಲ್ಲ. ಕಬ್ಬಿಣದ ಜಾಲರಿಯನ್ನು ಅಳವಡಿಸಿ ಸ್ಥಳೀಯವಾಗಿ ದೊರಕುವ ಕಾಡುಗಲ್ಲುಗಳನ್ನು ಜೋಡಿಸಿ ನೀರು ಹರಿದು ಹೋಗುವುದನ್ನು ತಪ್ಪಿಸಬಹುದಾಗಿದೆ. ಸಾಧಾರಣವಾಗಿ 10-15 ಮೀ. ಅಗಲವುಳ್ಳ ತೊರೆಗಳಲ್ಲಿ 0.56 ಮೀ. ನಷ್ಟು ಎತ್ತರಕ್ಕೆ ರಚನೆಗಳನ್ನು ಕೈಗೊಳ್ಳಲಾಗುತ್ತದೆ. ಈ ಎತ್ತರಕ್ಕಿಂತ ಹೆಚ್ಚಾಗಿ ಹರಿದು ಬಂದ ನೀರು ತೊರೆಯಲ್ಲಿ ಮುಂದೆ ಹರಿದು ಹೋಗಲು ಅವಕಾಶ ಕಲ್ಪಿಸಿದಂತಾಗಿ ಶೇಖರಗೊಂಡ ನೀರು ಭೂಮಿಯಲ್ಲಿ ಇಂಗಿ ಹೋಗಲು ಸಹಕಾರಿಯಾಗುತ್ತದೆ. ನೀರಿನೊಂದಿಗೆ ಬಂದ ಹೂಳು ಮಣ್ಣು ಕಾಡುಗಲ್ಲುಗಳ ಜೋಡಣೆಯ ಸಂದುಗಳಲ್ಲಿ ಸೇರಿಕೊಂಡು ರಚನೆಯನ್ನು ಮತ್ತಷ್ಟು ಭದ್ರಗೊಳಿಸುತ್ತದೆ.

II. ಬಳಸು ವಿಧಾನ

1. ಇಂಗು ಗುಂಡಿ ಹಾಗೂ ಇಂಗು ಕೊಳವೆ ಬಾವಿ ವಿಧಾನ

ಸಾಧಾರಣವಾಗಿ ಡೆಕನ್ ಟ್ರಾಪ್ ಶಿಲಾ ಪ್ರದೇಶದಲ್ಲಿ ಹಳ್ಳಗಳು ಅಂತರ್ಜಲ ಪೂರೈಕೆಗೊಳಿಸುವ ಒಳ ಹರಿವಿನ ಕವಲುಗಳಾಗಿವೆ. ಈ ಹಳ್ಳಗಳಲ್ಲಿ ಸಾಧ್ಯವಿರುವ ಕಡೆ ಗುಂಡಿ ಹಾಗೂ ಇಂಗು ಕೊಳವೆ ಬಾವಿಗಳನ್ನು ನಿರ್ಮಿಸಿದಲ್ಲಿ ಅಂತರ್ಜಲವನ್ನು ಭರ್ತಿಮಾಡಬಹುದಾಗಿದೆ. ಗುಂಡಿಯಲ್ಲಿ ದಪ್ಪ ಕಲ್ಲು ಹಾಗೂ ಹರಳು ಕಲ್ಲುಗಳನ್ನು ಭರ್ತಿಮಾಡಿ ಹರಳನ್ನು ಸುರಿಯುವುದರಿಂದ ಶುದ್ಧವಾದ ಮಳೆ ನೀರು ಇಂಗಲು ಸಹಕಾರಿ. ಈ ಕ್ರಮದಿಂದ ಹರಿದು ಹೋಗುತ್ತಿರುವ ಮೇಲ್ಮೈ ನೀರನ್ನು ಕೃತಕ ಮರುಪೂರೈಕೆಗೆ ನೇರವಾಗಿ ಇಂಗಲು ಬಳಸಿಕೊಳ್ಳಬಹುದಾಗಿದೆ. ಕೆಳಗೆ ಕಾಣಿಸಿದಂತೆ ರಚನೆಯನ್ನು ನಿರ್ಮಿಸಿ, ಕೊಳವೆ ಭಾವಿಗಳನ್ನು ಮೆರು ಪೂರಣ ಮಾಡಬಹುದು.

2. ಪ್ರತ್ಯೇಕ ಬಾವಿ ಮರು ಪೂರೈಕೆ

 ಚಾಲನೆಯಲ್ಲಿರುವ / ಹಾಳಾದ ಭಾವಿಗೆ ನಾಲಾಗುಂಟ ಹರಿದು ಹೋಗುತ್ತಿರುವ ಹೆಚ್ಚಾದ ನೀರನ್ನು ಮರಳು, ಜಲ್ಲಿ ಹಾಗೂ ಮಧ್ಯಮ ಗಾತ್ರದ ಕಲ್ಲುಗಳು ಹಾಗೂ ಇದ್ದಿಲಿನಿಂದ ಕೂಡಿದ ಶೋಧಕ ಘಟಕದ ಮೂಲಕ ಹಾಳು ಭಾವಿಗೆ ಹರಿಸಿ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿ ಭಾವಿಯನ್ನು ಪುನರಚೇತನ ಗೊಳಿಸಬಹುದು.
 ಈ ರೀತಿಯ ಮರು ಪೂರಣ ಕ್ರಮಕ್ಕಾಗಿ ಹಾಳು ಬಾವಿಗಳನ್ನು ಉಪಯೋಗಿಸುವ ಬಗ್ಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಹಾಳು ಬಾವಿಯಲ್ಲಿ ಕೊಳವೆ ಬಾವಿ ಇದ್ದಲ್ಲಿ ಅಂತಹ ಕಡೆ ಕೇಸಿಂಗನ್ನು ಭೂಮಟ್ಟದವರೆಗೆ ಎತ್ತರಿಸಿ ಆ ಬಾವಿಯನ್ನು ಇಂಗು ಬಾವಿಯನ್ನಾಗಿ ಪರಿವರ್ತಿಸುವುದರಿಂದ ಶುದ್ಧ ನೀರು ಅಂತರ್ಜಲ ತಲುಪುವಂತೆ ಮಾಡಬಹುದಾಗಿದೆ. ಇಂತಹ ಸಂದರ್ಭಗಳಲ್ಲಿ ಮರು ಪೂರಣ ಶೀಘ್ರವಾಗುವುದು.
 ಹಾಳು ಬಾವಿಗಳು ದೊರಕದೇ ಇದ್ದ ಕಡೆಗಳಲ್ಲಿ ರೇಚಕ ಬಾವಿಯ ಪಕ್ಕದಲ್ಲಿ 3 ಮೀ. ವಿಸ್ತೀರ್ಣವುಳ್ಳ ಹಾಗೂ 2-3 ಮೀ. ಆಳವುಳ್ಳ ಗುಂಡಿಯನ್ನು ತೋಡಿ ಅದರಲ್ಲಿ ಫಿಲ್ಟರ್ ಸಾಮಗ್ರಿಗಳನ್ನು ತುಂಬಬಹುದಾಗಿದೆ, ಈ ರಚನೆಯನ್ನು 300 ಮಿ.ಮೀ. ವ್ಯಾಸದ ಪೈಪಿನೊಂದಿಗೆ ರೇಚಕ ಬಾವಿಗೆ ಸಂಪರ್ಕಿಸಿ ಅದರಲ್ಲಿ ನೀರು ಪೂರೈಕೆಯಾಗುವಂತೆ ಮಾಡಬಹುದಾಗಿದೆ.
 ಅಚ್ಚುಕಟ್ಟು ಪ್ರದೇಶದಲ್ಲಿ ವ್ಯವಸಾಯದ ಭೂಮಿಗಳದ್ದಲ್ಲಿ, ಅಂತಹ ಕಡೆ ರಾಸಾಯನಿಕ ಪಳಿಯುಳಿಕೆಗಳು ನೀರಿನಲ್ಲಿ ಕರಗಿ ಅಂತರ್ಜಲವನ್ನು ಸೇರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮಳೆಯಿಂದ ಉಂಟಾಗುವ ಮೊದಲ ಪ್ರವಾಹದ ನೀರನ್ನು ತಡೆಯಿಡಿಯಬಾರದು.

3. ಸಂಯುಕ್ತ ವಿಧಾನಗಳು (ಅಂತರ್ಗತ ಡೈಕ್‍ಗಳು / ಅಂತರ್ಜಲ ಆಣೆಕಟ್ಟುಗಳು / ಅಂತರ್ಗತ ಭಂಡಾರಗಳು)

ಕಿರಿದಾದ ಇಳಿಜಾರುಗಳನ್ನು ಹೊಂದಿರತಕ್ಕ ಕಂದರಗಳಲ್ಲಿ ಗಡಸು ಶಿಲೆ ಸ್ವಲ್ಪ ಆಳದಲ್ಲಿಯೇ ದೊರಕುವಂತಿದ್ದಲ್ಲಿ ಹಾಗೂ 4-8 ಮೀ. ಗಳಷ್ಟು ಶಿಥಿಲ ಶಿಲೆಗಳನ್ನು ಹೊಂದಿರುವ ಕಂದರ ಭರ್ತಿ () ಗಳಲ್ಲಿ ಅಂತರ್ಗತ ರಚನೆಗಳು ಸೂಕ್ತವಾಗಿ ಕಂಡು ಬಂದಿವೆ. ಅಂತರ್ಗತ ಡೈಕ್‍ಗಳ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುವಂತಿದ್ದಲ್ಲಿ ಜಲಭರಗಳ ಮರು ಪೂರೈಕೆಗೆ ಹೆಚ್ಚು ಸಹಕಾರಿಯಾಗುತ್ತದೆ. ಅಂತರ್ಗತ ಡೈಕ್‍ಗಲು ಒಂದು ಅಭೇದ್ಯ ಗೋಡೆ () ಯನ್ನು ಹೊಂದಿದ್ದು, ಜೊತೆಗೆ ಸಂಪರ್ಕ ಹೊಂದಿರತಕ್ಕ ಒಂದು ಜಾಕ್ ವೆಲ್ ಹಾಗೂ ಒಂದು ಸಂಗ್ರಹಣಾ ಬಾವಿಯನ್ನು ರಚಿಸಲಾಗುತ್ತದೆ. ಈ ಬಾವಿಗಳನ್ನು ಡೈಕ್‍ಗೆ ಲಗತ್ತಾಗಿ ಅಥವಾ ಮೇಲ್ಹರಿವಿನ ಪ್ರದೇಶದಲ್ಲಿ ಕ್ಷೇತ್ರ ಪ್ರಭಾವಕ್ಕನುಗುಣವಾಗಿ ನಿರ್ಮಿಸಬಹುದಾಗಿದೆ. ಡೈಕ್ ಅನ್ನು ಜೇಡಿ ಮಣ್ಣಿನಿಂದಾಗಲೀ, ಪಾಲಿಥಿನ್ ಇಟ್ಟಿಗೆ ಹಾಗೂ ಕಾಂಕ್ರೀಟ್ ಮಿಶ್ರಣದೊಂದಿಗೆ ಸ್ಥಳೀಯ ಗುಣಧರ್ಮಕ್ಕನುಗುಣವಾಗಿ ನಿರ್ಮಿಸಬಹುದಾಗಿದೆ.

 

Source : ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು

ಮೂಲ : ಉಅಸ್ರ್ ಆಗ್ರೋ ಪೀಡಿಯಾ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate