ಸುಮ್ಮನೆ ರೈತನ ಹೊಲಕ್ಕೆ ಈ ದಿನಗಳಲ್ಲಿ ಹೋದರೂ ಕಾಣುವುದು ನೇಗಿಲು ಉಳುಮೆ, ಮಾನವ ಶಕ್ತಿಯ ನಾಟಿ, ಅದೇ ಕತ್ತಿ, ಕೊಡಲಿ, ಗುದ್ದಲಿ. ಕೃಷಿಯ ಯಾಂತ್ರಿಕ ಸಂಶೋಧನೆಗಳಲ್ಲಿ ರೈತ ಬಳಸುತ್ತಿರುವುದು ಅಪರೂಪಕ್ಕೊಂದು ಟಿಲ್ಲರ್, ಕಳೆ ಕತ್ತರಿಸು
ವ ಯಂತ್ರ ಇತ್ಯಾದಿ. ಕುಲಾಂತರಿ ಬೀಜಗಳೆಂಬ ಬಹುರಾಷ್ಟ್ರೀಯ ಕಂಪನಿಗಳ ಸರಕನ್ನು, ರಾಸಾಯನಿಕ ಗೊಬ್ಬರವೆಂಬ ಆಹಾರ ವಿಷವನ್ನು ಕೊಟ್ಟದ್ದು ಇದೇ ಕೃಷಿ ಸಂಶೋಧನೆಗಳು. ಸ್ವಾರಸ್ಯವೆಂದರೆ, ಇವೆಲ್ಲ ಸಂಶೋಧನೆಗಳು ಕೃಷಿ ವಿಜ್ಞಾನಿಗಳಿಂದ ಪ್ರಕಟಗೊಂಡ ನಂತರವೇ ರೈತರ ಗಮನಕ್ಕೆ ಬರುವುದು. ಅನಿವಾರ್ಯವೋ, ಆಮಿಷವೋ ರೈತನಿಗೆ ಇಂತವುಗಳಲ್ಲಿ ಕೆಲವನ್ನು ಬಳಸುವುದು.
ರೂಢಿಯಾಯಿತು.
ಆದರೆ ಕೃಷಿ ಸಂಶೋಧನೆಗೆ ಬಂದು ಬೀಳುತ್ತಿರುವ ಹಣ ನಮ್ಮ ನಿಮ್ಮ ನಿರೀಕ್ಷೆ ಮೀರಿದ್ದು. ವಿಶ್ವ ಬ್ಯಾಂಕ್ ನೆರವಿನಿಂದ ಭಾರತ ಸರ್ಕಾರ ಕೈಗೊಂಡಿರುವ ರಾಷ್ಟ್ರೀಯ ಕೃಷಿ ಅನುಶೋಧನಾ ಯೋಜನೆ (ಎನ್ಎಐಪಿ)ಗೆಂದು ತೆಗೆದಿರಿಸಿರುವ ಮೊತ್ತ ೨೧೪ ಮಿಲಿಯನ್ ಅಮೆರಿಕನ್ ಡಾಲರ್! ಬರೀ ಕೃಷಿಯ ಮೂಲಭೂತ ಹಾಗೂ ತಂತ್ರಗಳ ಸಂಶೋಧನೆಗೆಂದೇ ೫೬ ಮಿಲಿಯನ್ ಅಮೆರಿಕನ್ ಡಾಲರ್ ಮೀಸಲಿರಿಸಲಾಗಿದೆ. ದುಡ್ಡನ್ನು ಧಾರಾಳವಾಗಿ ಹಂಚಲಾಗಿದೆ. ಇಥೆನಾಲ್ ಉತ್ಪಾದನೆ, ಮತ್ಸೋದ್ಯಮ ಕುಶಲತೆ ಸುಧಾರಣೆ, ತೆಂಗಿನಲ್ಲಿ ಮಾರುಕಟ್ಟೆ ಒತ್ತಾಸೆ, ಸಾಂಬಾರು ಬೀಜಗಳ ಗುಣಮಟ್ಟ ಹೆಚ್ಚಳ... ಹೀಗೆ ಸಂಶೋಧನೆಗಳು ಹಲವಾರು. ಅದರ ಫಲ ಶೂನ್ಯ!
ನಿಜ, ಹಣವಿದೆ. ಸಂಶೋಧನೆಗಳಾಗಿವೆ. ಪ್ರಬಂಧಗಳು ಮಂಡನೆಯಾಗಿವೆ. ರೈತನಿಗೆ ಆತನ ಭೂಮಿಯಲ್ಲಿ ಇವಾವುವನ್ನು ಅಳವಡಿಸಿಕೊಳ್ಳುವುದು ಸಾದ್ಯವಿಲ್ಲದಷ್ಟು ಅಸಾಧು ಕಾರ್ಯಾಚರಣೆಗಳು ಇವು ಎಂಬುದೂ ರುಜುವಾತಾಗಿದೆ. ಆತಂಕದ ಮಾತೆಂದರೆ, ಎನ್ಎಐಪಿ ಯೋಜನೆ ೨೦೧೨ರ ಜೂನ್ವರೆಗೂ ಮುಂದುವರೆಯುತ್ತದೆ! ಅರ್ಥ ಇಷ್ಟೇ, ಮತ್ತಷ್ಟು ಹಣ ಕೃಷಿ ಸಂಶೋಧನೆಯ ಹೆಸರಿನಲ್ಲಿ ಪೋಲಾಗುತ್ತವೆ.
ಇದನ್ನೆಲ್ಲ ನೋಡಿ ಸುಮ್ಮನೆ ಕುಳಿತುಕೊಳ್ಳಬೇಕೆ? ಕೊನೆ ಪಕ್ಷ ರೈತ ಸಮುದಾಯ ಇದರ ವಿರುದ್ಧ ಧ್ವನಿ ಎತ್ತುವುದು ಅವಶ್ಯಕ. ಇಂತಹ ಒಂದು ಅರಿವು ಮೊತ್ತಮೊದಲು ಮೂಡಿದ್ದು ಹೈದರಾಬಾದ್ನ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಗೆ. ಕೃಷಿ ಸಂಶೋಧನೆಗಳಲ್ಲಿ ಅದರ ಮೊದಲ ಹಂತದಿಂದಲೂ ರೈತರ ಸಹಭಾಗಿತ್ವ ಇರಲೇಬೇಕು ಎಂಬ ಆಂದೋಲನವನ್ನು ಹುಟ್ಟುಹಾಕಿದ್ದು ಅದರ ಒಂದು ವಿಭಾಗ ‘ಆದರ್ಶ’. ಅದರ ಸಂಚಾಲಕರು ಕರ್ನಾಟಕದವರಾದ ಡಾ.ಪಿ.ವಿ.ಸತೀಶ್.
ಹಾಗೆ ನೋಡಿದರೆ, ಇಂದು ವಿಶ್ವದಾದ್ಯಂತ ಅಂತದೊಂದು ಕೂಗು ಎದ್ದಿದೆ. ‘ಕೃಷಿ ಸಂಶೋಧನೆಯ ಪ್ರಜಾತಾಂತ್ರೀಕರಣ’ ಎಂಬ ಪ್ರಗತಿಪರ ಕಲ್ಪನೆ ಹುಟ್ಟಿಕೊಂಡಿದೆ. ಜಗತ್ತಿನ ಸ್ವಯಂ ಸೇವಾ ಗುಂಪುಗಳು ಹೊಸ ಆಂದೋಲನಕ್ಕೆ ಶ್ರೀಕಾರ ಹಾಕಿದ್ದಾರೆ. ಇದರ ಮುಂದಾಳತ್ವವನ್ನು ಇಂಗ್ಲೆಂಡ್ ಮೂಲದ ಅಭಿವೃದ್ಧಿ ಸಂಸ್ಥೆ ಐಐಇಡಿ ವಹಿಸಿಕೊಂಡಿದೆ. ಇಡೀ ಆಂದೋಲನಕ್ಕೆ ದಕ್ಷಿಣ ಏಷ್ಯಾದಲ್ಲಿ ‘ಆದರ್ಶ’ ಎಂದು ಕರೆಯಲಾಗಿದೆ. ಈ ಭಾಗದಲ್ಲಿ ಹೈದರಾಬಾದ್ನ ಡೆಕ್ಕನ್ ಡೆವಲಪ್ಮೆಂಟ್ ಸೊಸೈಟಿಯ ನೇತೃತ್ವ. ಬೊಲಿವಿಯಾ, ಪೆರು, ಇರಾನ್, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ.... ಈ ಮಾದರಿಯ ಚಟುವಟಿಕೆಗಳು ಚುರುಕಾಗಿ ನಡೆಯುತ್ತಿದೆ.
ಅಷ್ಟಕ್ಕೂ ಈ ಕೃಷಿ ಸಂಶೋಧನೆಗಳ ಲಾಭ ಸಿಕ್ಕುತ್ತಿರುವುದು ಯಾರಿಗೆ? ಯುಎಸ್ಎಐಡಿ ಎಂಬ ಯೋಜನೆಯಡಿ ಆಫ್ರಿಕಾ ದೇಶದ ರೈತರಿಗೆ ನೆರವು ಎನ್ನಲಾಯಿತು. ರೈತರಿಗೆ ಸಿಕ್ಕಿದ್ದು ಕುಲಾಂತರಿ ಹತ್ತಿ ಬೀಜ. ಆದರೆ ಬೀಜ ಮಾರಾಟದಿಂದ ದುಡ್ಡು ಹೋಗಿ ಸೇರಿದ್ದು ಮೊನ್ಸಾಂಟೋ ತರದ ಬಹುರಾಷ್ಟ್ರೀಯ ಬೀಜ ಕಂಪನಿಗಳಿಗೆ. ಇದೀಗ ಬಂದಿರುವ ನ್ಯಾನೋ ತಂತ್ರಜ್ಞಾನದ ಲಾಭ ಹಿರಿಯುವವರೂ ಬಹುರಾಷ್ಟ್ರೀಯ ಕಂಪನಿಗಳೇ. ಅಂದರೆ ಕೃಷಿ ಸಂಶೋಧನೆಗಳೆಂದರೆ ರೈತರ ದುಡ್ಡನ್ನು ಕಬಳಿಸುವ ಪರೋಕ್ಷ ಹುನ್ನಾರ ಎಂಬುದೇ ಸರಿ.
ಇನ್ನೊಂದು ಮಗ್ಗುಲಿನ ವಿಪರ್ಯಾಸ ನೋಡಿ. ಛತ್ತೀಸ್ಗಢದ ಬುಡಕಟ್ಟು ಜನರ ಬೆಳೆ ಹೆಕ್ಟೇರ್ಗೆ ೮-೧೦ ಟನ್. ಅದೇ ಇಂದಿನ ಹಸಿರು ಕ್ರಾಂತಿ ಭಾರತದ ಸರಾಸರಿ ೪.೫ ಟನ್ ಮಾತ್ರ! ಕೀನ್ಯಾದಲ್ಲಿ ಜಿಎಂ ತಂತ್ರಜ್ಞಾನ ವಿಫಲವಾಗಿದೆ ಎಂದು ವಿಜ್ಞಾನಿಗಳೇ ಒಪ್ಪಿಕೊಂಡಿದ್ದಾರೆ. ಫಿಲಿಪೇನ್ಸ್ನಲ್ಲಂತೂ ಡೆಲ್ಸಾಂಟೋ ಇಂಟರ್ನ್ಯಾಷನಲ್ ಎಂಬ ಅಮೆರಿಕನ್ ಸಂಸ್ಥೆ ರೈತರ ಬದುಕಿನೊಂದಿಗೆ ಆಟವಾಡಿದೆ. ವಿನೂತನ ತಳಿಯ ಪೈನಾಪಲ್ ಬೆಳೆಯನ್ನು ರೈತರ ಸಹಿಯೊಂದಿಗೆ ಒಪ್ಪಂದ ಕೃಷಿಗೆ ಅಳವಡಿಸಿದ ಕಂಪನಿ ಬೆಳೆ ಗುಣಮಟ್ಟದ ಷರತ್ತು ಹೂಡಿ ಅಷ್ಟೂ ಬೆಳೆಯನ್ನು ಖರೀದಿಸಲು ನಿರಾಕರಿಸಿದೆ. ಬೇರೇನೂ ಬೆಳೆಯದೆ ಬರೀ ಪರಂಗಿ ಹಣ್ಣು ಬೆಳೆದವರು ಏನು ತಿನ್ನಬೇಕು?
ಭಾರತದ ನಾಲ್ಕು ಪ್ರಮುಖ ಕೃಷಿ ವಿ.ವಿ.ಗಳು ಮತ್ತು ಕೃಷಿ ಸಂಶೋಧನೆಯಲ್ಲಿ ಭಾರತ ಸರ್ಕಾರದ ಪ್ರಧಾನ ಅಂಗವಾದ ಐಸಿಎಆರ್ಗಳಲ್ಲಿ ಕೈಗೊಳ್ಳಲಾಗುತ್ತಿರುವ ಸಂಶೋಧನೆಗಳು ಎತ್ತ ಸಾಗುತ್ತಿವೆ ಎಂದು ಪರಿಶೀಲಿಸಲು ಡಿಡಿಎಸ್ ಒಂದು ಅಧ್ಯಯನ ನಡೆಸಿತು. ಮುಂಬರುವ ಎರಡು ದಶಕಗಳಲ್ಲಿ ಬಯೋಟೆಕ್ನಾಲಜಿ ಮತ್ತು ಜೆನೆಟಿಕ್ ಇಂಜಿನೀಯರ್ಗಳೇ ಭಾರತೀಯ ಕೃಷಿ ರಂಗವನ್ನು ಮುನ್ನಡೆಸುವ ಇಂಜಿನುಗಳು ಎಂದು ಪರಿಗಣಿಸಿ ಸಂಶೋಧನೆಗಳನ್ನು ಆ ದಿಕ್ಕಿಗೆ ಹೊರಳಿಸುತ್ತಿರುವ ಅತ್ಯಂತ ಆತಂಕಕಾರಿ ವಿಚಾರ ಈ ಅಧ್ಯಯನದಿಂದ ಬೆಳಕಿಗೆ ಬಂತು.
ಈ ಎಲ್ಲ ಹಿನ್ನೆಲೆಯಲ್ಲಿ ಐಎಎಎಸ್ಟಿಡಿ ಹೊಸ ಆಶಾಕಿರಣ ಎನ್ನಬಹುದು. ಈ ಯೋಜನೆಯಡಿ ನಿರೂಪಿತವಾಗುತ್ತಿರುವ ‘ಪ್ರಜಾಶಕ್ತಿ’ ಆಂದೋಲನದಲ್ಲಿ ಸಹಭಾಗಿತ್ವ ಹೊಂದಿರುವ ಇನ್ಸಿಟ್ಯೂಟ್ ಆಫ್ ಕಲ್ಚರಲ್ ರೀಸರ್ಚ್ ಎಂಡ್ ಆಕ್ಷನ್ (ಇಕ್ರಾ) ಹಾಗೂ ಸಿರಸಿಯ ಅಪ್ಪಿಕೋ ಚಳುವಳಿ ಸಂಘಟನೆಗಳು ಕರ್ನಾಟಕದ ಹೋರಾಟದ ರೂಪರೇಷೆಗಳನ್ನು ನಿರ್ವಹಿಸುತ್ತಿವೆ.
ರಾಜ್ಯದ ಹಲವು ಕ್ಷೇತ್ರಗಳ ಗಣ್ಯರನ್ನು ಒಳಗೊಂಡ ಒಂದು ಮೇಲ್ವಿಚಾರಕ ಸಮಿತಿಯ ರಚನೆಯಾಗಿದೆ. ಇದರ ಕೈಕೆಳಗೆ ರೈತಸಂಘ, ಸ್ವಯಂ ಸೇವಾ ಸಂಸ್ಥೆಗಳು, ರೈತರು, ಕೃಷಿ ಚಿಂತಕರು ಮುಂತಾದ ವರ್ಗಗಳನ್ನು ಪ್ರತಿನಿಧಿಸುವ ರಾಜ್ಯಮಟ್ಟದ ಸಮಿತಿಯೊಂದು ರಚನೆಯಾಗುತ್ತದೆ. ತದನಂತರದಲ್ಲಿ ಸ್ಪಷ್ಟ ಕಲ್ಪನೆಗಳ ಸಹಿತದ ೧೦೦ ಜನ ರೈತರ ತಂಡವನ್ನು ಕಟ್ಟಲಾಗುತ್ತದೆ. ಇವರಲ್ಲಿ ೨೦ ಜನರನ್ನು ತರಬೇತುಗೊಳಿಸಿ ರೈತ ಪರ ವಾದ ಮಂಡಿಸುವ ನಿಪುಣರನ್ನಾಗಿ ತಯಾರು ಮಾಡಲಾಗುತ್ತದೆ. ಈಗಾಗಲೇ ಧಾರಾವಾಡ ಹಾಗೂ ಬೆಂಗಳೂರಿನಲ್ಲಿ ಪ್ರಾಥಮಿಕ ಕಾರ್ಯಾಗಾರಗಳು ನಡೆದಿವೆ. ಸದ್ಯದ ವೇಳಾಪಟ್ಟಿಯಂತೆ ಬರುವ ನವೆಂಬರ್ನಲ್ಲಿ ಈ ‘ಪ್ರಜಾಶಕ್ತಿ’ ಯೋಚನೆ ತನ್ನ ಅಂತಿಮ ಸ್ವರೂಪವನ್ನು ಪಡೆಯುತ್ತದೆ.
ರಾಜ್ಯದ ಬೆಳವಣಿಗೆಗಳ ಹಿಂದೆ ಅದಾಗಲೇ ಕಂಡ ಆಂಧ್ರಪ್ರದೇಶದ ಯಶಸ್ಸಿದೆ. ಅಲ್ಲಿಯೂ ಡಾ.ಪಿ.ವಿ.ಸತೀಶ್ರ ಆದರ್ಶ ತಂಡ ರೈತರನ್ನು ಜಾಗೃತಗೊಳಿಸಿತ್ತು. ಅಂತಿಮ ಘಟ್ಟದಲ್ಲಿ ಕೃಷಿ ವಿಜ್ಞಾನಿಗಳು, ಬಹುರಾಷ್ಟ್ರೀಯ ಕಂಪನಿಗಳ ಪ್ರತಿನಿಧಿಗಳು, ರೈತ ತಜ್ಞರು ಒಂದು ವಿಚಾರ ಸಂಕಿರಣದಲ್ಲಿ ತಮ್ಮ ತಮ್ಮ ವಾದ ಮಂಡಿಸಿದರು. ೨೦ ಜನ ರೈತ ಮಹಿಳೆಯರು ಎಲ್ಲವಾದಗಳನ್ನು ಕೇಳಿ ತೀರ್ಪು ನೀಡುವ ನ್ಯಾಯಾಧೀಶರಾಗಿದ್ದರು. ಕೊನೆಗೂ ಈ ರೈತ ವರ್ಗ ಕುಲಾಂತರಿ ಬೆಳೆ, ಜೆನೆಟಿಕ್ ತಾಂತ್ರಿಕತೆಯನ್ನು ತಳ್ಳಿಹಾಕಿ ಸಾಂಪ್ರದಾಯಿಕ ಬೆಳೆ, ಕೃಷಿ ವಿಭಾಗಗಳ ಪರವಾಗಿಯೇ ತೀರ್ಪು ನೀಡಿದ್ದು ಗಮನಾರ್ಹ ಅಂಶ.
ಬಿಟಿ ಹತ್ತಿಯ ವ್ಯಾಮೋಹ, ರಾಸಾಯನಿಕ ಗೊಬ್ಬರಕ್ಕಾಗಿ ಹಾಹಾಕಾರ ನಡೆಯುತ್ತಿರುವ ಈ ದಿನಗಳಲ್ಲಿ ರೈತರಿಗೆ ಅರಿವು ಮೂಡಿಸುವ ಈ ಆಂದೋಲನದ ಪರಿಣಾಮ ಧನಾತ್ಮಕವಾದರೆ ಸಾಕು.......
ಮೂಲ: ಮಾವೆಂಸ,ಇ ಮೇಲ್- mavemsa@gmail.com
ಕೊನೆಯ ಮಾರ್ಪಾಟು : 7/13/2020
ಕೃಷಿ ಹಾಗೂ ಆಹಾರ ಉತ್ಪಾದನೆಯಲ್ಲಿ ಮಹಿಳೆಯರದೇ ಮುಖ್ಯ ಪಾತ್ರ
ರಾಜ್ಯ ಕೃಷಿ ಇಲಾಖೆ ಬಗ್ಗೆ ಮಾಹಿತಿ ಇಲ್ಲಿ ಲಭ್ಯವಿದೆ.
ಕಷ್ಟ ಪಡುವುದೇ ಕೃಷಿ ಮಹಿಳೆಯ ಬದುಕೇ
ಸಾವಯವ ಕೃಷಿ ಪರಿವಾರ ಬಗ್ಗೆಗಿನ ಇತಿಹಾಸವನ್ನು ಇಲ್ಲಿ ತಿಳಿಸ...