ಮಡಿಯಲ್ಲಿ ಬೆಳೆಸುವುದು
ಗದ್ದೆಯಲ್ಲಿ ಬೆಳೆಸುವುದಕ್ಕೆ ಮೊದಲು ಸಣ್ಣ ಮಡಿಗಳಲ್ಲಿ ಇದನ್ನು ಬೆಳೆಸಬೇಕು. ಒಂದು ಹೆಕ್ಟೇರಿಗೆ ಬೇಕಾಗುವ ಅಝೋಲ್ಲಾ ಬೆಳೆಸಲು 400 ಚ.ಮೀ.ನ 4-5 ಮಡಿಗಳು ಬೇಕು. ಬೆಳೆಸುವದಕ್ಕೆ ಮೊದಲು 400 ಚ.ಮೀ. (20ಮೀ. 20ಮೀ.) ಪ್ರದೇಶಕ್ಕೆ 300 ಗ್ರಾಂ ಸೂಪರ್ ಫಾಸ್ಫೇಟ್, 300 ಗ್ರಾಂ ಬೂದಿ, 100 ಗ್ರಾಂ ಪೋಟ್ಯಾಷಿಯಂ ಸಲ್ಫೇಟ್, 100 ಗ್ರಾಂ ಸೋಡಿಯಂ ಮಾಲಿಬ್ಡೇಟ್ ಮತ್ತು 100 ಗ್ರಾಂ ಫ್ಯೂರಡಾನ್ ಕೀಟನಾಶಕ ಮಣ್ಣಿನಲ್ಲಿ ಸೇರಿಸಬೇಕು. ಇದಕ್ಕೆ ಬದಲಾಗಿ 300 ಕಿ.ಗ್ರಾಂ ದನದ ಸಗಣಿ, 300 ಗ್ರಾಂ ಸೂಪರ್ ಫಾಸ್ಪೇಟ್ ಮತ್ತು 100 ಗ್ರಾಂ ಫ್ಯೂರಾಡಾನ್ ಕೀಟನಾಶಕವನ್ನು ಸೇರಿಸಬಹುದು. ಅಝೋಲ್ಲಾ ಸಸ್ಯವನ್ನು ಈ ಪ್ರದೇಶದಲ್ಲಿ ಸಮನಾಗಿ ಹರಡಿ ನೀರು ನಿಲ್ಲಿಸಬೇಕು ಮತ್ತು ನೀರು 5-8 ಸೆಂ.ಮೀ. ಗಿಂತ ಕಡಿಮೆಯಾಗದಂತೆ ಎಚ್ಚರವಹಿಸಬೇಕು. ಇದಾದ 15 ದಿವಸಗಳಲ್ಲಿ ಸುಮಾರು 100 ಕಿ.ಗ್ರಾಂ ಗಳಷ್ಟು ಅಝೋಲ್ಲಾವನ್ನು ಪಡೆಯಬಹುದು.
ಗದ್ದೆಯಲ್ಲಿ ಹಾಕಿ ಬಳಸುವ ಕ್ರಮ
ನಾಟಿ ಮಾಡಲು ಸಉಮಾರು 20 ದಿವಸಗಳಿಗೆ ಮೊದಲು ಹೆಕ್ಟೇರಿಗೆ 60 ಕಿ.ಗ್ರಾಂ ಸೂಪರ್ ಫಾಸ್ಫೇಟ್, 50 ಕಿ.ಗ್ರಾಂ ಬೂದಿ, 10 ಕಿ.ಗ್ರಾಂ ಪೊಟ್ಯಾಷಿಯಂ ಸಲ್ಫೇಟ್, 250 ಗ್ರಾಂ ಸೋಡಿಯಂ ಮಾಲಿಬ್ಡೇಟ್, 2.5 ಕಿ.ಗ್ರಾಂ ಫ್ಯೂರಡಾನ್ ಮಣ್ಣಿನಲ್ಲಿ ಬೆರೆಸಬೇಕು. ಇದಕ್ಕೆ ಬದಲಾಗಿ ಹೆಕ್ಟೇರಿಗೆ 5000-6200 ಕಿ.ಗ್ರಾಂ ದನದ ಸಗಣಿ, 60 ಕಿ.ಗ್ರಾಂ ಸೂಪರ್ ಫಾಸ್ಫೇಟ್ ಮತ್ತು 2.5 ಕಿ.ಗ್ರಾಂ ಫ್ಯುರಾಡಾನ್ ಕೀಟನಾಶಕವನ್ನು ಉಪಯೋಗಿಸಬಹುದು. ನಂತರ 5-8 ಸೆಂ.ಮೀ. ನೀರು ನಿಲ್ಲಿಸಬೇಕು. ಅನಂತರ ಈ ಪ್ರದೇಶಕ್ಕೆ ಸಸಿಮಡಿಯಲ್ಲಿ ಬೆಳೆಸಿದ 500 ಕಿ.ಗ್ರಾಂ ಅಝೋಲ್ಲಾ ಹರಡಬೇಕು. ಇದು ಅಭಿವೃದ್ಧಿ ಹೊಂದಿ ಸುಮಾರು 20 ದಿವಸಗಳಲ್ಲಿ 10,000-12000 ಕಿ.ಗ್ರಾಂ ಗಳಷ್ಟಾಗುತ್ತದೆ.
ಅಝೋಲ್ಲಾ ಉಪಯೋಗಿಸುವ ಕ್ರಮ
ಭತ್ತ ನಾಟಿ ಮಾಡುವ ಮೊದಲು ನೀರನ್ನೇಲ್ಲಾ ಬಸಿದು ತೆಗೆದು, ಅಝೋಲ್ಲಾವನ್ನು ಮಣ್ಣಿನಲ್ಲಿ ಸೇರಿಸಿ ಶಿಫಾರಸ್ಸು ಮಾಡಿದ ಸಾರಜನಕದಲ್ಲಿ ಶೇ. 25 ರಷ್ಟನ್ನು ಹಾಗೂ ಪೂರ್ತಿ ರಂಜಕ ಮತ್ತು ಪೋಟ್ಯಾಷ್ ಗೊಬ್ಬರಗಳನ್ನು ಒದಗಿಸಬೇಕು. ಭತ್ತ ನಾಟಿ ಮಾಡಿ ಎರಡು ವಾರದ ನಂತರ ಅಲ್ಪ ಸ್ವಲ್ಪ ಉಳಿದ ಅಝೋಲ್ಲಾ ಬೆಳೆದು ಮತ್ತೆ ಸುಮಾರು 2500 ಕಿ.ಗ್ರಾಂ ಗಳಷ್ಟಾಗುತ್ತದೆ. ಅದನ್ನೂ ಮಣ್ಣಿನಲ್ಲಿ ಸೇರಿಸಿ, ಒಂದು ವಾರದ ನಂತರ ಮತ್ತು ಹೂ ಬಿಡುವದಕ್ಕೆ 25 ದಿನಗಳಿಗೆ ಮೊದಲು ಪ್ರತಿ ಬಾರಿಯೂ ಶೇ. 25 ರಷ್ಟು ಸಾರಜನಕವನ್ನು ಮೇಲು ಗೊಬ್ಬರವಾಗಿ ಒದಗಿಸಬೇಕು. ಭತ್ತದ ಬೆಳೆಗೆ ಸೂಚಿಸಿರುವ ಬೇಸಾಯ ಕ್ರಮಗಳನ್ನು ಅನುಸರಿಸಬೇಕು.
Source: ಸುಧಾರಿತ ಬೇಸಾಯ ಕ್ರಮಗಳು ಸೆಪ್ಟೆಂಬರ್ – 2012 , ಕೃಷಿ ವಿಶ್ವವಿದ್ಯಾಲಯ, ಧಾರವಾಡ ಹಾಗೂ ಕೃಷಿ ವಿಶ್ವವಿದ್ಯಾಲಯ, ರಾಯಚೂರು
ಮೂಲ : ಉಅಸ್ರ್ ಆಗ್ರೋ ಪೀಡಿಯಾ
ಕೊನೆಯ ಮಾರ್ಪಾಟು : 2/15/2020